ಬುಧವಾರ, ಡಿಸೆಂಬರ್ 11, 2019
24 °C

ಮಂಗ್ಳೂರ್ ಹುಡ್ಗಿಯ ಮನದ ಮಾತು

Published:
Updated:
ಮಂಗ್ಳೂರ್ ಹುಡ್ಗಿಯ ಮನದ ಮಾತು

ಯಾರು ಗೊತ್ತಾ ಗುರು ಈ ಹುಡುಗಿ. ಅದೇ ‘ಮಂಗ್ಳೂರ್ ಹುಡ್ಗಿ ಹುಬ್ಳಿ ಹುಡ್ಗ’ ಧಾರಾವಾಹಿಯ ಅಮೂಲ್ಯ ಕಣೋ. ಹೀಗೆಂದು ಪಡ್ಡೆ ಹುಡುಗರು ಬೆಂಗಳೂರಿನ ಕಾಲೇಜೊಂದರ ಕಾರಿಡಾರ್‌ನಲ್ಲಿ ಮಾತನಾಡೋದು ಕೇಳಿ ದಿಲ್‌ ಖುಷ್‌ ಆಯಿತು. ಕುಡಿಮೀಸೆ ಹುಡುಗರು ಸಿಕ್ಕಾ‍‍ಪಟ್ಟೆ ತಲೆಕೆಡಿಸಿಕೊಂಡು ಫೇಸ್‌ಬುಕ್‌ನಲ್ಲಿ ಫಾಲೋವರ್ಸ್ ಆಗಿರುವುದು ನೋಡಿ ಖುಷಿ ದುಪ್ಪಟ್ಟಾಗಿದೆ ಎಂದು ರಾಧಿಕಾ ರಾವ್ ಅಭಿಮಾನಿಗಳ ಆರಾಧನೆಗೆ ಕೃತಜ್ಞರಾದರು.

‘ಈ ಹುಡುಗರೆಲ್ಲಾ ಧಾರಾವಾಹಿ ನೋಡೋದಕ್ಕೆ ಶುರುವಾದ ಮೇಲೆ ಟಿ.ಆರ್‌.ಪಿ. ಜಾಸ್ತಿ ಆಗಿದೆ. ಯಾರನ್ನೂ ಮದುವೆ ಆಗಬೇಡಿ ಪ್ಲೀಸ್... ನಿಮಗೋಸ್ಕರ ಕಾಯುತ್ತಿದ್ದೇನೆ... ಹೀಗೆ ಸಾವಿರಾರು ಕಮೆಂಟ್‌ಗಳು ನೋಡುತ್ತಿದ್ದರೆ ಕಚಗುಳಿ ಇಟ್ಟಂತೆ ಆಗುತ್ತೆ. ಪರವಾಗಿಲ್ವೆ; ನನಗೂ ಅಭಿಮಾನಿಗಳ ಬೆಂಬಲವಿದೆ’ ಎಂದು ತುಂಟನಗೆ ಬೀರಿದರು.

ಮೂಡಬಿದರೆ ಸಮೀಪದ ಎಡಪದವು ನನ್ನೂರು. ಮಂಗಳೂರಿನ ಕರಾವಳಿ ಕಾಲೇಜಿನಲ್ಲಿ ಬಿ.ಎಸ್ಸಿ. ಫ್ಯಾಷನ್‌ ಡಿಸೈನಿಂಗ್‌ನಲ್ಲಿ ಪದವಿ ಮುಗಿಸಿದ ಮೇಲೆ ಕೆಲವು ಧಾರಾವಾಹಿ ನಿರ್ದೇಶಕರಿಂದ ಆಫರ್ ಬಂದಾಗ ಅಭಿನಯದ ಗಂಧಗಾಳಿ ಗೊತ್ತಿರಲಿಲ್ಲ. ಈ ಮುದ್ದು ಮುಖ ಸೀರಿಯಲ್, ಸಿನಿಮಾಗೆ ಸರಿಹೊಂದುತ್ತದೆ ಎಂದು ಅಪ್ಪ, ಅಮ್ಮ, ಸ್ನೇಹಿತರು ಹುರಿದುಂಬಿಸಿದಾಗ ಅವಕಾಶ ಮಿಸ್ ಮಾಡಿಕೊಳ್ಳದೆ ಕನ್ನಡ ಕಲರ್ಸ್‌ ಸೂಪರ್ ವಾಹಿನಿಯಲ್ಲಿ ‘ಮಂಗ್ಳೂರ್‌ ಹುಡ್ಗಿ ಹುಬ್ಳಿ ಹುಡ್ಗ’ ಧಾರಾವಾಹಿ ಒಪ್ಪಿಕೊಂಡೆ. ಮಂಗಳೂರು ಕನ್ನಡ ಮಾತನಾಡುವ ನಾಯಕಿ ಅಮೂಲ್ಯ ಪಾತ್ರದ ಮೂಲಕ ಒಂದೂವರೆ ವರ್ಷದಿಂದ ಗುರುತಿಸಿಕೊಂಡಿದ್ದೇನೆ. ಇದಕ್ಕೂ ಮೊದಲು ತುಳು ಭಾಷೆಯ ‘ಏಸಾ’ ಚಿತ್ರದಲ್ಲಿ ಅಭಿನಯಿಸಿದ್ದು ಬಿಟ್ಟರೆ ಈ ಕ್ಷೇತ್ರದ ಪರಿಚಯವೇ ಇರಲಿಲ್ಲ. ಆರಂಭದಲ್ಲಿ ಸೈಕಲ್ ಹೊಡೆದೆ. ‘ಫಾರ್ ಎ ಬೆಟರ್’ ಎನ್ನುವಂತೆ ಅಭಿನಯದಲ್ಲಿ ದಿನೇ ದಿನೇ ಸುಧಾರಿಸುತ್ತಿದ್ದೇನೆ’ ಎಂದು ಮನದ ಮಾತು ಬಿಚ್ಚಿಟ್ಟರು.

ತೆಲುಗು, ತಮಿಳು ಧಾರಾವಾಹಿ, ಸಿನಿಮಾಗಳಿಂದಲೂ ಅವಕಾಶಗಳು ಬರುತ್ತಿವೆ. ಸದ್ಯಕ್ಕೆ ಧಾರಾವಾಹಿಗೆ ಕಮಿಟ್‌ ಆಗಿರೋದರಿಂದ ಒಪ್ಪಿಕೊಳ್ಳುತ್ತಿಲ್ಲ. ಕನ್ನಡದಲ್ಲಿ ‘ಲುಂಗಿ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದೇನೆ. ಸುದೀ‍ಪ್‌ ಜೊತೆ ನಟಿಸಬೇಕೆಂಬ ಕನಸಿದೆ. ಅವಕಾಶ ಸಿಕ್ಕಿದರೆ ಕುಣಿದು ಕುಪ್ಪಳಿಸುತ್ತೇನೆ ಎಂದು ಮನದ ಆಸೆ ತೋಡಿಕೊಂಡರು.

ನಟಿ ರಾಧಿಕಾ ಪಂಡಿತ್ ಅವರು ‘ಬಹದ್ದೂರ್‌’ ಹಾಗೂ ‘ಕಡ್ಡಿಪುಡಿ’ ಚಿತ್ರದಲ್ಲಿ ಅಭಿಯಿಸಿದ ಪಾತ್ರಗಳು ಇಷ್ಟ. ತೆಲುಗಿನಲ್ಲಿ ಅನುಷ್ಕಾ ಶೆಟ್ಟಿ ಅಮೋಘವಾಗಿ ಪಾತ್ರ ನಿರ್ವಹಿಸಿದ ‘ಅರುಂಧತಿ’, ‘ಜಿರೋ ಸೈಜ್’ ಹಾಗೂ ‘ಭಾಗಮತಿ’ ಚಿತ್ರದಂತಹ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಆಸೆ ಅವರಿಗೆ ಇದೆಯಂತೆ. ಅಲ್ಲದೆ, ನೆಗೆಟಿವ್ ಪಾತ್ರಗಳಲ್ಲೂ ಅಭಿನಯಿಸುವ ಇರಾದೆ ಅವರದ್ದು.

ಸುದ್ದಿ ವಾಚಕಿ ಆಗಲೂ ಇಷ್ಟ. ಕ್ರೈಮ್ ರಿರ್ಪೋಟರ್‌ ಆಗಿಯೂ ಕೆಲಸ ಮಾಡಲು ಮನಸ್ಸಿದೆ. ಎಲ್ಲೂ ಕೆಲಸಕ್ಕೆ ಅರ್ಜಿ ಹಾಕಿಲ್ಲ. ಅಭಿನಯದಲ್ಲೇ ಎತ್ತರಕ್ಕೇರುವ ಕನಸಿನಿಂದ ಅದೆಲ್ಲಾ ಬಿಟ್ಟಿದ್ದೇನೆ. ಪದವಿ ಪಡೆದಿರುವ ನನಗೆ ಇದೆಲ್ಲಾ ಖಯಾಲಿ ಯಾಕೆ ಎಂದು ಒಮ್ಮೊಮ್ಮೆ ಅನಿಸುತ್ತದೆ. ಅಭಿನಯದ ಸೆಳೆತವೇ ಹಾಗೆ ಎಂದು ಸ್ವಯಂ ಕಾಲೆಳೆದುಕೊಂಡರು.

ಶೂಟಿಂಗ್‌ನಲ್ಲಿ ಬ್ರೇಕ್ ಸಿಕ್ಕ ಕೂಡಲೇ ಊರಿಗೆ ಹೋಗಿ ಅಪ್ಪ, ಅಮ್ಮ, ಅಣ್ಣನೊಂದಿಗೆ ಸಂತೋಷವಾಗಿ ಕಾಲ ಕಳೆಯುತ್ತಾರೆ ರಾಧಿಕಾ. ಮನೆಯವರಿಗೆ ಇಷ್ಟವಾದ ಉತ್ತರ ಭಾರತೀಯ ಶೈಲಿಯ ರೋಟಿ ಕರಿ, ಪನ್ನೀರ್ ಬಟರ್‌ ಮಸಾಲಾ ಡಿಶ್‌ ರೆಡಿ ಮಾಡಿ ಒಟ್ಟಾಗಿ ಸವಿಯುವ ಅಭ್ಯಾಸ ಅವರಿಗಿದೆ. ಒಂದರೆಡು ದಿನ ಚೆನ್ನಾಗಿ ತಿಂದು, ನಿದ್ದೆ ಮಾಡಿ ಆಯಾಸ ಕಳೆದುಕೊಂಡು ಫ್ರೆಶ್ ಆಗಿ ಮತ್ತೆ ಬೆಂಗಳೂರಿಗೆ ಬಂದ ಮೇಲೆ ಎಂದಿನಂತೆ ಶೂಟಿಂಗ್‌ನಲ್ಲಿ ತಲ್ಲೀನರಾಗುತ್ತಾರೆ.

ಯಕ್ಷಗಾನ ಕಲಿತಿರುವ ಅವರು, ಏಕತಾನತೆ ನೀಗಿಸಿಕೊಳ್ಳಲು ಪಾತ್ರ ಮಾಡಬೇಕೆಂಬ ಆದಮ್ಯ ಆಸೆ ಹೊಂದಿದ್ದಾರೆ.

ಪ್ರತಿಕ್ರಿಯಿಸಿ (+)