ಭಾನುವಾರ, ಡಿಸೆಂಬರ್ 8, 2019
24 °C
ಗದಗ ಜಿಲ್ಲಾಡಳಿತ ಭವನದ ಎದುರು ಮಕ್ಕಳೊಂದಿಗೆ ಉಪವಾಸ

ಅನ್ಯಾಯ ಸರಿಪಡಿಸಿ: ಯೋಧನ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನ್ಯಾಯ ಸರಿಪಡಿಸಿ: ಯೋಧನ ಮನವಿ

ಗದಗ: ಬೆಂಗಳೂರಿನಲ್ಲಿರುವ ಕೇಂದ್ರ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್) ವಸತಿ ಗೃಹದಿಂದ ತಮ್ಮನ್ನು ಬಲವಂತವಾಗಿ ಹೊರಹಾಕಲಾಗಿದೆ ಎಂದು ಆರೋಪಿಸಿ ಗದಗ ತಾಲ್ಲೂಕಿನ ಹರ್ಲಾಪುರ ಗ್ರಾಮದ ಯೋಧ ಜೀವನಸಾಬ್‌ ಹಬ್ಬಣ್ಣಿ, ಇಲ್ಲಿನ ಜಿಲ್ಲಾಡಳಿತ ಭವನದ ಎದುರು ತಮ್ಮ ಇಬ್ಬರು ಅಂಗವಿಕಲ ಮಕ್ಕಳೊಂದಿಗೆ ಬುಧವಾರ ಉಪವಾಸ ಸತ್ಯಾಗ್ರಹ ನಡೆಸಿದರು.

‘ಕೋರ್ಟ್‌ ಆದೇಶದ ಮೇರೆಗೆ ಸೇವೆಗೆ ಮರು ನಿಯೋಜನೆಗೊಂಡರೂ, ಮೇಲಧಿಕಾರಿಗಳು ಕಡ್ಡಾಯ ನಿವೃತ್ತಿ ಪಡೆಯುವಂತೆ ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ. ಸಿಆರ್‌ಪಿಎಫ್‌ ವಸತಿ ಗೃಹದಿಂದ ಬಲವಂತವಾಗಿ ಹೊರಹಾಕಲಾಗಿದೆ’ ಎಂದು ಅವರು ದೂರಿದರು.

‘ಸಿಆರ್‌ಪಿಎಫ್‌ 51ನೇ ಬೆಟಾಲಿಯನ್‌ನಲ್ಲಿ12 ವರ್ಷ ಕೆಲಸ ಮಾಡಿದ್ದೇನೆ. ಮೇಲಧಿಕಾರಿಗಳು ಕರ್ತವ್ಯಲೋಪದ ಆರೋಪ ಹೊರಿಸಿ ಕೆಲಸದಿಂದ ತೆಗೆದು ಹಾಕಿದರು. ಇದರ ವಿರುದ್ಧ ಹೈಕೋರ್ಟ್‌ ಮೊರೆ ಹೋಗಿದ್ದೆ. ಕೋರ್ಟ್‌ ಆದೇಶದ ಮೇಲೆ ಮರಳಿ ಹೈದರಾಬಾದ್‌ನ 42ನೇ ಬೆಟಾಲಿಯನ್‌ಗೆ ನಿಯೋಜನೆಗೊಂಡೆ. ಅಲ್ಲಿಂದ ಬೆಂಗಳೂರಿನ ತರಬೇತಿ ಕೇಂದ್ರಕ್ಕೆ ಕಳುಹಿಸಿದರು. ಆದರೆ, ಅಲ್ಲಿ, ಈ ಹಿಂದೆ ನನ್ನ ಮೇಲೆ ಆರೋಪ ಹೊರಿಸಿದ್ದ ಅಧಿಕಾರಿಯೇ ಮೇಲಧಿಕಾರಿಯಾಗಿ ಬಂದರು. ಸಿಗಬೇಕಾದ ಬಡ್ತಿ ಹಾಗೂ ನೀಡಬೇಕಾದ ವೈಯಕ್ತಿಕ ರೈಫಲ್ ಕೊಡದೇ ಸತಾಯಿಸಿದರು. 2016ರಲ್ಲಿ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದೆ. ಆದರೆ, ಇದನ್ನು ಪರಿಗಣಿಸದೆ ಕಡ್ಡಾಯ ನಿವೃತ್ತಿ ಪಡೆಯುವಂತೆ ಒತ್ತಡ ಹೇರುತ್ತಿದ್ದಾರೆ. ಈಗ ಬಲವಂತವಾಗಿ ಹೊರ ಹಾಕಿದ್ದಾರೆ. ಸೇವಾ ದಾಖಲೆ ಕೇಳಿದರೂ ನೀಡುತ್ತಿಲ್ಲ’ ಎಂದು ಜೀವನಸಾಬ್‌ ಅಳಲು ತೋಡಿಕೊಂಡರು.

ಬಾಕಿ ಉಳಿದಿರುವ ವೇತನ ಮತ್ತು ಪರಿಹಾರ ನೀಡಬೇಕು ಹಾಗೂ ತಮ್ಮನ್ನು ಮತ್ತೆ ಸೇವೆಗೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ ಅವರು, ಈ ಕುರಿತು ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸುವುದಾಗಿ ಹೇಳಿದರು.

ಸತ್ಯಾಗ್ರಹ ಮಾಡುತ್ತಿರುವುದು ತಮ್ಮ ಗಮನಕ್ಕೆ ಬಂದಿಲ್ಲ. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರೆ ಅದನ್ನು ಸಂಬಂಧಪಟ್ಟವರಿಗೆ ಕಳುಹಿಸುವುದಾಗಿ ಜಿಲ್ಲಾಧಿಕಾರಿ ಮನೋಜ್‌ ಜೈನ್‌ ಹೇಳಿದರು.

ಪ್ರತಿಕ್ರಿಯಿಸಿ (+)