ಬುಧವಾರ, ಡಿಸೆಂಬರ್ 11, 2019
24 °C

ಭವಿಷ್ಯ ನಿಧಿ ಬಡ್ಡಿ ದರ ಇಳಿಕೆ

Published:
Updated:
ಭವಿಷ್ಯ ನಿಧಿ ಬಡ್ಡಿ ದರ ಇಳಿಕೆ

ನವದೆಹಲಿ (ಪಿಟಿಐ): ಪಿಂಚಣಿ ನಿಧಿ ನಿರ್ವಹಿಸುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ), 2017–18ನೇ ಹಣಕಾಸು ವರ್ಷಕ್ಕೆ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಹಿಂದಿನ ವರ್ಷದ ಶೇ 8.65 ರಿಂದ ಶೇ 8.55ಕ್ಕೆ (ಶೇ 0.10) ಇಳಿಸಿದೆ.

‘ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಭವಿಷ್ಯದ ಬಗ್ಗೆ ಅಂದಾಜು ಮಾಡುವುದು ಸುಲಭವಲ್ಲ. ಹಿಂದಿನ ಹಣಕಾಸು ವರ್ಷದಲ್ಲಿ ಶೇ 8.65ರಷ್ಟು ಬಡ್ಡಿ ದರ ನೀಡಲಾಗಿತ್ತು. ಅದರಿಂದ ನಿಧಿಯಲ್ಲಿ ₹ 695 ಕೋಟಿ ಉಳಿಕೆಯಾಗಿತ್ತು. ಈ ವರ್ಷ ಶೇ 8.55ರ ಬಡ್ಡಿ ದರ ನಿಗದಿಪಡಿಸಿರುವುದರಿಂದ ₹ 586 ಕೋಟಿ ಉಳಿಕೆಯಾಗಲಿದೆ’ ಎಂದು ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್‌ ಹೇಳಿದ್ದಾರೆ.

‘ಇಪಿಎಫ್‌ಒ’ದ ನಿರ್ಧಾರ ಕೈಗೊಳ್ಳುವ ಉನ್ನತ ಮಂಡಳಿಯಾಗಿರುವ ಟ್ರಸ್ಟಿಗಳ ಕೇಂದ್ರೀಯ ಮಂಡಳಿಯ  (ಸಿಬಿಟಿ)  ಸಭೆಯ ನಂತರ ಅವರು ಸುದ್ದಿಗಾರರ ಜತೆ ಮಾತನಾಡುತ್ತಿದ್ದರು. ‘ಈ ನಿರ್ಧಾರಕ್ಕೆ ಹಣಕಾಸು ಸಚಿವಾಲಯ ಶೀಘ್ರದಲ್ಲಿಯೇ ತನ್ನ ಸಮ್ಮತಿ ನೀಡುವ ನಿರೀಕ್ಷೆ ಇದೆ. ಹಣಕಾಸು ಇಲಾಖೆ ಅನುಮೋದನೆ ನೀಡುತ್ತಿದ್ದಂತೆ ಬಡ್ಡಿಯನ್ನು ಚಂದಾದಾರರ ಖಾತೆಗೆ ಜಮೆ ಮಾಡಲಾಗುವುದು ’ ಎಂದರು.

ಈ ಬಡ್ಡಿ ದರವನ್ನು ಕಾರ್ಮಿಕ ಸಂಘಟನೆಗಳು ಒಪ್ಪಿಕೊಳ್ಳಲಿವೆ ಎನ್ನುವ ವಿಶ್ವಾಸವನ್ನೂ ಸಚಿವರು ವ್ಯಕ್ತಪಡಿಸಿದ್ದಾರೆ.

‘ಭವಿಷ್ಯ ನಿಧಿ ಸಂಘಟನೆಯು ಬಾಂಡ್‌ಗಳಲ್ಲಿ ತೊಡಗಿಸಿದ ಮೊತ್ತಕ್ಕೆ ಶೇ 8ರಷ್ಟು ಬಡ್ಡಿ ಪಡೆದಿದೆ. ಷೇರುಪೇಟೆಯ ಹೂಡಿಕೆ ನಿಧಿಗಳಲ್ಲಿನ (ಇಟಿಎಫ್‌) ತನ್ನ ಕೆಲ ಹೂಡಿಕೆಯನ್ನು ಮಾರಾಟ ಮಾಡಿ ಬಂದ ಹಣದಿಂದ ಈ ವರ್ಷ ಶೇ 8.55 ರಷ್ಟು ಬಡ್ಡಿ ಪಾವತಿಸಲು ಸಾಧ್ಯವಾಗಲಿದೆ. ಈ ಬಡ್ಡಿ ದರವು ಸಾಮಾನ್ಯ ಭವಿಷ್ಯ ನಿಧಿ ಮತ್ತು ಸಾರ್ವಜನಿಕ ಭವಿಷ್ಯ ನಿಧಿಯ ಬಡ್ಡಿ ದರಕ್ಕಿಂತ (ಶೇ 7.6) ಹೆಚ್ಚಿಗೆ ಇದೆ.

‘ಇಟಿಎಫ್‌ ಹೂಡಿಕೆಯಿಂದ ಭವಿಷ್ಯ ನಿಧಿಗೆ ಇದುವರೆಗೆ ಶೇ 20.65ರಷ್ಟು ಲಾಭ ಹರಿದು ಬಂದಿದೆ. ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ನಿಧಿಯು ₹ 3,700 ಕೋಟಿ ಮೊತ್ತದ ‘ಇಟಿಎಫ್‌’ಗಳನ್ನು ಮಾರಾಟ ಮಾಡಿದೆ. ಇದರಿಂದ ₹ 1,011 ಕೋಟಿ ಲಾಭ ಬಂದಿದೆ’ ಎಂದು ಗಂಗ್ವಾರ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)