ಕಡಲ ತೀರದಲ್ಲಿ ಹೌಸ್‌ ಬೋಟ್‌ ಆಕರ್ಷಣೆ

7

ಕಡಲ ತೀರದಲ್ಲಿ ಹೌಸ್‌ ಬೋಟ್‌ ಆಕರ್ಷಣೆ

Published:
Updated:

ಮಂಗಳೂರು: ಕರಾವಳಿ ಭಾಗದ ಪ್ರವಾಸೋದ್ಯಮಕ್ಕೆ ಹೊಸ ಅಧ್ಯಾಯ ವನ್ನು ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಆಯ್ದ ಪ್ರವಾಸಿ ತಾಣಗಳಲ್ಲಿ ‘ಹೌಸ್‌ ಬೋಟ್‌’ ಹಾಗೂ ‘ತೇಲುವ ರೆಸ್ಟೋರೆಂಟ್‌’ ಸೌಲಭ್ಯ ಕಲ್ಪಿಸುವ ಯೋಜನೆ ರೂಪಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಈ ಕುರಿತು ಉಲ್ಲೇಖಿಸಲಾಗಿದ್ದು, ಕೇರಳದ ಮಾದರಿ ಯಲ್ಲಿಯೇ ರಾಜ್ಯದಲ್ಲೂ ಹೌಸ್‌ ಬೋಟ್‌ ಮೂಲಕ ಪ್ರವಾಸಿಗರ ಸೆಳೆಯುವ ಯೋಜನೆ ರೂಪಿಸಲಾಗುತ್ತಿದೆ.

ಸದ್ಯ ಹೌಸ್‌ ಬೋಟ್‌ ಖಾಸಗಿಯಾಗಿ ಉಡುಪಿ ಭಾಗದಲ್ಲಿ ಎರಡು ಕಡೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರವಾಸಿಗರನ್ನು ನೀರಿನಲ್ಲಿ ಬೋಟ್‌ ಮೂಲಕ ಕರೆದುಕೊಂಡು ಹೋಗಿ, ಅಲ್ಲಿಯೇ ಊಟ, ನೃತ್ಯ, ಸಂಗೀತದ ಆಸ್ವಾದನೆಯೊಂದಿಗೆ ರಾತ್ರಿ ವಿಶ್ರಾಂತಿಗೆ ಕೂಡ ವ್ಯವಸ್ಥೆ ಕಲ್ಪಿಸಲಾಗುತ್ತದೆ. ರಾತ್ರಿಯೆಲ್ಲ ನೀರಿನ ಮಧ್ಯೆಯೇ ಹೌಸ್‌ ಬೋಟ್‌ನಲ್ಲಿ ಕಾಲ ಕಳೆಯಬೇಕಾಗುತ್ತದೆ. ಇದೇ ರೀತಿ ಬೋಟ್‌ನಲ್ಲಿ ತೇಲಾಡುತ್ತಲೇ ಹೋಟೆಲ್ ಸೌಲಭ್ಯವನ್ನು ಪಡೆಯುವ ‘ತೇಲುವ ಉಪಾಹಾರ ಗೃಹ’ ಕೂಡ ಪ್ರವಾಸೋದ್ಯಮದ ಬೆಳವಣಿಗೆಯ ದೃಷ್ಟಿಯಲ್ಲಿ ಹೊಸ ಬೆಳವಣಿಗೆಯಾಗಿದೆ.

ಮಂಗಳೂರಿನ ನೇತ್ರಾವತಿ ನದಿ ತೀರ ಹಾಗೂ ಗುರುಪುರ ನದಿ ತೀರದ ಆಯ್ದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಹೌಸ್‌ ಬೋಟ್‌ಗಳು ಹಾಗೂ ತೇಲುವ ಉಪಾಹಾರ ಗೃಹಗಳ ಸೌಲಭ್ಯವನ್ನು ಕಲ್ಪಿಸಲು ಅವಕಾಶವಿದೆ. ಈ ಬೋಟ್‌ಗಳಿಗೆ ಪ್ರವೇಶ ಪಡೆಯಲು ನಿಗದಿತ ಜಾಗದಲ್ಲಿ ಸಣ್ಣಮಟ್ಟಿನ ಜೆಟ್ಟಿ ನಿರ್ಮಾಣ ಮಾಡಬೇಕಿದೆ. ಜತೆಗೆ ಇಂತಹ ಯೋಜನೆಗಳಿಗೆ ಮುಂದೆ ಬರುವವರಿಗೆ ಸರ್ಕಾರದ ವತಿಯಿಂದ ಸಬ್ಸಿಡಿ ಅಥವಾ ಇತರ ಸಹಾಯವನ್ನು ಕಲ್ಪಿಸಿದರೆ ಹೆಚ್ಚಿನ ಅನುಕೂಲವಾದೀತು ಎನ್ನುವುದು ಉದ್ಯಮಿಗಳ ಬೇಡಿಕೆ.

ಸದ್ಯ ಮಂಗಳೂರಿನ ಹಳೆ ಬಂದರು ಹಾಗೂ ಸುಲ್ತಾನ್‌ಬತ್ತೇರಿಯಲ್ಲಿ ತೇಲುವ ರೆಸ್ಟೋರೆಂಟ್‌ ಖಾಸಗಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಇದರ ಜತೆಗೆ ಕಡಲ ತೀರ ಹಾಗೂ ನದಿಗಳಲ್ಲಿ ಹೌಸ್‌ ಬೋಟ್‌ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಉದ್ದೇಶವನ್ನು ಸರ್ಕಾರ ಹೊಂದಿದ್ದು, ಈಗಾಗಲೇ ಜಿಲ್ಲಾಡಳಿತದಿಂದ ಪ್ರಸ್ತಾವನೆಯೂ ಸಲ್ಲಿಕೆಯಾಗಿದೆ.

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಮುಖ ಆಕರ್ಷಣೆ ಇರುವುದು ನೀರಿನಿಂದಲೇ. ಅರಬ್ಬಿ ಸಮುದ್ರ ಹಾಗೂ ಜಿಲ್ಲೆಯಲ್ಲಿ ಹರಿಯುವ ನದಿಗಳು ಅನೇಕ ಅವಕಾಶಗಳನ್ನು ತೆರೆದಿಟ್ಟಿವೆ. ಹೀಗಾಗಿ ಜಲವನ್ನೇ ಬಂಡವಾಳವಾಗಿ ಇಟ್ಟುಕೊಂಡು ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಲಾಗುತ್ತಿದೆ’ ಎನ್ನುತ್ತಾರೆ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌.

ಜಲ ಪ್ರವಾಸೋದ್ಯಮ ಅಭಿವೃದ್ಧಿ: ಕರ್ನಾಟಕದ ಕರಾವಳಿಯಲ್ಲಿ ಸೋಮೇಶ್ವರದಿಂದ ಕಾರವಾರದವರೆಗೆ ಸುಮಾರು 300 ಕಿ.ಮೀ. ಸಾಗರ ತೀರವಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 42 ಕಿ.ಮೀ ಹಾಗೂ ಉಡುಪಿ ಜಿಲ್ಲೆಯಲ್ಲಿ 98 ಕಿ.ಮೀ. ಸಮುದ್ರ ತೀರವನ್ನು ಹೊಂದಿದೆ. ಉತ್ತರ ಕನ್ನಡ ಜಿಲ್ಲೆ 160 ಕಿ.ಮೀ. ಸಾಗರ ತೀರವಿದೆ.

ಕರಾವಳಿಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ, ಉತ್ತೇಜನಕ್ಕಾಗಿ ವಿಶೇಷ ಯೋಜನೆ ಸಿದ್ಧಪಡಿಸುವುದು, ಸಾಗರತೀರ ಪ್ರವಾಸೋದ್ಯಮ ಅಭಿವೃದ್ಧಿ ನೀಲ ನಕಾಶೆ ಸಿದ್ಧಪಡಿಸುವುದು, ಸ್ಥಳೀಯರಿಗೆ ಪ್ರೋತ್ಸಾಹ ನೀಡುವುದರ ಜತೆಗೆ ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡಿರುವ ದೇಶ, ವಿದೇಶಗಳ ಪ್ರಮುಖರನ್ನು ಇಲ್ಲಿಗೆ ಆಕರ್ಷಿಸುವ ಮೂಲಕ ಪ್ರವಾಸೋದ್ಯಮ ಕ್ಷೇತ್ರ ಪ್ರಕಾಶಿಸಬಹುದು ಎಂಬುದು ಈ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ತೊಡಗಿರುವವರ ಅಭಿಪ್ರಾಯ.

ಪ್ರಮುಖ ಆದಾಯ ಕ್ಷೇತ್ರ: ಉದ್ಯೋಗ ಅವಕಾಶಗಳ ಸೃಷ್ಟಿ, ವಾಣಿಜ್ಯ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡುವ ಮೂಲಕ ಪ್ರವಾಸೋದ್ಯಮ ಉತ್ತಮ ಆದಾಯ ತರುವ ಸೇವಾ ವಲಯವಾಗಿ ಗುರುತಿಸಿಕೊಂಡಿದೆ.

‘ಕೇರಳ, ಗೋವಾ, ತಮಿಳುನಾಡು, ಮಹಾರಾಷ್ಟ್ರ ಮುಂತಾದ ರಾಜ್ಯಗಳು ಸಾಗರ ತೀರ ಪ್ರವಾಸೋದ್ಯಮಕ್ಕೆ ವಿಶೇಷ ಆದ್ಯತೆ ನೀಡಿದ ಪರಿಣಾಮ ವರ್ಷಕ್ಕೆ ಲಕ್ಷಾಂತರ ಮಂದಿಯನ್ನು ಆಕರ್ಷಿಸಲು ಸಾಧ್ಯವಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಪೂರಕ ಪ್ರಯತ್ನಗಳನ್ನು ನಡೆಸುತ್ತಿದೆ. ಸಾಗರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ಲಭಿಸುವ ನಿಟ್ಟಿನಲ್ಲಿ ಸಿಆರ್‌ಜೆಡ್‌ ನಿಯಮದಲ್ಲಿ ಕೆಲವು ಬದಲಾವಣೆಗಳನ್ನು ತರುವುದಕ್ಕೂ ಸಲಹೆ ಮಾಡಿದ್ದು, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತ್ಯೇಕ ಅಭಿವೃದ್ದಿ ಮಂಡಳಿಯೊಂದನ್ನು ರಚಿಸಬೇಕು ಎಂಬ ಮನವಿಯನ್ನು ಈಗಾಗಲೇ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ’ ಎಂದು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷೆ ವತಿಕಾ ಪೈ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry