ಮಂಗಳವಾರ, ಮೇ 26, 2020
27 °C
₹5,351ಕೋಟಿ ಮೊತ್ತದ ಪೂರಕ ಅಂದಾಜು ಮಂಡನೆ

ಪರಿಶಿಷ್ಟರಿಗಾಗಿ ಮೀಸಲಿಟ್ಟ ₹929 ಕೋಟಿ ರೈತರ ಸಾಲ ಮನ್ನಾಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರಿಶಿಷ್ಟರಿಗಾಗಿ ಮೀಸಲಿಟ್ಟ ₹929 ಕೋಟಿ ರೈತರ ಸಾಲ ಮನ್ನಾಕ್ಕೆ

ಬೆಂಗಳೂರು: ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ), ಗಿರಿಜನ ವಿಶೇಷ ಯೋಜನೆ (ಟಿಎಸ್‌ಪಿ) ಅಡಿ ಮೀಸಲಿಟ್ಟಿದ್ದ ಅನುದಾನದ ಪೈಕಿ ₹929.41 ಕೋಟಿಯನ್ನು ರೈತರ ಸಾಲ ಮನ್ನಾಕ್ಕೆ ಸರ್ಕಾರ ಬಳಸಿಕೊಂಡಿದೆ.

ವಿಧಾನಮಂಡಲದ ಉಭಯ ಸದನಗಳಲ್ಲಿ ಬುಧವಾರ ಮಂಡಿಸಲಾದ ₹5,351 ಕೋಟಿ ಮೊತ್ತದ ಮೂರನೇ ಪೂರಕ ಅಂದಾಜಿನಲ್ಲಿ ಸಹಕಾರ ಇಲಾಖೆಗೆ ಈ ಅನುದಾನವನ್ನು ನೀಡಲಾಗಿದೆ ಎಂದು ವಿವರಿಸಲಾಗಿದೆ.

ರೈತರು ಸಹಕಾರ ಸಂಘ ಹಾಗೂ ಬ್ಯಾಂಕ್‌ಗಳಿಂದ ಪಡೆದ ಅಲ್ಪಾವಧಿ ಬೆಳೆಸಾಲದ ಪೈಕಿ ₹50,000 ವರೆಗಿನ ಮೊತ್ತವನ್ನು ಮನ್ನಾ ಮಾಡುವುದಾಗಿ ಸರ್ಕಾರ ಘೋಷಿಸಿದೆ. ಎಸ್‌ಸಿಎಸ್‌ಪಿ ಅಡಿ ₹494.40 ಕೋಟಿ ಹಾಗೂ ಟಿಎಸ್‌ಪಿ ಅಡಿ ₹297.91 ಕೋಟಿಯನ್ನು ಸಾಲ ಮನ್ನಾಕ್ಕೆ ಹೆಚ್ಚುವರಿಯಾಗಿ ಒದಗಿಸಲಾಗಿದೆ ಎಂದು ಪೂರಕ ಅಂದಾಜು ಉಲ್ಲೇಖಿಸಿದೆ.

ಬಜೆಟ್‌ನ ಒಟ್ಟು ಮೊತ್ತದಲ್ಲಿ ಪರಿಶಿಷ್ಟ ಜಾತಿಯವರಿಗೆ ಶೇ 17.15 ಹಾಗೂ ಪರಿಶಿಷ್ಟ ಪಂಗಡದವರಿಗೆ ಶೇ 6.95ರಷ್ಟು ಮೊತ್ತ ಮೀಸಲಿಡಲು ರಾಜ್ಯ ಸರ್ಕಾರ 2013ರಲ್ಲಿ  ಕಾಯ್ದೆ ತಂದಿದೆ.ಈ ಮೊತ್ತವನ್ನು ಪರಿಶಿಷ್ಟ ಸಮುದಾಯದವರಿಗೆ ಶಿಕ್ಷಣ, ವಸತಿ ಹಾಗೂ ನೀರಾವರಿ ಸೌಲಭ್ಯ ಕಲ್ಪಿಸಲು ಬಳಸಿಕೊಳ್ಳಬೇಕು ಎಂದು ಕಾಯ್ದೆ ಸ್ಪಷ್ಟವಾಗಿ ಹೇಳಿದೆ. ಹಾಗಿದ್ದರೂ ಸಾಲ ಮನ್ನಾಕ್ಕೆ ಈ ಅನುದಾನವನ್ನು ಬಳಸಿಕೊಳ್ಳಲಾಗಿದೆ.

‍ಪ್ರಚಾರಕ್ಕೆ ₹60 ಕೋಟಿ: ಕಳೆದ ವರ್ಷದ ನವೆಂಬರ್‌ನಲ್ಲಿ ಮಂಡಿಸಿದ್ದ ಎರಡನೇ ಪೂರಕ ಅಂದಾಜಿನಲ್ಲಿ ಸರ್ಕಾರದ ಸಾಧನೆಗಳ ಪ್ರಚಾರಕ್ಕಾಗಿ ₹100 ಕೋಟಿ ನೀಡಲಾಗಿತ್ತು. ಈ ಬಾರಿ ಹೆಚ್ಚುವರಿಯಾಗಿ ₹60 ಕೋಟಿ ಒದಗಿಸಲಾಗಿದೆ.

ಸಾಧನೆಗಳ ಜಾಹೀರಾತು ನೀಡಲು, ವಿವಿಧ ಕಾರ್ಯಕ್ರಮ ನಡೆಸಲು ಈ ಮೊತ್ತ ಒದಗಿಸಲಾಗಿದೆ.

ವಿಜಯಪುರದ  ರಾಜ್ಯ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡುವ ಕಾರ್ಯಕ್ರಮವನ್ನು ಸರ್ಕಾರ ಅದ್ದೂರಿಯಾಗಿ ನಡೆಸಿತ್ತು. ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿನಿಯರನ್ನು ಕರೆ ತರಲಾಗಿತ್ತು. ಇದಕ್ಕಾಗಿ ₹92 ಲಕ್ಷ ವೆಚ್ಚ ಮಾಡಲಾಗಿದ್ದು, ಪೂರಕ ಅಂದಾಜಿನಲ್ಲಿ ಇದನ್ನು ಒದಗಿಸಲಾಗಿದೆ.

ಯಾವುದಕ್ಕೆ ಎಷ್ಟು:

*ಕರ್ನಾಟಕ ಸರ್ಕಾರದ ಆಡಳಿತದಲ್ಲಿ ಹೊಸತನ ತರುವ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಇಂಡಿಯನ್ ಇನ್ಸ್‌ಟಿಟ್ಯೂಟ್‌ ಆಫ್‌ ಮ್ಯಾನೇಜ್‌ ಮೆಂಟ್‌ಗೆ ₹49.70 ಲಕ್ಷ.

*ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯಾಣಕ್ಕೆ ಬಳಸುವ ಹೆಲಿಕಾಪ್ಟರ್‌ ವೆಚ್ಚಕ್ಕಾಗಿ ₹6 ಕೋಟಿ.

*ನೀರಾವರಿ ಹಾಗೂ ಲೋಕೋಪಯೋಗಿ ಇಲಾಖೆಯ ಬಾಕಿ ಬಿಲ್ಲುಗಳ ತೀರುವಳಿಗಾಗಿ ₹988 ಕೋಟಿ.

*ವಿವಿಧ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ₹26 ಕೋಟಿ.

*ಕರ್ನಾಟಕ ಲೋಕ ಸೇವಾ ಆಯೋಗದ ಸದಸ್ಯರಿಗಾಗಿ ಎಂಟು ವಾಹನಗಳನ್ನು ಖರೀದಿಸಲು ₹12.2ಕೋಟಿ.

ಚುನಾವಣೆಯ ಗುಪ್ತ ಮಾಹಿತಿ ಸಂಗ್ರಹಕ್ಕೆ ₹10 ಕೋಟಿ

ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಬಗ್ಗೆ ಗುಪ್ತ ಮಾಹಿತಿ ಸಂಗ್ರಹಿಸಲು ಪೂರಕ ಅಂದಾಜಿನಿಲ್ಲಿ ₹10 ಕೋಟಿ ಒದಗಿಸಲಾಗಿದೆ.

ರಾಜ್ಯದ ವಿವಿಧ ಮತ ಕ್ಷೇತ್ರಗಳಲ್ಲಿ ಇರುವ ರಾಜಕೀಯ ಪರಿಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸುವ ಉದ್ದೇಶಕ್ಕಾಗಿ ಈ ಮೊತ್ತವನ್ನು ಗೃಹ ಇಲಾಖೆಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಚುನಾವಣೆ ಕರ್ತವ್ಯಕ್ಕೆ ಪೊಲೀಸರನ್ನು ಕರೆದೊಯ್ಯುವ ವೆಚ್ಚಕ್ಕಾಗಿ ₹10 ಕೋಟಿ ಒದಗಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.