ಮಂಗಳವಾರ, ಡಿಸೆಂಬರ್ 10, 2019
21 °C

ಕತ್ತಲು ಬೆಳಕಿನಲ್ಲಿ ಸಾವಿನ ನರ್ತನ

Published:
Updated:
ಕತ್ತಲು ಬೆಳಕಿನಲ್ಲಿ ಸಾವಿನ ನರ್ತನ

8ನೇ ಥಿಯೇಟರ್‌ ಒಲಿಂಪಿಕ್‌ ಅಂಗವಾಗಿ ಪ್ರಪಂಚದ ಅತ್ಯುತ್ತಮ ನಾಟಕಗಳನ್ನು ಪ್ರದರ್ಶಿಸುವ ತವಕ ಮಂಗಳವಾರ (ಫೆ.20) ರವೀಂದ್ರ ಕಲಾಕ್ಷೇತ್ರದಲ್ಲಿ ಕಂಡುಬಂತು. ಉತ್ಸವದ ಮೊದಲ ನಾಟಕವಾಗಿ ರಂಗದ ಮೇಲೆ ಪ್ರದರ್ಶನಗೊಂಡಿದ್ದು ಪೋಲೆಂಡ್‌ನ ‘ಸಿಸೇರಿಯನ್‌ ಸೆಕ್ಷನ್‌’.

ನೆರೆದಿದ್ದ ಪ್ರೇಕ್ಷಕರ ದೃಷ್ಟಿಯೆಲ್ಲಾ ರಂಗದ ಮೇಲಿದ್ದ ಕಿರು ಬೆಳಕಿನ ಸುತ್ತಲೇ ಸುತ್ತುತ್ತಿತ್ತು. ಬೆಳಕಿನ ಅಂಚಿಗೆ ಆವರಿಸಿದ್ದ ಕತ್ತಲೆಯ ಇಕ್ಕೆಲಗಳಲ್ಲಿ ನಾಲ್ಕಾರು ಆಸನಗಳು. ಮುಂಭಾಗದ ಮೂಲೆಯಲ್ಲಿ ಕೀಬೋರ್ಡ್‌. ಕೈಯಲ್ಲಿ ಚಪ್ಪಲಿ ಹಿಡಿದು ಮಹಿಳೆಯೊಬ್ಬರು ಆಸನವೊಂದರಲ್ಲಿ ಕುಳಿತರು. ನಿಧಾನವಾಗಿ ಗಿಟಾರ್‌ ಹಿಡಿದ ಇಬ್ಬರು ಮಹಿಳೆಯರು ಬಂದರು, ಗಾಯಕಿ, ಕೀಬೋರ್ಡ್‌ ವಾದಕ ಬಂದು ವೇದಿಕೆಯ ಸುತ್ತ ಆಸೀನರಾದರು.

ಪೋಲೆಂಡ್‌ನ ಈ ನಾಟಕದಲ್ಲಿ ವಾದ್ಯವೃಂದವೂ ನಾಟಕದ ಭಾಗವೇ ಆಗಿದ್ದುದು ವಿಶೇಷ. ಎರಡು ಹೆಣ್ಣು, ಒಂದು ಗಂಡು ಇಲ್ಲಿ ಜೀವಾಳ. ಬೆಳಕು ನೆರಳಿನ ವೇದಿಕೆಯಲ್ಲಿ ಕುಳಿತ ಪಾತ್ರಗಳು ನಿಧಾನವಾಗಿ ಬಿಯರ್‌ ಹೀರಿದವು. ಅಲ್ಲೇ ಸಣ್ಣದಾಗಿ ತಮ್ಮೊಳಗಿನ ಸಿಟ್ಟು ಸೆಡವುಗಳನ್ನು ವಿನಿಮಯ ಮಾಡಿಕೊಂಡವು. ಟೇಬಲ್‌ ಮೇಲಿದ್ದ ಬಿಯರ್‌ ಕೆಳಗುರುಳುತ್ತಿದ್ದಂತೆ ಒಬ್ಬಾಕೆ ಆತುರದಲ್ಲಿ ಏನೋ ಬರೆದಳು. ಬರೆದಷ್ಟೇ ವೇಗವಾಗಿ ಇನ್ನೊಬ್ಬಾಕೆ ಅದನ್ನು ಒರೆಸಿದಳು. ಎಳೆಎಳೆಯಾಗಿ ಸಂಗೀತ ಬಿಚ್ಚಿಕೊಂಡಿತು. ಪಾತ್ರಗಳ ಚಲನೆ ತೀವ್ರವಾಯಿತು.

ಸಂಗೀತದ ಅಲೆಗೆ ಚಿತ್ರವಿಚಿತ್ರ ಚಲನೆಗಳು, ಒಮ್ಮೊಮ್ಮೆ ಅಳು, ಮತ್ತೊಮ್ಮೆ ಸಿಟ್ಟು, ಮಗದೊಮ್ಮೆ ವಿಕಾರ ಭಾವದಲ್ಲಿ ಆ ಪಾತ್ರಗಳು ಸ್ಪಂದಿಸಿದವು. ಒಬ್ಬಾಕೆ ನಿಧಾನವಾಗಿ ನಡೆದು ಬಂದು ತನ್ನ ಪಾದದ ಚಿತ್ರ ಬಿಡಿಸಿ ಹಿಂದಕ್ಕೆ ಸರಿಯುತ್ತಾಳೆ. ಆ ಪಾದದ ಚಿತ್ರದೊಳಗೇ ತನ್ನೆಲ್ಲಾ ಚಿತ್ರ ವಿಚಿತ್ರ ಭಾವ ಭಂಗಿ, ನೃತ್ಯದ ಹೆಜ್ಜೆಗಳನ್ನಿಡುತ್ತಾಳೆ. ಸಾವಿಗೆ ತುಡಿಯುವ ಮನಸ್ಸನ್ನು ಆ ಸನ್ನಿವೇಶ ಪ್ರತಿಬಿಂಬಿಸಿತು. ತಕ್ಷಣ ಗಾಜು ಒಡೆದ ಶಬ್ದ, ಕ್ಷಣಾರ್ಧದಲ್ಲಿ ಆಕೆ ತನ್ನ ಮೈಮೇಲೆ ಗಾಜಿನ ವೃಷ್ಟಿ ಮಾಡಿಕೊಳ್ಳುತ್ತಾ ಕುಣಿಯುತ್ತಾಳೆ. ಆಕೆಯ ಹುಚ್ಚಾಟಕ್ಕೆ ಜೊತೆಗಿದ್ದವರ ಸಾಂತ್ವನ ಸಿಗುತ್ತದೆ. ರಂಗದ ಮೇಲೆ ಚೆಲ್ಲಿದ್ದ ಗಾಜನ್ನು ಗುಡಿಸಿ ಎಲ್ಲವನ್ನೂ ತಿಳಿಯಾಗಿಸಲು ಅಲ್ಲಿದ್ದವ ಪ್ರಯತ್ನಿಸುತ್ತಾನೆ. ಆದರೂ ಹಿಂಭಾಗದ ಕಿರು ಬೆಳಕಿನಲ್ಲಿ ಸಾವಿನೆಡೆಗಿನ ಆಕೆಯ ತುಡಿತದ ಬಿಂಬಗಳು.

ಆತ್ಮಹತ್ಯೆಯ ಮನೋವಿಕಾರ, ಅಂಥವರ ನಡವಳಿಕೆ, ಸ್ಥಿಮಿತಕ್ಕೆ ಸಿಗದ ಮಾನಸಿಕ ಸ್ಥಿತಿಯನ್ನೇ ಈ ಪ್ರಸ್ತುತಿಯಲ್ಲಿ ಕಟ್ಟಿಕೊಡಲಾಗಿದೆ. ರಂಗ ಸಜ್ಜಿಕೆಯಾಗಿ ಬಳಸಿದ್ದ ಕುರ್ಚಿ, ಹೂ ಕುಂಡ ಎಲ್ಲವನ್ನೂ ಸಾವಿನ ದಾಳವಾಗಿಯೇ ಪಾತ್ರಗಳು ಭಾವಿಸಿಕೊಂಡು ಪ್ರಯತ್ನಿಸುತ್ತವೆ. ಆಗಾಗ ಕುರ್ಚಿ ಏರಿ ಸಿಗದ ಸಾವನ್ನು ಏರಿ ಹಿಡಿಯುವಂತೆ, ಮಗದೊಮ್ಮೆ ಅಲ್ಲಿಗೆ ಬಂದ ವ್ಯಕ್ತಿಯ ಬೆನ್ನು– ಭುಜಗಳನ್ನೇರಿ ಸಾವನ್ನು ಹಿಡಿಯಲು ಪ್ರಯತ್ನಿಸುವುದು, ಬೀಯರ್‌ ಹೀರುವ ಗಾಜಿನ ಬಾಟಲಿಯನ್ನೇ ಚುಚ್ಚಿಕೊಳ್ಳುವುದು, ಹಲ್ಲಿನಿಂದ ರಕ್ತನಾಳಗಳನ್ನು ಹರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸುವುದು. ಸಾಯುವ ಆಟದ ಈ ಬಾವೋದ್ವೇಗದಲ್ಲಿ ಆತ್ಮಹತ್ಯೆಗೆ ಬಯಸುವ ಮನಸು ಕೊನೆಗೆ ರಂಗದಮೇಲೆಯೇ ನಿಧಾನವಾಗಿ ಬೆತ್ತಲಾಗುತ್ತದೆ. ಹೀಗೆ ವೇದಿಕೆ ಮೇಲೆ ನಡೆಯುವ ಒಂದೊಂದು ಚಲನೆಯೂ ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಬಂಧಿಸುತ್ತಲೇ ಸಾಗುತ್ತದೆ.

‘ಸಿಸೇರಿಯನ್‌ ಸೆಕ್ಷನ್‌’ ಕಳೆದ ಹತ್ತು ವರ್ಷಗಳಿಂದ ಪ್ರದರ್ಶನ ಕಾಣುತ್ತಿದ್ದು ಪ್ರಪಂಚದಾದ್ಯಂತ ಇದುವರೆಗೂ 200ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ಮೂರು ವಿಭಾಗಗಳ ಈ ಪ್ರಸ್ತುತಿಯ 2ನೇ ಭಾಗ ಬೆಂಗಳೂರಿನಲ್ಲಿ ಪ್ರದರ್ಶಗೊಂಡಿತು. ಇಲ್ಲಿ ಮಾತುಗಳ ವೈಭವ ಇಲ್ಲ. ಅಭಿನಯ, ಚಲನೆ, ಸಂಗೀತ, ಬೆಳಕಿನ ವಿನ್ಯಾಸವೇ ಸನ್ನಿವೇಶಕ್ಕೆ ಅಗತ್ಯ ಮೂಡ್‌ ಅನ್ನು ಕಟ್ಟಿಕೊಡುತ್ತದೆ. ಹದಿನೈದು ವರ್ಷಗಳಿಂದ ರಂಗಭೂಮಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಜಿರೋಸ್ಲಾವ್‌ ಫ್ರೆಟ್‌ ಸಂಯೋಜಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಪ್ರದರ್ಶನಕ್ಕೆ ಅವರೇ ಬೆಳಕಿನ ವಿನ್ಯಾಸವನ್ನೂ ಮಾಡಿದ್ದರು.

‘ಸಿಸೇರಿಯನ್‌ ಸೆಕ್ಷನ್‌‘ ಪಾತ್ರಗಳು ರಂಗದ ಮೇಲೆ ಬಂದಾಗ ಕಟ್ಟಿಕೊಂಡ ಮೌನ ಮುರಿದದ್ದು ನಾಟಕ ಮುಗಿದು ಚಪ್ಪಾಳೆ ಸುರಿದಾಗಲೇ. ಕಲ್ಪನೆಗೂ ಮೀರಿದ ದೃಶ್ಯವೊಂದನ್ನು ಕಣ್ತುಂಬಿಕೊಂಡ ಖುಷಿಯಲ್ಲಿ ರಂಗಪ್ರಿಯ ಮನಸುಗಳು ನಿಧಾನವಾಗಿ ಅಲ್ಲಿಂದ ಕರಗಿದವು.

ಪ್ರತಿಕ್ರಿಯಿಸಿ (+)