ಶುಕ್ರವಾರ, ಡಿಸೆಂಬರ್ 13, 2019
27 °C

ಬ್ಯಾಂಕ್‌ ಬದಲಿಸಬಹುದು ಗೊತ್ತೆ...

ವಿದ್ಯಾಶ್ರೀ ಎಸ್‌. Updated:

ಅಕ್ಷರ ಗಾತ್ರ : | |

ಬ್ಯಾಂಕ್‌ ಬದಲಿಸಬಹುದು ಗೊತ್ತೆ...

ಗೃಹಸಾಲ ವರ್ಗಾವಣೆಗೆ ಹಲವು ಬ್ಯಾಂಕ್‌ಗಳು ಅವಕಾಶ ಕಲ್ಪಿಸಿಕೊಟ್ಟಿವೆ. ಸಾಲ ತೀರಿಸುವುದು ದೀರ್ಘ ಕಾಲದ ಪ್ರಕ್ರಿಯೆ. ಈ ಸಮಯದಲ್ಲಿ ಬ್ಯಾಂಕಿನ ಬಡ್ಡಿದರದ ಏರಿಕೆಯೂ ಆಗಬಹುದು. ಹೀಗೆ ಸಾಲ ಪಡೆದ ಬ್ಯಾಂಕಿನಲ್ಲಿ ಬಡ್ಡಿದರ ಏರಿಕೆಯಾದಾಗ ಇನ್ನೊಂದು ಬ್ಯಾಂಕಿನಲ್ಲಿ ಬಡ್ಡಿದರ ಕಡಿಮೆಯಿದ್ದರೆ ಆ ಬ್ಯಾಂಕಿಗೆ ಸಾಲ ವರ್ಗಾವಣೆ ಮಾಡುವ ಅವಕಾಶ ನೀಡಿದೆ ಈ ವ್ಯವಸ್ಥೆ.

ಏನಿದು ಸಾಲ ವರ್ಗಾವಣೆ: ಮನೆ ತೆಗೆದುಕೊಳ್ಳುವ ತರಾತುರಿಯಲ್ಲಿ ಬಡ್ಡಿ ದರ ಪರಿಶೀಲಿಸದೇ ಸಾಲ ಮಾಡಿದ್ದರೆ ಅಥವಾ ಸಾಲ ಪಡೆದ ಬ್ಯಾಂಕಿನ ಬಡ್ಡಿ ದರ ಏರುತ್ತಾ ಹೋಗುವ ಲಕ್ಷಣ ಕಂಡು ಬಂದರೆ ಆಗ ಹೆಚ್ಚುವರಿ ಹೊರೆಯನ್ನು ಇಳಿಸಿಕೊಳ್ಳಲು ಗ್ರಾಹಕ ಸಾಧ್ಯವಾದರೆ ತನ್ನ ಸಾಲವನ್ನು ಅವಧಿಗೆ ಮುನ್ನವೇ ಪೂರ್ಣ ಮರು ಪಾವತಿ ಮಾಡುತ್ತಾನೆ. ಇಲ್ಲವೇ ಕಡಿಮೆ ಬಡ್ಡಿ ದರ ಇರುವ ಬ್ಯಾಂಕ್‌ಗೆ ವರ್ಗಾವಣೆ ಮಾಡಿಕೊಳ್ಳುತ್ತಾನೆ. ಖಾಸಗಿ ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದರೂ, ಅದನ್ನು ರಾಷ್ಟ್ರೀಕೃತ ಬ್ಯಾಂಕ್‌ಗೆ, ರಾಷ್ಟ್ರೀಕೃತ ಬ್ಯಾಂಕ್‌ನಿಂದ ಖಾಸಗಿ ಬ್ಯಾಂಕ್‌ಗೆ ಸಾಲವನ್ನು ವರ್ಗಾಯಿಸುವುದು ಸಾಧ್ಯವಿದೆ. ಈ ಪ್ರಕ್ರಿಯೆಗೆ ಬ್ಯಾಂಕ್‌ ನಿಗದಿಪಡಿಸಿದ ಪರಿಷ್ಕರಣ ಶುಲ್ಕವನ್ನು ವಿಧಿಸಲಾಗುತ್ತದೆ.

ಎಂಥವರಿಗೆ ಅನುಕೂಲ: ಐದಾರು ವರ್ಷಗಳ ಹಿಂದೆ ಪಡೆದ ಸಾಲದ ಬಡ್ಡಿದರದಲ್ಲಿ ಏರಿಕೆ, ಹೆಚ್ಚುವರಿ ಸಾಲದ ಅಗತ್ಯತೆ ಇದ್ದವರು ಹೆಚ್ಚಾಗಿ ಗೃಹಸಾಲದ ವರ್ಗಾವಣೆಯ ಮೊರೆ ಹೋಗುತ್ತಾರೆ. ಮನೆ ಕೊಳ್ಳುವಾಗ ಹಾಕಿಕೊಂಡ ಬಜೆಟ್‌ಗೂ ಅದು ಮುಕ್ತಾಯವಾಗುವ ಸಂದರ್ಭದ ಬಜೆಟ್‌ಗೂ ವ್ಯತ್ಯಾಸವಾದಾಗ ಸಾಲಗಾರ ಹೆಚ್ಚುವರಿ ಹಣದ ಅಗತ್ಯಕ್ಕಾಗಿ ಸಾಲ ವರ್ಗಾವಣೆಯ ಮೊರೆ ಹೋಗುತ್ತಾನೆ. ಸಾಮಾನ್ಯವಾಗಿ ಖಾಸಗಿ ಬ್ಯಾಂಕ್‌ಗಳಲ್ಲಿ ಹೆಚ್ಚುವರಿ ಸಾಲ ಕೊಡುವ ಅವಕಾಶ ಇರುತ್ತದೆ. ಅದೇ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಈ ಅವಕಾಶ ಇರುವುದಿಲ್ಲ. ಆಗ ಗ್ರಾಹಕರು ಈ ಅವಕಾಶವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಾರೆ.

ಬಡ್ಡಿದರ ಗಮನಿಸಿ: ಸಾಲ ವರ್ಗಾವಣೆ ಮಾಡುವಾಗ ಬಡ್ಡಿದರದ ಮೇಲೆ ವಿಶೇಷ ಗಮನಹರಿಸಬೇಕು. ಶೇಕಡ ಪ್ರಮಾಣದಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲದಿದ್ದಾಗ ವರ್ಗಾವಣೆ ಮಾಡುವ ಅಗತ್ಯವೇ ಇಲ್ಲ. ಈಗ ಬಡ್ಡಿದರ ಶೇ. 8.30– 9.15 ಆಸುಪಾಸಿನಲ್ಲಿದೆ. ಶೇಕಡ ಪ್ರಮಾಣದಲ್ಲಿ ಹೆಚ್ಚು ವ್ಯತ್ಯಾಸವಿಲ್ಲದಾಗ ಇನ್ನೊಂದು ಬ್ಯಾಂಕ್‌ಗೆ ವರ್ಗಾಯಿಸುವುದರಿಂದ ಲಾಭವೇನು ಆಗುವುದಿಲ್ಲ. ಬದಲಿಗೆ ವರ್ಗಾವಣೆಗೆ ದಂಡ ತೆರಬೇಕಾಗುತ್ತದೆ. ಹಾಗಾಗಿ ಬಡ್ಡಿದರ ಕಡಿಮೆ ಎನಿಸಿದರೆ, ದೀರ್ಘಾವಧಿಗೆ ಖರ್ಚು ಮತ್ತು ಉಳಿತಾಯದ ಕುರಿತು ಯೋಚಿಸಿ ಸಾಲ ವರ್ಗಾಯಿಸಬೇಕು.

ಮುನ್ನೆಚ್ಚರಿಕೆ ಇರಲಿ: ಸಂಸ್ಕರಣಾ ಶುಲ್ಕ ಮತ್ತಿತರ ಶುಲ್ಕಗಳ ಬಗ್ಗೆ ತಿಳಿದು ಈ ವರ್ಗಾವಣೆಯಿಂದ ಎಷ್ಟು ಉಳಿತಾಯವಿದೆಯೆಂದು ಲೆಕ್ಕ ಹಾಕಿಕೊಳ್ಳಿ. ಸಾಮಾನ್ಯವಾಗಿ ಸಂಸ್ಕರಣಾ ಶುಲ್ಕ ಶೇ0.5ರಿಂದ ಶೇ1 (ಸಾಲದ ಪ್ರಮಾಣದ ಮೇಲೆ) ಆಗಿರುತ್ತದೆ. ಕೆಲ ಸಂದರ್ಭಗಳಲ್ಲಿ ಹೊಸ ಬ್ಯಾಂಕ್‌ನಲ್ಲಿ ನಿಮ್ಮ ವೇತನ ಖಾತೆ ಇದ್ದರೆ ನೀವು ಸಂಸ್ಕರಣಾ ಶುಲ್ಕ ಕೊಡುವ ಅಗತ್ಯವಿರುವುದಿಲ್ಲ. ಕಡಿಮೆ ಬಡ್ಡಿ ದರದ ಸಾಲದತ್ತ ನೀವು ವರ್ಗಾವಣೆಯಾಗುತ್ತೀರಿ ಎಂದಾದರೆ ಅದನ್ನು ಸಾಕಷ್ಟು ಮುಂಚಿತವಾಗಿ ನೀವು ಈಗ ಸಾಲ ಪಡೆದುಕೊಂಡಿರುವ ಬ್ಯಾಂಕ್‌ಗೆ ಮಾಹಿತಿ ನೀಡಬೇಕು. ಕೆಲ ಬ್ಯಾಂಕ್‌ಗಳು ಹೊಂದಾಣಿಕೆ ಮಾಡಿ ಬಡ್ಡಿ ದರ ಇಳಿಸಿ ಗ್ರಾಹಕರನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಯತ್ನಿಸುತ್ತವೆ. ಯಾವ ಬ್ಯಾಂಕ್‌ಗೆ ಸಾಲ ವರ್ಗಾವಣೆ ಮಾಡಿಸಿಕೊಳ್ಳುತ್ತೀರೋ ಆ ಬ್ಯಾಂಕ್ ಈ ಹಿಂದೆ ಯಾವ ರೀತಿ ಮತ್ತು ಯಾವ ಅವಧಿಯ ಅಂತರದಲ್ಲಿ ಫ್ಲೋಟಿಂಗ್ ಬಡ್ಡಿ ದರದಲ್ಲಿ ಹೆಚ್ಚಳ ಮಾಡಿದೆ ಎಂಬ ಮಾಹಿತಿ ನಿಮಗೆ ಇರಬೇಕು.

ಅವಧಿ: ಮೊದಲೆಲ್ಲ ಗೃಹಸಾಲ ಪ್ರಕ್ರಿಯೆಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದರು. ಆದರೆ ಈಗ ಸ್ಪರ್ಧೆ ಹೆಚ್ಚಿರುವುದರಿಂದ ಸಾಮಾನ್ಯವಾಗಿ 15ರಿಂದ 20 ದಿನಗಳ ಒಳಗೆ ಗೃಹಸಾಲ ವರ್ಗಾವಣೆ ಮಾಡಲಾಗುತ್ತದೆ. ಹೊಸ ಬ್ಯಾಂಕ್‌ ಮೊದಲು ಸಾಲ ಪಡೆದ ಬ್ಯಾಂಕ್‌ನಿಂದ ಗೌಪ್ಯ ಅಭಿಪ್ರಾಯ (ಕಾನ್ಫಿಡೆನ್ಷಿಯಲ್‌ ಓಪಿನಿಯನ್‌) ಪಡೆಯುತ್ತದೆ. ಇದರಲ್ಲಿ ಸಾಲಗಾರ ಮೊದಲ ಕಂತಿನಿಂದಲೂ ಸರಿಯಾಗಿ ಸಾಲ ತೀರಿಸಿದ್ದಾನೆಯೇ ಎಂಬ ಮಾಹಿತಿ ಇರುತ್ತದೆ.

**

ಅರಿತು ಮುನ್ನಡೆಯಿರಿ

ಗೃಹಸಾಲ ವರ್ಗಾವಣೆಯಿಂದ ಹಲವು ರೀತಿಯ ಅನುಕೂಲಗಳಿವೆ. ಗ್ರಾಹಕರ ಅನುಕೂಲಕ್ಕಾಗಿ ಈ ಸೌಲಭ್ಯ ಕಲ್ಪಿಸಲಾಗಿದೆ. ಸಾಲ ವರ್ಗಾಯಿಸುವಾಗ ಸರಿಯಾದ ಅಧ್ಯಯನ ನಡೆಸಬೇಕು. ಕೆಲವು ಬ್ಯಾಂಕ್‌ಗಳು ಅವಧಿಪೂರ್ವ ಚುಕ್ತ ಶುಲ್ಕ (ಪ್ರಿ ಮೆಚ್ಯೂರು ಕ್ಲೋಸರ್‌ ಫೀ) ಹಾಕುತ್ತವೆ. ಈ ನಿಯಮ ಬ್ಯಾಂಕಿನಿಂದ ಬ್ಯಾಂಕ್‌ಗೆ ಭಿನ್ನ. ಗ್ರಾಹಕರ ಸಾಲ ಮರುಪಾವತಿ ದಾಖಲೆ ಸರಿಯಾಗಿರಬೇಕು. ಸಾಲವನ್ನು ಸರಿಯಾಗಿ ಕಟ್ಟಿರದಿದ್ದರೆ ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಟಾಪ್‌ಅಪ್‌ (ಹೆಚ್ಚುವರಿ ಸಾಲ) ಸೌಕರ್ಯಕ್ಕಾಗಿ ಹಲವರು ಸಾಲ ವರ್ಗಾವಣೆ ಮಾಡುತ್ತಾರೆ. ಟಾಪ್‌ಅಪ್‌ ಸೌಲಭ್ಯ ಪಡೆಯಲು ಒಂದು ವರ್ಷದ ಸಾಲ ಕಟ್ಟಿರಬೇಕು. ಈ ಸಾಲದ ಬಡ್ಡಿದರವು ಗೃಹಸಾಲಕ್ಕಿಂತ ಸ್ವಲ್ಪ ಹೆಚ್ಚಿರುತ್ತದೆ.

–ವಿವೇಕಾನಂದ ಮಠದ್‌

ಸಹಾಯಕ ಪ್ರಧಾನ ವ್ಯವಸ್ಥಾಪಕ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ

ಪ್ರತಿಕ್ರಿಯಿಸಿ (+)