ವಾರದೊಳಗೆ ಜೆಡಿಎಸ್‌ 2ನೇ ಪಟ್ಟಿ ಬಿಡುಗಡೆ: ಎಚ್‌ಡಿಕೆ

7

ವಾರದೊಳಗೆ ಜೆಡಿಎಸ್‌ 2ನೇ ಪಟ್ಟಿ ಬಿಡುಗಡೆ: ಎಚ್‌ಡಿಕೆ

Published:
Updated:
ವಾರದೊಳಗೆ ಜೆಡಿಎಸ್‌ 2ನೇ ಪಟ್ಟಿ ಬಿಡುಗಡೆ: ಎಚ್‌ಡಿಕೆ

ಬೆಂಗಳೂರು: ಇನ್ನೊಂದು ವಾರದೊಳಗೆ 35ರಿಂದ 40 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ಎರಡನೇ ಕಂತಿನ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅವರು ಬುಧವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಈಗಾಗಲೇ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಸಣ್ಣ ಪುಟ್ಟ ಗೊಂದಲಗಳು ಇವೆ. ಆ ಕ್ಷೇತ್ರಗಳಲ್ಲಿ ಹೆಚ್ಚು ಆಕಾಂಕ್ಷಿಗಳು ಇರುವುದೇ ಕಾರಣ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಗೊಂದಲ ಬಗೆಹರಿಸಲಾಗುವುದು ಎಂದರು.

ಆಯ್ಕೆ ಆಗಿರುವ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಯಾವ ರೀತಿಯಲ್ಲಿ ಚುನಾವಣೆ ಎದುರಿಸಬೇಕು, ಸಾಮಾಜಿಕ ಮಾಧ್ಯಮ ಬಳಕೆ ಹೇಗೆ, ವಿಷಯಗಳನ್ನು ಯಾವ ರೀತಿ ಪ್ರಸ್ತುತಪಡಿಸುವುದು, ಪ್ರಚಾರ ಹೇಗೆ ಕೈಗೊಳ್ಳಬೇಕು ಇತ್ಯಾದಿ ಬಗ್ಗೆ ಮಾಹಿತಿ ನೀಡಲಾಗಿದೆ ಎಂದರು.

ತಿ.ನರಸೀಪುರ ಕ್ಷೇತ್ರದಲ್ಲಿ ಆಯ್ಕೆ ಆಗಿರುವ ಅಭ್ಯರ್ಥಿ ಎಚ್‌.ಸಿ.ಮಹದೇವಪ್ಪ ಬಲಗೈ ಬಂಟ ಎಂಬುದರಲ್ಲಿ ಹುರುಳಿಲ್ಲ. ಕೆಲವರು ದುರುದ್ದೇಶದಿಂದ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

ಎಸ್‌.ಮಹೇಂದರ್‌ ಸೇರ್ಪಡೆ: ಚಲನಚಿತ್ರ ನಿರ್ದೇಶಕ ಎಸ್‌.ಮಹೇಂದರ್‌ ಜೆಡಿಎಸ್‌ ಸೇರ್ಪಡೆಯಾದರು. ಪಕ್ಷದ ಬಾವುಟ ನೀಡಿ ಸ್ವಾಗತಿಸಿದ ಕುಮಾರಸ್ವಾಮಿ, ‘ಮಹೇಂದ್ರ ನಿರ್ದೇಶಿಸಿದ್ದ ಹಲವು ಚಲನಚಿತ್ರಗಳನ್ನು ಹಿಂದೆ ವಿತರಣೆ ಮಾಡಿದ್ದೆ. ರಾಜ್ಯದ ಹಿತದೃಷ್ಟಿಯಿಂದ ಜೆಡಿಎಸ್‌ ಗೆಲ್ಲಿಸಬೇಕು ಎಂಬ ಕಾರಣಕ್ಕೆ ಪಕ್ಷ ಸೇರುತ್ತಿದ್ದಾರೆ. ಟಿಕೆಟ್‌ ಕೊಡಿ ಎಂದು ಕೇಳಿಲ್ಲ. ಯಾವುದೇ ಷರತ್ತು ಇಲ್ಲದೆ ಪಕ್ಷವನ್ನು ಸೇರುತ್ತಿದ್ದಾರೆ’ ಎಂದರು.

‘ಕುಮಾರ ರಕ್ಷಾ ಜನಸೇವಾ‘ಕ್ಕೆ ಚಾಲನೆ

ಬೆಂಗಳೂರು ನಗರದ ಬಿಪಿಎಲ್‌ ಕುಟುಂಬದವರಿಗೆ ಅವರ ಮನೆ ಬಾಗಿಲಿನಲ್ಲೇ ಆರೋಗ್ಯ ಸೇವೆ ನೀಡುವ ‘ಕುಮಾರ ರಕ್ಷಾ ಜನಸೇವಾ ವಾಹನ’ಕ್ಕೆ ಎಚ್‌.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು.

ಆರಂಭದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಸೇವೆ ನೀಡಲಾಗುವುದು, ಮುಂದೆ ರಾಜ್ಯದ ಎಲ್ಲ ಕಡೆಗಳಲ್ಲಿ ಆರಂಭಿಸಲಾಗುವುದು ಎಂದು ಜೆಡಿಎಸ್‌ ಉಪಾಧ್ಯಕ್ಷ ಹಾಗೂ ಉದ್ಯಮಿ ಡಾ. ಬಿ.ಎಂ.ಉಮೇಶ್‌ ಕುಮಾರ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry