‘ಸುದ್ದಿಯೆಂಬುದು ದಾನ ಧರ್ಮ ಅಲ್ಲ’

7

‘ಸುದ್ದಿಯೆಂಬುದು ದಾನ ಧರ್ಮ ಅಲ್ಲ’

Published:
Updated:

ಅಮೆರಿಕದ ಅನುಭವಿ ಪತ್ರಕರ್ತ, ಲಾಭರಹಿತ ಪತ್ರಿಕೋದ್ಯಮ ಸಂಸ್ಥೆ ‘ಪುಲಿಟ್ಜರ್ ಸೆಂಟರ್’ನ ಸಂಪಾದಕ ಟಾಂ ಹಂಡ್ಲೇ ಇತ್ತೀಚೆಗೆ ದೆಹಲಿಯ ‘ಅಬ್ಸರ್ವರ್ಸ್ ರಿಸರ್ಚ್ ಫೌಂಡೇಷನ್’ನಲ್ಲಿ ಉಪನ್ಯಾಸ ನೀಡಿದರು. ಅವರನ್ನು ‘ಪ್ರಜಾವಾಣಿ’ ಮಾತಿಗೆಳೆಯಿತು.

* ಅಂತರರಾಷ್ಟ್ರೀಯ ವರದಿಗಾರಿಕೆ ಅಪಾಯದಲ್ಲಿದೆ ಅಂತ ಯಾಕೆ ಹೇಳ್ತೀರಿ?

ಅಮೆರಿಕದಲ್ಲಿ ಅಂತರರಾಷ್ಟ್ರೀಯ ಸುದ್ದಿಯ ವರದಿಗಾರಿಕೆ ಕುಸಿಯತೊಡಗಿದೆ. ಇದನ್ನು ಬೆಂಬಲಿಸುವ ವ್ಯವಹಾರ ಮಾದರಿಗಳು (ಬ್ಯುಸಿನೆಸ್ ಮಾಡಲ್) ತೀವ್ರ ತೊಂದರೆಯಲ್ಲಿವೆ. ನಾನು ‘ಷಿಕಾಗೊ ಟ್ರಿಬ್ಯೂನ್’ನ ಫಾರಿನ್ ಡೆಸ್ಕ್‌ನಲ್ಲಿದ್ದೆ. ಹನ್ನೆರಡು ವಿದೇಶಿ ಬ್ಯೂರೊಗಳನ್ನು ಈ ಪತ್ರಿಕೆ ಹೊಂದಿತ್ತು. ಜಾಹೀರಾತು ಆದಾಯಕ್ಕೆ

ಅಂತರ್ಜಾಲದ ಕತ್ತರಿ ಬಿದ್ದ ನಂತರ ದಿವಾಳಿಯೆದ್ದಿತು. ಇಂದು ಒಂದೇ ಒಂದು ವಿದೇಶಿ ಬ್ಯೂರೊ ಕೂಡ ಉಳಿದಿಲ್ಲ. ‘ದಿ ಲಾಸ್ ಏಂಜೆಲಿಸ್ ಟೈಮ್ಸ್‌’ನ 35-36 ವಿದೇಶಿ ಬ್ಯೂರೊಗಳು ಇಂದು ಆರೇಳಕ್ಕೆ ಕುಸಿದಿವೆ. ಟೈಮ್ ಮತ್ತು ನ್ಯೂಸ್ ವೀಕ್ ನಿಯತಕಾಲಿಕಗಳ ಡಜನ್ನುಗಟ್ಟಲೆವಿದೇಶಿ ಬ್ಯೂರೊಗಳು ಈಗ ಹೇಗೋ ಉಸಿರಾಡಿಕೊಂಡಿವೆ. ಈ ಪತನದಲ್ಲಿ ಉಳಿದದ್ದು ‘ದಿ ನ್ಯೂ ಯಾರ್ಕ್ ಟೈಮ್ಸ್’ ಮಾತ್ರ.

* ಕುಸಿದಿರುವುದರ ಸ್ಥಾನಕ್ಕೆ ಹೊಸದೇನು ಬಂದಿದೆ?

ಈ ಹೊಸತು ಎಂಬುದು ಡಿಜಿಟಲ್ ಯುಗದ ಸೃಷ್ಟಿ. ‘ವಿದೇಶಾಂಗ ನೀತಿ ಕುರಿತ ಹಳೆಯ ನಿಯತಕಾಲಿಕಗಳ ಚೂಟಿಯಾದ ಹೊಸ ವಿನ್ಯಾಸದ ಡಿಜಿಟಲ್ ಅವತರಣಿಕೆಗಳು ಹೊಸ ಓದುಗರನ್ನು ಸೆಳೆದಿವೆ. ಈ ತಾಣಗಳು ಓದುಗರಿಂದ ಚಂದಾ ಪಡೆಯುವುದಿಲ್ಲ. ಪತ್ರಕರ್ತರಿಗೆ ಒಳ್ಳೆಯ ಸಂಬಳಸಾರಿಗೆ ನೀಡುವುದಿಲ್ಲ. ಇದು ಬಹುಕಾಲ ಸಾಗಬಲ್ಲ ಒಳ್ಳೆಯ ‘ಬ್ಯುಸಿನೆಸ್ ಮಾಡೆಲ್’ ಅಲ್ಲ. ವರದಿ ಮಾಡುತ್ತಿರುವ ಫ್ರೀಲಾನ್ಸರುಗಳು ಅತಿ ಎಳೆಯರು ಮತ್ತು ಅನನುಭವಿಗಳು. ಯಾವುದಾದರೂ ಆಪತ್ತಿಗೆ ಸಿಲುಕಿದರೆ ಕಾಪಾಡುವ ಸಾಂಸ್ಥಿಕ ಸುರಕ್ಷತಾ ಜಾಲ ಇವರ ಬೆನ್ನಿಗಿಲ್ಲ. ‘ಮಾರಾಟ’ಆಗಬಲ್ಲ ಹಸಿಬಿಸಿ ಪ್ರಚೋದನಕಾರಿ ವರದಿಗಳ ಬೆನ್ನು ಬೀಳುತ್ತಾರೆ.

ಸಾರ್ವಜನಿಕ ಆರೋಗ್ಯ, ಆದಾಯ ಅಸಮಾನತೆ, ದುರಾಡಳಿತದಂತಹ ವಿಷಯಗಳು ಮೂಲೆಗುಂಪಾಗುತ್ತಿವೆ. ಗುಣಮಟ್ಟದ ವರದಿಗಾರಿಕೆ ಇರುವುದಿಲ್ಲ. ಉತ್ತಮ ವೃತ್ತಿ ಅವಕಾಶ ಅಲ್ಲದ ಕಾರಣ ಪ್ರತಿಭಾವಂತರು ಈ ಕಸುಬಿನಿಂದ ದೂರ ಉಳಿಯುತ್ತಾರೆ.

* ‘ಕ್ಲಿಕ್ ಮತ್ತು ಗಾಳದ ಸಂಸ್ಕೃತಿ’ ಎಂದರೇನು?

ಅಂತರ್ಜಾಲ ಬರುವುದಕ್ಕೂ ಮುನ್ನ ‘ಟೈಮ್ಸ್’, ‘ಪೋಸ್ಟ್’, ‘ಷಿಕಾಗೊ ಟ್ರಿಬ್ಯೂನ್‌’ಗಳು ಅಂತರರಾಷ್ಟ್ರೀಯ ಸುದ್ದಿಗಳನ್ನು ಪ್ರಮುಖವಾಗಿ ಪ್ರಕಟಿಸುತ್ತಿದ್ದವು. ಈ ನಡೆಯ ಹಿಂದೆ ನಾಗರಿಕ ಕರ್ತವ್ಯಪ್ರಜ್ಞೆಯಿತ್ತು. ಅಂತರ್ಜಾಲ ಬಂದ ನಂತರ ವರದಿಯೊಂದು ಗಳಿಸುವ ‘ಕ್ಲಿಕ್’ಗಳ ಎಣಿಕೆ ಮತ್ತು ಓದುಗರಿಗೆ ಬೇಕಾದ

ದ್ದನ್ನು ನೀಡುವುದೇ ಪರಮ ಎನಿಸಿತು. ಸಮಾಜಕ್ಕೆ ಒಳ್ಳೆಯದನ್ನು ಕೊಡುವ ಮೌಲ್ಯ ಹಿನ್ನೆಲೆಗೆ ಸರಿಯಿತು.

* ಇದನ್ನು ಕಟ್ಟಿಕೊಂಡು ಭಾರತದಂತಹ ದೇಶಗಳಿಗೆ ಏನಾಗಬೇಕಿದೆ?

ಜಾಗತೀಕರಣದ ಜಗತ್ತಿನಲ್ಲಿ ಅಮೆರಿಕವು ‘ಮೀಡಿಯಾ ಸೂಪರ್ ಪವರ್’ ಕೂಡ ಎನಿಸಿತ್ತು. ಯಾವುದು ಮುಖ್ಯ, ಯಾವುದು ಅಮುಖ್ಯ, ಯಾವುದನ್ನು ಹೇಗೆ, ಎಷ್ಟು ವರದಿ ಮಾಡಬೇಕು ಎಂಬ ಜಾಗತಿಕ ಕಾರ್ಯಸೂಚಿಯನ್ನು ಹಾಕಿಕೊಡುತ್ತಿತ್ತು. ಅಮೆರಿಕದಲ್ಲಿ ಮುಖಪುಟ ಸುದ್ದಿ ಆಗಿರುತ್ತಿದ್ದರೆ ಯುರೋಪ್ ಮತ್ತು ಏಷ್ಯಾದಲ್ಲೂ ಅದು ಮುಖಪುಟ ಸುದ್ದಿಯಾಗಿರುತ್ತಿತ್ತು. ಸರ್ಕಾರಗಳಿಂದ, ವಿಶ್ವಸಂಸ್ಥೆಯಿಂದ ಹಾಗೂ ಮಾನವಹಕ್ಕು ಗುಂಪುಗಳಿಂದ ಅಂತಹ ಸುದ್ದಿಗೆ ಸ್ಪಂದನ ಇರುತ್ತಿತ್ತು. ಇದೀಗ ಅದೆಲ್ಲ ತಪ್ಪಿ ಹೋಗಿದೆ. ಇಂದಿನ ಅಂತರ್ಜಾಲದ ಯುಗದಲ್ಲಿ ಕಣ್ಣು ಕೋರೈಸುವ ಸಂಗತಿಗಳೇ ಮುಖ್ಯ ಆಗಿಬಿಟ್ಟಿವೆ.

* ಈ ಸಮಸ್ಯೆಗೆ ಪರಿಹಾರ ಇದೆಯೇ?

ಗುಣಮಟ್ಟದ ಪತ್ರಿಕೋದ್ಯಮವನ್ನು ದಾನಿಗಳು ಬೆಂಬಲಿಸುತ್ತಾರೆಂದು ಜನ ಅಂದುಕೊಳ್ಳುತ್ತಾರೆ ಅಥವಾ ಬೆಂಬಲಿಸಲಿ ಎಂದು ಬಯಸುತ್ತಾರೆ. ಆದರೆ ಹಾಗೆ ಆಗುತ್ತಿಲ್ಲ. ಅದು ಸಮಸ್ಯೆಗೆ ಪರಿಹಾರ ಅಲ್ಲ. ಸುದ್ದಿ ಎಂಬುದು ದಾನ ಧರ್ಮ ಅಲ್ಲ. ಅದೊಂದು ವಾಣಿಜ್ಯ ವಹಿವಾಟು. ಕಳೆದ ಶತಮಾನದ ಆರಂಭದಲ್ಲಿ ‘ಪೆನ್ನೀ ಪ್ರೆಸ್’ ನಿಜವಾದ ಸಮೂಹ ಮಾಧ್ಯಮ ಆಗಿತ್ತು. ಅಂತೆಯೇ ‘ಪೆನ್ನೀ ಇಂಟರ್ನೆಟ್’ ಇಂದಿನ ಅಗತ್ಯ. ಸಮಸ್ಯೆಯೆಂದರೆ ಪತ್ರಿಕೋದ್ಯಮದ ಓಂನಾಮ ಗೊತ್ತಿಲ್ಲದವರು, ಸುದ್ದಿ ಉತ್ಪನ್ನವನ್ನೇ ಮಾಡದವರು ರಾಶಿ ರಾಶಿ ಹಣ ಗಳಿಸುತ್ತಿದ್ದಾರೆ. ಫೇಸ್‌ಬುಕ್, ಗೂಗಲ್, ಟ್ವಿಟರ್, ಆ್ಯಪಲ್ ಈ ಮಾತಿಗೆ ಕೆಲವು ಉದಾಹರಣೆಗಳು.

* ಇವರೆಲ್ಲ ಹಣ ಗಳಿಸಿದರೆ ಏನು ಸಮಸ್ಯೆ?

ಫೇಸ್‌ಬುಕ್ ಮತ್ತು ಟ್ವಿಟರ್‌ಗಳು ಇತರರು ಉತ್ಪಾದಿಸುವ ಸುದ್ದಿಯನ್ನು ತಲುಪಿಸುವ ವಾಹಕಗಳಾಗಿಬಿಟ್ಟಿವೆ. ಖೋಟಾ ಸುದ್ದಿ (ಫೇಕ್ ನ್ಯೂಸ್) ಬದುಕಿ ಬೆಳಗುವ ಬೆಚ್ಚನೆಯ ವಾತಾವರಣ ಈ ವಾಹಕಗಳಲ್ಲಿದೆ. ಈ ಜಾಲತಾಣಗಳನ್ನು ಪ್ರವೇಶಿಸಿ ಕೈಚಳಕ ತೋರುವುದು ಖೋಟಾ ಸುದ್ದಿಯ ಪ್ರಸಾರಕರಿಗೆ ಬಲು ಸಲೀಸು. ಅಮೆರಿಕದ ಅಧ್ಯಕ್ಷೀಯ ಚುನಾವಣೆಯನ್ನು ಡೊನಾಲ್ಡ್ ಟ್ರಂಪ್ ಪರವಾಗಿ ತಿರುಗಿಸಲು ರಷ್ಯನ್ನರು ಖೋಟಾ ಸುದ್ದಿಯನ್ನು ಪರಿಣಾಮಕಾರಿಯಾಗಿ ಬಳಸಿದರೆಂಬುದಕ್ಕೆ ನಿಚ್ಚಳ ಪುರಾವೆಗಳಿವೆ. ‘ಪೋಪ್ ಫ್ರಾನ್ಸಿಸ್ ಅವರು ಟ್ರಂಪ್ ಅವರನ್ನು ಬೆಂಬಲಿಸಿದ್ದಾರೆ’ ಎಂಬುದು ಮತ್ತೊಂದು ಬಹುದೊಡ್ಡ ಖೋಟಾ ಸುದ್ದಿಯಾಗಿತ್ತು. ‘ಎಲ್ಲಿ ಓದಿದಿರಿ’ ಎಂದು ಕೇಳಿದರೆ ಅಂತರ್ಜಾಲದಲ್ಲಿ ಎಂಬ ಉತ್ತರ ದೊರೆಯುತ್ತದೆ. ಸುದ್ದಿ ವ್ಯವಹಾರದಲ್ಲಿ ಅತ್ಯಂತ ಹಾನಿಕಾರಕ ಬೆಳವಣಿಗೆ ಇದು.

ಈ ವೈರಾಣುವನ್ನು ಅಡಗಿಸಲು ಏನಾದರೂ ಮಾಡಿ ಎಂದು ಆಗ್ರಹಿಸುತ್ತೇವೆ. ಫೇಸ್‌ಬುಕ್, ಆ್ಯಪಲ್, ಗೂಗಲ್, ಟ್ವಿಟರ್ ಗಳಂತಹ ಡಿಜಿಟಲ್ ದೈತ್ಯ ತಾಣಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತೇವೆ. ಆದರೆ ಆದು ಫಲ ನೀಡುವುದಿಲ್ಲ. ‘ಏನಾದರೂ ಮಾಡಿ’ ಎಂದು ಪತ್ರಿಕೆ ಹಂಚುವ ಹುಡುಗರನ್ನು ಅಥವಾ ಅಂಗಡಿಯಲ್ಲಿ ಸುದ್ದಿಪತ್ರಿಕೆ ಮಾರಾಟ ಮಾಡುವವರನ್ನು ಕೇಳಿಕೊಂಡರೆ ಏನು ಫಲ? ಫೇಸ್‌ಬುಕ್ ಎಂಬುದು ಕೇವಲ ಬಟವಾಡೆ ಹುಡುಗನಂತೆ.

* ಹಾಗಾದರೆ ಈ ಜವಾಬ್ದಾರಿಯನ್ನು ಯಾರು ಹೊರಬೇಕು?

ಈ ಜವಾಬ್ದಾರಿ ಬಂದು ನಿಲ್ಲುವುದು ಗ್ರಾಹಕರ ಬಾಗಿಲ ಬಳಿ. ಬಿ.ಬಿ.ಸಿ. ವರದಿ ಮತ್ತು ಜುಜುಬಿ ಜಾಲತಾಣವೊಂದರ ನಡುವಣ ವ್ಯತ್ಯಾಸ ಅರಿಯಬೇಕು. ಪೋಪ್ ಅವರು ಟ್ರಂಪ್ ಅವರನ್ನು ಬೆಂಬಲಿಸಿದ್ದಾರೆಂದು ಯಾರಾದರೂ ಹೇಳಿದರೆ ಅದರಲ್ಲೇನೋ ಹುಳುಕಿದೆ ಎಂದು ಅನುಮಾನಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry