ಸೋಮವಾರ, ಡಿಸೆಂಬರ್ 9, 2019
25 °C

ಬಂಡೀಪುರ: ಕಾಳ್ಗಿಚ್ಚು ಎದುರಿಸಲು ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಡೀಪುರ:  ಕಾಳ್ಗಿಚ್ಚು ಎದುರಿಸಲು ಸಿದ್ಧತೆ

ಚಾಮರಾಜನಗರ: ದಿನದಿಂದ ದಿನಕ್ಕೆ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿರುವಂತೆ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ನೆಲ ಶುಷ್ಕವಾಗುತ್ತಿದ್ದು, ಕೆರೆಗಳು ಬರಿದಾಗತೊಡಗಿವೆ. ಅಲ್ಲದೇ ಅರಣ್ಯಪ್ರದೇಶದ ಶೇ 70ಕ್ಕೂ ಹೆಚ್ಚು ಭಾಗ ಹಸಿರು ಕಳೆದುಕೊಂಡಿರುವುದರಿಂದ ಕಾಳ್ಗಿಚ್ಚನ್ನು ಎದುರಿಸಲು ಅರಣ್ಯ ಇಲಾಖೆ ತಯಾರಿ ನಡೆಸಿದೆ.

ಮಳೆಗಾಲ ಕಳೆಯುತ್ತಿದ್ದಂತೆಯೇ ಲಂಟಾನ ಪೊದೆಗಳನ್ನು ತೆರವು ಗೊಳಿಸುವ ಕಾರ್ಯಾಚರಣೆ ಆರಂಭಿ ಸಲಾಗಿತ್ತು. ಸುಮಾರು 1,020 ಚದರ ಕಿ.ಮೀ. ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಶೇ 60ಕ್ಕೂ ಹೆಚ್ಚು ಭಾಗ ಆವರಿಸಿಕೊಂಡಿರುವ ಲಂಟಾನವನ್ನು ನಿರ್ಮೂಲನೆಗೊಳಿಸುವುದು ಸಾಧ್ಯ ವಾಗಿಲ್ಲ. ಹೀಗಾಗಿ, ಕಾಳ್ಗಿಚ್ಚಿನ ಅಪಾಯ ತಡೆಯಲು ಎಲ್ಲ 114 ಬೀಟ್‌ಗಳಲ್ಲಿ ಬೆಂಕಿ ರೇಖೆಗಳನ್ನು ನಿರ್ಮಿಸಲಾಗಿದೆ. ಜತೆಗೆ ಬೆಂಕಿ ನಂದಿಸುವ ಆಧುನಿಕ ಉಪಕರಣಗಳನ್ನು ಸಹ ಇಲಾಖೆ ಸಿದ್ಧಪಡಿಸಿಕೊಂಡಿದೆ ಎಂದ ಅಧಿಕಾರಿಗಳು ತಿಳಿಸಿದ್ದಾರೆ.

ಮಿನಿ ಅಗ್ನಿಶಾಮಕ ವಾಹನ: ಬೆಂಕಿ ಅವಘಡದ ಪರಿಸ್ಥಿತಿ ಎದುರಿಸಲು ಕೋಲಾರದಿಂದ ಮೂರು ಮಿನಿ ಅಗ್ನಿಶಾಮಕ ವಾಹನಗಳನ್ನು ತರಿಸಿಕೊಳ್ಳಲಾಗಿದೆ. 500 ಲೀಟರ್ ನೀರು ಸಾಮರ್ಥ್ಯದ ಟ್ಯಾಂಕ್‌ವುಳ್ಳ ಈ ವಾಹನ, ಕಾಡಿನ ತೀರಾ ಕಡಿದಾದ ಪ್ರದೇಶಗಳಲ್ಲಿಯೂ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಇದರಿಂದ 17–18 ಮೀಟರ್‌ ದೂರದವರೆಗೆ ನೀರು ಸಿಂಪಡಿಸಬಹುದು. ಬಂಡೀಪುರ, ಎನ್. ಬೇಗೂರು ಮತ್ತು ಹೆಡಿಯಾಲದಲ್ಲಿ ತಲಾ ಒಂದು ವಾಹನವನ್ನು ನಿಯೋಜಿಸಲಾಗಿದೆ. ಅಗತ್ಯಬಿದ್ದರೆ ಇನ್ನಷ್ಟು ವಾಹನಗಳನ್ನು ತರಿಸಿಕೊಳ್ಳಲು ಉದ್ದೇಶಿಸಲಾಗಿದೆ.

ಇದಲ್ಲದೆ, 1,000 ಲೀಟರ್‌ ಸಾಮರ್ಥ್ಯದ ಎರಡು ಟ್ಯಾಂಕ್‌ ಗಳನ್ನು ಟ್ರ್ಯಾಕ್ಟರ್‌ನಲ್ಲಿ ಸಾಗಿಸಿ ಮೋಟಾರ್‌ ಚಾಲಿತ ಸ್ಪ್ರೇಯರ್‌ಗಳಿಂದ ಬೆಂಕಿ ನಂದಿಸುವ ವ್ಯವಸ್ಥೆ ಮಾಡಲಾಗಿದೆ. ಬೆನ್ನಿಗೆ ಹಾಕಿಕೊಂಡು ನೀರು ಸಿಂಪಡಿಸುವಂತಹ 20 ಲೀಟರ್ ಸಾಮರ್ಥ್ಯದ ಮೋಟಾರ್‌ಚಾಲಿತ ಸ್ಪ್ರೇಯರ್‌ಗಳನ್ನು ಸಹ ಖರೀದಿಸಲಾಗಿದೆ. ಹುಲ್ಲಿನಿಂದ ಹರಡುವ ಬೆಂಕಿ ಆರಿಸಲು ಮರದ ಸೊಪ್ಪಿಗೆ ಪರ್ಯಾಯವಾಗಿ, ಮತ್ತಷ್ಟು ಪರಿಣಾಮಕಾರಿಯಾದ ರಬ್ಬರ್‌ ಫೈರ್‌ ಬೀಟರ್‌ ಉಪಕರಣಗಳನ್ನು ತರಿಸಿಕೊಳ್ಳಲಾಗಿದೆ.

ಸೋಲಾರ್‌ ಪಂಪ್‌ ಮೂಲಕ ನೀರು: ಬಂಡೀಪುರ ಉದ್ಯಾನದ ವ್ಯಾಪ್ತಿಯಲ್ಲಿ ಇರುವ 373 ಕೆರೆಗಳ ಪೈಕಿ ಸುಮಾರು 315 ಕೆರೆಗಳು ಮಳೆಗಾಲದಲ್ಲಿ ಭರ್ತಿಯಾಗಿದ್ದವು. ಈಗ ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಪ್ರಾಣಿಗಳಿಗೆ ನೀರಿನ ಕೊರತೆ ಉಂಟಾಗದಂತೆ ತಡೆಯಲು ಬೋರ್‌ವೆಲ್‌ಗಳ ಸಹಾಯ ಪಡೆಯಲಾಗುತ್ತಿದೆ. ಬೋರ್‌ವೆಲ್‌ಗಳಿಂದ ನೀರೆತ್ತಲು ಸೌರಶಕ್ತಿಯನ್ನು ಬಳಸಿಕೊಳ್ಳಲಾಗುತ್ತಿದೆ.

‘ಇದುವರೆಗೂ 13 ಕಡೆ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಕೆ ಮಾಡಲಾಗಿದೆ. ಹುಲಿ ಯೋಜನೆಯ ನೆರವಿನಿಂದ 7 ಪ್ಯಾನಲ್‌ಗಳು ಸಿಗಲಿದ್ದು, ಇನ್ನೂ 27 ಕಡೆ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಲಾಗುತ್ತದೆ’ ಎಂದು ಬಂಡೀಪುರ ಹುಲಿಯೋಜನೆ ನಿರ್ದೇಶಕ ಅಂಬಾಡಿ ಮಾಧವ್ ತಿಳಿಸಿದರು.

ಬೇಟೆಗಾರರ ನಿಯಂತ್ರಣಕ್ಕೆ 50 ಕಳ್ಳಬೇಟೆ ತಡೆ ಶಿಬಿರಗಳನ್ನು ನಿರ್ಮಿಸ ಲಾಗಿದೆ. ಪ್ರತಿ ಶಿಬಿರದಲ್ಲಿಯೂ ಇಬ್ಬರು ವಾಚರ್‌ ಹಾಗೂ ಒಬ್ಬ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಅವರಿಗೆ ವಾಕಿಟಾಕಿಗಳನ್ನು ನೀಡಲಾಗಿದ್ದು, ಅರಣ್ಯ ಪ್ರದೇಶದ ಯಾವುದೇ ಮೂಲೆ ಯಿಂದ ಬೇಕಾದರೂ ಸಂಪರ್ಕಿಸಬಹುದು. ಅದೇ ರೀತಿ ಆ್ಯಂಡ್ರಾಯ್ಡ್‌ ಮೊಬೈಲ್‌ ಫೋನ್‌ಗಳನ್ನು ಒದಗಿಸಲಾಗಿದೆ. ಅದರಲ್ಲಿನ ಆ್ಯಪ್‌ನಿಂದ ಅವರ ಚಟುವಟಿಕೆಗಳ ಮಾಹಿತಿ ಕಚೇರಿಗೆ ನಿರಂತರವಾಗಿ ರವಾನೆಯಾಗಲಿದೆ ಎಂದು ವಿವರಿಸಿದರು.

ಸಿಬ್ಬಂದಿ ಕೊರತೆ: ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಒಟ್ಟು 341 ಸಿಬ್ಬಂದಿಯನ್ನು ಮಂಜೂರು ಮಾಡಲಾಗಿದ್ದರೂ ಲಭ್ಯವಿರುವುದು 215 ಸಿಬ್ಬಂದಿ ಮಾತ್ರ ಎಂದು ಅಂಬಾಡಿ ಮಾಧವ್‌ ತಿಳಿಸಿದರು.

ಕಾಡಂಚಿನಲ್ಲಿರುವ 123 ಗ್ರಾಮಗಳಿಗೆ ಗಸ್ತು ತಿರುಗಿ ಅರಣ್ಯ ಇಲಾಖೆ ಸಿಬ್ಬಂದಿ ಜನರಲ್ಲಿ ಕಾಳ್ಗಿಚ್ಚಿನ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಕಾಡನ್ನು ಬೆಂಕಿಯಿಂದ ರಕ್ಷಿಸುವ ಕಾರ್ಯದಲ್ಲಿ ಸ್ಥಳೀಯರ ಸಹಾಯವನ್ನೂ ಪಡೆದುಕೊಳ್ಳಲಾಗುವುದು ಎಂದರು.

ಅಂಕಿ ಅಂಶಗಳು

1,020 ಚ.ಕಿ.ಮೀ. ಬಂಡೀಪುರ ಅರಣ‌್ಯದ ವಿಸ್ತೀರ್ಣ

114 ಒಟ್ಟು ಬೀಟ್‌ಗಳ ಸಂಖ್ಯೆ

373 ಅರಣ್ಯ ಪ್ರದೇಶದಲ್ಲಿನ ಒಟ್ಟು ಕೆರೆಗಳು

139 ಹುಲಿಗಳ ಸಂಖ್ಯೆ

* * 

ವಾಹನದಿಂದ 40 ಮೀಟರ್‌ ಉದ್ದಕ್ಕೆ ಪೈಪ್‌ ಕೊಂಡೊಯ್ಯಬಹುದು. 17–18 ಮೀಟರ್ ದೂರ ನೀರು ಹಾರಿಸಬಹುದು. ಸಾಮಾನ್ಯ ತೀವ್ರತೆಯ ಬೆಂಕಿಯನ್ನು ಇದರಿಂದ ಆರಿಸಬಹುದು

ಮುನಿಯಪ್ಪ, ಮಿನಿ ಅಗ್ನಿಶಾಮಕ ದಳದ  ಸಿಬ್ಬಂದಿ

ಪ್ರತಿಕ್ರಿಯಿಸಿ (+)