ಬುಧವಾರ, ಡಿಸೆಂಬರ್ 11, 2019
27 °C

ಐತಿಹಾಸಿಕ ಪಾತ್ರದಲ್ಲಿ ರಾಮ್‌ಕುಮಾರ್

Published:
Updated:
ಐತಿಹಾಸಿಕ ಪಾತ್ರದಲ್ಲಿ ರಾಮ್‌ಕುಮಾರ್

ನಟ ರಾಮ್‌ಕುಮಾರ್‌ ಅವರು ಕೆಲವು ವರ್ಷಗಳ ಬಿಡುವಿನ ನಂತರ ಮತ್ತೆ ಬಣ್ಣ ಹಚ್ಚಿದ್ದಾರೆ. ಈ ಬಾರಿ ಅವರು ಐತಿಹಾಸಿಕ ಪಾತ್ರವೊಂದಕ್ಕೆ ಜೀವ ತುಂಬುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ. ರಾಮ್‌ಕುಮಾರ್‌ ನಟಿಸುತ್ತಿರುವ ಸಿನಿಮಾದ ಹೆಸರು ‘ಕ್ರಾಂತಿಯೋಗಿ ಮಹಾದೇವರು’. ಇದರ ನಿರ್ದೇಶನ ಮಾಡುತ್ತಿರುವವರು ಸಾಯಿಪ್ರಕಾಶ್.

ಸಿನಿಮಾ ಬಗ್ಗೆ ಮಾಹಿತಿ ನೀಡಲು ಸಾಯಿಪ್ರಕಾಶ್ ಅವರು ತಮ್ಮ ತಂಡದ ಜೊತೆ ಸುದ್ದಿಗೋಷ್ಠಿ ಕರೆದಿದ್ದರು. ಈ ಚಿತ್ರವು, ಮಹಾನ್ ವ್ಯಕ್ತಿ ಹಾಗೂ ಮಹಾನ್ ಶಕ್ತಿಯೊಂದರ ಕುರಿತ ಕಥೆ. ಈ ಕಥೆಯ ನಾಯಕನನ್ನು ದೇವರು ಎಂದು ನಂಬಿದವರೂ ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಇದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಅಷ್ಟೇ ಅಲ್ಲ, ಇವರು ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಟ ನಡೆಸಿದ ಕ್ರಾಂತಿಕಾರಿ ಕೂಡ ಹೌದು. ಅಂದಹಾಗೆ, ಈ ಚಿತ್ರದ ಕಥಾ ನಾಯಕ ಮಾಧವಾನಂದರು.

ಮಾಧವಾನಂದರು ಸ್ವಾತಂತ್ರ್ಯ ಯೋಧರಿಗೆ ಬಂದೂಕು ಪೂರೈಕೆ ಮಾಡಿದವರು, ನಾಡಿನಲ್ಲಿ ಅಂತರ್ಜಾತಿ ವಿವಾಹಗಳನ್ನು ಮಾಡಿಸಿದವರು. ಅವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜೈಲಿಗೂ ಹೋಗಿಬಂದವರು ಎಂದು ಚಿತ್ರತಂಡ ಹೇಳಿದೆ.

‘ರಾಮ್‌ಕುಮಾರ್‌ ಅವರಿಗೆ ಇದು ಇನ್ನೊಂದು ಇನಿಂಗ್ಸ್‌ ಆರಂಭಿಸಲು ಒಂದು ಉತ್ತಮ ಚಿತ್ರ’ ಎಂದರು ಸಾಯಿಪ್ರಕಾಶ್. ಈ ಚಿತ್ರದ ನಿರ್ಮಾಣಕ್ಕೆ ಹಣ ಹೂಡುತ್ತಿರುವವರು ಶ್ರೀಶೈಲ ಗಾಣಿಗೇರ ಮತ್ತು ಯಲ್ಲಪ್ಪ ಮಹಿಷವಾಡಗಿ.

'ಕಲಾವಿದನು ತನ್ನನ್ನು ನಿರ್ದೇಶಕರಿಗೆ ಅರ್ಪಿಸಿಕೊಂಡು ಪಾತ್ರ ನಿಭಾಯಿಸಿದರೆ ಕೆಲಸ ಸುಲಭವಾಗಿ ಆಗುತ್ತದೆ. ಮಾಧವಾನಂದರ ಬಗ್ಗೆ ರಾಜ್ಯದ ಎಲ್ಲರಿಗೂ ಗೊತ್ತಾಗಬೇಕು ಎಂಬ ಉದ್ದೇಶದಿಂದ ಈ ಸಿನಿಮಾ ಮಾಡುತ್ತಿದ್ದೇವೆ. ಅವರ ಜೀವನವೇ ಒಂದು ಅದ್ಭುತ' ಎಂದರು ರಾಮ್‌ಕುಮಾರ್.

ರಮೇಶ್ ಭಟ್, ಶಿವಕುಮಾರ್, ಸಿಹಿಕಹಿ ಚಂದ್ರು, ಗಣೇಶ್ ರಾವ್, ಡಿಂಗ್ರಿ ನಾಗರಾಜ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

ಪ್ರತಿಕ್ರಿಯಿಸಿ (+)