ಶುಕ್ರವಾರ, ಡಿಸೆಂಬರ್ 6, 2019
25 °C

‘ನೀರು ಪೂರೈಕೆ ಯೋಜನೆ ಶೀಘ್ರ ಮಂಜೂರು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ನೀರು ಪೂರೈಕೆ ಯೋಜನೆ ಶೀಘ್ರ ಮಂಜೂರು’

ಬಿಡದಿ (ರಾಮನಗರ): ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಯೋಜನೆಗೆ ಇನ್ನೊಂದು ವಾರದಲ್ಲಿ ರಾಜ್ಯ ಸಚಿವ ಸಂಪುಟದ ಅನುಮೋದನೆ ದೊರೆ

ಯುವ ಸಾಧ್ಯತೆ ಇದೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.

ಇಲ್ಲಿನ ಪುರಸಭೆ ಹಾಗೂ ಮಂಚನಾಯಕನಹಳ್ಳಿ, ಬೈರಮಂಗಲ, ಕಂಚಗಾರನಹಳ್ಳಿ, ಗೋಪಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸುಮಾರು ₹6 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಚಾಲನೆ ನೀಡಿದ ಸಂದರ್ಭ ಅವರು ಮಂಚನಾಯಕನಹಳ್ಳಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದರು.

ಬಿಡದಿ ಪುರಸಭೆ ವ್ಯಾಪ್ತಿಯಲ್ಲಿ ನೀರು ಪೂರೈಕೆ ಹಾಗೂ ಒಳಚರಂಡಿ ನಿರ್ಮಾಣಕ್ಕೆ ಒಟ್ಟು ₹170 ಕೋಟಿ ಕೋಟಿ ವೆಚ್ಚದ ಪ್ರಸ್ತಾವವನ್ನು ರಾಜ್ಯ ಸರ್ಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದೆ. ಇದರಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆಗೆ ಮೊದಲು ಒಪ್ಪಿಗೆ ದೊರೆಯಲಿದೆ ಎಂದರು.

ಕಟ್ಟಡ ನಿರ್ಮಾಣ: ಪುರಸಭೆ ಹೊಸ ಕಟ್ಟಡ ನಿರ್ಮಾಣಕ್ಕಾಗಿ ರೇಷ್ಮೆ ಫಾರಂನಲ್ಲಿ ಎರಡು ಎಕರೆ ಜಾಗ ದೊರೆತಿದೆ. ಇಲ್ಲಿ ₹10 ಕೋಟಿ ವೆಚ್ಚದಲ್ಲಿ ಭವನ ನಿರ್ಮಿಸಲಾಗುವುದು ಎಂದರು.

ಈ ಬಾರಿಯ ಬಜೆಟ್‌ನಲ್ಲಿ ಬಿಡದಿ–ಹಾರೋಹಳ್ಳಿ ನಡುವೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸರ್ಕಾರವು ₹32 ಕೋಟಿ ನೀಡಿದೆ. ವೃಷಭಾವತಿ ನದಿ ನೀರು ಶುದ್ಧೀಕರಿಸಿ ಕೆರೆ ತುಂಬಿಸುವ ಯೋಜನೆಯು ಈಗಾಗಲೇ ಟೆಂಡರ್ ಹಂತದಲ್ಲಿ ಇದೆ ಎಂದರು.

ಬಾಲಗಂಗಾಧರನಾಥ ಶ್ರೀಗಳ ಹುಟ್ಟೂರಾದ ಬಾನಂದೂರು ಗ್ರಾಮದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಈಗಾಗಲೇ ₹10 ಕೋಟಿ ನೀಡಿದೆ. ಆದರೆ, ಅಧಿಕಾರಿಗಳ ತಪ್ಪು ಗ್ರಹಿಕೆಯಿಂದಾಗಿ ಕಾಮಗಾರಿ ನಡೆದಿಲ್ಲ. ಈ ಕುರಿತು ಗೊಂದಲ ಸರಿಪಡಿಸಲಾಗುವುದು ಎಂದರು. ಜೆಡಿಎಸ್ ಮತ್ತು ಬಿಎಸ್ಪಿ ಮೈತ್ರಿ ಕುರಿತು ಪ್ರತಿಕ್ರಿಯಿಸಿ ‘ಬಿಎಸ್ಪಿಯನ್ನು ಬೆಂಬಲಿಸುವ ಬಹುದೊಡ್ಡ ವರ್ಗ ಸದ್ಯ ಕಾಂಗ್ರೆಸ್ ಜೊತೆಗಿದೆ’ ಎಂದಷ್ಟೇ ಹೇಳಿದರು.

ಕೇಂದ್ರದ ಕ್ರಮ ಅಗತ್ಯ: ಮೇಕೆದಾಟು ಯೋಜನೆಗೆ ರಾಜ್ಯ ಸರ್ಕಾರವು ಕಳೆದ ಬಜೆಟ್‌ನಲ್ಲಿಯೇ ಅನುಮೋದನೆ ನೀಡಿದೆ. ಈಗ ಚೆಂಡು ಕೇಂದ್ರ ಸರ್ಕಾರದ ಅಂಗಳದಲ್ಲಿ ಇದ್ದು, ಇನ್ನಷ್ಟೇ ಒಪ್ಪಿಗೆ ಸಿಗಬೇಕಿದೆ ಎಂದರು.

ವಿವಿಧ ಕಾಮಗಾರಿಗೆ ಚಾಲನೆ: ಮಂಚನಾಯಕನಹಳ್ಳಿಯಲ್ಲಿ ₹35 ಲಕ್ಷ, ಪರಶನಪಾಳ್ಯ ₹10 ಲಕ್ಷ, ಕತ್ತಾಳೆ ಪಾಳ್ಯದಲ್ಲಿ ₹50 ಲಕ್ಷ, ಕೋಡಿಯಾಲ ಕರೇನಹಳ್ಳಿಯಲ್ಲಿ ₹12 ಲಕ್ಷ, ಕೆ.ಜಿ. ಗೊಲ್ಲರಪಾಳ್ಯದಲ್ಲಿ ₹50 ಲಕ್ಷ, ಬನ್ನಿಗಿರಿ ₹10 ಲಕ್ಷ, ಗೊಲ್ಲಹಳ್ಳಿ ₹10 ಲಕ್ಷ, ಸಿದ್ದಯ್ಯನದೊಡ್ಡಿ ₹35 ಲಕ್ಷ, ಕಂಚುಗಾರನಹಳ್ಳಿ ಗುಂಡುತೋಪು ₹30 ಲಕ್ಷ, ಚೌಕಳ್ಳಿ ಕಾಲೊನಿ ₹30 ಲಕ್ಷ, ಕೆ. ಗೋಪಹಳ್ಳಿ ಸೇತುವೆ ₹40 ಲಕ್ಷ, ತೊರೆದೊಡ್ಡಿ ₹10 ಲಕ್ಷ, ಅಂಗರಹಳ್ಳಿ ₹25 ಲಕ್ಷ, ಹೆಗ್ಗಡಗೆರೆ ₹25 ಲಕ್ಷ, ಹಲಸಿನಮರದದೊಡ್ಡಿ ₹33 ಲಕ್ಷ, ಕೆಂಚನಕುಪ್ಪೆ ₹30 ಲಕ್ಷ , ರಂಗೇಗೌಡನ ದೊಡ್ಡಿ ₹10 ಲಕ್ಷ, ಬೈರವನದೊಡ್ಡಿ ₹15 ಲಕ್ಷ, ಜೋಗರದೊಡ್ಡಿ ₹50 ಲಕ್ಷ ,ವೃಷಭಾವತಿಪುರದಲ್ಲಿ ₹25 ಲಕ್ಷ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕರು ಬುಧವಾರ ಭೂಮಿಪೂಜೆ ನೆರವೇರಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ, ತಾ.ಪಂ. ಸದಸ್ಯರಾದ ಗಾಣಕಲ್ ನಟರಾಜು, ನೀಲಾ, ಪುರಸಭೆ ಸದಸ್ಯ ರಮೇಶ್, ಮಂಚನಾಯಕನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಸುನಂದಾ ವೆಂಕಟೇಶ್‌, ಮುಖಂಡರಾದ ಮುನಿಬ್ಯಾಟಪ್ಪ, ರಂಗಸ್ವಾಮಿ ಇದ್ದರು.

* * 

ಕಾಂಗ್ರೆಸ್ ಸೇರಿದ್ದರಿಂದ ಕ್ಷೇತ್ರಕ್ಕೆ ಲಾಭ

ಕತ್ತಾಳೆ ಪಾಳ್ಯ ಗ್ರಾಮದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಬಾಲಕೃಷ್ಣ ‘ನಾನು ಕಾಂಗ್ರೆಸ್‌ ಜೊತೆ ಕೈಜೋಡಿಸಿದ ಮೇಲೆ ರಾಜ್ಯ ಸರ್ಕಾರವು ಮಾಗಡಿ ಕ್ಷೇತ್ರದ ಅಭಿವೃದ್ಧಿಗೆ ವಿವಿಧ ಯೋಜನೆಯ ಅಡಿ ₹70 ಕೋಟಿಯಷ್ಟು ಅನುದಾನ ನೀಡಿದೆ’ ಎಂದು ತಿಳಿಸಿದರು.

‘ಎ.ಮಂಜು ಪ್ರತಿನಿಧಿಸುವ ಕುದೂರು ಜಿಲ್ಲಾ ಪಂಚಾಯಿತಿ ಕ್ಷೇತ್ರವೊಂದಕ್ಕೇ ₹10 ಕೋಟಿ ಅನುದಾನ ಕೊಡಿಸಿದ್ದೇನೆ. ಅವರು ಈ ಮೊದಲು ಕಾಂಗ್ರೆಸ್‌ನಲ್ಲಿಯೇ ಇದ್ದರು. ಆಗ ಏಕೆ ಈ ಕೆಲಸ ಆಗಲಿಲ್ಲ’ ಎಂದು ಪ್ರಶ್ನಿಸಿದರು. ಯಾವ ಕಾಮಗಾರಿಗಳಿಗೂ ನಾನೂ ಅಡ್ಡಿಪಡಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.

ಗ್ರಾಮದ ಹೊರ ರಸ್ತೆ ಅಭಿವೃದ್ಧಿಯ ಬದಲು ಒಳ ರಸ್ತೆಗಳ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಈ ಸಂದರ್ಭ ಶಾಸಕರನ್ನು ಒತ್ತಾಯಿಸಿದರು. ‘ಒಳ ರಸ್ತೆಗಳ ಅಭಿವೃದ್ಧಿಗೂ ₹25 ಲಕ್ಷ ಅನುದಾನ ದೊರೆತಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುವುದು’ ಎಂದು ಶಾಸಕರು ಭರವಸೆ ನೀಡಿದರು.

ಪ್ರತಿಕ್ರಿಯಿಸಿ (+)