ಬುಧವಾರ, ಡಿಸೆಂಬರ್ 11, 2019
23 °C

ನಾಟಕ ಪ್ರಿಯರಿಗೆ ರಸದೌತಣ

Published:
Updated:
ನಾಟಕ ಪ್ರಿಯರಿಗೆ ರಸದೌತಣ

ಬೆಂಗಳೂರಿನಲ್ಲಿ ರಂಗಭೂಮಿ ಚಟುವಟಿಕೆ ಸಾಕಷ್ಟು ನಡೆಯುತ್ತಿದೆ. ಕಣ್ತುಂಬಿಕೊಳ್ಳಲು ನಿತ್ಯವೂ ನಾಟಕಗಳು ಸಿಗುತ್ತವೆ. ರಂಗಚಟುವಟಿಕೆಗಳೂ ಸಾಕಷ್ಟು ನಡೆಯುತ್ತವೆ. ಆದರೆ ಪ್ರಪಂಚದ ಮೂಲೆ ಮೂಲೆಯಿಂದ, ಅತ್ಯುತ್ತಮ ಎನ್ನುವ ನಾಟಕಗಳನ್ನು, ರಂಗ ಪ‍್ರಸ್ತುತಿಗಳನ್ನು ಆರಿಸಿ ತಂದು ಅವುಗಳನ್ನು ಆಸ್ವಾದಿಸಲು ತಂದುಕೊಟ್ಟರೆ ಹೇಗಿರಬಹುದು.

ಅಂಥದ್ದೊಂದು ಪ್ರಯತ್ನ ಬೆಂಗಳೂರಿನಲ್ಲಿ ನಡೆಯುತ್ತಿದೆ. ಅದೂ ಥಿಯೇಟರ್‌ ಒಲಿಂಪಿಕ್‌ ಮಾದರಿಯಲ್ಲಿ. ಗ್ರೀಸ್‌ನ ಡೆಲ್ಸಿಯಾದಲ್ಲಿ 1995ರಲ್ಲಿ ಪ್ರಾರಂಭಗೊಂಡ ಥಿಯೇಟರ್‌ ಒಲಿಂಪಿಕ್‌ ಎನ್ನುವ ಪರಿಕಲ್ಪನೆಯ 8ನೇ ಭಾಗ ಇದು. ಪ್ರಪಂಚದ ನಾನಾ ದೇಶಗಳಲ್ಲಿ ರಂಗಭೂಮಿ ಒಲಿಂಪಿಕ್‌ ನಡೆದಿದೆ. ಈ ಬಾರಿಯ ನೇತೃತ್ವವನ್ನು ಭಾರತ ವಹಿಸಿಕೊಂಡಿದೆ. ದೇಶದ 17 ನಗರಗಳಲ್ಲಿ ಪ್ರಪಂಚದ ವಿವಿಧ ಭಾಷೆಯ ನಾಟಕಗಳು ಅನಾವರಣಗೊಳ್ಳುತ್ತಿವೆ. ನಾಲ್ಕು ಮೆಟ್ರೊ ಸಿಟಿಗಳನ್ನೂ ಪ್ರದರ್ಶನಕ್ಕೆ ಆಯ್ದುಕೊಳ್ಳಲಾಗಿದ್ದು ಬೆಂಗಳೂರು ಕೂಡ ಒಂದು.

‘ರಂಗಭೂಮಿಯಲ್ಲಿ ಸಾಕಷ್ಟು ಪ್ರಯೋಗಗಳು ನಡೆಯುತ್ತಿವೆ. ಬೇರೆ ಬೇರೆ ದೇಶದ ರಂಗಭೂಮಿಯಲ್ಲಿ ಏನೆಲ್ಲಾ ಆಗುತ್ತಿವೆ ಎನ್ನುವುದನ್ನು ಇಲ್ಲೇ ಕುಳಿತು ವೀಕ್ಷಿಸಬಹುದು. ಕೆಲವು ದೇಶದಲ್ಲಿ ರಂಗಭೂಮಿ ಆಧುನಿಕ ರೂಪು ಪಡೆದಿದೆ. ಅವುಗಳನ್ನು ನೋಡಿ ಭಾರತೀಯ ರಂಗಭೂಮಿ ಸ್ಥಿತಿ ಹೇಗಿದೆ, ನಾವು ಯಾವ ಮಟ್ಟದಲ್ಲಿದ್ದೇವೆ, ಸುಧಾರಿಸುಕೊಳ್ಳುವ ಬಗೆ ಹೇಗೆ ಎಂಬ ಬಗೆಗೂ ತಿಳಿಯಲು ಸಾಧ್ಯ. ಅಲ್ಲದೆ ನಮ್ಮ ರಂಗಭೂಮಿ, ಸಂಸ್ಕೃತಿ, ಕಲಾ ಪ್ರಕಾರಗಳ ಶ್ರೀಮಂತಿಕೆಯನ್ನೂ ಪಸರಿಸುವುದು ಇದರ ಉದ್ದೇಶ’ ಎಂದು ಮಾಹಿತಿ ನೀಡುತ್ತಾರೆ ಎನ್‌ಎಸ್‌ಡಿ ಬೆಂಗಳೂರು ನಿರ್ದೇಶಕರು ಸಿ.ಬಸವಲಿಂಗಯ್ಯ.

ದೇಶದ ವಿವಿಧೆಡೆ ನಡೆಯುತ್ತಿರುವ 51 ದಿನಗಳ ಈ ಉತ್ಸವದಲ್ಲಿ 35 ದೇಶಗಳ ನಾಟಕಗಳು ಪ್ರದರ್ಶನಗೊಳ್ಳುತ್ತಿವೆ. ನಮ್ಮ ದೇಶದ 200 ತಂಡಗಳು ಭಾಗವಹಿಸುತ್ತಿವೆ. ಉತ್ಸವದಲ್ಲಿ ಭಾಗವಹಿಸುವ ಒಟ್ಟೂ ಕಲಾವಿದರ ಸಂಖ್ಯೆ ಸುಮಾರು 25 ಸಾವಿರ. ಇಲ್ಲಿ ನಾಟಕ ಪ್ರದರ್ಶನಗಳಷ್ಟೇ ಅಲ್ಲ, ವಿಚಾರ ಸಂಕಿರಣ, ಮಾಸ್ಟರ್‌ ಕ್ಲಾಸ್‌ಗಳು, ಜನಪದ ಕಲಾ ಪ್ರಕಾರಗಳ ಪ್ರದರ್ಶನವೂ ನಡೆಯಲಿದೆ. ರಂಗಭೂಮಿಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವವರೊಂದಿಗೆ ‘ಲಿವಿಂಗ್‌ ಲೆಜೆಂಡ್‌’ ಪರಿಕಲ್ಪನೆಯಲ್ಲಿ ಸಂವಾದ, ಸನ್ಮಾನ ಕಾರ್ಯಕ್ರಮವೂ ಇರಲಿದೆ.

ಕರ್ನಾಟಕದ ಒಟ್ಟು 14 ನಾಟಕಗಳು ಆಯ್ಕೆಯಾಗಿದ್ದು ದೇಶದ ಬೇರೆಬೇರೆ ನಗರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನಲ್ಲಿ ಜತೆಗಿರುವನು ಚಂದಿರ, ಗುಣಮುಖ, ತಾಯವ್ವ ಕನ್ನಡ ನಾಟಕಗಳು ಪ್ರದರ್ಶನ ಕಾಣಲಿವೆ. ಪೋಲೆಂಡ್‌, ಕೋಲ್ಕತ್ತ, ಗುವಾಹಟಿ, ಅಸ್ಸಾಂ, ದೆಹಲಿ, ಗಾಜಿಯಾಬಾದ್‌, ಲಿಥುವೇನಿಯಾ, ಗ್ರೀಕ್‌ ಮುಂತಾದ ಕಡೆಯ ನಾಟಕಗಳು ಇರಲಿವೆ.

ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ರವೀಂದ್ರ ಕಲಾಕ್ಷೇತ್ರ, ಕಲಾಗ್ರಾಮ ಹಾಗೂ ಕಲಾಗ್ರಾಮದ ಬಯಲು ರಂಗಮಂದಿರದಲ್ಲಿ ನಾಟಕಗಳು ಪ್ರದರ್ಶನ ಕಾಣಲಿದ್ದು ಟಿಕೆಟ್‌ ದರ ₹50. ಪ್ರದರ್ಶನ ನಡೆಯುವ ಸ್ಥಳಗಳಲ್ಲಿ ಹಾಗೂ INSIDER.IN ನಲ್ಲಿ ಟಿಕೆಟ್‌ಗಳು ಲಭ್ಯ.

ಪ್ರತಿಕ್ರಿಯಿಸಿ (+)