ಮಂಗಳವಾರ, ಡಿಸೆಂಬರ್ 10, 2019
19 °C
ಅತ್ಯಾಚಾರ ಆರೋಪಿಗೆ ಸುಪ್ರೀಂಕೋರ್ಟ್‌ ಹಾಸ್ಯಮಿಶ್ರಿತ ಪ್ರಶ್ನೆ

‘ನೀವೂ ಭಾರತ ಬಿಟ್ಟು ತೊಲಗಿ ಚಳವಳಿಯವರಾ...?’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ನೀವೂ ಭಾರತ ಬಿಟ್ಟು ತೊಲಗಿ ಚಳವಳಿಯವರಾ...?’

ನವದೆಹಲಿ: ಅ‌ತ್ಯಾಚಾರ ಆರೋಪ ಎದುರಿಸುತ್ತಿರುವ ಬೆಂಗಳೂರಿನ ಟೆಕಿ, ಇದ್ದಕ್ಕಿದ್ದಂತೆಯೇ ಫಿನ್‌ಲೆಂಡ್‌ಗೆ ಹೋಗಿರುವ ಔಚಿತ್ಯವನ್ನು ಪ್ರಶ್ನಿಸಿದ ಸುಪ್ರೀಂಕೋರ್ಟ್‌, ’ನೀವು ಕೂಡ ಭಾರತ ಬಿಟ್ಟು ತೊಲಗಿ ಚಳವಳಿಯನ್ನು ಸೇರಿಕೊಂಡಿದ್ದೀರಾ’? ಎಂದು ಪ್ರಶ್ನಿಸಿದರು.

ಬಹುಕೋಟಿ ವಂಚನೆ ಎಸಗಿ ಭಾರತ ಬಿಟ್ಟು ಹೋಗಿರುವ ಉದ್ಯಮಿಗಳಾದ ನೀರವ್‌ ಮೋದಿ ಮತ್ತು ವಿಜಯ ಮಲ್ಯ ಅವರನ್ನು ಗಮನದಲ್ಲಿ ಇರಿಸಿಕೊಂಡ ನ್ಯಾಯಮೂರ್ತಿಗಳು, ಯುವಕನಿಗೆ ಹಾಸ್ಯಮಿಶ್ರಿತ ಧಾಟಿಯಲ್ಲಿ ಈ ರೀತಿ ಪ್ರಶ್ನೆ ಮಾಡಿದರು.

ಅರ್ಜುನ್‌ ಕಾಮತ್‌ (30) ಎಂಬ ಯುವಕ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಜೆ. ಚೆಲ್ಮೇಶ್ವರ ನೇತೃತ್ವದ ವಿಭಾಗೀಯ ಪೀಠ ನಡೆಸುತ್ತಿದೆ. ‘ನೀವು ಈಗ ಎಲ್ಲಿ ಇರುವುದು’? ಎಂದು ಪ್ರಶ್ನಿಸಿದಾಗ ಯುವಕ ‘ಫಿನ್‌ಲೆಂಡ್‌’ ಎಂದು ಉತ್ತರಿಸಿದಾಗ ನ್ಯಾಯಮೂರ್ತಿಗಳು ‘ಭಾರತ ಬಿಟ್ಟು ತೊಲಗಿ’ ಬಗ್ಗೆ ಪ್ರಸ್ತಾಪಿದರು. ಜೊತೆಗೆ, ಆತನನ್ನು ಬಂಧಿಸದಂತೆ ಪೊಲೀಸರಿಗೆ ನಿರ್ದೇಶಿಸಿದರು.

ತನ್ನ ಮೇಲೆ ಅರ್ಜುನ್‌ 2012ರಲ್ಲಿ ಅತ್ಯಾಚಾರ ನಡೆಸಿರುವುದಾಗಿ ದೂರಿ 2016ರಲ್ಲಿ ಬೆಂಗಳೂರಿನ ಪೊಲೀಸ್‌ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಳು. ಮದುವೆಯಾಗುವುದಾಗಿ ನಂಬಿಸಿ ಬಲವಂತದಿಂದ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ಆಕೆ ದೂರಿದ್ದಳು. ಯುವತಿ ಹೇಳಿದ ಅವಧಿಯಲ್ಲಿ ತಾನು ಫಿನ್‌ಲೆಂಡ್‌ನಲ್ಲಿ ಇದ್ದು, ಆಕೆ ಸುಳ್ಳು ಆರೋಪ ಮಾಡುತ್ತಿದ್ದಾಳೆ ಎಂಬುದು ಅರ್ಜುನ್‌ ವಾದ. ಆದರೆ ಯುವತಿಯ ದೂರಿನ ಆಧಾರದ ಮೇಲೆ ತನ್ನನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ ಎಂದುಕೊಂಡು ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರಿನ ಕೋರ್ಟ್‌ಗೆ ಆತ ಅರ್ಜಿ ಸಲ್ಲಿಸಿದ್ದ. ಅರ್ಜಿಯನ್ನು ಕೋರ್ಟ್‌ ವಜಾ ಮಾಡಿತ್ತು. ಇದನ್ನು ಆತ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದ.

ಪ್ರತಿಕ್ರಿಯಿಸಿ (+)