ಬುಧವಾರ, ಡಿಸೆಂಬರ್ 11, 2019
23 °C

ಸಾರಸ್‌ ಎರಡನೇ ಪ್ರಾಯೋಗಿಕ ಹಾರಾಟ ಯಶಸ್ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾರಸ್‌ ಎರಡನೇ ಪ್ರಾಯೋಗಿಕ ಹಾರಾಟ ಯಶಸ್ವಿ

ಬೆಂಗಳೂರು: ಭಾರತದ ದೇಶೀಯ ಲಘು ಸಾರಿಗೆ ವಿಮಾನ ‘ಸಾರಸ್‌’ನ ಎರಡನೇ ಪ್ರಾಯೋಗಿಕ ಹಾರಾಟ ಬುಧವಾರ ಯಶಸ್ವಿಯಾಗಿ ನಡೆಯಿತು.

ಸಾರಸ್ (ಎಸ್.ಎ.ಆರ್.ಎ.ಎಸ್) ಈಗ ಭಾರತೀಯ ವಾಯುಪಡೆ ಸೇರ್ಪಡೆಗೆ ಸಿದ್ಧವಾಗಿದ್ದು, ಆರಂಭಿಕ ಹಂತದಲ್ಲಿ 15 ವಿಮಾನಗಳನ್ನು ಖರೀದಿಸಲು ವಾಯುಪಡೆ ಉತ್ಸಾಹ ತೋರಿಸಿದೆ.

ವಾಯು ಪಡೆಯ ಗ್ರೂಪ್ ಕ್ಯಾಪ್ಟನ್‌ಗಳಾದ ಆರ್.ವಿ.ಪಣಿಕ್ಕರ್ ಮತ್ತು ಕೆ.ಪಿ.ಭಟ್ ನಗರದ ಎಚ್.ಎ.ಎಲ್ ವಿಮಾನ ನಿಲ್ದಾಣದಿಂದ ಪರೀಕ್ಷಾರ್ಥ ಹಾರಾಟ ನಡೆಸಿದರು. ಈ ವಿಮಾನದ ಮೊದಲ ಪ್ರಾಯೋಗಿಕ ಹಾರಾಟ ಜನವರಿ 24 ರಂದು ನಡೆಸಲಾಗಿತ್ತು.

ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ ಮತ್ತು ಸಿಎಸ್‌ಐಆರ್‌ ಜಂಟಿಯಾಗಿ ಸಾರಸ್‌ ವಿಮಾನವನ್ನು ಅಭಿವೃದ್ಧಿಪಡಿಸಿವೆ. ಇದರ ಉತ್ಪಾದನಾ ಮಾದರಿಯ ವಿನ್ಯಾಸ ಇದೇ ಜೂನ್‌ ಅಥವಾ ಜುಲೈ ವೇಳೆಗೆ ಸಿದ್ಧಗೊಳ್ಳುವ ನಿರೀಕ್ಷೆ ಇದೆ.

ಕಾರ್ಯಕ್ರಮದಲ್ಲಿ ಹಾಜರಿದ್ದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಹರ್ಷವರ್ಧನ್‌ ಮಾತನಾಡಿ,  2009 ರಲ್ಲಿ ಪರೀಕ್ಷಾ ಹಾರಾಟದ ವೇಳೆ ಸಾರಸ್‌ ಅಪಘಾತಕ್ಕೀಡಾಗಿತ್ತು. ಇದೇ ಕಾರಣಕ್ಕೆ ಅಂದಿನ ಸರಕಾರ ಈ ಯೋಜನೆಯನ್ನು ಮೂಲೆಗುಂಪು ಮಾಡಿತ್ತು. ಎನ್‌ಡಿಎ ಅಧಿಕಾರಕ್ಕೆ ಬಂದ ಬಳಿಕ ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ ಇದಕ್ಕೆ ಪುನಃ ಚಾಲನೆ ನೀಡಿತು ಎಂದು ಹೇಳಿದರು.

ಇದೇ ಶ್ರೇಣಿಯ ಯಾವುದೇ ವಿಮಾನಗಳಿಗಿಂತ ಸಾರಸ್‌ ಶೇ 25 ರಷ್ಟು ಮಿತವ್ಯಯಕಾರಿ ವಿಮಾನ. ಸುಧಾರಿತ ಆವೃತ್ತಿಯು 14 ಸೀಟರ್‌ಗಳ ಬದಲಿಗೆ 19 ಸೀಟರ್‌ಗಳನ್ನು ಹೊಂದಿದೆ. ಈ ವಿಮಾನದ ಬೆಲೆ ₹ 40 ರಿಂದ 45 ಕೋಟಿ. ಇದೇ ಶ್ರೇಣಿಯ ವಿದೇಶಿ ವಿಮಾನಗಳ ಬೆಲೆ ₹ 60–70 ಕೋಟಿಗಳಾಗುತ್ತದೆ. ಸಾರಸ್‌ನಲ್ಲಿ ಆಮದಿತ ವಿಮಾನಗಳಿಗಿಂತ ಹೆಚ್ಚಿನ ಪ್ರಯೋಜನಗಳನ್ನು ಒಳಗೊಂಡಿದೆ ಎಂದು ಹರ್ಷವರ್ಧನ್‌ ತಿಳಿಸಿದರು.

ಸಾರಸ್ ಎಂ.ಕೆ. 2  ವಿಮಾನ ‘ಉಡಾನ್’ ಯೋಜನೆಯಡಿ ಪ್ರಯಾಣಿಕ ಸಾರಿಗೆಗೆ ಅತ್ಯುತ್ತಮ ಎನಿಸಲಿದೆ. ಏರ್ ಟ್ಯಾಕ್ಸಿ, ವೈಮಾನಿಕ ಶೋಧ, ಕಾರ್ಯನಿರ್ವಾಹಕ ಅಧಿಕಾರಿಗಳ ಪ್ರಯಾಣ, ವಿಪತ್ತು ನಿರ್ವಹಣೆ, ಗಡಿ ಕಾವಲು, ಕರಾವಳಿ ತಟ ರಕ್ಷಣೆ, ತುರ್ತು ವಾಹನ ಸಹಿತ ಇತರ ಸೇವೆಗಳಿಗೆ ಇದು ಅನುಕೂಲಕರ ಎಂದರು.

ಪ್ರತಿಕ್ರಿಯಿಸಿ (+)