ಸೋಮವಾರ, ಡಿಸೆಂಬರ್ 9, 2019
24 °C

ವೈರಾಗ್ಯನಿಧಿಗೆ ಆದಿಚುಂಚನಗಿರಿ ಮಠಾಧೀಶರ ಅಭಿಷೇಕ

ಬಿ.ಪಿ. ಜಯಕುಮಾರ್‌ Updated:

ಅಕ್ಷರ ಗಾತ್ರ : | |

ವೈರಾಗ್ಯನಿಧಿಗೆ ಆದಿಚುಂಚನಗಿರಿ ಮಠಾಧೀಶರ ಅಭಿಷೇಕ

ಶ್ರವಣಬೆಳಗೊಳ: ‘ಬೆಳಗೊಳದ ಹಾದೀಲಿ ಬೆಳತನಕ ನಡೆದೇನೂ ಎಷ್ಟು ನಡೆದರೂ ದಣಿವಿಲ್ಲಾ.... ಬಾಹುಬಲಿ ಸ್ವಾಮಿ ಹಾವ ಮುಟ್ಟಿದರೂ ವಿಷವಿಲ್ಲ’ ವೀರವಿರಾಗಿಯ ಕುರಿತು ಜನಪದರು ಹಾಡಿದ ಈ ಸಾಲುಗಳು ಬುಧವಾರ ಅಕ್ಷರಶಃ ಪ್ರತಿಧ್ವನಿಸಿದವು. ಐದನೇ ದಿನ ಬಿಸಿಲಿನ ತಾಪ ಹೆಚ್ಚಿದ್ದರೂ ಭಕ್ತರ ಉತ್ಸಾಹ ಕಡಿಮೆಯಾಗಲಿಲ್ಲ.

ಬೆಳಿಗ್ಗೆ 8.30ಕ್ಕೆ ಪ್ರಾರಂಭವಾದ 1008 ಜಲಾಭಿಷೇಕ ಪೂರ್ಣಗೊಳ್ಳುವ ಹೊತ್ತಿಗೆ ಮಧ್ಯಾಹ್ನ 12 ಗಂಟೆಯಾಗಿತ್ತು. ಪದ್ಧತಿಯಂತೆ ಮೊದಲು ಎಳನೀರು. ಕಬ್ಬಿನ ಹಾಲಿನ ಅಭಿಷೇಕ ಪೂರ್ಣಗೊಂಡಿತು. ನಂತರ ಕ್ಷೀರಾಭಿಷೇಕ, ಪವಿತ್ರ ದ್ರವ್ಯ ಹಾಲಿನ ಅಭಿಷೇಕವಾಗುವಾಗ ಭಕ್ತರು ಜೈಕಾರ ಹಾಕಿದರು. ಇದಕ್ಕೆ ತಕ್ಕಂತೆ ಕುಬೇರ್‌ ಚೌಗಲೆ ಅವರ ಭಕ್ತಿಯ ಸಂಗೀತ ಮಾರ್ದನಿಸಿತು. ಬಾಹುಬಲಿ ಮಾತ್ರ ಕ್ಷೀರಸಾಗರದಲ್ಲಿ ಆಗ ತಾನೆ ಮಿಂದೆದ್ದು ಬಂದಂತೆ ಕಾಣಿಸಿದ.

ನಂತರ ಕಲ್ಕಚೂರ್ಣ, ಅರಿಸಿನ ಅಭಿಷೇಕ ನಡೆಯಿತು. ಕಡುಕಂದು ಬಣ್ಣದ ಕಷಾಯದ ಅಭಿಷೇಕ ಇನ್ನೂ ವಿಶೇಷವಾಗಿತ್ತು. ನಮ್ಮಲ್ಲಿನ ಕ್ರೋಧ, ಮಾನ, ಮಾಯಾ ಲೋಭಗಳೆಂಬ ಕಷಾಯಗಳು ನಾಶವಾಗಲಿ ಎಂಬ ಭಾವನೆಯಿಂದ ಈ ಕಶಾಯ ಅಭಿಷೇಕ ಮಾಡಲಾಗುತ್ತದೆ. ಇದರಲ್ಲಿ ಗಿಡಮೂಲಿಕೆಗಳು ಇರುವುದರಿಂದ ಮೂರ್ತಿಯ ರಕ್ಷಣೆ ಸಹ ಆಗುತ್ತದೆ ಎಂಬುದು ತಿಳಿವಳಿಕೆ.

ನಂಗರದ ಸರದಿಯಲ್ಲಿ ಚತುಷ್ಕೋನ ಕಲಶದ ಶುದ್ಧಜಲ ಅಭಿಷೇಕ ನಡೆಯಿತು. ಇದನ್ನು 1008 ಕಲಶಗಳಲ್ಲಿ ನಾಲ್ಕು ದಿಕ್ಕುಗಳಲ್ಲಿಯೂ ಸ್ಥಾಪಿಸಲಾಗಿತ್ತು. ಎಲ್ಲ ದಿಕ್ಕುಗಳ ಜನರಿಗೂ ಸನ್ಮಂಗಳವಾಗಲಿ ಎಂಬುದು ಇದರ ಸಂದೇಶ.

ಕಾಶ್ಮೀರದಿಂದ ತಂದ ಸುವಾಸನೆಭರಿತ ಕೇಸರಿ ಅಭಿಷೇಕ ಮಾಡಿದಾಗ ಮೂರ್ತಿಯ ಗಾಂಭೀರ್ಯ ಇನ್ನಷ್ಟು ಹೆಚ್ಚಿತು. ಬಿಸಿಲ ಝಳದಲ್ಲಿ ಸ್ಪಟಿಕದ ಮಣಿಗಳಂತೆ ಹೊಳೆಯುತ್ತಿದ್ದ ಆ ದೃಶ್ಯ ಕಂಡಿ ಭಕ್ತರು ಪುಳಕಿದರಾದರು.

ಪಾದ ಸ್ಪರ್ಷಿಸಿದ ಮಠಾಧೀಶರು: ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ವಿವಿಧ ಶಾಖಾ ಮಠಗಳ ಸ್ವಾಮಿಗಳು ವೈರಾಗ್ಯಮೂರ್ತಿಗೆ ಕೇಸರಿ ಅಭಿಷೇಕ ನೆರವೇರಿಸಿದ್ದು ಬುಧವಾರದ ವಿಶೇಷ.

ಸ್ವಾಮೀಜಿಗಳು ಶ್ರೀಗಂಧದಿಂದ ಅಭಿಷೇಕ ನೆರವೇರಿದಾಗ ಮೂರ್ತಿಯು ಗಂಧದ ಗೊಂಬೆಯಂತೆ ಮುದ್ದಾಗಿ ಕಂಡಿತು. ಭವತಾಪದ ನಿವಾರಣೆಗಾಗಿ ಶ್ರೀಗಂಧದ ಅಭಿಷೇಕ ನೆರವೇರಿಸುವುದು ವಾಡಿಕೆ.

ನಿರ್ಮಲಾನಂದನಾಥ ಸ್ವಾಮೀಜಿಯೂ ಸೇರಿದಂತೆ ಶಾಖಾ ಮಠಾಧೀಶರೆಲ್ಲ ಬಾಹುಬಲಿ ಪಾದಗಳಿಗೆ ಮತ್ತು ಜಿನಬಿಂಬಕ್ಕೆ ಜಲಾಭಿಷೇಕ ನೆರವೇರಿಸಿದರು. ಅದೇ ಕಾಲಕ್ಕೆ ಮೇಲಿನಿಂದ ಶ್ರೀಗಂಧದ ಅಭಿಷೇಕ ಪ್ರಾರಂಭವಾಯಿತು. ಶ್ರೀಗಳೆಲ್ಲ ಗಂಧದದಲ್ಲಿ ಸಂಪೂರ್ಣವಾಗಿ ತೋಯ್ದು ಧನ್ಯತಾ ಭಾವ ಅನುಭವಿಸಿದರು. ಈ ದೃಶ್ಯ ಸುತ್ತಲಿದ್ದ ಭಕ್ತರಲ್ಲಿ ಸಂತಸ ಉಕ್ಕಿಸಿತು.

ನಂತರ ಚಂದನ, ಅಷ್ಟಗಂಧದ, ಕನಕಾಂಬರ ಪುಷ್ಪವೃಷ್ಠಿ... ಹೀಗೆ ಕ್ಷಣಕ್ಷಣಕ್ಕೂ ಬೃಹತ್‌ ಮೂರ್ತಿಯ ವೈಭೋಗ ಕಣ್ತುಂಬಿತು. ಪಾದಗಳಿಗೆ ಕೆಂಬಣ್ಣದ ಗುಲಾಬಿ ಹೂಗಳಿಂದ ಮಾಡಿದ ದೊಡ್ಡ ಮಾಲೆಯನ್ನು ಅರ್ಪಿಸಿ ‘ಕ್ಷೇಮಂ ಸರ್ವ ಪ್ರಜಾನಾಂ’ ಎಂಬ ಶಾಂತಿ ಮಂತ್ರದೊಡನೆ ಸರ್ವ ಲೋಕಕ್ಕೂ ಶಾಂತಿ ಬಯಸಲಾಯಿತು.

ಕೊನೆಯ ಪದ್ಧತಿಯಂತೆ ಮೇಲಿನಿಂದ ಕೆಳಕ್ಕೆ– ಕೆಳಗಿನಿಂದ ಮೇಲಕ್ಕೆ ತೂಗುಯ್ಯಾಲೆ ಆಡಿದಂತೆ ಮಹಾಮಂಗಳಾರತಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಹಿನ್ನೆಲೆಯಾಗಿ ಕೇಳಿಬರುತ್ತಿದ್ದ ‘ಶ್ರೀಬಾಹುಬಲಿ ಕಿ ಆರತಿ ಉತಾರೋ ಮಿಲಕೆ’ ಹಾಡಿಗೆ ಭಕ್ತರು ಮೈಮರೆತು ನರ್ತಿಸಿದರು.

 

ಪ್ರತಿಕ್ರಿಯಿಸಿ (+)