ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿ: ನಾಲ್ಕರ ಘಟ್ಟಕ್ಕೆ ಕರ್ನಾಟಕ

ಮಯಂಕ್‌–ಸಮರ್ಥ್‌ 242 ರನ್‌ ಜೊತೆಯಾಟ
Last Updated 21 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಶತಕಗಳ ಸರದಾರ ಮಯಂಕ್ ಅಗರವಾಲ್ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯ ಎಂಟರ ಘಟ್ಟದಲ್ಲಿಯೂ ಅಬ್ಬರಿಸಿದರು. ಅವರೊಂದಿಗೆ ಆರ್. ಸಮರ್ಥ್ ಕೂಡ ಶತಕದ ಮಿಂಚು ಹರಿಸಿದರು.

ಬುಧವಾರ ಇವರಿಬ್ಬರ ಸ್ಫೋಟಕ ಜೊತೆಯಾಟದ ಬಲದಿಂದ ಕರ್ನಾಟಕ ತಂಡವು ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್‌ ನಲ್ಲಿ ಹೈದರಾಬಾದ್ ವಿರುದ್ಧ 103 ರನ್‌ಗಳಿಂದ ಗೆದ್ದಿತು. ಐದು ವಿಕೆಟ್ ಗಳಿಸಿದ ಶ್ರೇಯಸ್ ಗೋಪಾಲ್‌ ಮತ್ತು ಮೂರು ವಿಕೆಟ್ ಉರುಳಿಸಿದ ಸ್ಟುವರ್ಟ್ ಬಿನ್ನಿ ಕೂಡ ಮಹತ್ವದ ಕಾಣಿಕೆ ನೀಡಿ ತಂಡವು ನಾಲ್ಕರ ಘಟ್ಟ ಪ್ರವೇಶಿಸಲು ಕಾರಣರಾದರು.

ಇಲ್ಲಿನ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕರುಣ್ ನಾಯರ್ ಬಳಗವು ನೀಡಿದ 348 ರನ್‌ಗಳ ಜಯದ ಗುರಿ ಬೆನ್ನತ್ತಿದ ಹೈದರಾಬಾದ್ 42.5 ಓವರ್‌ಗಳಲ್ಲಿ ಪತನಗೊಂಡು ಸೋತಿತು.  ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕರ್ನಾಟಕ ನಾಲ್ಕನೇ ಓವರ್‌ನಲ್ಲೇ ಕರುಣ್ ನಾಯರ್ ವಿಕೆಟ್ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್‌ಗೆ 242 ರನ್‌ಗಳ ಜೊತೆಯಾಟ ಆಡಿದ ಮಯಂಕ್ ಅಗರವಾಲ್‌ ಮತ್ತು ಆರ್‌.ಸಮರ್ಥ್‌ ತಂಡ ಭಾರಿ ಮೊತ್ತ ಗಳಿಸಲು ನೆರವಾದರು.

ಮಯಂಕ್ ಏಳು ಸಿಕ್ಸರ್ ಮತ್ತು 12 ಬೌಂಡರಿ ಸಿಡಿಸಿದರು. 111 ಎಸೆತಗಳಲ್ಲಿ 140 ರನ್‌ ಗಳಿಸಿದ ಅವರು 39ನೇ ಓವರ್‌ನಲ್ಲಿ ಔಟಾದರು. ಸಮರ್ಥ್‌ 124 4ಎಸೆತಗಳಲ್ಲಿ 125 ರನ್‌ ಗಳಿಸಿದರು. ಅವರ ಇನಿಂಗ್ಸ್‌ನಲ್ಲಿ 13 ಬೌಂಡರಿಗಳು ಇದ್ದವು. 44ನೇ ಓವರ್‌ನಲ್ಲಿ ಸಮರ್ಥ್ ಔಟಾಗುತ್ತಿದ್ದಂತೆ ಕರ್ನಾಟಕ ದಿಢೀರ್‌ ಕುಸಿತ ಕಂಡಿತು. ಇಲ್ಲದಿದ್ದರೆ ತಂಡ ಸುಲಭವಾಗಿ 350 ರನ್‌ಗಳ ಗಡಿ ದಾಟುತ್ತಿತ್ತು. ತಂಡದ ಕೊನೆಯ ಆರು ವಿಕೆಟ್‌ಗಳು 37 ರನ್‌ಗಳಿಗೆ ಉರುಳಿದವು. ಪವನ್ ದೇಶಪಾಂಡೆ, ಸಿ.ಎಂ.ಗೌತಮ್‌ ಮತ್ತು ಶ್ರೇಯಸ್ ಗೋಪಾಲ್‌ ಅವರನ್ನು ಬಿಟ್ಟರೆ ಉಳಿದ ನಾಲ್ಕು ಮಂದಿ ಎರಡಂಕಿ ಮೊತ್ತ ದಾಟಲಾರದೆ ಮರಳಿದರು.

ರಾಯುಡು ಅರ್ಧಶತಕ ವ್ಯರ್ಥ

ಗುರಿ ಬೆನ್ನತ್ತಿದ ಹೈದರಾಬಾದ್‌ 19 ರನ್‌ ಗಳಿಸಿದ್ದಾಗ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ ರೋಹಿತ್ ರಾಯುಡು ಜೊತೆಗೂಡಿದ ರವಿ ತೇಜ (53; 57 ಎಸೆತ, 9 ಬೌಂಡರಿ) ಎರಡನೇ ವಿಕೆಟ್‌ಗೆ 81 ರನ್‌ ಸೇರಿಸಿ ಭರವಸೆ ಮೂಡಿಸಿದರು. ರೋಹಿತ್ ವಿಕೆಟ್ ಉರುಳಿದ ನಂತರ ರವಿ ತೇಜ ಮತ್ತು ಬಿ.ಸಂದೀಪ್‌ ಇನಿಂಗ್ಸ್ ಕಟ್ಟಲು ಪ್ರಯತ್ನಿಸಿದರು.

ಮಧ್ಯಮ ಕ್ರಮಾಂಕದಲ್ಲಿ ನಾಯಕ ಅಂಬಟಿ ರಾಯುಡು ಸ್ಫೋಟಕ ಬ್ಯಾಟಿಂಗ್ ಮಾಡಿದರು. 62 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಆರು ಬೌಂಡರಿ ಒಳಗೊಂಡ 64 ರನ್‌ ಗಳಿಸಿದ ಅವರು ಔಟಾದ ನಂತರ ತಂಡ ಪತನದ ಹಾದಿ ಹಿಡಿಯಿತು.

ಸಂಕ್ಷಿಪ್ತ ಸ್ಕೋರ್‌

ಕರ್ನಾಟಕ: 50 ಓವರ್‌ಗಳಲ್ಲಿ 347 (ಮಯಂಕ್ ಅಗರವಾಲ್‌ 140, ಕರುಣ್‌ ನಾಯರ್‌ 10, ಆರ್‌.ಸಮರ್ಥ್‌ 125, ಪವನ್ ದೇಶಪಾಂಡೆ 19, ಸಿ.ಎಂ.ಗೌತಮ್‌ 20, ಶ್ರೇಯಸ್ ಗೋಪಾಲ್‌ 11; ರವಿ ಕಿರಣ್‌ 61ಕ್ಕೆ2, ಮಹಮ್ಮದ್ ಸಿರಾಜ್‌ 59ಕ್ಕೆ5); ಹೈದರಾಬಾದ್‌: 42.5 ಓವರ್‌ಗಳಲ್ಲಿ 244ಕ್ಕೆ ಆಲೌಟ್‌ (ರೋಹಿತ್‌ ರಾಯುಡು 28, ರವಿ ತೇಜ 53, ಬಿ.ಸಂದೀಪ್‌ 42, ಅಂಬಟಿ ರಾಯುಡು 64, ತನಯ್‌ ತ್ಯಾಗರಾಜನ್‌ 20; ಸ್ಟುವರ್ಟ್‌ ಬಿನ್ನಿ 45ಕ್ಕೆ3, ಶ್ರೇಯಸ್ ಗೋಪಾಲ್‌ 31ಕ್ಕೆ5). ಫಲಿತಾಂಶ: ಕರ್ನಾಟಕ ತಂಡಕ್ಕೆ 103 ರನ್ ಜಯ;

ಸೆಮಿಫೈನಲ್‌: ಕರ್ನಾಟಕ–ಮಹಾರಾಷ್ಟ್ರ, ಫೆಬ್ರುವರಿ 24ರಂದು.

***

ಮುಂಬೈಯನ್ನು ಮಣಿಸಿದ ಮಹಾರಾಷ್ಟ್ರ

ನವದೆಹಲಿ (ಪಿಟಿಐ): ಮತ್ತೊಂದು ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮಹಾರಾಷ್ಟ್ರ ತಂಡದವರು ಮುಂಬೈ ವಿರುದ್ಧ ಏಳು ವಿಕೆಟ್‌ಗಳಿಂದ ಗೆದ್ದರು. ಬಲಿಷ್ಠ ಬ್ಯಾಟಿಂಗ್ ಬಲವಿದ್ದ ಮುಂಬೈ ತಂಡವನ್ನು 222 ರನ್‌ಗಳಿಗೆ ಕಟ್ಟಿ ಹಾಕಿದ ಮಹಾರಾಷ್ಟ್ರ ನಂತರ 46.5 ಓವರ್‌ಗಳಲ್ಲಿ ಗುರಿ ತಲುಪಿತು. ಮಧ್ಯಮ ವೇಗಿ ಪ್ರದೀಪ್‌ ದಾಢೆ, ಯುವ ಸ್ಪಿನ್ ಜೋಡಿ ಪ್ರಶಾಂತ್ ಕೋರೆ ಮತ್ತು ಸತ್ಯಜೀತ್‌ ಬಚಾವ್‌ ಮುಂಬೈ ಬ್ಯಾಟ್ಸ್‌ಮನ್‌ಗಳನ್ನು ಬೇಗನೇ ಪೆವಿಲಿಯನ್‌ಗೆ ಕಳುಹಿಸುವಲ್ಲಿ ಯಶಸ್ವಿಯಾದರು.

ಗುರಿ ಬೆನ್ನತ್ತಿದ ಮಹಾರಾಷ್ಟ್ರ ಆಲ್‌ರೌಂಡರ್‌ ಶ್ರೀಕಾಂತ್ ಮುಂಢೆ ಅವರಿಗೆ ಅಗ್ರ ಕ್ರಮಾಂಕಕ್ಕೆ ಬಡ್ತಿ ನೀಡಿತು. ಇದು ಫಲ ನೀಡಿತು. ಎರಡನೇ ವಿಕೆಟ್‌ಗೆ ಅವರು ನಾಯಕ ರಾಹುಲ್ ತ್ರಿಪಾಠಿ ಅವರೊಂದಿಗೆ 117 ರನ್ ಸೇರಿಸಿದರು. 95 ಎಸೆತಗಳಲ್ಲಿ 70 ರನ್‌ ಗಳಿಸಿದ ಶ್ರೀಕಾಂತ್‌ ತಂಡದ ಸುಲಭ ಜಯಕ್ಕೆ ಕಾರಣರಾದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ನೌಶಾದ್ ಶೇಖ್‌ 51 ರನ್‌ ಗಳಿಸಿದರೆ ಅಂಕಿತ್ ಬಾವ್ನೆ ಅಜೇಯ 37 ರನ್‌ ಗಳಿಸಿದರು.

ಸಂಕ್ಷಿಪ್ತ ಸ್ಕೋರ್‌: ಮುಂಬೈ: 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 222 (ಸೂರ್ಯಕುಮಾರ್ ಯಾದವ್‌ 69; ಸತ್ಯಜೀತ್ ಬಚಾವ್‌ 37ಕ್ಕೆ1, ಪ್ರಶಾಂತ್ ಕೋರೆ 34ಕ್ಕೆ2, ಪ್ರದೀಪ್‌ ದಾಢೆ 57ಕ್ಕೆ3); ಮಹಾರಾಷ್ಟ್ರ: 46.5 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 224 (ಶ್ರೀಕಾಂತ್ ಮುಂಢೆ 70, ನೌಶಾದ್‌ ಶೇಕ್‌ ಅಜೇಯ 51, ರಾಹುಲ್ ತ್ರಿಪಾಠಿ 49). ಫಲಿತಾಂಶ: ಮಹಾರಾಷ್ಟ್ರಕ್ಕೆ ಏಳು ವಿಕೆಟ್‌ಗಳ ಜಯ; ಸೆಮಿಫೈನಲ್‌ಗೆ ಪ್ರವೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT