ಬುಧವಾರ, ಡಿಸೆಂಬರ್ 11, 2019
20 °C

ಈ ನಿನ್ನ ಮನಸೇ ‘ಮಾನಸ ಸರೋವರ’

Published:
Updated:
ಈ ನಿನ್ನ ಮನಸೇ ‘ಮಾನಸ ಸರೋವರ’

1983ರಲ್ಲಿ ತೆರೆಕಂಡ ‘ಮಾನಸ ಸರೋವರ’ ಚಿತ್ರ ಸೂಪರ್‌ ಹಿಟ್ ಆಗಿತ್ತು. ಪುಟ್ಟಣ್ಣ ಕಣಗಾಲ್‌ ನಿರ್ದೇಶಿಸಿದ ಈ ಚಿತ್ರದಲ್ಲಿ ಶ್ರೀನಾಥ್, ಪದ್ಮಾ ವಾಸಂತಿ ಹಾಗೂ ರಾಮಕೃಷ್ಣ ಅವರ ಮನೋಜ್ಞ ಅಭಿನಯ ಜನರಿಗೆ ಮೋಡಿ ಮಾಡಿತ್ತು. ಸಿನಿಮಾದ ಮುಂದುವರಿದ ಭಾಗವಾಗಿ ‘ಮಾನಸ ಸರೋವರ’ ಹೆಸರಿನಡಿ ಉದಯ ಟಿ.ವಿ.ಯಲ್ಲಿ ಧಾರಾವಾಹಿ ಮೂಡಿಬರಲಿದೆ. ಇದರಲ್ಲಿಯೂ ಈ ಮೂವರು ಹಿರಿಯ ಕಲಾವಿದರು ನಟಿಸುತ್ತಿದ್ದಾರೆ.

ಶಿವರಾಜ್‌ಕುಮಾರ್ ಅವರ ಬ್ಯಾನರ್ ಆದ ಶ್ರೀಮುತ್ತು ಸಿನಿ ಕ್ರಿಯೇಷನ್ಸ್‌ನಡಿ ಧಾರಾವಾಹಿ ನಿರ್ಮಾಣವಾಗುತ್ತಿದೆ. ಶಿವರಾಜ್‌ಕುಮಾರ್‌ ಅವರ ಪುತ್ರಿ ನಿವೇದಿತಾ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಉದಯ ಟಿ.ವಿ.ಯಲ್ಲಿ ಫೆ. 26ರಿಂದ ಸೋಮವಾರ– ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಧಾರಾವಾಹಿ ಪ್ರಸಾರವಾಗಲಿದೆ.

ಮಾನಸ ಸರೋವರ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಹುಚ್ಚನಾದ ಡಾ.ಆನಂದ್ ಈಗ ಏನಾಗಿದ್ದಾರೆ? ಸಂತೋಷ್‌ನನ್ನು ವರಿಸಿದ ವಾಸಂತಿಯ ಬದುಕು ಈಗ ಹೇಗಿದೆ? ಆನಂದ್‌ನನ್ನು ದುಡ್ಡಿನಾಸೆಗೆ ಬಿಟ್ಟು ಹೋಗಿದ್ದ ಅವರ ಪತ್ನಿ ಸರೋಜಾ ಏನು ಮಾಡುತ್ತಿದ್ದಾಳೆ? ಎಂಬ ಎಳೆಗಳನ್ನು ಇಟ್ಟುಕೊಂಡು ಧಾರಾವಾಹಿಗೆ ಕಥೆ ಹೊಸೆಯಲಾಗಿದೆ.

‘ಪುಟ್ಟಣ್ಣ ಅವರು ನನ್ನ ಫೇವರಿಟ್ ನಿರ್ದೇಶಕ. ಭಾರತೀಯ ಚಿತ್ರರಂಗದಲ್ಲಿ ಅವರಂತಹ ನಿರ್ದೇಶಕ ಇನ್ನೊಬ್ಬರಿಲ್ಲ. ಮಾಮೂಲಿ ಕಥೆಗಳನ್ನು ಹೊರತುಪಡಿಸಿ ಹೊಸ ಪ್ರಯತ್ನ ಮಾಡಬೇಕು ಅನ್ನೋದು ನನ್ನ ಮಗಳ ಆಸೆಯಾಗಿತ್ತು. ಹಾಗಾಗಿ, ಈ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದೇವೆ’ ಎನ್ನುತ್ತಾರೆ ಶಿವರಾಜ್‌ಕುಮಾರ್.

‘ಎಲ್ಲಿಯೂ ಹೊಂದಾಣಿಕೆ ಮಾಡಿಕೊಳ್ಳದೆ ಧಾರಾವಾಹಿಯ ಚಿತ್ರೀಕರಣ ಮಾಡುತ್ತಿದ್ದೇವೆ. ಸಿನಿಮಾಗಳಿಗೆ ಬಳಸುವ ರೆಡ್ ಎಪಿಕ್, ಆರಿ ಅಲೆಕ್ಸಾ ಕ್ಯಾಮೆರಾದಲ್ಲಿ ಶೂಟಿಂಗ್ ನಡೆಯುತ್ತಿದೆ. ಶ್ರೀನಾಥ್ ಸರ್ ಸೇರಿದಂತೆ ಎಲ್ಲ ಕಲಾವಿದರೂ ಚೆನ್ನಾಗಿ ಅಭಿನಯಿಸುತ್ತಿದ್ದಾರೆ’ ಎಂದರು ನಿರ್ಮಾಪಕಿ ನಿವೇದಿತಾ ಶಿವರಾಜ್‌ಕುಮಾರ್.

‘ನಾನು ಈ ಧಾರಾವಾಹಿಯಲ್ಲಿ ನಟಿಸಲು ಪುಟ್ಟಣ್ಣ ಅವರೇ ಮುಖ್ಯ ಕಾರಣ. ಪ್ರತಿ ದೃಶ್ಯದಲ್ಲಿ ನಟಿಸುವಾಗಲೂ ಅವರೇ ಕಣ್ಮುಂದೆ ಬರುತ್ತಾರೆ. ಅವರು ಭೌತಿಕವಾಗಿ ನಮ್ಮೊಂದಿಗಿಲ್ಲ. ಆದರೆ, ಮಾನಸಿಕವಾಗಿ ಜೊತೆಗಿದ್ದಾರೆ’ ಎನ್ನುತ್ತಾರೆ ನಟ ಶ್ರೀನಾಥ್.

ಮೂಲಕಥೆಗೆ ಯಾವುದೇ ಚ್ಯುತಿಯಾಗದಂತೆ ಧಾರಾವಾಹಿಗೆ ಕಥೆ ಹೆಣೆಯಲಾಗಿದೆ. ರಾಮ್ ಜಯಶೀಲ್ ವೈದ್ಯ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಛಾಯಾಗ್ರಹಣದ ಹೊಣೆ ರವಿ ಕಿಶೋರ್ ಅವರದ್ದು. ಪ್ರಜ್ವಲ್, ಶಿಲ್ಪಾ, ಶ್ರುತಿ ತಾರಾಬಳಗದಲ್ಲಿದ್ದಾರೆ. ಶಿವರಾಜ್‌ಕುಮಾರ್‌ ಅವರೇ ಮೊದಲ 10 ಸಂಚಿಕೆಗಳ ಕಥೆ ಹೇಳಿರುವುದು ವಿಶೇಷ.

ವಾಸಂತಿಯ ಮಗಳು ಸುನಿಧಿ ಮನಃಶಾಸ್ತ್ರಜ್ಞೆ. ತನ್ನ ತಾಯಿಯಿಂದ ಹುಚ್ಚನಾದ ಡಾ.ಆನಂದ್‌ನ ಆರೋಗ್ಯ ಸುಧಾರಣೆ ಮಾಡುವ ಶಪಥ ಮಾಡುತ್ತಾಳೆ. ಆ ಪ್ರಯತ್ನದಲ್ಲಿ ಗೆಲ್ಲುತ್ತಾಳಾ? ತನ್ನ ತಾಯಿಯಿಂದಾನೇ ಹೀಗಾಯ್ತು ಅಂತ ಗೊತ್ತಾದ್ರೆ ಸುನಿಧಿ ಏನು ಮಾಡ್ತಾಳೆ? ಎಂಬಂತಹ ಟ್ವಿಸ್ಟುಗಳು ಧಾರಾವಾಹಿಯಲ್ಲಿವೆ.

ಪ್ರತಿಕ್ರಿಯಿಸಿ (+)