ಅಧಿಕಾರಿ ಮೇಲೆ ಹಲ್ಲೆ: ಎಎಪಿ ಇಬ್ಬರು ಶಾಸಕರ ಬಂಧನ

7

ಅಧಿಕಾರಿ ಮೇಲೆ ಹಲ್ಲೆ: ಎಎಪಿ ಇಬ್ಬರು ಶಾಸಕರ ಬಂಧನ

Published:
Updated:

ನವದೆಹಲಿ: ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್‌ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಆಮ್‌ ಆದ್ಮಿ ಪಕ್ಷದ(ಎಎಪಿ) ಇಬ್ಬರು ಶಾಸಕರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಶಾಸಕ ಪ್ರಕಾಶ್‌ ಜರ್ವಾಲ್‌ ಅವರನ್ನು ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದು, ಮತ್ತೊಬ್ಬ ಶಾಸಕ ಅಮಾನತ್‌ ಉಲ್ಲಾ ಖಾನ್‌ ಬುಧವಾರ ಪೊಲೀಸರಿಗೆ ಶರಣಾಗಿದ್ದಾರೆ.

ಪೊಲೀಸರು ಶಾಸಕರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಗುರುವಾರದವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅವರನ್ನು ತಿಹಾರ್‌ ಜೈಲಿಗೆ ಕಳಿಸಲಾಗಿದೆ.

ಶಾಸಕರನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಕೋರಿ ದೆಹಲಿ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಳ್ಳಿ ಹಾಕಿದೆ.

ಈ ನಡುವೆ ಶಾಸಕರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು,  ಗುರುವಾರ ಅರ್ಜಿ ವಿಚಾರಣೆಗೆ ಬರಲಿದೆ. ಮುಖ್ಯ ಕಾರ್ಯದರ್ಶಿ ನೀಡಿದ್ದ ದೂರಿನ ಮೇರೆಗೆ ಇಬ್ಬರು ಶಾಸಕರ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದರು.

ಸಲಹೆಗಾರನ ವಿಚಾರಣೆ

ಪ್ರಕರಣದ ಸಂಬಂಧ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಪ್ರಶ್ನಿಸುವ ಸಾಧ್ಯತೆ ಕಡಿಮೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಮುಖ್ಯಮಂತ್ರಿ ಸಲಹೆಗಾರ ವಿ.ಕೆ. ಜೈನ್‌ ಅವರನ್ನು ಮೂರು ತಾಸು ಪ್ರಶ್ನಿಸಲಾಗಿದೆ. ಮತ್ತೆ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ವರದಿ ಸಲ್ಲಿಕೆ:

ಅಧಿಕಾರಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಲೆಫ್ಟಿನೆಂಟ್‌ ಜನರಲ್‌ ಅನಿಲ್‌ ಬೈಜಾಲ್‌ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ವರದಿ ಪರಿಶೀಲಿಸಿದ ಬಳಿಕ ಮುಂದಿನ ಕ್ರಮದ ಬಗ್ಗೆ ಚರ್ಚಿಸಲಾಗುವುದು ಎಂದು ಗೃಹ ಸಚಿವಾಲಯ ಪ್ರತಿಕ್ರಿಯಿಸಿದೆ.

ಕೆಳತುಟಿಗೆ ಗಾಯ:

ಮುಖ್ಯ ಕಾರ್ಯದರ್ಶಿ ಪ್ರಕಾಶ್‌ ಕೆಳ ತುಟಿಗೆ ಗಾಯವಾಗಿರುವುದನ್ನು ಎಂದು ವೈದ್ಯಕೀಯ ವರದಿ ದೃಢಪಡಿಸಿದೆ. ಗಾಯದಿಂದ ಎರಡೂ ಕಿವಿಗಳ ಕೆಳಗಿನ ಭಾಗ ಬಾತುಕೊಂಡಿದೆ ಎಂದು ಅರುಣಾ ಅಸಫ್‌ ಅಲಿ ಆಸ್ಪತ್ರೆ ವರದಿ ನೀಡಿದೆ.

ಮಧ್ಯೆ ಪ್ರವೇಶಕ್ಕೆ ಹೈಕೋರ್ಟ್‌ ನಕಾರ

ಎಎಪಿ ಶಾಸಕರು ಮತ್ತು ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ನಡುವಿನ ಸಮರದಲ್ಲಿ ಮಧ್ಯೆ ಪ್ರವೇಶಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ನ್ಯಾಯಾಲಯದ ಮಧ್ಯೆ ಪ್ರವೇಶ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ತಳ್ಳಿ ಹಾಕಿದೆ.

ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಕಾನೂನು ಪ್ರಕಾರ ಅವರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೈಕೋರ್ಟ್ ಹೇಳಿದೆ. ‘ಪ್ರಕರಣ ಯಾವ ರೀತಿ ಅಂತ್ಯ ಕಾಣುತ್ತದೆ ಎನ್ನುವುದನ್ನು ಕಾಯ್ದು ನೋಡುವುದಾಗಿ’ ನ್ಯಾಯಮೂರ್ತಿಗಳು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry