ಮಂಗಳವಾರ, ಡಿಸೆಂಬರ್ 10, 2019
21 °C

ತಪ್ಪಲಿಲ್ಲ ದಾರಿಗಾಗಿ ತಡಕಾಡುವ ಬಾಧೆ

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

ತಪ್ಪಲಿಲ್ಲ ದಾರಿಗಾಗಿ ತಡಕಾಡುವ ಬಾಧೆ

ಚಿಕ್ಕಬಳ್ಳಾಪುರ: ಚದುಲಪುರ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ –7ರ ಬದಿಯಲ್ಲಿ ನಿರ್ಮಿಸಿದ ನೂತನ ಪ್ರವಾಸಿ ಮಂದಿರ ಉದ್ಘಾಟನೆಗೊಂಡು ಎರಡು ವರ್ಷಗಳು ಸಮೀಪಿಸಿದರೂ ಈವರೆಗೆ ಹೆದ್ದಾರಿಯಿಂದ ನೇರವಾಗಿ ಪ್ರವಾಸಿ ಮಂದಿರ ಆವರಣ ಪ್ರವೇಶಿಸುವ ವ್ಯವಸ್ಥೆ ಕಲ್ಪಿಸಿಲ್ಲ. ಹೆದ್ದಾರಿ ಬದಿ ಪ್ರವೇಶದ್ವಾರಗಳಿಲ್ಲದೆ ಪ್ರವಾಸಿ ಮಂದಿರಕ್ಕೆ ತೆರಳುವವರು ದಾರಿಗಾಗಿ ಅಲ್ಲಲ್ಲಿ ತಡಕಾಡಿ ಬೇಸ್ತು ಬೀಳುವ ದೃಶ್ಯಗಳು ಆಗಾಗ ಗೋಚರಿಸುತ್ತಲೇ ಇರುತ್ತವೆ.

ಕೆನರಾ ಬ್ಯಾಂಕ್‌ ಗ್ರಾಮೀಣ ಸ್ವ– ಉದ್ಯೋಗ ತರಬೇತಿ ಕೇಂದ್ರದ ಪಕ್ಕದಲ್ಲಿರುವ ನಾಲ್ಕು ಎಕರೆ ಜಮೀನಿನಲ್ಲಿ ಸುಮಾರು ₹ 4 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತವಾದ ಪ್ರವಾಸಿ ಮಂದಿರಕ್ಕೆ ಸದ್ಯ ಹಳೆಯ ಎಸ್ಪಿ ಕಚೇರಿ ಆವರಣದ ಮೂಲಕ ಸುತ್ತಿ ಬಳಸಿ ಸಾಗಬೇಕಿದೆ. ಇದರಿಂದಾಗಿ ಜನಸಾಮಾನ್ಯರು ಮಾತ್ರವಲ್ಲದೆ ಗಣ್ಯರು ಕೂಡ ಅನೇಕ ಬಾರಿ ಪ್ರವಾಸಿ ಮಂದಿರದ ಪ್ರವೇಶದ್ವಾರ ಪತ್ತೆ ಮಾಡಲು ಪರದಾಡಿದ

ಉದಾಹರಣೆಗಳಿವೆ.

ಮೊದಲ ಬಾರಿಗೆ ಇಲ್ಲಿಗೆ ಭೇಟಿ ನೀಡಲು ಹೋಗುವ ಅಪರಿಚಿತರೆಲ್ಲರೂ ಪಕ್ಕದ ತರಬೇತಿ ಕೇಂದ್ರದ ಆವರಣದೊಳಗೆ ಹೋಗಿ ದಾರಿಗಾಗಿ ಹುಡುಕಾಡುತ್ತಾರೆ. ಬಳಿಕ ಅಲ್ಲಿನ ಸಿಬ್ಬಂದಿ ಬಳಿ ಪ್ರವಾಸಿ ಮಂದಿರದ ದಾರಿ ಬಗ್ಗೆ ವಿಚಾರಿಸಿ, ಚದುಲಪುರ ಕ್ರಾಸ್‌ಗೆ ಹೋಗಿ ಹೆದ್ದಾರಿಯಲ್ಲಿ ಬಲ ತಿರುವು ಪಡೆದು ಮತ್ತೆ ಎಸ್ಪಿ ಕಚೇರಿಯೊಳಗೆ ತಿರುವು ಪಡೆದು ಮಂದಿರ ತಲುಪುತ್ತಾರೆ.

ಕೆಎಸ್‌ಆರ್‌ಟಿಸಿ ನೂತನ ಬಸ್‌ ನಿಲ್ದಾಣದ ನಿರ್ಮಾಣಕ್ಕಾಗಿ 2014ರ ಫೆಬ್ರುವರಿಯಲ್ಲಿ ನಗರದಲ್ಲಿದ್ದ ನೂರಾರು ವರ್ಷದ ಇತಿಹಾಸವುಳ್ಳ ಬ್ರಿಟಿಷರ ಕಾಲದ ಪ್ರವಾಸಿ ಬಂಗಲೆ ಕಟ್ಟಡ ತೆರವುಗೊಳಿಸಲಾಯಿತು. ಬಳಿಕ ಚದುಲಪುರ ಕ್ರಾಸ್‌ನಲ್ಲಿ ಹೊಸ ಕಟ್ಟಡಕ್ಕೆ ಚಾಲನೆ ನೀಡಲಾಯಿತು. ಕಟ್ಟಡ ನಿರ್ಮಾಣ ಮತ್ತು ನಿರ್ವಹಣೆ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡ ಲೋಕೋಪಯೋಗಿ ಇಲಾಖೆ ಹೆದ್ದಾರಿ ಬದಿ ಈ ಕಟ್ಟಡದ ಆವರಣದಲ್ಲಿ ಆಗಮನ ಮತ್ತು ನಿರ್ಗಮನಕ್ಕೆ ಎರಡು ಪ್ರವೇಶ ದ್ವಾರ ತೆರೆಯಲು ಉದ್ದೇಶಿಸಿತ್ತು.

ಆದರೆ ಲೋಕೋಪಯೋಗಿ ಇಲಾಖೆಯ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ’ ಕೆಲ ರಸ್ತೆ ಸುರಕ್ಷತಾ ಮಾರ್ಗಸೂಚಿಗಳನ್ನು ಮುಂದಿಟ್ಟು ಸರ್ವೀಸ್‌ ರಸ್ತೆ ನಿರ್ಮಿಸದೆ ನೇರವಾಗಿ ಪ್ರವೇಶ ದ್ವಾರ ಅಳವಡಿಸುವುದಕ್ಕೆ ಅನುಮತಿ ನಿರಾಕರಿಸಿತು. ಆಗ ಲೋಕೋಪಯೋಗಿ ಇಲಾಖೆ ಅನಿವಾರ್ಯವಾಗಿ ಪ್ರವಾಸಿ ಮಂದಿರದ ಬಲಭಾಗದಲ್ಲಿ ಕಾಂಪೌಂಡ್‌ನಲ್ಲಿ ತಾತ್ಕಾಲಿಕ ಪ್ರವೇಶದ್ವಾರ ತೆರೆಯಿತು. ಇಂದಿಗೂ ಅದೇ ಮುಂದುವರಿದಿದೆ.

ಈ ಕುರಿತು ಪ್ರವಾಸಿ ಮಂದಿರದ ಉಸ್ತುವಾರಿ, ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಸಂತೋಷ್‌ ಕುಮಾರ್ ಅವರನ್ನು ವಿಚಾರಿಸಿದರೆ, ‘ಇತ್ತೀಚೆಗೆ ಲೋಕೋಪಯೋಗಿ ಇಲಾಖೆ ₹ 4 ಕೋಟಿ ವೆಚ್ಚದಲ್ಲಿ ಪ್ರವಾಸಿ ಮಂದಿರದ ಎರಡನೇ ಮಹಡಿ ಕಟ್ಟಲು ಮತ್ತು ಹೆದ್ದಾರಿಗೆ ಹೊಂದಿಕೊಂಡಂತೆ ಸರ್ವೀಸ್ ರಸ್ತೆ ನಿರ್ಮಿಸುವ ಯೋಜನೆ ರೂಪಿಸಿದೆ’ ಎನ್ನುತ್ತಾರೆ.

‘ಸರ್ವೀಸ್‌ ರಸ್ತೆ ನಿರ್ಮಿಸಿ, ಬಳಿಕ ಪ್ರವಾಸಿ ಮಂದಿರಕ್ಕೆ ಪ್ರವೇಶ ದ್ವಾರ ಅಳವಡಿಸುವ ಪ್ರಸ್ತಾವವನ್ನು ನಾವು ಇತ್ತೀಚಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಸಿದ್ದೇವೆ. ಅದಕ್ಕೆ ಅನುಮತಿ ಸಿಗುತ್ತಿದ್ದಂತೆ ಶೀಘ್ರದಲ್ಲಿಯೇ ನಿರ್ಮಾಣ ಕಾಮಗಾರಿ ಆರಂಭಿಸುತ್ತೇವೆ. ಆದಷ್ಟು ಬೇಗ ಪ್ರವೇಶದ್ವಾರದ ಸಮಸ್ಯೆ ಬಗೆಹರಿಸುತ್ತೇವೆ’ ಎಂದು ತಿಳಿಸಿದರು.

ಸದ್ಯ ನೆಲಮಹಡಿ ಮತ್ತು ಮೊದಲನೇ ಮಹಡಿ ಹೊಂದಿರುವ ಪ್ರವಾಸಿ ಮಂದಿರದಲ್ಲಿ 15 ಕೋಣೆಗಳಿದ್ದು, ಅವುಗಳಲ್ಲಿ 5 ಕೋಣೆಗಳನ್ನು ಅತಿ ಗಣ್ಯರಿಗೆ ಮತ್ತು ಗಣ್ಯರಿಗೆ ಮೀಸಲಿಡಲಾಗಿದೆ. ಉಳಿದ 10 ಸಾಮಾನ್ಯ ಕೋಣೆಗಳನ್ನು ಅತಿಥಿಗಳಿಗೆ ನೀಡಲಾಗುತ್ತದೆ. ಇವುಗಳಲ್ಲದೇ ಪ್ರತ್ಯೇಕ ಅಡುಗೆ ಮನೆ, ಸಭಾಂಗಣ ಮತ್ತು ಇನ್ನಿತರ ಸೌಕರ್ಯವೂ ಇದೆ.

* * 

ಮೂರ್ನಾಲ್ಕು ತಿಂಗಳಲ್ಲಿ ಪ್ರವಾಸಿ ಮಂದಿರದ ಮುಂದೆ ಸರ್ವೀಸ್ ರಸ್ತೆ ನಿರ್ಮಿಸುವ ಜತೆಗೆ ರಾಷ್ಟ್ರೀಯ ಹೆದ್ದಾರಿ ಬದಿ ಪ್ರವೇಶ ದ್ವಾರಗಳನ್ನು ತೆರೆಯಲಾಗುತ್ತದೆ

ಸಂತೋಷ್‌ ಕುಮಾರ್,

ಸಹಾಯಕ ಎಂಜಿನಿಯರ್

ಪ್ರತಿಕ್ರಿಯಿಸಿ (+)