ಜೈಲುಪಾಲಾದ ನಲಪಾಡ್ ಗ್ಯಾಂಗ್

7
14 ದಿನ ನ್ಯಾಯಾಂಗ ಬಂಧನ * ಫೆ.23ರಂದು ಜಾಮೀನು ಅರ್ಜಿ ವಿಚಾರಣೆ

ಜೈಲುಪಾಲಾದ ನಲಪಾಡ್ ಗ್ಯಾಂಗ್

Published:
Updated:
ಜೈಲುಪಾಲಾದ ನಲಪಾಡ್ ಗ್ಯಾಂಗ್

ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಬಂಧಿತರಾಗಿರುವ ಶಾಸಕ ಎನ್‌.ಎ.ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಹಾಗೂ ಅವನ ಆರು ಮಂದಿ ಸಹಚರರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದರು.

ಪೊಲೀಸ್ ಕಸ್ಟಡಿ ಅವಧಿ ಮುಗಿದಿದ್ದರಿಂದ ಆರೋಪಿಗಳನ್ನು ಬುಧವಾರ ಸಂಜೆ 4.30ರ ಸುಮಾರಿಗೆ 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅವರನ್ನು ಮಾರ್ಚ್ 7ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶ ಎಂ.ಮಹೇಶ್‌ಬಾಬು ಆದೇಶಿಸಿದರು.

‘ಹಿರಿಯ ವಕೀಲ ಎಂ.ಎಸ್.ಶ್ಯಾಮಸುಂದರ್ ಅವರನ್ನು ಪ್ರಕರಣದ ವಿಶೇಷ ಅಭಿಯೋಜಕರನ್ನಾಗಿ ನೇಮಿಸಬೇಕು’ ಎಂದು ವಿದ್ವತ್ ತಂದೆ ಜೆ.ಲೋಕನಾಥನ್ ಬುಧವಾರ ಬೆಳಿಗ್ಗೆಯೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಆ ಕೋರಿಕೆಯಂತೆ ಸರ್ಕಾರ ಅವರನ್ನೇ ನಿಯೋಜಿಸಿತ್ತು.

ವಾದ ಮಂಡಿಸಿದ ಶ್ಯಾಮಸುಂದರ್, ‘ಆರೋಪಿಗಳು ವಿದ್ವತ್ ಮೇಲೆ ಗಂಭೀರ ಸ್ವರೂಪದ ಹಲ್ಲೆ ನಡೆಸಿದ್ದಾರೆ. ಮೂಗು ಹಾಗೂ ಎದೆ ಮೂಳೆಗಳು ಮುರಿದಿರುವುದರಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ವಿದ್ವತ್‌ನ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕಿದೆ. ಇಂಥ ಸಂದರ್ಭದಲ್ಲಿ ಆರೋಪಿಗಳಿಗೆ ಜಾಮೀನು ನೀಡಿದರೆ, ಸಾಕ್ಷಿಗಳನ್ನು ಬೆದರಿಸುವ ಹಾಗೂ ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇರುತ್ತದೆ’ ಎಂದರು.

‘ಫರ್ಜಿ ಕೆಫೆಯಲ್ಲಿ ಎರಡು ಬಾರಿ ಹಲ್ಲೆ ನಡೆಸಿರುವುದು ಮಾತ್ರವಲ್ಲದೆ, ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೂ ನುಗ್ಗಿ  ವಿದ್ವತ್‌ಗೆ ಹೊಡೆದಿದ್ದಾರೆ. ಇದು ಪ್ರಕರಣದ ಗಂಭೀರತೆಯನ್ನು ತೋರುತ್ತದೆ. ಅವರ ಕೃತ್ಯಕ್ಕೆ ಪೂರಕವಾಗಿ ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯಗಳು ಹಾಗೂ ಇನ್ನಿತರೆ ದಾಖಲೆಗಳು ಸಿಕ್ಕಿವೆ. ಹೀಗಾಗಿ, ಜಾಮೀನು ಮಂಜೂರು ಮಾಡದೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಅಥವಾ ಪೊಲೀಸರ ಕಸ್ಟಡಿಗೆ ಒಪ್ಪಿಸಬೇಕು’ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಆರೋಪಿಗಳ ಪರ ವಕೀಲರು, ‘ನಾವು ಸೆಷನ್ಸ್‌ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದೇವೆ’ ಎಂದು ಹೇಳಿದರು. ಆಗ ಶ್ಯಾಮಸುಂದರ್, ‘ನೀವು ಅರ್ಜಿ ಸಲ್ಲಿಸಿರುವ ವಿಚಾರ ನನಗೂ ಗೊತ್ತು. ಸರ್ಕಾರ ನನ್ನನ್ನು ವಿಶೇಷ ಅಭಿಯೋಜಕರನ್ನಾಗಿ ನೇಮಿಸಿರುವಾಗ ಅಷ್ಟು ಸಣ್ಣ ವಿಚಾರವನ್ನು ತಿಳಿದುಕೊಳ್ಳದೆಯೇ ಬಂದಿರುತ್ತೇನೆಯೇ’ ಎಂದರು.

ವಾದ ಆಲಿಸಿದ ನ್ಯಾಯಾಧೀಶ ಎಂ.ಮಹೇಶ್‌ಬಾಬು, ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದರು. ನಂತರ ಪೊಲೀಸರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದರು.

ಹೇಗಿತ್ತು ನಲಪಾಡ್ ನಡವಳಿಕೆ:  ಕೋರ್ಟ್‌ನೊಳಗೆ ಹೋಗುವ ಮುನ್ನ ನಲಪಾಡ್, ತಾನು ಕ್ಷೇಮವಾಗಿರುವುದಾಗಿ ಬೆಂಬಲಿಗರಿಗೆ ಸಂಜ್ಞೆ ಮೂಲಕವೇ ಹೇಳಿದ. ನ್ಯಾಯಾಧೀಶರ ಎದುರು ಬೆನ್ನ ಹಿಂದೆ ಕೈ ಕಟ್ಟಿಕೊಂಡು ನಿಂತಿದ್ದ ಅವನು, ‘ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ’ ಎಂದು ಶ್ಯಾಮಸುಂದರ್ ಮನವಿ ಮಾಡಿದಾಗ, ಹುಬ್ಬು ಮೇಲೇರಿಸಿಕೊಂಡು ಅವರತ್ತ ದುರುಗುಟ್ಟಿ ನೋಡಿದನು.

ನ್ಯಾಯಾಧೀಶರು ಆದೇಶ ಪ್ರಕಟಿಸುತ್ತಿದ್ದಂತೆಯೇ ಪೊಲೀಸರು ಆರೋಪಿಗಳನ್ನು ಕರೆದುಕೊಂಡು ಹೊರಬಂದರು. ಈ ವೇಳೆ ನಲಪಾಡ್ ಬೆಂಬಲಿಗರು ಹತ್ತಿರಕ್ಕೆ ಹೋಗಲು ಯತ್ನಿಸಿದಾಗ ನೂಕಾಟ ಉಂಟಾಯಿತು. ಪೊಲೀಸರು ತಮ್ಮ ಸರ್ಪಗಾವಲಿನಲ್ಲೇ ಆರೋಪಿಗಳನ್ನು ಕರೆದೊಯ್ದು ವ್ಯಾನ್‌ನಲ್ಲಿ ಹತ್ತಿಸಿಕೊಂಡು ಕಾರಾಗೃಹದತ್ತ ಹೊರಟರು.

ಇದಕ್ಕೂ ಮುನ್ನ ಆರೋಪಿಗಳನ್ನು ಎರಡು ದಿನಗಳಿಂದ ಕಬ್ಬನ್‌ಪಾರ್ಕ್‌ ಠಾಣೆಯ ಸೆಲ್‌ನಲ್ಲಿಟ್ಟು ವಿಚಾರಣೆ ನಡೆಸುತ್ತಿದ್ದ ಪೊಲೀಸರು, ಮಧ್ಯಾಹ್ನ 3 ಗಂಟೆಗೆ ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ಮಾಡಿಸಿದ್ದರು. ‌ಅವರನ್ನು ಕೋರ್ಟ್‌ಗೆ ಕರೆತರುವ ಮುನ್ನವೇ, ಪೊಲೀಸರು ಎಲ್ಲ ಮಾಧ್ಯಮ ಪ್ರತಿನಿಧಿಗಳನ್ನೂ ನ್ಯಾಯಾಲಯದ ಕೊಠಡಿಯಿಂದ ಹೊರಗೆ ಕಳುಹಿಸಿದ್ದರು.

ಜಾಮೀನು ಅರ್ಜಿ ವಿಚಾರಣೆ: ಮತ್ತೊಂದೆಡೆ ನಲಪಾಡ್ ಹಾಗೂ ಸಹಚರರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಸೆಷನ್ಸ್‌ ನ್ಯಾಯಾಲಯ ಶುಕ್ರವಾರಕ್ಕೆ ಮುಂದೂಡಿತು.

***

ವಕೀಲರತ್ತ ದುರುಗುಟ್ಟಿದ ನಲಪಾಡ್

ಬೆಂಗಳೂರು: ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಶ್ಯಾಮಸುಂದರ್ ‘ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ’ ಎಂದು ನ್ಯಾಯಾಲಯಕ್ಕೆ ಮನವಿ ಮಾಡುತ್ತಿದ್ದಂತೆಯೇ, ನಲಪಾಡ್ ಹುಬ್ಬು ಮೇಲೇರಿಸಿಕೊಂಡು ಅವರತ್ತ ದುರುಗುಟ್ಟಿ ನೋಡಿದ ಪ್ರಸಂಗ ನಡೆಯಿತು.

ಬುಧವಾರ ಸಂಜೆ 4.30ರ ಸುಮಾರಿಗೆ ಪೊಲೀಸರ ಬಿಗಿ ಭದ್ರತೆಯಲ್ಲಿ ನಲಪಾಡ್ ಹಾಗೂ ಸಹಚರರು ನ್ಯಾಯಾಲಯಕ್ಕೆ ಬಂದರು. ಅಲ್ಲಿ ಸೇರಿದ್ದ ಬೆಂಬಲಿಗರಿಗೆ ತಾನು ಕ್ಷೇಮವಾಗಿರುವುದಾಗಿ ಸಂಜ್ಞೆಯ ಮೂಲಕವೇ ತಿಳಿಸಿದ ಆತ, ನಂತರ ಕೋರ್ಟ್ ಪ್ರವೇಶಿಸಿದ.

ಸಾಮಾನ್ಯವಾಗಿ ಆರೋಪಿಗಳು ನ್ಯಾಯಾಧೀಶರ ಎದುರು ತಲೆ ತಗ್ಗಿಸಿ ನಿಲ್ಲುತ್ತಾರೆ. ಆದರೆ, ನಲಪಾಡ್ ಬೆನ್ನಹಿಂದೆ ಕೈಕಟ್ಟಿ, ಎದೆ ಉಬ್ಬಿಸಿಕೊಂಡು ನಿಂತನು. ಅದೇ ಶೈಲಿಯಲ್ಲಿ ಆತನ ಸಹಚರರೂ ಒಬ್ಬರ ಹಿಂದೊಬ್ಬರು ನಿಂತುಕೊಂಡರು.

ಶ್ಯಾಮ್‌ಸುಂದರ್ ಮಂಡಿಸುತ್ತಿದ್ದ ವಾದವನ್ನೇ ಆಲಿಸುತ್ತಿದ್ದ ನಲಪಾಡ್, ‘ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ’ ಎನ್ನುತ್ತಿದ್ದಂತೆಯೇ ನಿಧಾನವಾಗಿ ಅವರತ್ತ ತಿರುಗಿದ. ಬಲಗಡೆಯ ಹುಬ್ಬನ್ನು ಮೇಲೆರಿಸಿ, ಪುನಃ ನ್ಯಾಯಾಧೀಶರತ್ತ ತಿರುಗಿದ. ಅದಾದ ನಂತರ ಸ್ವಲ್ಪ ಹೊತ್ತು ಸುಮ್ಮನಾದ ಶ್ಯಾಮ್‌ಸುಂದರ್, ಪುನಃ ವಾದ ಮುಂದುವರಿಸಿದರು.

ನ್ಯಾಯಾಧೀಶರು ಆದೇಶ ಪ್ರಕಟಿಸಿದ ಬಳಿಕ, ಆರೋಪಿಗಳು ಸಾಲಿನಲ್ಲಿ ಹೊರಗೆ ಬಂದರು. ಈ ವೇಳೆ ನಲಪಾಡ್ ಬೆಂಬಲಿಗರು ಹತ್ತಿರಕ್ಕೆ ಹೋಗಲು ಯತ್ನಿಸಿದಾಗ ನೂಕಾಟ ಉಂಟಾಯಿತು. ಪೊಲೀಸರು ತಮ್ಮ ಸರ್ಪಗಾವಲಿನಲ್ಲೇ ಆರೋಪಿಗಳನ್ನು ಕರೆದೊಯ್ದು ವ್ಯಾನ್‌ಗೆ ಹತ್ತಿಸಿದರು.

ಇದಕ್ಕೂ ಮುನ್ನ ಆರೋಪಿಗಳನ್ನು ಎರಡು ದಿನಗಳಿಂದ ಕಬ್ಬನ್‌ಪಾರ್ಕ್‌ ಠಾಣೆಯ ಸೆಲ್‌ನಲ್ಲಿಟ್ಟು ವಿಚಾರಣೆ ನಡೆಸುತ್ತಿದ್ದ ಪೊಲೀಸರು, ಮಧ್ಯಾಹ್ನ 3 ಗಂಟೆಗೆ ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ಮಾಡಿಸಿದ್ದರು. ‌ಅವರನ್ನು ಕೋರ್ಟ್‌ಗೆ ಕರೆತರುವ ಮುನ್ನವೇ, ಪೊಲೀಸರು ಎಲ್ಲ ಮಾಧ್ಯಮ ಪ್ರತಿನಿಧಿಗಳನ್ನೂ ನ್ಯಾಯಾಲಯದ ಕೊಠಡಿಯಿಂದ ಹೊರಗೆ ಕಳುಹಿಸಿದ್ದರು.

ಭದ್ರತೆ ಕೋರಿದ ಶ್ಯಾಮ್‌ಸುಂದರ್

ನಲಪಾಡ್ ವಿರುದ್ಧ ವಾದ ಮಂಡಿಸಿದ ಶ್ಯಾಮ್‌ಸುಂದರ್ ಅವರು ರಕ್ಷಣೆ ಕೋರಿ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಅವರಿಗೆ ಪತ್ರ ಬರೆದಿದ್ದಾರೆ.

‘ವಿದ್ವತ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ನನ್ನನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕ ಮಾಡಿತ್ತು. ವಾದ ಮಂಡಿಸಿದ ನಾನು, ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುಂತೆ ನ್ಯಾಯಾಲಯಕ್ಕೆ ಮನವಿ ಮಾಡಿದೆ. ಈ ಕಾರಣಕ್ಕೆ ನಲಪಾಡ್ ಬೆಂಬಲಿಗರು ನನ್ನ ವಿರುದ್ಧ ಕೋಪಗೊಂಡಿದ್ದಾರೆ. ಈ ವಿಚಾರ ಬಲ್ಲ ಮೂಲಗಳಿಂದ ಗೊತ್ತಾಗಿದ್ದು ನನಗೆ ಹಾಗೂ ಆರ್‌.ಟಿ.ನಗರದಲ್ಲಿರುವ ನನ್ನ ಕಚೇರಿಗೆ ಸೂಕ್ತ ಭದ್ರತೆ ಕೊಡಬೇಕು’ ಎಂದು ಶ್ಯಾಮ್‌ಸುಂದರ್ ಮನವಿ ಮಾಡಿದ್ದಾರೆ.

ಅಂತೆಯೇ ಡಿಸಿಪಿ, ಶ್ಯಾಮ್‌ಸುಂದರ್ ಅವರ ಮನೆ ಹಾಗೂ ಕಚೇರಿ ಬಳಿ ಭದ್ರತೆಗೆ ಪೊಲೀಸರನ್ನು ನಿಯೋಜನೆ ಮಾಡಿದ್ದಾರೆ.

ಕೈದಿ ಸಂಖ್ಯೆ (ಯುಟಿಪಿ) 1756

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲು ಸೇರಿರುವ ನಲಪಾಡ್‌ಗೆ ‘ವಿಚಾರಣಾಧೀನ ಕೈದಿ ಸಂಖ್ಯೆ (ಯುಟಿಪಿ) 1756’ ನೀಡಲಾಗಿದೆ.

ನ್ಯಾಯಾಂಗ ಬಂಧನಕ್ಕೆ ಒಳಗಾದ ನಲಪಾಡ್ ಹಾಗೂ ಸಹಚರರನ್ನು ಪೊಲೀಸರು ಸಂಜೆ 6.30ರ ಸುಮಾರಿಗೆ ಕಾರಾಗೃಹಕ್ಕೆ ಕರೆದೊಯ್ದರು. ಪ್ರವೇಶ ದ್ವಾರದ ನೋಂದಣಿ ಪುಸ್ತಕದಲ್ಲಿ ‘ವಿಚಾರಣಾಧೀನ ಕೈದಿಗಳು’ ಎಂದು ನಮೂದಿಸಿದ ಆರೋಪಿಗಳು, ಬಳಿಕ ವೈದ್ಯಕೀಯ ತಪಾಸಣೆಗೆ ಒಳಪಟ್ಟರು.

ನಲಪಾಡ್ ಕೈಗೆ ‘ಯುಟಿಸಿ 1756’ ಎಂಬ ಮುದ್ರೆ ಹಾಕಿದ ಸಿಬ್ಬಂದಿ, ಉಳಿದ ಆರೋಪಿಗಳಿಗೆ ಅನುಕ್ರಮವಾಗಿ ಆ ನಂತರದ ಸಂಖ್ಯೆಗಳನ್ನು ನೀಡಿದರು. ನಲಪಾಡ್‌ನನ್ನು ವಿಶೇಷ ಭದ್ರತೆಯ ಬ್ಯಾರಕ್‌ನಲ್ಲಿ ಇಡಲಾಗಿದ್ದು, ಉಳಿದವರಿಗೆ ಸಾಮಾನ್ಯ ಬ್ಯಾರಕ್‌ನಲ್ಲಿ ಸೆಲ್ ನೀಡಲಾಗಿದೆ ಎಂದು ಜೈಲು ಸಿಬ್ಬಂದಿ ಹೇಳಿದ್ದಾರೆ.

ಗಾಯಾಳು ಚೇತರಿಕೆ: ‘ವಿದ್ವತ್ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡು ಬಂದಿದೆ. ಮುಖದ ಊತ ಶೇ 50ರಷ್ಟು ಕಡಿಮೆಯಾಗಿದ್ದು, ಉಸಿರಾಟ ಸಹಜ ಸ್ಥಿತಿಗೆ ಮರಳುತ್ತಿದೆ. ದ್ರವ ರೂಪದ ಆಹಾರವನ್ನೇ ನೀಡುತ್ತಿದ್ದೇವೆ. ಅವರಿಗೆ ಇನ್ನೂ ಮೂರು ವಾರಗಳ ಚಿಕಿತ್ಸೆಯ ಅಗತ್ಯವಿದ್ದು, ಶುಕ್ರವಾರ ವಾರ್ಡ್‌ಗೆ ವರ್ಗಾಯಿಸಲಿದ್ದೇವೆ’ ಎಂದು ಮಲ್ಯ ಆಸ್ಪತ್ರೆ ವೈದ್ಯ ಕೆ.ಆನಂದ್‌ ತಿಳಿಸಿದರು.

ಲೋಕನಾಥನ್ ಪತ್ರ ಹೀಗಿತ್ತು

‘ವಿದ್ವತ್‌ ತಿಂಗಳ ಹಿಂದೆ ಬೈಕ್‌ನಿಂದ ಬಿದ್ದಾಗ ಕಾಲಿನ ಮೂಳೆ ಮುರಿದಿತ್ತು. ಅದಕ್ಕೆ ವೈದ್ಯರು ಸಿಮೆಂಟ್ ಪ್ಲಾಸ್ಟಿಂಗ್ ಮಾಡಿದ್ದರು. ಇತ್ತೀಚೆಗೆ ಅವರ ಮೇಲೆ ಹಲ್ಲೆ ನಡೆದಾಗ, ಆ ಪ್ಲಾಸ್ಟಿಂಗ್ ಸಹ ಒಡೆದು ಹೋಗಿತ್ತು. ಹೀಗಾಗಿ, ಪುನಃ ಸಿಮೆಂಟ್ ಪ್ಲಾಸ್ಟಿಂಗ್ ಮಾಡಿದ್ದೇವೆ’ ಎಂದು ಹೇಳಿದರು.

‘ಹ್ಯಾರಿಸ್ ಪುತ್ರ ವಿನಾಕಾರಣ ನನ್ನ ಮಗನ ಮೇಲೆ ಹಲ್ಲೆ ಮಾಡಿದ್ದಾನೆ. ಅಪ್ಪನ ಅಧಿಕಾರದ ಮದದಲ್ಲಿ ದಾದಾಗಿರಿ ನಡೆಸಿದ್ದಾನೆ. ‘ಫರ್ಜಿ ಕೆಫೆ’ಯಲ್ಲಿ ಹಲ್ಲೆ ನಡೆಸಿದ್ದು ಮಾತ್ರವಲ್ಲದೆ, ಮಗನನ್ನು ಕೊಲ್ಲುವ ಉದ್ದೇಶದಿಂದಲೇ ಆಸ್ಪತ್ರೆಗೂ ನುಗ್ಗಿದ್ದಾನೆ. ಅಪ್ಪ ಶಾಸಕ ಎಂಬ ದುರಹಂಕಾರ ಆತನಿಗಿದೆ’ ಎಂದು ವಿದ್ವತ್ ತಂದೆ ಲೋಕನಾಥನ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.

‘ಮೊದಲೇ ಬೈಕ್‌ನಿಂದ ಬಿದ್ದು ವಿದ್ವತ್‌ನ ಕಾಲು ಮೂಳೆ ಮುರಿದಿತ್ತು. ಆ ನೋವಿನಲ್ಲಿದ್ದ ಮಗನಿಗೆ ನಲಪಾಡ್ ಮತ್ತೆ ಅಮಾನವೀಯವಾಗಿ ಹೊಡೆದಿದ್ದಾನೆ. ಆತ ಶಾಸಕರ ಮಗ ಎಂಬ ಕಾರಣಕ್ಕೆ ಕಬ್ಬನ್‌ಪಾರ್ಕ್‌ ಪೊಲೀಸರೂ ಆರಂಭದಲ್ಲಿ ದೂರು ದಾಖಲಿಸಿಕೊಳ್ಳುವುದಕ್ಕೆ ಮೀನ ಮೇಷ ಎಣಿಸಿದ್ದಾರೆ.’

‘ಪ್ರಭಾವಿ ವ್ಯಕ್ತಿಗಳಾಗಿರುವ ಹ್ಯಾರಿಸ್ ಹಾಗೂ ನಲಪಾಡ್, ತಮ್ಮ ವಿರುದ್ಧ ವಾದ ಮಂಡಿಸುವ ವಕೀಲರ ಮೇಲೆ ಖಂಡಿತ ಒತ್ತಡ ಹೇರುತ್ತಾರೆ. ಹೀಗಾಗಿ, ಸರ್ಕಾರವೇ ವಿಶೇಷ ಅಭಿಯೋಜಕರನ್ನು ನೇಮಕ ಮಾಡಿ ನಮಗೆ ನ್ಯಾಯ ಒದಗಿಸಬೇಕು. ಹಿರಿಯ ವಕೀಲ ಶ್ಯಾಮ್‌ಸುಂದರ್ ಅವರನ್ನು ಆಯ್ಕೆ ಮಾಡಿದರೆ ಒಳ್ಳೆಯದು’ ಎಂದು ಹೇಳಿದ್ದರು.

ರಾಮಲಿಂಗಾರೆಡ್ಡಿ ರಾಜೀನಾಮೆಗೆ ಆಗ್ರಹ

ಬೆಂಗಳೂರು: ‘ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ, ಭೂಗಳ್ಳತನ ಹಾಗೂ ಪ್ರಭಾವಿಗಳ ದಬ್ಬಾಳಿಕೆಗೆ ಗೃಹ ಸಚಿವ ರಾಮಲಿಂಗಾರೆಡ್ಡಿ ಬೇಜವಾಬ್ದಾರಿತನವೇ ಮುಖ್ಯ ಕಾರಣ. ಕೂಡಲೇ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯ ಘಟಕದ ಸಹಸಂಚಾಲಕ ಶಿವಕುಮಾರ್‌ ಚೆಂಗಲರಾಯ ಆಗ್ರಹಿಸಿದರು.

ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜಕಾರಣಿಗಳು ತಮ್ಮ ಪ್ರಭಾವ ಬಳಸಿಕೊಂಡು ಅಮಾಯಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಕರ್ತವ್ಯದಲ್ಲಿದ್ದ ವೈದ್ಯರ ಮೇಲೆ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಹಲ್ಲೆ ನಡೆಸಿದ್ದರು. ಯುವಕನ ಮೇಲೆ ಶಾಸಕ ಎನ್‌.ಎ.ಹ್ಯಾರಿಸ್‌ ಪುತ್ರ ಮೊಹಮದ್‌ ನಲಪಾಡ್‌ ಹಲ್ಲೆ ಮಾಡಿದ್ದಾನೆ. ಆದರೆ, ರಾಜಕೀಯ ಒತ್ತಡಕ್ಕೆ ಮಣಿದು ಪ್ರಕರಣ ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದರು’ ಎಂದು ಆರೋಪಿಸಿದರು.

‘ಬಿಬಿಎಂಪಿ ಕಚೇರಿಯಲ್ಲಿ ಕಡತಗಳನ್ನೇ ಕಾಂಗ್ರೆಸ್‌ ಮುಖಂಡ ನಾರಾಯಣಸ್ವಾಮಿ ಸುಟ್ಟುಹಾಕುವ ಯತ್ನ ಮಾಡಿದ್ದಾರೆ. ಪೊಲೀಸ್‌ ಇಲಾಖೆ ಹಾಗೂ ರಾಜ್ಯದ ಸರ್ಕಾರಿ ಕಚೇರಿಗಳು ಕಾಂಗ್ರೆಸ್‌ ಕಚೇರಿಗಳಾಗಿವೆ. ರಾಜ್ಯದಲ್ಲಿ ಲೋಕಾಯುಕ್ತ ಇಲ್ಲ. ನೆಪ ಮಾತ್ರಕ್ಕೆ ಎಸಿಬಿ ಇದೆ. ಸಾರ್ವಜನಿಕರ ಸಮಸ್ಯೆಗಳನ್ನು ಯಾರೂ ಆಲಿಸದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry