ಬುಧವಾರ, ಡಿಸೆಂಬರ್ 11, 2019
22 °C

ಸೀದುಹೋಯ್ತು ಮೈದಾ ರೊಟ್ಟಿ

Published:
Updated:
ಸೀದುಹೋಯ್ತು ಮೈದಾ ರೊಟ್ಟಿ

ಮದುವೆಯಾದ ಹೊಸತು. ವಾರಗಿತ್ತಿಯರು, ಅತ್ತೆ, ಮಾವ ಇರುವ ತುಂಬು ಸಂಸಾರ. ನಾನು ಹೊಸ ಮದುಮಗಳಾದ್ದರಿಂದ ನನಗೇನೂ ಅಡುಗೆ ಕೆಲಸ ಹೇಳುತ್ತಿರಲಿಲ್ಲ. ತರಕಾರಿಗಳನ್ನೂ ಹೆಚ್ಚುವುದು, ಕಾಯಿ ತುರಿಯುವುದು ಮಾಡಿಕೊಡುತ್ತಿದ್ದೆ.

ಒಂದು ಮುಂಜಾನೆ ತಿಂಡಿ ಕೆಲಸ ನಿರ್ವಹಿಸುತ್ತಿದ್ದ ಚಿಕ್ಕ ವಾರಗಿತ್ತಿ ಊರಿಗೆ ಹೋದರು. ಇನ್ನೆರಡು ದಿನಕ್ಕೆ ದೊಡ್ಡವಾರಗಿತ್ತಿಯೂ ಸಮಾರಂಭಕ್ಕೆಂದು ಮಕ್ಕಳೊಡನೆ ಹೊರಟುಹೋದರು. ಇನ್ನುಳಿದವರು ಮೂರು ಜನ ಭಾವಂದಿರು, ಅತ್ತೆ, ನಾನು ಮತ್ತು ನನ್ನ ಗಂಡ.

ಎಂದಿನಂತೆ ಅಡುಗೆ ಕೆಲಸ ಅತ್ತೆಯವರದೇ ಆಗಿತ್ತು. ಅಂದು ದೋಸೆ ಹಿಟ್ಟಿತ್ತು. ಅತ್ತೆ ಚಟ್ನಿಯನ್ನು ಅರೆದುಕೊಟ್ಟರು. ನಾನು ಮುಂಜಾನೆ ಎಲ್ಲರಿಗೂ ದೋಸೆ ಮಾಡಿಕೊಟ್ಟು ಗೆದ್ದೆ. ಚೆನ್ನಾಗೆ ದೋಸೆ ಬಂದಿದ್ದರಿಂದ ರಾತ್ರಿ ಅತ್ತೆಯವರು ‘ನಾಳೆ ಬೆಳಿಗ್ಗೆ ಗೋಧಿ ರೊಟ್ಟಿ ಅಥವಾ ಅಕ್ಕಿ ರೊಟ್ಟಿ ಮಾಡಿ, ಟೊಮೆಟೊ ಗೊಜ್ಜು ಮಾಡು’ ಎಂದು ಹುಕುಂ ಹೊರಡಿಸಿ ಮುಂದಿನ ಮಾತಿಗೆ ಅವಕಾಶವಿಲ್ಲದಂತೆ ರೂಮಿಗೆ ಹೊರಟರು.

ಅಮ್ಮನ ಮನೆಯಲ್ಲಿ ಅನ್ನ, ಸಾರು, ಪಲ್ಯ ಮಾಡಿ ಗೊತ್ತಿತ್ತೆ ವಿನಾ ತಿಂಡಿ ಮಾಡುವುದು ಕಲಿತಿರಲಿಲ್ಲ. ಮುಂಜಾನೆ 5 ಗಂಟೆಗೇ ಎದ್ದು ಮೈದುನ, ಭಾವಂದಿರಿಗೆಲ್ಲ ಕಾಫಿ ಮಾಡಿಕೊಟ್ಟೆ.

ಟೊಮೆಟೊ ಹೆಚ್ಚಿ ಗೊಜ್ಜು ಮಾಡಿದೆ. ಸಾಲಾದ ಡಬ್ಬಿಗಳಲ್ಲಿ ಒಂದೇ ರೀತಿಯ ಹಿಟ್ಟುಗಳಿದ್ದವು. ಡಬ್ಬಿಗಳ ಮೇಲೆ ಹೆಸರೂ ಬರೆದಿರಲಿಲ್ಲ. ಅತ್ತೆಯವರು ಅಷ್ಟು ಬೇಗ ಏಳುತ್ತಿರಲಿಲ್ಲ. ಕೊನೆಗೆ ಧೈರ್ಯಮಾಡಿ ನವಿರಾದ ಹಿಟ್ಟನ್ನು ಪಾತ್ರೆಗೆ ಹಾಕಿ ಈರುಳ್ಳಿ, ಕೊತ್ತಂಬರಿ ಹಾಕಿ ನೀರಿನೊಡನೆ ಹಿಟ್ಟು ಕಲಸಿದೆ. ಬೇಗಬೇಗ  ಹಂಚಿಗೆ ಎಣ್ಣೆ ಹಾಕಿ ರೊಟ್ಟಿ ತಟ್ಟಿದೆ. ಅದು ಕೈಗೆ ಅಂಟತೊಡಗಿತು. ನೀರು ಕೈ ಮಾಡಿಕೊಂಡು ತಟ್ಟಿ ಒಲೆಯ ಮೇಲಿಟ್ಟೆ. ಬೇಗ ಆಗಲೆಂದು ಇನ್ನೊಂದೂ ಹಂಚಿಗೂ ಸಂಪಣವನ್ನು ಸವರಿ ಒಲೆಯ ಮೇಲಿಟ್ಟು ರೊಟ್ಟಿ ಸರಿಯಾಗಿ ಬರಲೆಂದು ದೇವರನ್ನು ಪ್ರಾರ್ಥಿಸುತ್ತಾ ಮಗುಚಿ ಕೈಯಿಂದ ಮೆಲ್ಲನೆ ಎಬ್ಬಿಸತೊಡಗಿದೆ.

ಉಹುಂ, ಎರಡು ರೊಟ್ಟಿಗಳೂ ಹಂಚಿನಿಂದ ಎದ್ದು ಬರಲಾರೆವೆಂದು ಮುಷ್ಕರ ಹೂಡಿದ್ದವು. ರೊಟ್ಟಿ ಸುಟ್ಟ ವಾಸನೆ ಬರತೊಡಗಿತು. ಸರ್ವ ಸಾಹಸಗಳನ್ನು ಮಾಡಿದರೂ ರೊಟ್ಟಿಗಳು ಏಳದಿದ್ದಾಗ ಒಲೆಗಳನ್ನು ಆರಿಸಿ ಸುಮ್ಮನೆ ತಲೆ ಬಗ್ಗಿಸಿ ಕುಳಿತೆ. ಪೇಪರ್ ಓದುತ್ತಿದ್ದ ಭಾವ ಎಷ್ಟು ಹೊತ್ತಾದರೂ ತಿಂಡಿ ಬರಲಿಲ್ಲವೆಂದು ಅಡುಗೆ ಮನೆಗೇ ಬಂದರು. ಒಲೆಯ ಮೇಲಿದ್ದ ಸೀದು ಹೋದ ರೊಟ್ಟಿಗಳನ್ನೂ, ಅವಮಾನದಿಂದ ಕಣ್ಣೀರ ಕೊಳಗಳಾಗಿದ್ದ ನನ್ನನ್ನೂ ನೋಡಿ ಹೊರಟು ಹೋದರು. ಗಂಡ, ಭಾವಂದಿರೂ ಅಡುಗೆ ಕೋಣೆಗೆ ಇಣುಕಿದಾಗ ಭೂಮಿ ಬಾಯ್ದೆರೆಯಬಾರದೆ ಎನ್ನಿಸಿತು. ಆ ನಂತರ ಅತ್ತೆಯವರು ಬಂದು ಕಲಸಿಟ್ಟ ಹಿಟ್ಟನ್ನು ನೋಡಿ ‘ಅಯ್ಯೋ ಯಾಕೆ ಮೈದಾ ಹಿಟ್ಟು ಕಲಸಿದ್ದೀಯಾ, ಅದರಲ್ಲಿ ರೊಟ್ಟಿ ಮಾಡಲು ಬರೋಲ್ಲ’ ಎಂದು ಎಲ್ಲರಿಗೂ ಉಪ್ಪಿಟ್ಟು ಮಾಡಿಕೊಟ್ಟರು.

-ಎಸ್. ವಿಜಯಗುರುರಾಜ,

ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ

ಪ್ರತಿಕ್ರಿಯಿಸಿ (+)