ಬುಧವಾರ, ಡಿಸೆಂಬರ್ 11, 2019
17 °C

ಇಲ್ಲಿದೆ ನೂರು ಬಗೆ ಟೀ

Published:
Updated:
ಇಲ್ಲಿದೆ ನೂರು ಬಗೆ ಟೀ

ಮೊನ್ನೆ ಬೆಂಗಳೂರಿನಲ್ಲಿ ಚಳಿ ವಿಪರೀತ ಹೆಚ್ಚಾಗಿತ್ತು ನೆನಪಿದ್ಯಾ? ಅಂಥದ್ದೇ ಒಂದು ಮುಂಜಾನೆ ವಾಕ್ ಹೋಗಿದ್ದ ನನಗೆ ಟೀ ಕುಡಿದು ಬೆಚ್ಚಗಾಗುವ ಎನಿಸಿತು. ಎಲ್ಲಿಗೆ ಹೋಗೋದು ಎಂದು ಆ ಕಡೆ, ಈ ಕಡೆ ಕಣ್ಣಾಡಿಸಿದಾಗ ಇಂದಿರಾನಗರ ಬಿಡಿಎ ಕಾಂಪ್ಲೆಕ್ಸ್ ಹತ್ತಿರ ‘ಶಾರನ್ ಟೀ ಅಂಗಡಿ’ ಕಾಣಿಸಿತು.

ಅಂಗಡಿ ಎದುರು ನಿಂತ ನನ್ನನ್ನು ಸ್ವಾಗತಿಸಿದ್ದು, ‘ಯಾವ ಟೀ ಬೇಕು ಮೇಡಂ?’ ಪ್ರಶ್ನೆ.

ಟೀ ಅಂದ್ರೆ ಟೀ, ಜಾಸ್ತಿ ಅಂದ್ರೆ ಲೆಮೆನ್, ಗ್ರೀನ್, ನಾರ್ಮಲ್ ಟೀ ಅಷ್ಟೇ ತಾನೆ ಇರೋದು. ಇದೇನು ಇಂಥ ಪ್ರಶ್ನೆ ಕೇಳ್ತಿದ್ದಾರೆ ಎಂದು ಬದಿಗೆ ತಿರುಗಿದರೆ ‘ಶಾರನ್‌’ನಲ್ಲಿ ಸಿಗುವ ಬಗೆಬಗೆ ಟೀಗಳ ಪಟ್ಟಿ ಕಾಣಿಸಿತು.

ನಿಧಾನವಾಗಿ ಯೋಚಿಸಿ ‘ಕಿತ್ತಳೆ ಟೀ ಕೊಡಿ’ ಎಂದೆ. ಮೂರುನಿಮಿಷದಲ್ಲಿ ಟೀ ಲೋಟ ನನಗೆ ಸಿಕ್ಕಿತ್ತು. ಹಬೆಯಾಡುತ್ತಿದ್ದ ಟೀ ಲೋಟದ ಕಿತ್ತಳೆ ಸುವಾಸನೆಗೆ ಮೂಗಿನ ಹೊಳ್ಳೆಗಳು ತನ್ನಿಂತಾನೇ ಅರಳಿದವು. ಗುಟುಕು ಬಾಯಿಗಿಟ್ಟಾಗ ಕಿತ್ತಳೆ ಪರಿಮಳದ ಟೀ ರುಚಿ ಹೊಸದೆನ್ನಿಸಿತು. ಬಳಿಕ ಇನ್ನೊಂದು ಹೊಸ ಟೀ ರುಚಿ ನೋಡುವಾ ಎಂದು ‘ಚಾಕೋಲೆಟ್‌ ಟೀ’ ಅಂದೆ. ಇದೂ ಅಷ್ಟೇ ಟೀ ಲೋಟ ಕೈಲಿ ಹಿಡಿದ ತಕ್ಷಣ ಚಾಕೋಲೆಟ್‌ ಪರಿಮಳ ಮೂಗಿಗೆ ಬಡಿಯಿತು. ಸ್ವಾದವೂ ಚಂದ ಇತ್ತು.

ಹಳೇ ಮದ್ರಾಸ್‌ ರಸ್ತೆಯಲ್ಲಿ ಇಂದಿರಾನಗರದ ಬಿಡಿಎ ಕಾಂಪ್ಲೆಕ್ಸ್‌ ಸಮೀಪ ಶಾರನ್ ಟೀ ಅಂಗಡಿ ಇದೆ. ‘100ಕ್ಕೂ ಹೆಚ್ಚು ಸ್ವಾದದ ಟೀ ರುಚಿ ಸವಿಯಿರಿ’ ಎಂಬ ಫಲಕವನ್ನು ಮಾಲೀಕರು ಹೆಮ್ಮೆ ಮತ್ತು ಆತ್ಮವಿಶ್ವಾಸದಿಂದ ಹಾಕಿಕೊಂಡಿದ್ದಾರೆ. ಟೀ ಪ್ರಿಯರಿಗೆ ಇದು ಸ್ವರ್ಗ. ಹೊಸ ಸ್ವಾದದ ಟೀ ಕುಡಿಯಬೇಕು ಎನ್ನುವ ಮನಸುಳ್ಳವರು, ಮನೆಯಲ್ಲಿ ನಾರ್ಮಲ್ ಟೀ ಕುಡಿದು ಬೋರ್ ಆದವರು ಬಾಳೆಹಣ್ಣು, ಚಿಕ್ಕು, ದಾಸವಾಳ, ಮಲ್ಲಿಗೆ, ಗುಲಾಬಿ, ಸೀಬೆ, ವೆನಿಲ್ಲಾದಂಥ ಟೀಗಳನ್ನು ಪ್ರಯತ್ನಿಸಬಹುದು. ಆಯಾ ಹೆಸರಿನ ಟೀಗಳು ಆಯಾಯ ಪರಿಮಳ

ಮತ್ತು ವಿಶಿಷ್ಟ ರುಚಿಯನ್ನು ಹೊತ್ತು ಬರುತ್ತವೆ.

ಮಧುಮೇಹಿಗಳು, ಜ್ವರ, ಕೆಮ್ಮು, ಗಂಟಲು ನೋವು, ತಲೆನೋವು ಹಾಗೂ ತೂಕ ಇಳಿಸುವವರಿಗೆ ಬೇಕಾದಂಥ ವಿಶಿಷ್ಟ ಟೀಗಳು ಇಲ್ಲಿ ಸಿಗುತ್ತವೆ. ಇದಲ್ಲದೇ ರೋಸ್‌ ಟೀ, ದಮ್‌, ಶುಂಠಿ, ದಾಲ್ಚಿನ್ನಿ, ಮೆಣಸು, ಏಲಕ್ಕಿ, ಮಸಾಲಾ, ಬ್ಲ್ಯಾಕ್‌ ಟೀ, ಬ್ಲ್ಯಾಕ್‌ ಹನಿ ಟೀ, ಚಿಕ್ಕು ಟೀ, ಜೀರಾ ಟೀ, ವೆನಿಲ್ಲಾ, ತುಳಸಿ, ಬಾದಾಮ್‌ ಟೀ... ಹೀಗೆ ಪಟ್ಟಿ ಇನ್ನೂ ಬೆಳೆಯುತ್ತೆ. ಬೆಲೆಯೂ ನನಗೆ ಅಷ್ಟೇನೂ ದುಬಾರಿ ಎನಿಸಲಿಲ್ಲ. ₹10 ರಿಂದ ಆರಂಭವಾಗಿ ₹30ರವರೆಗೆ ಇದೆ.

‘ಶಾರನ್‌ ಟೀ’ ಮಾಲೀಕರ ಹೆಸರು ಮುನಿಸ್ವಾಮಿ ಡೇನಿಯಲ್‌. ಇವರು ಅಂಗಡಿಯನ್ನು ಆರಂಭಿಸಿದ್ದು 2008ರಲ್ಲಿ. ಕಂಪನಿಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮುನಿಸ್ವಾಮಿಗೆ ಚರ್ಚ್‌ಗೆ ಹೋಗಲು ಮಾಲೀಕರು ರಜೆ ನೀಡುತ್ತಿರಲಿಲ್ಲ. ಬೇಸತ್ತ ಅವರು, ಕೆಲಸಕ್ಕೆ ರಾಜೀನಾಮೆ ನೀಡಿ, ತಿಪ್ಪಸಂದ್ರದಲ್ಲಿ ಟೀ ಅಂಗಡಿ ಆರಂಭಿಸಿದರು. ಗ್ರಾಹಕರಿಗೆ ವಿಶಿಷ್ಟ ಟೀಗಳನ್ನು ಪರಿಚಯಿಸಬೇಕು ಎನ್ನುವ ಆಸೆ ಇತ್ತು. ಅಸ್ಸಾಂನ ಟೀ ಪುಡಿ ತಯಾರಿಕಾ ಕಂಪನಿಯೊಂದು ಇವರನ್ನು ಸಂಪರ್ಕಿಸಿ, ಬಗೆಬಗೆ ಟೀ ಪುಡಿಗಳನ್ನು ಪರಿಚಯಿಸಿತು. ಇವರು ಇಂದಿಗೂ ತಮ್ಮ ಅಂಗಡಿಯಲ್ಲಿ ಬಳಸುವ ಟೀ ಪುಡಿಗಳನ್ನು ಅಸ್ಸಾಂನಿಂದಲೇ ನೇರವಾಗಿ ತರಿಸಿಕೊಳ್ಳುತ್ತಾರೆ.

ಇಲ್ಲಿ ಸಿಗುವ ಜೇನು ಟೀ (ಹನಿ ಟೀ), ತುಳಸಿ ಟೀ ಬಾಯಿಗೆ ರುಚಿಯಷ್ಟೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು. ‘ಕೆಮ್ಮು, ಶೀತ ಇರುವ ಗ್ರಾಹಕರು ಬಂದರೆ ತುಳಸಿ, ಶುಂಠಿ ಹಾಕಿದ ಟೀ, ಡಯೆಟ್‌ ಮಾಡುವವರಿಗೆ ಗ್ರೀನ್‌ ಟೀ, ಮಸಾಲಾ ಟೀ ನೀಡುತ್ತೇವೆ. ಇದಲ್ಲದೇ ಮಧುಮೇಹಿಗಳಿಗೆ ಪ್ರತ್ಯೇಕ ಡಯಾಬಿಟಿಕ್‌ ಟೀ ಇದೆ’ ಎಂದು ವಿವರಿಸುತ್ತಾರೆ ಮುನಿಸ್ವಾಮಿ.

‘ಶುಂಠಿ ಹಾಗೂ ಗ್ರೀನ್‌ ಚಹಾಕ್ಕೆ ಬೇಡಿಕೆ ಹೆಚ್ಚು. ಶುಂಠಿಗೆ ಹಲವು ರೋಗಗಳನ್ನು ಗುಣಪಡಿಸುವ ಸಾಮರ್ಥ್ಯ ಇದೆ. ಟೆಕಿಗಳು ಹಾಗೂ ಕಾಲೇಜು ಹುಡುಗರು ಗ್ರೀನ್‌ ಟೀ ಕುಡಿಯಲು ಇಷ್ಟಪಡುತ್ತಾರೆ’ ಎನ್ನುತ್ತಾರೆ ಅವರು.

ಶಾರನ್‌ ಟೀ ಅಂಗಡಿ ವಿಳಾಸ– ಶಾರನ್‌ ಟೀ ಅಂಗಡಿ, ಇಂದಿರಾನಗರ ಬಿಡಿಎ ಕಾಂಪ್ಲೆಕ್ಸ್‌ ಮುಂಭಾಗ. ಹಳೆ ಮದ್ರಾಸ್‌ ರಸ್ತೆ. ಸಂಪರ್ಕಕ್ಕೆ– 97384 47078

***

ನಾನು ಇಂದಿರಾನಗರದ ಫ್ಯೂಚರ್‌ ಗ್ರೂಪ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಬೆಳಿಗ್ಗೆ, ಸಂಜೆ ಟೀ ಕುಡಿಯಲು ಇಲ್ಲಿಗೇ ಬರುತ್ತೇನೆ. ಇಲ್ಲಿರುವ 50ಕ್ಕೂ ಹೆಚ್ಚು ವಿಧದ ಟೀಗಳ ರುಚಿ ನೋಡಿದ್ದೇನೆ. ನಾನು ಹೆಚ್ಚು ಕುಡಿಯುವುದು ನಾರ್ಮಲ್‌ ಟೀ.

-ಅವಿನಾಶ್‌ ಕೆ.ಆರ್‌, ಬನಶಂಕರಿ

ಶರಾನ್ ಟೀ ಅಂಗಡಿ ಪಕ್ಕದ ಎಬಲ್‌ ಅಕಾಡೆಮಿಯಲ್ಲಿ ಬ್ರಿಟನ್‌ ಅಕ್ಸೆಂಟ್‌ ಇಂಗ್ಲಿಷ್‌ ತರಗತಿಗೆ ಬರ್ತೀನಿ. ಮೊದಲಿನಿಂದಲೂ ಇಲ್ಲಿನ ಟೀ ನನಗೆ ಇಷ್ಟ. ಚಳಿ ಇದ್ದಾಗ ಶುಂಠಿ ಟೀ ಕುಡಿಯುತ್ತಿದ್ದೆ. ಈಗ ಸ್ವಲ್ಪ ಬಿಸಿಲು ಜಾಸ್ತಿ ಅಲ್ವಾ? ಪುದೀನಾ ಹಾಗೂ ಜೇನುತುಪ್ಪದ ಟೀ ಕುಡಿಯುತ್ತೇನೆ.

ಚರಣ್‌ ಕೃಷ್ಣ, ಕೆ.ಆರ್‌.ಪುರಂ

 

ಗ್ರಾಹಕರ ಇಷ್ಟ ನಮಗೆ ಗೊತ್ತು

ಶರಾನ್ ಟೀ ಅಂಗಡಿಯಲ್ಲಿ ಡೇನಿಯಲ್ ಅಥವಾ ಅವರ ಮಗ ಡೇವಿಡ್ ಮಾತ್ರ ಟೀ ಮಾಡುತ್ತಾರೆ. ‘ಗ್ರಾಹಕರಿಗೆ ಎಂಥ ಟೀ ಇಷ್ಟವಾಗುತ್ತೆ ಅಂತ ನಮಗೆ ಗೊತ್ತು. ಹಲವು ವರ್ಷಗಳ ಅನುಭವದಿಂದ ಇದನ್ನು ಕಂಡುಕೊಂಡಿದ್ದೇವೆ. ಬೇರೆಯವರು ಟೀ ಕಾಯಿಸಿದರೆ ರುಚಿ ಬದಲಾಗಬಹುದು. ಹೀಗಾಗಿ ನಾವಿಬ್ಬರೇ ಟೀ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ವಿವಿಧ ರೀತಿಯ ಟೀ ಪುಡಿಗಳನ್ನು ಮಾರುವ ಆಲೋಚನೆ ಇದೆ’ ಎನ್ನುತ್ತಾರೆ ಡೇನಿಯಲ್.

ಒಳಿತಿನ ಮಾರ್ಗದಲ್ಲಿ ವ್ಯಾಪಾರ ಬೆಳೆಸಿಕೊಳ್ಳಬೇಕು ಎಂದುಕೊಳ್ಳುವವರಿಗೆ ದಾರಿಗಳು ನೂರಾರು. ‘ನನ್ನ ಅಂಗಡಿ ಸ್ಪೆಷಲ್ ಅನಿಸಬೇಕು’ ಎನ್ನುವ ಆಸೆಯ ಬೆನ್ನು ಹತ್ತಿದ ಇಂದಿರಾನಗರದ ಮುನಿಸ್ವಾಮಿ ಅವರು ಅಕ್ಷರಶಃ ಬೆಂಗಳೂರಿಗೆ ನೂರಾರು ಟೀ ಪರಿಚಯಿಸಿದರು. ಸೃಜನಶೀಲತೆ ಮತ್ತು ಪರಿಶ್ರಮ ಇದ್ದರೆ ಆಹಾರೋದ್ಯಮದಲ್ಲಿ ಯಶಸ್ಸು ಸಾಧ್ಯ ಎನ್ನುವುದಕ್ಕೆ ಮುನಿಸ್ವಾಮಿ ಉತ್ತಮ ಉದಾಹರಣೆ

ಪ್ರತಿಕ್ರಿಯಿಸಿ (+)