ಮಂಗಳವಾರ, ಡಿಸೆಂಬರ್ 10, 2019
19 °C

ಹಾಳಾದ ಶುದ್ಧ ನೀರಿನ ಘಟಕಗಳು

ಉಮಾಪತಿ ಬಿ. ರಾಮೋಜಿ Updated:

ಅಕ್ಷರ ಗಾತ್ರ : | |

ಹಾಳಾದ ಶುದ್ಧ ನೀರಿನ ಘಟಕಗಳು

ಶಕ್ತಿನಗರ: ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಸಲುವಾಗಿ ನಿರ್ಮಿಸಲಾಗಿದ್ದ ಶುದ್ಧ ನೀರಿನ ಘಟಕಗಳು ನಿರ್ವಹಣೆ ಇಲ್ಲದೆ ಹಾಳಾಗಿವೆ. ದೇವಸೂಗೂರು ಹೋಬಳಿ ವ್ಯಾಪ್ತಿಯ ಶಕ್ತಿನಗರ, ಕೊರ್ವಿಹಾಳ್, ಯರಗುಂಟ, ಕೊರ್ತಕುಂದಾ, ಸಗಮಕುಂಟ, ಆತ್ಕೂರು, ಚಂದ್ರಬಂಡಾ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಗುತ್ತಿಗೆದಾರರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಕಮಿಷನ್‌ ಪಡೆಯುವುದಕ್ಕೆ ಘಟಕಗಳು ಸೀಮಿತವಾಗಿವೆ ಎಂದು ಗುಂಡಮ್ಮ, ಭಾರತಿ ಆರೋಪಿಸಿದರು.

ಕಳೆದ ಏಳು ವರ್ಷಗಳಲ್ಲಿ ರಾಯಚೂರು ತಾಲ್ಲೂಕಿನಲ್ಲಿ 81 ಶುದ್ಧ ನೀರಿನ ಘಟಕ ಸ್ಥಾಪಿಸಲಾಗಿದೆ. ಅವುಗಳಲ್ಲಿ 56 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಶಕ್ತಿನಗರ, ಕೊರ್ವಿಹಾಳ್ ಸೇರಿದಂತೆ 25 ಘಟಕಗಳು ಹಾಳಾಗಿವೆ. 2017-18ನೇ ಸಾಲಿನಲ್ಲಿ 23 ಹೊಸ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗುವುದು ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆಯ ಅಧಿಕಾರಿಗಳು ತಿಳಿಸಿದರು.

ವಾಸ್ತವವಾಗಿ ತಾಲ್ಲೂಕಿನಲ್ಲಿ ಶೇ 50ರಷ್ಟು ಶುದ್ಧ ನೀರಿನ ಘಟಕಗಳು ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ. ದುರಸ್ತಿ ಮಾಡುವವರೇ ಇಲ್ಲದೆ ಹಾಳಾಗಿವೆ. ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಮೂಲಕ ಆರೋಗ್ಯವನ್ನು ಕಾಪಾಡುವ ಸರ್ಕಾರದ ಯೋಜನೆ ಕುಂಟುತ್ತಾ ಸಾಗುತ್ತಿದೆ. ಕೆಲವೆಡೆ ಘಟಕ ಸ್ಥಾಪನೆಯಾಗಿದ್ದರೂ ಜನರ ಉಪಯೊಗಕ್ಕೆ ಬಾರದಂತಾಗಿವೆ. ಕೆಲವು ಕಡೆ ಘಟಕಗಳನ್ನು ಸ್ಥಾಪಿಸಿ ವರ್ಷವೇ ಕಳೆದಿದ್ದರೂ ಕಾರ್ಯಾರಂಭ ಮಾಡಿಲ್ಲ. ಲಕ್ಷಾಂತರ ರೂಪಾಯಿ ಮೌಲ್ಯದ ಯಂತ್ರೋಪಕರಣಗಳು ತುಕ್ಕು ಹಿಡಿಯುತ್ತಿವೆ.

ತಾಲ್ಲೂಕಿನಲ್ಲಿ ಒಟ್ಟು ಆರು ಏಜೆನ್ಸಿಗಳಿಗೆ ಶುದ್ಧ ನೀರಿನ ಘಟಕ ಸ್ಥಾಪಿಸಲು ಗುತ್ತಿಗೆ ನೀಡಲಾಗಿತ್ತು. ಹೈದರಾಬಾದ್‌ನ ಸ್ಮತಾ ಕಂಪನಿಗೆ 17, ನಾಗಪುರ 19, ಕೋ ಆಪರೇಟಿವ್ ಸೋಸೈಟಿ ರಾಯಚೂರು 3, ಅಹಮದಾಬಾದ್‌ ದೋಷಿನ್ ವೇಲಿಯಾ ಕಂಪನಿಗೆ 27, ಕಿಸ್ಕೋ ಸಂಸ್ಥೆಗೆ 4 ಘಟಕಗಳನ್ನು ಗುತ್ತಿಗೆಗೆ ನೀಡಲಾಗಿದೆ. ನಿಯಮಾನುಸಾರ ಶುದ್ಧ ನೀರಿನ ಘಟಕ ಸ್ಥಾಪಿಸಲು ಅನುಮತಿ ಪಡೆದ ಏಜೆನ್ಸಿಗಳು 5 ವರ್ಷ ನಿರ್ವಹಣೆ ಮಾಡಬೇಕು.

ಆದರೆ, ಯಾವ ಕಂಪನಿಯೂ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಸಮರ್ಪಕ ನಿರ್ವಹಣೆ ಮಾಡದ ಸಂಸ್ಥೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡಿದ್ದು ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗಾಗಿ ನೂತನ ಏಜೆನ್ಸಿಗಳಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಂದು ಇಲಾಖೆ ಮೂಲಗಳು ತಿಳಿಸಿವೆ.

500 ಎಲ್‌ಪಿಎಚ್‌ ಸಾಮರ್ಥ್ಯದ ಶುದ್ಧ ನೀರಿನ ಘಟಕ ಸ್ಥಾಪನೆಗೆ ₹ 5ರಿಂದ 7 ಲಕ್ಷ ಹಾಗೂ 1 ಸಾವಿರ ಎಲ್‌ಪಿಎಚ್‌ ಸಾಮರ್ಥ್ಯದ ಘಟಕ ಸ್ಥಾಪನೆಗೆ ₹ 12 ಲಕ್ಷ ವೆಚ್ಚವಾಗುತ್ತದೆ. ಸರಾಸರಿ ಪ್ರತಿ ಘಟಕಕ್ಕೆ ₹ 10 ಲಕ್ಷ ವೆಚ್ಚ ಮಾಡಲಾಗಿದೆ. ಶುದ್ಧ ನೀರಿನ ಘಟಕಗಳಲ್ಲಿ ತಾಂತ್ರಿಕ ಸಮಸ್ಯೆಯಾದರೆ ಪರಿಹರಿಸಲು ಹಾಗೂ ಘಟಕಗಳನ್ನು ನಿರ್ವಹಿಸಲು ಏಜೆನ್ಸಿಗಳು ಯಾವುದೇ ವ್ಯಕ್ತಿಯನ್ನು ನೇಮಕ ಮಾಡುತ್ತಿಲ್ಲ. ನೇಮಕ ಮಾಡಿದ ವ್ಯಕ್ತಿಗಳೂ ಯಾರ ಕೈಗೂ ಸಿಗುತ್ತಿಲ್ಲ ಎಂಬುದು ಅಧಿಕಾರಿಗಳ ಆರೋಪ.

ಘಟಕದಿಂದ ಸರಾಸರಿ ₹ 5 ವೆಚ್ಚದಲ್ಲಿ 20 ಲೀಟರ್‌ ನೀರನ್ನು ಪಡೆಯಬಹುದು. ಮಾರುಕಟ್ಟೆ ದರಕ್ಕೆ ಹೋಲಿಸಿದರೆ ಶುದ್ಧೀಕರಿಸಿದ ನೀರು ಅಗ್ಗವಾಗಿದೆ. ನಿಗದಿತ ಮೊತ್ತದ ನಾಣ್ಯವನ್ನು ಹಾಕಿ ಅಥವಾ ಸ್ಮಾರ್ಟ್‌ ಕಾರ್ಡ್‌ ಬಳಸಿ ನೀರನ್ನು ಪಡೆಯಬಹುದಾಗಿದೆ.

* * 

ಕೊರ್ವಿಹಾಳ್‌, ಶಕ್ತಿನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿವೆ. ಇದನ್ನು ಅಧಿಕಾರಿಗಳ ಗಮನಕ್ಕೆ ತರಲಾಗಿದೆ 

ರವಿಕುಮಾರ ಪಿಡಿಒ, ಗ್ರಾ.ಪಂ ದೇವಸೂಗೂರು

ಪ್ರತಿಕ್ರಿಯಿಸಿ (+)