ಸೋಮವಾರ, ಡಿಸೆಂಬರ್ 9, 2019
25 °C

ಕರಾಳ ರಾತ್ರಿಯಲಿ ಒಂದಾದ ಅನುಪಮಾ, ಜೆಕೆ 

Published:
Updated:
ಕರಾಳ ರಾತ್ರಿಯಲಿ  ಒಂದಾದ ಅನುಪಮಾ, ಜೆಕೆ 

ಬಿಗ್‌ಬಾಸ್‌ ಮನೆಗೆ ಹೋಗುವಾಗ ತಲೆಯಲ್ಲಿ ಯಾವುದೇ ಯೋಚನೆ ಇರಲಿಲ್ಲ. ಬಿಡುವಿನ ವೇಳೆ ಅಲ್ಲಿಯೇ ಕುಳಿತು ಕ್ರೈಮ್‌ ಥ್ರಿಲ್ಲರ್‌ ಕಥೆ ಬಗ್ಗೆ ಚರ್ಚಿಸುತ್ತಿದ್ದೆ. ಈಗ ಅದು ‘ಆ ಕರಾಳ ರಾತ್ರಿ’ಯಾಗಿ ಮೈದಳೆದಿದೆ ಎಂದರು ನಿರ್ದೇಶಕ ದಯಾಳ್‌ ಪದ್ಮನಾಭನ್.

ಬಿಗ್‌ಬಾಸ್‌ನಿಂದ ಮೂರು ವಾರಕ್ಕೆ ಹೊರಬೀಳುವ ಮೊದಲೇ ಜಯರಾಂ ಕಾರ್ತಿಕ್‌ ಮತ್ತು ಅನುಪಮಾ ಗೌಡ ಅವರನ್ನೇ ಈ ಚಿತ್ರದ ನಾಯಕ, ನಾಯಕಿಯಾಗಿ ಆಯ್ಕೆ ಮಾಡಿದ್ದ ಬಗ್ಗೆಯೂ ಹೇಳಿಕೊಂಡರು. ಇದು ಅರವತ್ತರ ದಶಕದ ಕಥೆ. ಎಂಬತ್ತರ ದಶಕಕ್ಕೆ ಸರಿಹೊಂದುವಂತೆ ಚಿತ್ರಕಥೆ ಹೆಣೆದಿದ್ದಾರಂತೆ. ಚಿತ್ರದ ಮುಹೂರ್ತ ನೆರವೇರಿಸಿದ ಬಳಿಕ ಮಾತಿಗೆ ಕುಳಿತರು. ಉತ್ತಮವಾಗಿ ಸಿನಿಮಾ ಪೂರ್ಣಗೊಳಿಸಿ ಜನರ ಮುಂದೆ ಬರುವ ವಿಶ್ವಾಸ ಅವರ ಮಾತುಗಳಲ್ಲಿತ್ತು.

‘ಕ್ರೈಮ್‌ ಥ್ರಿಲ್ಲರ್‌ ಕಥೆ ಹೇಳಲು ಸಿದ್ಧಸೂತ್ರ ಅನುಸರಿಸುವುದಿಲ್ಲ. ಭಿನ್ನವಾಗಿ ಹೇಳುವ ಪ್ರಯತ್ನ ಮಾಡುತ್ತೇವೆ. ಕ್ರೈಮ್‌ನಷ್ಟೇ ಹೇಳುವುದಿಲ್ಲ. ಚಿತ್ರದಲ್ಲಿ ಭಾವನಾತ್ಮಕ ಅಂಶವೂ ಇದೆ’ ಎಂದರು ದಯಾಳ್. 

ಮೂಡಿಗೆರೆ ತಾಲ್ಲೂಕಿನ ಬಾಳೂರು ಬಳಿಯ ಮನೆಯೊಂದರಲ್ಲಿ ಚಿತ್ರೀಕರಣ ನಡೆಯಲಿದೆ. ಹದಿನೈದು ದಿನದಲ್ಲಿ ಶೂಟಿಂಗ್‌ ಮುಗಿಸಲು ಚಿತ್ರತಂಡ ನಿರ್ಧರಿಸಿದೆ. ಕಥೆಯ ಸನ್ನಿವೇಶಕ್ಕೆ ಅನುಗುಣವಾಗಿ ಮನೆಯ ನವೀಕರಣವೂ ನಡೆಯುತ್ತಿದೆಯಂತೆ.

‘ನಾನು ಬಿಗ್‌ಬಾಸ್‌ಗೆ ಹೋಗಿದ್ದರಿಂದ ಜನರ ಪ್ರೀತಿ ಗಳಿಸಿದೆ. ಅಲ್ಲಿ ದಯಾಳ್‌ ಪದ್ಮನಾಭನ್‌ ಸಿಕ್ಕಿದ್ದು ನನ್ನ ಪುಣ್ಯ’ ಎಂದರು ನಾಯಕ ನಟ ಜಯರಾಂ ಕಾರ್ತಿಕ್.

ಚಿತ್ರಕ್ಕೆ ಆಯ್ಕೆಯಾದ ಬಗ್ಗೆ ನಟಿ ಅನುಪಮಾ ಗೌಡ ಅವರಿಗೆ ಖುಷಿ ಇತ್ತು. ಕಿರುತೆರೆಯಲ್ಲಿ ಜನರ ಮನಗೆದ್ದಿರುವ ಅವರು ಹಿರಿತೆರೆಯಲ್ಲಿಯೂ ಮಿಂಚುವ ವಿಶ್ವಾಸದಲ್ಲಿದ್ದರು. ‘ಇದು ನನ್ನ ಇಲ್ಲಿಯವರೆಗಿನ ಪಾತ್ರಗಳಿಗಿಂತಲೂ ಭಿನ್ನವಾದುದು. ಚಿತ್ರದ ಪಾತ್ರಕ್ಕಾಗಿಯೇ ವಿಶೇಷ ತಯಾರಿ ನಡೆಸಬೇಕಿದೆ’ ಎಂದರು.

ನಟ ನವೀನ್‌ ಕೃಷ್ಣ ಅವರು ದಯಾಳ್ ಅವರೊಂದಿಗೆ ಮಾಡುತ್ತಿರುವ ಕೆಲಸ ಖುಷಿಕೊಟ್ಟಿದೆ ಎಂದು ಸಂತಸ ಹಂಚಿಕೊಂಡರು. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಗಣೇಶ್‌ ನಾರಾಯಣ ಸಂಗೀತ ಸಂಯೋಜಿಸಿದ್ದಾರೆ.

ಪಿ.ಎಚ್‌.ಕೆ. ದಾಸ್‌ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ವೀಣಾ ಸುಂದರ್‌, ಸಿಹಿಕಹಿ ಚಂದ್ರು, ರಂಗಾಯಣ ರಘು ತಾರಾಗಣದಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)