ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್–ಜೆಡಿಎಸ್ ನಡುವೆ ನೇರ ಪೈಪೋಟಿ

Last Updated 22 ಫೆಬ್ರುವರಿ 2018, 6:36 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವಂತೆ ಕಾರ್ಯಕರ್ತರು ಒಗ್ಗಟ್ಟಾಗಿ ಪಕ್ಷ ಸಂಘಟನೆ ಮಾಡಬೇಕು ಎಂದು ಕೆಪಿಸಿಸಿ ಮಂಡ್ಯ ಜಿಲ್ಲಾ ಉಸ್ತುವಾರಿ ಆರ್.ಧ್ರುವನಾರಾಯಣ್ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಮಂಡ್ಯ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿತರ ಪಟ್ಟಿ ಪಡೆಯುವ ಹಾಗೂ ಅಭಿಪ್ರಾಯ ಸಂಗ್ರಹಣೆ ಮಾಡುವ ಸಭೆಯಲ್ಲಿ ಮಾತನಾಡಿದರು.

ರಾಜ್ಯದ ವಿಧಾನಸಭೆ ಚುನಾವಣೆಗೆ ಮೇ 10ರ ಒಳಗಾಗಿ ನೀತಿ ಸಂಹಿತೆ ಜಾರಿಯಾಗಲಿದೆ. ಮುಂದಿನ ಲೋಕಸಭಾ ಚುನಾವಣೆಗೆ ರಾಜ್ಯದ ಚುನಾವಣೆ ಪೂರ್ವ ವೇದಿಕೆಯಾಗಲಿದೆ. ಹಿಂದಿನ ಯುಪಿಎ ಸರ್ಕಾರ ಬಡವರ ಪರವಾಗಿತ್ತು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲಮನ್ನಾ ಮಾಡಿತ್ತು. ಬಿಜೆಪಿ ಸರ್ಕಾರ ರೈತ ವಿರೋಧಿಯಾಗಿದೆ. ದೇಶದಲ್ಲಿ ನರೇಂದ್ರ ಮೋದಿ ಪ್ರಭಾವ ತೀವ್ರವಾಗಿ ಇಳಿಮುಖವಾಗುತ್ತಿದೆ.

ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಪ್ರಬಲವಾಗಿದ್ದು, ಹೆಚ್ಚಿನ ಪೈಪೋಟಿ ನೀಡಿದೆ. ರಾಜಸ್ಥಾನ ಹಾಗೂ ಉತ್ತರ ಪ್ರದೇಶದ ಉಪ–ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದೆ. ದೇಶದಲ್ಲಿ ಪುನಃ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಂತೆ ಮಾಡಬೇಕಾಗಿದೆ ಎಂದು ಕರೆ ನೀಡಿದರು.

ಇಂದಿರಾಗಾಂಧಿ ಕಾಲದಿಂದ ಮನಮೋಹನಸಿಂಗ್ ಅವಧಿವರೆಗೆ ಕಾಂಗ್ರೆಸ್‌ನ ನಾಯಕರು ದೇಶ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಸಿದ್ದರಾಮಯ್ಯ
ನೇತೃತ್ವದ ಸರ್ಕಾರ 165 ಭಾಗ್ಯಗಳನ್ನು ಜನರಿಗೆ ತಲುಪಿಸಿದೆ. ಈಚೆಗೆ ನಡೆದ ರಾಜ್ಯ ಬಜೆಟ್‌ ಮಂಡನೆಯಲ್ಲಿ ಶಿಕ್ಷಣ ಹಾಗೂ ಕೃಷಿ ಕ್ಷೇತ್ರ ಸೇರಿದಂತೆ ಜಾತಿ, ವರ್ಗ, ಭಾಷೆ ತಾರತಮ್ಯ ಮಾಡದೆ ಸಮಾನ ಅಭಿವೃದ್ಧಿಗಾಗಿ ಕೊಡುಗೆ ನೀಡಿದ್ದಾರೆ ಎಂದರು.

ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ದೇಶದ ಚುನಾವಣಾ ಇತಿಹಾಸದಲ್ಲಿ ಕೇವಲ ಒಂದು ಮತದ ಅಂತರದಿಂದ ಜಯಗಳಿಸಿದ ದಾಖಲೆ ನನ್ನದಾಗಿದೆ. ಹೀಗಾಗಿ, ಒಂದು ಮತವೂ ಕೂಡ ಅತ್ಯಮೂಲ್ಯ. ಯಾವುದೇ ಅಭ್ಯರ್ಥಿಗೆ ಟಿಕೆಟ್ ದೊರೆತರೂ ಶಿಸ್ತು, ದಕ್ಷತೆ ಹಾಗೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ಎಂ.ಎಚ್. ಅಂಬರೀಷ್, ಎಂ.ಎಸ್. ಆತ್ಮಾನಂದ, ಹಾಲಹಳ್ಳಿ ರಾಮಲಿಂಗಯ್ಯ, ಸಿದ್ಧಾರೂಢ ಸತೀಶ್‌ಗೌಡ, ಎಂ.ಎಸ್.ಚಿದಂಬರ್, ಗಣಿಗ ರವಿಕುಮಾರ್‌ಗೌಡ ಇತರರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಆಕಾಂಕ್ಷಿಗಳಿಂದ ಧ್ರುವನಾರಾಯಣ್ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿ ಬಿ-ಫಾರಂಗೆ ಅರ್ಜಿ ಸ್ವೀಕರಿಸಿದರು. ನಂತರ ಕೆಪಿಸಿಸಿ ಹೈ ಕಮಾಂಡ್‌ಗೆ ವರದಿ ನೀಡುವುದಾಗಿ ಹೇಳಿದರು.

ಕೆಪಿಸಿಸಿ ವೀಕ್ಷಕರಾದ ಮನ್ಸೂರ್ ಅಲಿಖಾನ್, ಹನುಮಂತರಾಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಎಂ.ಡಿ.ಜಯರಾಂ, ಜಿ.ಸಿ.ಆನಂದ್, ಮಹಮ್ಮದ್ ಜಬೀವುಲ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT