ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿ ನ್ಯಾಯಮಂಡಳಿ ವಿಚಾರಣೆ ಪೂರ್ಣ

ಆಗಸ್ಟ್‌ ವೇಳೆಗೆ ಐತೀರ್ಪು ಪ್ರಕಟಣೆ ಸಾಧ್ಯತೆ, ಪ್ರತ್ಯೇಕ ಅಂಶಗಳು ಬಾಕಿ ಇದ್ದಲ್ಲಿ ಲಿಖಿತ ರೂಪದ ಟಿಪ್ಪಣಿ ಸಲ್ಲಿಸಲು ಸೂಚನೆ
Last Updated 21 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರಗಳ ನಡುವಿನ ಮಹದಾಯಿ ನದಿ ನೀರು ಹಂಚಿಕೆ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ನಡೆದ ನ್ಯಾಯಮಂಡಳಿಯ ವಿಚಾರಣೆಯು ಬುಧವಾರ ಪೂರ್ಣಗೊಂಡಿದ್ದು, ಮುಂದಿನ ಆಗಸ್ಟ್‌ ವೇಳೆಗೆ ಐತೀರ್ಪು ಹೊರಬೀಳುವ ನಿರೀಕ್ಷೆ ಇದೆ.

ನ್ಯಾಯಮೂರ್ತಿ ಜೆ.ಎಂ. ಪಾಂಚಾಲ್‌ ನೇತೃತ್ವದ ನ್ಯಾಯಮಂಡಳಿಯ ಅವಧಿಯು ಮುಂದಿನ ಆಗಸ್ಟ್‌ 20ರಂದು ಪೂರ್ಣಗೊಳ್ಳಲಿದೆ. ಆದರೆ, ಸಮೀಕ್ಷೆ ಅಥವಾ ತೀರ್ಪು ಸಿದ್ಧಪಡಿಸುವ ಪ್ರಕ್ರಿಯೆಗೆ ಮತ್ತಷ್ಟು ಸಮಯಾವಕಾಶ ಅಗತ್ಯವಾದಲ್ಲಿ ಐತೀರ್ಪು ಪ್ರಕಟಣೆ ವಿಳಂಬವಾಗಲಿದೆ.

ನದಿ ಕಣಿವೆಯಲ್ಲಿ ಲಭ್ಯವಿರುವ ವಾರ್ಷಿಕ ನೀರಿನ ಪ್ರಮಾಣದ ಕುರಿತು ಗೊಂದಲ ಉಂಟಾಗಿರುವುದರಿಂದ ಸತ್ಯಾಂಶ ಅರಿಯುವ ಸಲುವಾಗಿ ತಜ್ಞರ ನೇತೃತ್ವದ ಸಮೀಕ್ಷೆ ನಡೆಸುವುದಾಗಿ ತಿಳಿಸಿದ ನ್ಯಾಯಮಂಡಳಿಯು, ಇದುವರೆಗೆ ಮಂಡಿಸಿರುವ ವಾದ, ಪ್ರತಿವಾದದ ಸಂದರ್ಭ ಬಿಟ್ಟುಹೋಗಿರುವ, ಗಮನ ಸೆಳೆಯಬಹುದಾದ ಪ್ರತ್ಯೇಕ ಅಂಶಗಳು ಬಾಕಿ ಇದ್ದಲ್ಲಿ ಲಿಖಿತ ರೂಪದ ಟಿಪ್ಪಣಿ ಸಲ್ಲಿಸಬಹುದು ಎಂಬ ನಿರ್ದೇಶನ ನೀಡಿದೆ.

ಮಹದಾಯಿ ನೀರು ಹಂಚಿಕೆ ವಿವಾದ ಬಗೆಹರಿಸಲೆಂದೇ 2011ರಲ್ಲಿ ರಚಿತವಾಗಿರುವ ನ್ಯಾಯಮೂರ್ತಿಗಳಾದ ವಿನಯ್‌ ಮಿತ್ತಲ್‌ ಹಾಗೂ ಪಿ.ಎಸ್‌. ನಾರಾಯಣ ಅವರನ್ನು ಒಳಗೊಂಡಿರುವ ನ್ಯಾಯಮಂಡಳಿ, ಒಟ್ಟು 105 ದಿನಗಳ ಕಾಲ ವಿಚಾರಣೆ ನಡೆಸಿದಂತಾಗಿದೆ.

ನೀರಿನ ಲಭ್ಯತೆ ಸಮೀಕ್ಷೆ: ಮಹದಾಯಿ ನದಿಯಲ್ಲಿ ವಾರ್ಷಿಕ 199.60 ಟಿಎಂಸಿ ಅಡಿ ನೀರು ಲಭ್ಯವಿದೆ ಎಂದು ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ವರದಿ ಸಲ್ಲಿಸಿದ್ದು, ರಾಜ್ಯ ಸರ್ಕಾರ ಅದೇ ವರದಿಯನ್ನು ಮುಂದಿರಿಸಿಕೊಂಡು ನಡೆಸಿರುವ ವೈಜ್ಞಾನಿಕ ಸಮೀಕ್ಷೆಯ ಆಧಾರದಲ್ಲಿ ನೀರು ಹಂಚಿಕೆ ಕೋರಿ ವಾದ ಮಂಡಿಸಿದೆ. ಆದರೆ, ನದಿಯಲ್ಲಿ ಲಭ್ಯವಿರುವ ನೀರಿನ ಪ್ರಮಾಣ ಕೇವಲ 113 ಟಿಎಂಸಿ ಅಡಿ ಎಂದು ಗೋವಾ ಪ್ರತಿಪಾದಿಸಿದೆ.

ಸಿಡಬ್ಲ್ಯೂಸಿ ಅಥವಾ ಕರ್ನಾಟಕ ಸಲ್ಲಿಸಿರುವ ವರದಿಯನ್ವಯ ನೀರಿನ ಲಭ್ಯತೆ ಇದ್ದಲ್ಲಿ ರಾಜ್ಯ ಸರ್ಕಾರ ಬೇಡಿಕೆ ಇರಿಸಿರುವ ಪ್ರಮಾಣದಷ್ಟು ನೀರಿನ ಹಂಚಿಕೆ ಖಾತರಿಯಾಗಲಿದೆ.

ಕಣಿವೆ ರಾಜ್ಯಗಳ ಬೇಡಿಕೆ: ಹುಬ್ಬಳ್ಳಿ– ಧಾರವಾಡ ಅವಳಿ ನಗರ ಸೇರಿದಂತೆ ಮುಂಬೈ ಕರ್ನಾಟಕ ಭಾಗದ ನಾಲ್ಕು ಜಿಲ್ಲೆಗಳ ಜನರ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಲು ಕಳಸಾ, ಬಂಡೂರಿ ನಾಲಾ ತಿರುವು ಯೋಜನೆ ಮೂಲಕ ಮಲಪ್ರಭಾ ನದಿಗೆ ವಾರ್ಷಿಕ 7.56 ಟಿಎಂಸಿ ಅಡಿ ನೀರಿನ ಹಂಚಿಕೆ ಸೇರಿದಂತೆ ಮಹದಾಯಿಯಿಂದ ಒಟ್ಟು 21.98 ಟಿಎಂಸಿ ಅಡಿ ನೀರನ್ನು ಕರ್ನಾಟಕ ಕೋರಿದೆ.

ಕಾಳಿ, ಕೋಟ್ನಿ ಜಲವಿದ್ಯುತ್‌ ಉತ್ಪಾದನೆ ಉದ್ದೇಶವನ್ನೂ ಒಳಗೊಂಡ ಒಟ್ಟು 12 ಯೋಜನೆಗಳ ರೂಪುರೇಷೆ ಸಿದ್ಧಪಡಿಸಿರುವುದಾಗಗಿ ತಿಳಿಸಿರುವ ರಾಜ್ಯ ಸರ್ಕಾರ, ಪಶ್ಚಿಮ ಘಟ್ಟದಲ್ಲಿ ಹರಿದಿರುವ ಮಹದಾಯಿ ನೀರನ್ನು ಪಡೆಯಲು ಅನುವಾಗುವಂತೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸಿದೆ. ಆ ಪೈಕಿ, ಪ್ರಗತಿಯಲ್ಲಿದ್ದ ಕಳಸಾ, ಬಂಡೂರಿ ಯೋಜನೆಗಳ ಕಾಮಗಾರಿಯನ್ನು ನ್ಯಾಯಮಂಡಳಿ ಸೂಚನೆಯ ಮೇರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಅರಣ್ಯ ಪರಿಸರದ ಸಂರಕ್ಷಣೆಗಾಗಿ ಬೇಕಾಗುವ ನೀರನ್ನು ಹೊರತುಪಡಿಸಿ 172 ಟಿಎಂಸಿ ಅಡಿಗಳಷ್ಟು ನೀರಿನ ಅಗತ್ಯ ಇರುವುದಾಗಿ ಗೋವಾ ನಿವೇದಿಸಿಕೊಂಡಿದ್ದು, 6.34 ಟಿಎಂಸಿ ಅಡಿಗೆ ಮಹಾರಾಷ್ಟ್ರ ಬೇಡಿಕೆ ಸಲ್ಲಿಸಿದೆ.

ಮಧ್ಯಂತರ ಅರ್ಜಿ: ನೀರು ಹಂಚಿಕೆ ಮಾಡಿ ಐತೀರ್ಪು ನೀಡುವವರೆಗೆ ಕುಡಿಯುವ ಉದ್ದೇಶದಿಂದ 7 ಟಿಎಂಸಿ ಅಡಿ ನೀರನ್ನು ಮಲಪ್ರಭಾದತ್ತ ಹರಿಸಿಕೊಳ್ಳಲು ಅನುಮತಿ ನೀಡುವಂತೆ 2015ರ ಡಿಸೆಂಬರ್‌ 1ರಂದು ಕರ್ನಾಟಕವು ನ್ಯಾಯಮಂಡಳಿಗೆ ಸಲ್ಲಿಸಿದ್ದ ಮಧ್ಯಂತರ ಅರ್ಜಿ 2016ರ ಜುಲೈ 27ರಂದು ತಿರಸ್ಕೃತಗೊಂಡಿದೆ.


ನದಿ ಮೇಲ್ಭಾಗದ ರಾಜ್ಯಕ್ಕೂ ನೀರಿನ ಹಕ್ಕು
ನವದೆಹಲಿ: ಕಾವೇರಿ ನೀರಿನ ಹಂಚಿಕೆ ಮಾಡಿ ಇತ್ತೀಚೆಗೆ ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್‌, ನದಿಯ ಮೇಲಿನ ಭಾಗದ ರಾಜ್ಯಕ್ಕೂ ನೀರಿನ ಮೇಲೆ ಹಕ್ಕಿದೆ ಎಂಬುದನ್ನು ಪರಿಗಣಿಸಿದೆ ಎಂದು ವಿಚಾರಣೆಯ ಕೊನೆಯ ದಿನವಾದ ಬುಧವಾರ ರಾಜ್ಯ ಪರ ವಕೀಲ ಮೋಹನ್‌ ಕಾತರಕಿ ವಿವರಿಸಿದರು.

ಮಹದಾಯಿ ಜಲವಿವಾದ ಕುರಿತು ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು 2002ರಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ದೂರಿನಲ್ಲಿರುವ ಪ್ರಧಾನ ಅಂಶಗಳ ಬಗ್ಗೆ ನ್ಯಾಯಮಂಡಳಿ ಆದ್ಯತೆ ನೀಡಬೇಕು ಎಂದು ಅವರು ಕೋರಿದರು.

ವಿಚಾರಣೆಯ ವೇಳೆ ಗೋವಾ ಪರ ವಕೀಲರು ನೀರು ಹಂಚಿಕೆ ಕುರಿತು ವಿರೋಧ ವ್ಯಕ್ತಪಡಿಸುವ ಭರದಲ್ಲಿ ಅರಣ್ಯ, ಪರಿಸರ, ಜಲವಿದ್ಯುತ್‌ ಉತ್ಪಾದನೆ ಮತ್ತಿತರ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಆದರೆ, ನ್ಯಾಯಮಂಡಳಿ ವ್ಯಾಪ್ತಿಯು ಕೇವಲ ನೀರು ಹಂಚಿಕೆ ಮಾಡುವುದಾಗಿದೆ ಎಂದರು.

‘ಹಾಗಾದರೆ ನಾವು ಕಣಿವೆ ವ್ಯಾಪ್ತಿಯಲ್ಲಿನ ನೀರಿನ ಅಗತ್ಯ ಮತ್ತು ಬೇಡಿಕೆಯನ್ನು ಮಾತ್ರ ಪರಿಗಣಿಸಿದಲ್ಲಿ, ಕಣಿವೆಯಾಚೆಗಿನ ವ್ಯಾಪ್ತಿಯನ್ನೂ ಪರಿಗಣಿಸದೇ ಬಿಡಬೇಕೇ ಎಂಬ ಗೊಂದಲ ಮೂಡುತ್ತದಲ್ಲ’ ಎಂದು ನ್ಯಾಯಮೂರ್ತಿ ಜೆ.ಎಂ. ಪಾಂಚಾಲ್‌ ಪ್ರಶ್ನಿಸಿದರು.

ಮಹದಾಯಿ ಕಣಿವೆಯಲ್ಲಿ ವಾರ್ಷಿಕ ಲಭ್ಯ ನೀರಿನ ಪ್ರಮಾಣ 113 ಟಿಎಂಸಿ ಅಡಿ ಎಂದು ವಾದಿಸಿರುವ ಗೋವಾ, ಭವಿಷ್ಯದ ದೃಷ್ಟಿಯಿಂದ ಒಟ್ಟು 94 ಟಿಎಂಸಿ ಅಡಿ ನೀರನ್ನು ಬಳಕೆ ಮಾಡಿಕೊಳ್ಳುವುದಾಗಿ ಯೋಜನೆ ರೂಪಿಸಿದೆ. ಆದರೆ, ಯೋಜನೆಗಳನ್ನೇ ಪರಿಷ್ಕರಿಸಿ 172 ಟಿಎಂಸಿ ಅಡಿ ನೀರಿಗೆ ಬೇಡಿಕೆ ಸಲ್ಲಿಸುವ ಮೂಲಕ ಸಿಡಬ್ಲ್ಯೂಸಿ ವರದಿಯನ್ನು ನೇರವಾಗಿಯೇ ಒಪ್ಪಿಕೊಂಡಿದೆ ಎಂದು ಕಾತರಕಿ ವಿವರಿಸಿದರು.

ನೀರಿನ ಲಭ್ಯತೆ ಕುರಿತಂತೆ ಗೋವಾ ಗೊಂದಲಮಯ ಹೇಳಿಕೆ ನೀಡಿದೆ. ಆ ರಾಜ್ಯದ ಬೇಡಿಕೆ ಆಧರಿಸಿ ಹಂಚಿದರೂ ಸಾಕಷ್ಟು ನೀರು ಉಳಿಯುತ್ತದೆ ಎಂದ ಅವರು, ಕುಡಿಯುವ ಉದ್ದೇಶದಿಂದ ಕರ್ನಾಟಕ ಆರಂಭಿಸಿರುವ ಅಂತರ ಕಣಿವೆ ತಿರುವು ಯೋಜನೆಯ ಬೇಡಿಕೆಯನ್ನೂ ಪರಿಗಣಿಸುವಂತೆ ಆಗ್ರಹಿಸಿದರು.

ಸಂಧಾನ ರಾಜ್ಯಗಳ ವಿಷಯ: ‘ನ್ಯಾಯಮಂಡಳಿಯ ವಿಚಾರಣೆ ಪೂರ್ಣಗೊಂಡಿದೆ. ನೀರು ಹಂಚಿಕೆಗಾಗಿ ಕಣಿವೆ ವ್ಯಾಪ್ತಿಯ ರಾಜ್ಯಗಳ ನಡುವೆ ಸಂಧಾನ ಮಾತುಕತೆ ನಡೆಸುವುದು ರಾಜ್ಯಗಳಿಗೆ ಬಿಟ್ಟ ವಿಷಯ. ಐತೀರ್ಪು ಬರುವವರೆಗೂ ಸಂಧಾನ ಏರ್ಪಡಿಸಲು ಅವಕಾಶವಿದೆ’ ಎಂದು ಉಭಯ ರಾಜ್ಯಗಳ ವಕೀಲರಾದ ಮೋಹನ್‌ ಕಾತರಕಿ ಹಾಗೂ ಆತ್ಮಾರಾಮ್‌ ನಾಡಕರ್ಣಿ ಸುದ್ದಿಗಾರರಿಗೆ ತಿಳಿಸಿದರು.

***

ಮಹದಾಯಿ ನದಿಯಲ್ಲಿ ಕರ್ನಾಟಕಕ್ಕೆ ಪಾಲು ದೊರೆಯುವ ವಿಶ್ವಾಸವಿದೆ. ಕಣಿವೆ ವ್ಯಾಪ್ತಿಯ ರಾಜ್ಯಗಳ ಬೇಡಿಕೆ, ಹುಬ್ಬಳ್ಳಿ– ಧಾರವಾಡ ಅವಳಿ ನಗರದ ಕುಡಿಯುವ ನೀರಿನ ಅಗತ್ಯವನ್ನು ಪರಿಗಣಿಸುವ ಸಾಧ್ಯತೆ ಇದೆ
–ಮೋಹನ್‌ ಕಾತರಕಿ, ಕರ್ನಾಟಕ ಪರ ವಕೀಲ
**

ಕರ್ನಾಟಕದ ಕುಡಿಯುವ ನೀರಿನ ಬೇಡಿಕೆಗೆ ನಮ್ಮ ವಿರೋಧವಿಲ್ಲ. ಗೋವಾ ಮತ್ತು ಕರ್ನಾಟಕ ಭಾರತ ಪಾಕಿಸ್ತಾನಗಳಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲರ ಬೇಡಿಕೆಗೂ ಅರ್ಥವಿದೆ. ಆದರೆ, ಮಹದಾಯಿ ಕಣಿವೆಯಲ್ಲಿ ಕರ್ನಾಟಕ 12 ಯೋಜನೆಗಳನ್ನು ಆರಂಭಿಸಿದರೆ ನದಿಯ ನೈಸರ್ಗಿಕ ಹರಿವಿಗೆ ಧಕ್ಕೆ ಆಗಲಿದೆ ಎಂಬುದೇ ನಮ್ಮ ವಾದ
–ಆತ್ಮಾರಾಮ್‌ ನಾಡಕರ್ಣಿ, ಗೋವಾ ಪರ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT