ಬೆಣ್ಣೆತೊರೆ ಯೋಜನೆ ಮಾರ್ಚ್‌ಗೆ ಪೂರ್ಣ: ಎಂ.ಬಿ.ಪಾಟೀಲ

7

ಬೆಣ್ಣೆತೊರೆ ಯೋಜನೆ ಮಾರ್ಚ್‌ಗೆ ಪೂರ್ಣ: ಎಂ.ಬಿ.ಪಾಟೀಲ

Published:
Updated:

ಬೆಂಗಳೂರು: ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ಬೆಣ್ಣೆತೊರೆ ನೀರಾವರಿ ಯೋಜನೆ ಕಾಲುವೆಗಳ ಆಧುನೀಕರಣ ಕಾಮಗಾರಿ ಪೂರ್ಣಗೊಳಿಸಿ ಮಾರ್ಚ್‌ 10ರಂದು ಸಾರ್ವಜನಿಕ ಸೇವೆಗೆ ಅರ್ಪಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಬಿ.ಜಿ.ಪಾಟೀಲ್‌ ಪರವಾಗಿ ಅಮರನಾಥ್‌ ಪಾಟೀಲ್‌ ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು.

ಕಾಲುವೆ ಜಾಲ ಆಧುನೀಕರಣಕ್ಕೆ ₹150 ಕೋಟಿಯ ಕಾಮಗಾರಿಗೆ 2014ರಲ್ಲೇ ಆಡಳಿತಾತ್ಮಕ ಅನುಮೋದನೆ ಸಿಕ್ಕಿತ್ತು. ವಿಶೇಷ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಇದುವರೆಗೆ ಇದಕ್ಕೆ ₹99 ಕೋಟಿ ಅನುದಾನ ವೆಚ್ಚ ಮಾಡಲಾಗಿದೆ ಎಂದರು.

ಬಲ ದಂಡೆ ಮತ್ತು ಹಾಗೂ ಎಡ ದಂಡೆ ಕಾಲುವೆ ಹಾಗೂ ವಿತರಣಾ ಕಾಲುವೆ ಆಧುನೀಕರಣ ಕಾಮಗಾರಿಯಡಿ ಕಾಲುವೆಗಳ ಕಾಂಕ್ರಿಟ್‌ ಲೈನಿಂಗ್‌, ಸಿ.ಡಿಗಳ ಪುನರ್‌ ನಿರ್ಮಾಣಕ್ಕೆ ಅವಕಾಶ ಮಾಡಲಾಗಿದೆ. ಈ ಯೋಜನೆಯಿಂದ ಚಿತ್ತಾಪೂರ ತಾಲ್ಲೂಕಿನ 43,210 ಎಕರೆ ಹಾಗೂ ಸೇಡಂ ತಾಲ್ಲೂಕಿನ 6,790 ಎಕರೆ ಸೇರಿ 50,000 ಎಕರೆಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು ಎಂದರು.

‘ಜಲಾಶಯದಿಂದ ಹೊಲಗಳಿಗೆ ನೀರು ಹರಿಯುವುದಿಲ್ಲ. ಕಾಲುವೆಗೆ ನೀರು ಬಿಟ್ಟರೆ ವಾಪಸ್‌ ಜಲಾಶಯಕ್ಕೆ ಹರಿದು ಬರುತ್ತದೆ. ಹೊಲಗಾಲುವೆ ಸರಿಪಡಿಸಿಕೊಳ್ಳುವುದು ರೈತರ ಜವಾಬ್ದಾರಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆಗಿರುವ ಕಾಲುವೆಗಳ ಗುಣಮಟ್ಟವೂ ಸರಿ ಇಲ್ಲ. ರೈತರ ಹೊಲಗಾಲುವೆಯನ್ನು ನೀರಾವರಿ ಇಲಾಖೆಯೇ ಮಾಡಿಕೊಡಬೇಕು’ ಎಂದು ಅಮರನಾಥ್‌ ಸದನದ ಗಮನ ಸೆಳೆದರು.

‘ಜಲಾಶಯ ಭರ್ತಿಯಾಗಿದ್ದು, ಎರಡು ವರ್ಷದಲ್ಲಿ ನಾಲ್ಕು ಬಾರಿ ನಾಲೆಯಲ್ಲಿ ನೀರು ಹರಿಸಿದ್ದೇವೆ. ಫೀಲ್ಡ್‌ ಇರಿಗೇಷನ್‌ ಕಾಲುವೆಗಳನ್ನು (ಎಫ್‌ಐಸಿ) ಒಂದು ಬಾರಿ ಮಾತ್ರ ನಿರ್ಮಿಸಲು ಅವಕಾಶವಿದೆ. ಆದರೆ, ಇದನ್ನು ಪುನಃ ನಿರ್ಮಿಸಿಕೊಡಲು ವಿಶೇಷ ಪ್ರಕರಣವಾಗಿ ಪರಿಗಣಿಸಲಾಗುವುದು. ರೈತರಿಗೆ ಪರಿಹಾರ ಬಾಕಿ ಇದ್ದರೆ ಅದನ್ನೂ ಪಾವತಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತೇನೆ’ ಎಂದು ಸಚಿವರು ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry