ಶುಕ್ರವಾರ, ಡಿಸೆಂಬರ್ 6, 2019
25 °C

ಈ ವಾರ ತೆರೆಗೆ

Published:
Updated:
ಈ ವಾರ ತೆರೆಗೆ

‘ಟಗರು’

ಸೂರಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಟಗರು’. ಸೂರಿ ಅವರೇ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರದ ಸಂಭಾಷಣೆಯಲ್ಲಿ ಮಾಸ್ತಿ ಕೈಜೋಡಿಸಿದ್ದಾರೆ. ಕೆ.ಪಿ.ಶ್ರೀಕಾಂತ್ ನಿರ್ಮಾಣ ಮಾಡಿದ್ದಾರೆ.

ಚರಣ್‍ರಾಜ್ ಸಂಗೀತ ನಿರ್ದೇಶನದ ‘ಟಗರು’ಗೆ ಮಹೇಂದ್ರ ಸಿಂಹ ಅವರ ಛಾಯಾಗ್ರಹಣವಿದೆ. ದೀಪು ಎಸ್. ಕುಮಾರ್ ಸಂಕಲನ, ಸುರೇಶ್ ಕಲಾ ನಿರ್ದೇಶನ, ಸೂರಿ ನೃತ್ಯ ನಿರ್ದೇಶನ ಹಾಗೂ ಜಾಲಿ ಬಾಸ್ಟಿನ್, ವಿನೋದ್ ಅವರ ಸಾಹಸ ನಿರ್ದೇಶನ ಇದಕ್ಕಿದೆ.

ಯೋಗರಾಜ್ ಭಟ್, ಜಯಂತ ಕಾಯ್ಕಿಣಿ ಹಾಗೂ ನಾಗೇಂದ್ರ ಪ್ರಸಾದ್ ಹಾಡುಗಳನ್ನು ಬರೆದಿದ್ದಾರೆ. ಶಿವರಾಜಕುಮಾರ್ ಜತೆಗೆ ಮಾನ್ವಿತಾ ಹರೀಶ್ ಮತ್ತು ಭಾವನಾ ತೆರೆಯನ್ನು ಹಂಚಿಕೊಂಡಿದ್ದಾರೆ. ಧನಂಜಯ್, ದೇವರಾಜ್, ವಸಿಷ್ಠ ಸಿಂಹ, ಅಚ್ಯುತ ಕುಮಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

‘ರಂಗ್ ಬಿರಂಗಿ’

ಮಲ್ಲಿಕಾರ್ಜುನ ಮುತ್ತಲಗೆರೆ ನಿರ್ದೇಶನದ ಚಿತ್ರ ‘ರಂಗ್ ಬಿರಂಗಿ’. ರಾಮನಗರದ ಶಾಂತ ಕುಮಾರ್ ಇದರ ನಿರ್ಮಾಪಕರು. ಕದ್ರಿ ಮಣಿಕಾಂತ್ ರಾಗ ಸಂಯೋಜನೆ ಮಾಡಿದ್ದಾರೆ. ತನ್ವಿ, ಶ್ರೀಜಿತ್‌, ಪಂಚಾಕ್ಷರಿ, ಚರಣ್‌, ಶ್ರೇಯಸ್, ಕುರಿ ಪ್ರತಾಪ್, ಪ್ರಶಾಂತ್ ಸಿದ್ದಿ, ಸತ್ಯಜಿತ್, ರಾಕ್‌ಲೈನ್‌ ಸುಧಾಕರ್ ಮುಖ್ಯಭೂಮಿಕೆಯಲ್ಲಿದ್ದಾರೆ. ರವಿ ವರ್ಮ ಹಾಗೂ ನಂದ ಕಿಶೋರ್ ಈ ಚಿತ್ರದ ಛಾಯಾಗ್ರಾಹಕರು.

ರಂಕಲ್‌ ರಾಟೆ

ಗೋಪಿ ಕೆರೂರ್‌ ನಿರ್ದೇಶನದ ಸ್ಕೇಟಿಂಗ್‌ ಕ್ರೀಡೆ ಆಧಾರಿತ ಸಿನಿಮಾ ‘ರಂಕಲ್‌ ರಾಟೆ’. ಭೈಸಾನಿ ಸತೀಶ್‌ ಕುಮಾರ್‌ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಚಿತ್ರದ ಮುಖ್ಯ ಪಾತ್ರಗಳಲ್ಲಿ ನಿರ್ದೇಶಕರ ಮಗ ರವಿ ನಟಿಸಿದ್ದಾರೆ. ಸ್ಕೇಟಿಂಗ್‌ ಕೋಚ್‌ ಆಗಿ ಮನ ಅದ್ವಿಕ್‌ ನಟಿಸಿದ್ದಾರೆ. ಆಶಾ, ಕೃಷ್ಣಮೂರ್ತಿ ಕವತ್ತಾರ್‌ ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಾಮಚಂದ್ರ ಹಡಪದ ಮತ್ತು ಅವಿನಾಶ್‌ ಸಂಗೀತ ಹೊಸೆದಿದ್ದಾರೆ. ಪ್ರವೀಣ್‌ ಎಂ. ಪ್ರಭು ಛಾಯಾಗ್ರಹಣ ಈ ಚಿತ್ರಕ್ಕಿದೆ.

‘ಗಂಡ ಊರಿಗೆ ಹೋದಾಗ’

ಸಾಯಿಕೃಷ್ಣ ನಿರ್ದೇಶನದ ಸಿನಿಮಾ ‘ಗಂಡ ಊರಿಗೆ ಹೋದಾಗ’. ಸಿಂಧೂ ರಾವ್, ಸ್ವಪ್ನಾ, ಅನೂ ಗೌಡ, ರಾಧಿಕಾ ಹಾಗೂ ಶಾಲಿನಿ ಈ ಐದು ಜನ ನಟಿಯರು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು ಅರುಣ್ ಆ್ಯಂಡ್ರೋ ಸಂಗೀತ ನೀಡಿದ್ದಾರೆ.

ಜಾನ್, ಜಗದೀಶ್ ಹಾಗೂ ಕಿರಣ್ ಹಣ ಹೂಡುವುದಲ್ಲದೇ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಮೇಶ್ ಕೊಯಿರ ಛಾಯಾಗ್ರಹಣ ಇರುವ ಈ ಚಿತ್ರಕ್ಕೆ ನಿರ್ದೇಶಕ ಸಾಯಿಕೃಷ್ಣ ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ವಿ.ಸಿ.ಎನ್ ಮಂಜು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಪ್ರತಿಕ್ರಿಯಿಸಿ (+)