ಕ್ಯಾನ್ಸರ್ ಆಸ್ಪತ್ರೆಗೆ ಉದ್ಯಮಿ 50 ಎಕರೆ ಭೂಮಿ, ₹100 ಕೋಟಿ ದಾನ

7
ಬಡ ಕ್ಯಾನ್ಸರ್‌ ರೋಗಿಗಳಿಗೆ ಉಚಿತ ಚಿಕಿತ್ಸೆ

ಕ್ಯಾನ್ಸರ್ ಆಸ್ಪತ್ರೆಗೆ ಉದ್ಯಮಿ 50 ಎಕರೆ ಭೂಮಿ, ₹100 ಕೋಟಿ ದಾನ

Published:
Updated:

ಬೆಂಗಳೂರು: ಬಡ ಕ್ಯಾನ್ಸರ್‌ ರೋಗಿಗಳಿಗೆ ಚಿಕಿತ್ಸೆ ನೀಡಲು ನಗರದ ಉದ್ಯಮಿ ವಿಜಯ್‌ ಟಾಟಾ ಹಾಗೂ ಅಮೃತಾ ಟಾಟಾ ದಂಪತಿಯು ‘ನ್ಯೂ ಇಂಡಿಯಾ ಚಾರಿಟಬಲ್‌ ಟ್ರಸ್ಟ್‌’ ಮೂಲಕ ಸೂಪರ್‌ ಸ್ಪೆಷಾಲಿಟಿ ಕ್ಯಾನ್ಸರ್‌ ಆಸ್ಪತ್ರೆ ಸ್ಥಾಪಿಸಲಿದ್ದಾರೆ.

ಅತ್ತಿಬೆಲೆ ಮತ್ತು ಆನೇಕಲ್‌ ರಸ್ತೆಯಲ್ಲಿರುವ ತಮ್ಮ 50 ಎಕರೆ ಭೂಮಿ ಹಾಗೂ ₹100 ಕೋಟಿಯನ್ನು ‘ಸಾಂಚಿ ಅಡ್ವಾನ್ಸ್ಡ್ ಕ್ಯಾನ್ಸರ್‌ ಕೇರ್‌ ಇನ್‌ಸ್ಟಿಟ್ಯೂಟ್‌’ಗೆ ಬಳಸಲಿದ್ದಾರೆ.

ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಜಯ್‌ ಟಾಟಾ, ‘ಆಸ್ಪತ್ರೆಯಲ್ಲಿ ಬಡ ಕ್ಯಾನ್ಸರ್‌ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತೇವೆ. ಯಾರಿಂದಲೂ ದೇಣಿಗೆ ಪಡೆಯುವುದಿಲ್ಲ’ ಎಂದರು.

‘ಆಸ್ಪತ್ರೆಯ ಮೊದಲ ಹಂತದ ಕಾಮಗಾರಿ ಸೆಪ್ಟೆಂಬರ್‌ನಲ್ಲಿ ಮುಗಿಯುತ್ತದೆ. 150 ಹಾಸಿಗೆಗಳು ಇರಲಿವೆ’ ಎಂದು ತಿಳಿಸಿದರು.

‘ದೇಶದಾದ್ಯಂತ ಬಡ ಕ್ಯಾನ್ಸರ್‌ ರೋಗಿಗಳು ಇದರ ಪ್ರಯೋಜನ ಪಡೆಯಬಹುದು. ಈ ವಿಚಾರವನ್ನು ಮಗಳ ಹುಟ್ಟುಹಬ್ಬದ ದಿನ ತಿಳಿಸಲು ಖುಷಿಯಾಗುತ್ತಿದೆ’ ಎಂದರು 

‘ಕ್ಯಾನ್ಸರ್‌ ಪತ್ತೆಯಾದ 21 ದಿನಗಳಲ್ಲಿ ಅಮ್ಮ ತೀರಿ ಹೋದರು. ಚಿಕಿತ್ಸೆ ಕೊಡಿಸುವ ಶಕ್ತಿ ನನ್ನಲ್ಲಿ ಇತ್ತು. ಆದರೆ, ಕೊನೆ ಹಂತದಲ್ಲಿ ರೋಗ ಪತ್ತೆಯಾದ ಕಾರಣ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನನ್ನ ಸೋದರಿಗೂ ಕ್ಯಾನ್ಸರ್‌ ಇತ್ತು. ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ’ ಎಂದು ಹೇಳಿದರು.

‘ಮಗನಿಗೂ ಕ್ಯಾನ್ಸರ್‌ ಇತ್ತು’

ನ್ಯೂ ಇಂಡಿಯಾ ಚಾರಿಟಬಲ್‌ ಟ್ರಸ್ಟ್‌ ಉದ್ಘಾಟಿಸಿದ ಬಾಲಿವುಡ್‌ ನಟ ಇಮ್ರಾನ್‌ ಹಶ್ಮಿ, ‘ನನ್ನ ಮಗನಿಗೆ 3 ವರ್ಷ 10 ತಿಂಗಳು ಆಗಿದ್ದಾಗ ಮೂತ್ರಪಿಂಡ ಸಂಬಂಧಿ ಕ್ಯಾನ್ಸರ್‌ ಇರುವುದು ತಿಳಿಯಿತು. ಕ್ಯಾನ್ಸರ್‌ ಬಗ್ಗೆ ಸಿಕ್ಕ ಸಿಕ್ಕ ಪುಸ್ತಕಗಳನ್ನು ಓದಿದ್ದೆ. ಚಿಕಿತ್ಸೆ ನಂತರ ಅವನು ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry