ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಸ್ವರಾಜ್ಯದ ಆಶಯ ಈಡೇರಲಿ

Last Updated 22 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಈ ದೇಶದ, ರಾಜ್ಯದ ಅಭಿವೃದ್ಧಿಗಾಗಿ, ಜನರ ಅನುಕೂಲಕ್ಕಾಗಿ ಮುಂದಿನ ಒಂದು ವರ್ಷ ಏನೆಲ್ಲಾ ಯೋಜನೆಗಳನ್ನು ನೀಡಬೇಕು, ಯಾವ ನೀತಿಯನ್ನು ಅನುಸರಿಸಬೇಕು ಎಂಬುದನ್ನು ಚರ್ಚಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಜೆಟ್‌ ಮಂಡಿಸಿ ಆಗಿದೆ. ಸಾಮಾನ್ಯ ಪ್ರಜೆಗಳನ್ನು ಹೊರಗಿಟ್ಟು, ವಿಷಯತಜ್ಞರು, ಅನುಭವಿಗಳು, ಅಧಿಕಾರಿಗಳು ಮತ್ತು ವಿಜ್ಞಾನಿಗಳೊಡನೆ ಹಲವು ಸುತ್ತಿನ ಚರ್ಚೆಗಳು ನಡೆದ ಬಳಿಕವೇ ಯೋಜನೆಗಳು ಮತ್ತು ನೀತಿ ರೂಪಿತವಾಗಿವೆ. ಕರ್ನಾಟಕದಲ್ಲಿ ಬಜೆಟ್ ತಯಾರಿಕೆಗೆ ಪೂರ್ವಭಾವಿಯಾಗಿ ವಿವಿಧ ಕ್ಷೇತ್ರಗಳ ಪರಿಣತರೊಡನೆ ಜಿಲ್ಲಾ ಮಟ್ಟದಲ್ಲಿ ಚರ್ಚೆಗಳು ನಡೆದಿದ್ದವು. ಈ ಚರ್ಚೆಗಳು ಎಷ್ಟರಮಟ್ಟಿಗೆ ಪ್ರಜೆಗಳ ಹಕ್ಕುಗಳನ್ನು ಎತ್ತಿಹಿಡಿದಿದ್ದವು ಎನ್ನುವುದರ ಬಗ್ಗೆಯೂ ಚರ್ಚೆಗಳು ನಡೆದಿವೆ. ಈ ಎರಡೂ ಬಜೆಟ್‌ಗಳ ಪರ–ವಿರೋಧಿ ಚರ್ಚೆಗಳ ನಡುವೆಯೇ ಈಗ ವಿವಿಧ ಪಕ್ಷಗಳ ‘ಯಾತ್ರೆ’ಗಳ ಭರಾಟೆಯೂ ರಾಜ್ಯದಲ್ಲಿ ಆರಂಭವಾಗಿದೆ.

ಮನೆ ಮನೆಗೆ ಭೇಟಿ ಮತ್ತು ಮತಗಟ್ಟೆ ಮಟ್ಟದ ಸಂಘಟನಾ ಸಭೆಗಳ ಮೂಲಕ ರಾಜಕಾರಣಿಗಳು ಪ್ರತಿಯೊಬ್ಬರ ಮಾತುಗಳನ್ನೂ ಆಲಿಸಿ, ಹೊಸ ಹೊಸ ಭರವಸೆಗಳನ್ನು ನೀಡುತ್ತಿದ್ದಾರೆ. ಒಂದು ಪಕ್ಷದ ರಾಜ್ಯ ಮುಖ್ಯಸ್ಥರು, ‘ನಾವು ಚುನಾವಣೆಯಲ್ಲಿ ಗೆದ್ದರೆ ವಿಧಾನಸೌಧದ ಮೂರನೇ ಮಹಡಿಯಿಂದ ಅಧಿಕಾರ ನಡೆಸುವುದಿಲ್ಲ. ಬದಲಿಗೆ ನಿಮ್ಮ ಮನೆಯಂಗಳದಿಂದ ಸರ್ಕಾರ ನಡೆಸುತ್ತೇವೆ’ ಅಂದರೆ, ಆಡಳಿತಾರೂಢ ಪಕ್ಷ, ‘ನಮ್ಮ ನಿರ್ಧಾರ ಜನರ ಕೈಗೆ ಅಧಿಕಾರ’ ಎನ್ನುತ್ತಿದೆ. ಮತ್ತೊಬ್ಬರದ್ದು ‘ಜನರೆಡೆ ನಡೆ, ಪರಿವರ್ತನಾ ಯಾತ್ರೆ’... ಹೀಗೆ ಎಲ್ಲರೂ ಜನರ ಆಸೆ–ಆಕಾಂಕ್ಷೆಗಳನ್ನು ಅರಿಯಲು, ಬೇಡಿಕೆ ಈಡೇರಿಸಲು ಕೊಡುತ್ತಿರುವ ಭರವಸೆಗಳು, ತೊಡುತ್ತಿರುವ ಪ್ರತಿಜ್ಞೆಗಳು ಹತ್ತು ಹಲವು.

2016ರ ಸೆಪ್ಟೆಂಬರ್- ಅಕ್ಟೋಬರ್‌ ತಿಂಗಳಲ್ಲಿ ರಾಜ್ಯದ ಆರು ಸಾವಿರಕ್ಕೂ ಮಿಕ್ಕಿರುವ ಸ್ಥಳೀಯ-ಸರ್ಕಾರಗಳಲ್ಲಿ, ಜನವಸತಿ ಸಭೆ, ವಾರ್ಡ್‌ ಸಭೆ, ಗ್ರಾಮಸಭೆಗಳನ್ನು ಸಂಘಟಿಸಿ ಪ್ರಗತಿಯ ಮುನ್ನೋಟವೊಂದನ್ನು ತಯಾರಿಸಲಾಗಿತ್ತು. ಈ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿರುವ ಮೂರು ಕೋಟಿಗೂ ಹೆಚ್ಚಿನ ಜನರು ತಮ್ಮ ಹಳ್ಳಿಗೆ, ತಮಗೆ, ತಮ್ಮ ಮಕ್ಕಳಿಗೆ ಏನು ಬೇಕು, ತಮ್ಮ ಹಳ್ಳಿ, ವಾರ್ಡ್, ಗ್ರಾಮ ಹೇಗಿರಬೇಕು ಎನ್ನುವ ಬಗ್ಗೆ ಸಮಗ್ರವಾಗಿ ಚರ್ಚಿಸಿ ಯೋಜನೆ ತಯಾರಿಸಿದ್ದರು. ಸರ್ಕಾರದ ವಿವಿಧ ಯೋಜನೆಗಳಿಗಾಗಿ ತಮ್ಮ ಗ್ರಾಮಗಳಿಂದ ಫಲಾನುಭವಿಗಳ ಆಯ್ಕೆ ಮಾಡಿದ್ದರು. ಈ ಯೋಜನೆಗಳಲ್ಲಿ ಮೂಲ ಸೌಕರ್ಯಗಳು, ಸಾಮಾಜಿಕ- ಸಾಂಸ್ಕೃತಿಕ ವಿಚಾರಗಳು, ಮಹಿಳೆಯರ ಮತ್ತು ಮಕ್ಕಳ ರಕ್ಷಣೆ, ಶಿಕ್ಷಣ, ಭಾಗವಹಿಸುವಿಕೆ... ಈ ಎಲ್ಲಾ ವಿಷಯಗಳಿದ್ದು ಇಡೀ ಗ್ರಾಮೀಣ ಕರ್ನಾಟಕವು ತನ್ನ ಕನಸಿನ ಕರ್ನಾಟಕ ಕಟ್ಟುವ ಬಗೆ ಹೇಗೆ ಎಂಬುದನ್ನು ದಾಖಲಿಸಿದೆ.

ಇದೆಲ್ಲಾ ಸಾಧ್ಯವಾಗಿದ್ದು ನಮ್ಮ ಸಂವಿಧಾನ ನೀಡಿದ ಅವಕಾಶದಿಂದ. ಸಂವಿಧಾನದ 73ನೇ ತಿದ್ದುಪಡಿಯು ‘ಜನ ಭಾಗವಹಿಸುವಿಕೆಯ ಪ್ರಜಾಪ್ರಭುತ್ವ’ಕ್ಕೆ ಮಹತ್ವದ ಕೊಡುಗೆ. ಆದರೆ ಇಷ್ಟಕ್ಕೇ ನಾವು ಹೆಮ್ಮೆಪಟ್ಟುಕೊಳ್ಳುವಂತಿಲ್ಲ. ಯಾಕೆಂದರೆ, ಹೀಗೆ ತಯಾರಾದ ಮುನ್ನೋಟ, ಯೋಜನೆಗಳು ಸ್ಥಳೀಯ ಪಂಚಾಯ್ತಿಗಳ ಕಪಾಟುಗಳಲ್ಲಿ ಭದ್ರವಾಗಿ ಕುಳಿತಿವೆಯೇ ವಿನಾ ಅನುಷ್ಠಾನಗೊಳ್ಳಲಿಲ್ಲ.

ಜನರು ತಮ್ಮ ಕನಸುಗಳನ್ನು ತಾವೇ ಬಿತ್ತಲಿಲ್ಲ. ತಾಲ್ಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಿಂದ ಅವುಗಳಿಗೆ ಹೊರತಾಗಿ ಬೇರೆಯೇ ಬಿತ್ತನೆಗಳಾದವು. ಚುನಾವಣೆಗೆ ತಯಾರಾಗುತ್ತಿರುವ, ಜನ ಮತ ಗಳಿಸುವ ಪ್ರಯತ್ನದಲ್ಲಿ ತೊಡಗಿರುವ ಯಾರಿಗೂ ಜನರ ಕನಸುಗಳು ಕಾಣಿಸಿದಂತಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜನರ ಆಕಾಂಕ್ಷೆಯ ಮುನ್ನೋಟದ ಯೋಜನೆಗಳನ್ನು ಬದಿಗಿಟ್ಟು, ತಮಗೆ ಬೇಕಾದಂತೆ ಯೋಜನೆಗಳನ್ನು ರೂಪಿಸುವಂತಾಯಿತು.

ಮಾತ್ರವಲ್ಲ, ಈ ಎರಡೂವರೆ ದಶಕಗಳಲ್ಲಿ ಸ್ಥಳೀಯ ಸರ್ಕಾರಗಳನ್ನು ಮಣಿಸಲು ನಿರಂತರ ಪ್ರಯತ್ನಗಳು ನಡೆದವು. ಗ್ರಾಮಾಭಿವೃದ್ಧಿಗೆ ನಿಗದಿಯಾದ ಸಂಪನ್ಮೂಲಗಳಲ್ಲಿ ಗ್ರಾಮ ಸರ್ಕಾರದ ಸಂಪನ್ಮೂಲಗಳಲ್ಲದೇ, ಸಂಸದರ ಮತ್ತು ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯ ಹೆಸರಿನಲ್ಲಿ ಒಂದಿಷ್ಟು ಸಂಪನ್ಮೂಲ ಜನರ ಕೈತಪ್ಪಿ ಹೋದರೆ, ಉಳಿದ ಸಂಪನ್ಮೂಲಗಳನ್ನು ವಿವಿಧ ಇಲಾಖೆಗಳು ತಾವೇ ನೇರವಾಗಿ ವಿನಿಯೋಗಿಸುವ ಮೂಲಕ ತಮ್ಮದೇ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿ ತಾವೇ ಅನುಷ್ಠಾನಗೊಳಿಸುತ್ತಿವೆ. ಈ ಇಲಾಖೆಗಳು ವಿವಿಧ ಸವಲತ್ತುಗಳ ವಿತರಕರಾಗಿ ಸ್ಥಳೀಯ ಸರ್ಕಾರವನ್ನು ನೋಡುತ್ತಿವೆಯೇ ಹೊರತು ಸ್ವಯಂ ಸರ್ಕಾರವಾಗಿ ಅಲ್ಲ. ಸ್ಥಳೀಯ ಸರ್ಕಾರಗಳಿಗೆ ಸಂವಿಧಾನದ ಆಶಯದಂತೆ ಅಧಿಕಾರ ಹಸ್ತಾಂತರಗೊಂಡಿಲ್ಲ. ಉದಾಹರಣೆಗೆ ‘ಗ್ರಾಮ ಪಂಚಾಯ್ತಿ ವಾಚನಾಲಯ’ ಎಂದು ಹೆಸರಿದ್ದರೂ ಆ ವಾಚನಾಲಯ ಗ್ರಾಮ ಸರ್ಕಾರಕ್ಕೆ ಉತ್ತರದಾಯಿಯಲ್ಲವೇಕೆ? ಗ್ರಂಥಪಾಲಕರ ಸಂಬಳ, ಅಲ್ಲಿಯ ವೆಚ್ಚ, ವರದಿ ಎಲ್ಲವನ್ನೂ ಗ್ರಂಥಾಲಯ ಇಲಾಖೆ ನಿರ್ವಹಿಸುತ್ತದೆ.

ಗ್ರಂಥಾಲಯ ಮಾತ್ರವಲ್ಲ, ಸಂವಿಧಾನದಲ್ಲಿ ನಮೂದಿಸಿದ 29 ವಿಷಯಗಳೂ ಗ್ರಾಮ ಸರ್ಕಾರದ ಅಧೀನಕ್ಕೆ ಬಂದು, ಆ ವಿಷಯಗಳಿಗೆ ಸಂಬಂಧಪಟ್ಟ ಕಾರ್ಯಕ್ರಮ, ಹಣಕಾಸು, ಕಾರ್ಯನಿರ್ವಾಹಕರು ಸಹ ಗ್ರಾಮ ಸರ್ಕಾರಕ್ಕೆ ಹಸ್ತಾಂತರಗೊಂಡರೆ ಮಾತ್ರ ಸಂವಿಧಾನದ 73ನೇ ತಿದ್ದುಪಡಿಯ ಆಶಯ ಈಡೇರಿ ‘ಗ್ರಾಮ ಸ್ವರಾಜ್ಯ’ದ ಕನಸು ನನಸಾದೀತು. ಕಳೆದ ಎರಡೂವರೆ ದಶಕಗಳಲ್ಲಿ ಅಧಿಕಾರ ಹಸ್ತಾಂತರದ ಪ್ರಯತ್ನ ನಡೆಯಲಿಲ್ಲ. ಆದರೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ವ್ಯಕ್ತಿಗಳ, ಸಂಘಟನೆಗಳ ನಿರಂತರ ಹೋರಾಟ, ಅಧ್ಯಯನ ಮತ್ತು ಚಳವಳಿಗಳಿಂದಾಗಿ ಇಂದು ಸ್ಥಳೀಯ ಸರ್ಕಾರಗಳು ಸ್ವಲ್ಪ ಮಟ್ಟಿಗಾದರೂ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿವೆ.

ಇವೆಲ್ಲಾ ಏಳು ಬೀಳುಗಳ ನಡುವೆ, ಈಗ ಬೆಳಕಿನ ಕಿರಣ ಕಾಣತೊಡಗಿದೆ. ಸಂವಿಧಾನದ 73ನೇ ತಿದ್ದುಪಡಿಗೆ 25 ವರ್ಷ ತುಂಬುತ್ತಿದೆ. ಕರ್ನಾಟಕದಲ್ಲಿ ಅಧಿಕಾರ ವಿಕೇಂದ್ರೀಕರಣವಾಗಿ 30 ವರ್ಷ ದಾಟಿದ ಈ ಸಂದರ್ಭದಲ್ಲಿ, ಸಂವಿಧಾನ ತಿದ್ದುಪಡಿ ಮತ್ತು ಕಳೆದ ವರ್ಷ ಕರ್ನಾಟಕ ಸರ್ಕಾರ ತಿದ್ದುಪಡಿ ಮಾಡಿ ತಯಾರಿಸಿದ ‘ಗ್ರಾಮ ಸ್ವರಾಜ್ ಕಾಯ್ದೆ’ಯನ್ನು ಮುಂದಿಟ್ಟುಕೊಂಡು ಗ್ರಾಮಾಭಿವೃದ್ಧಿಯ ಬಗ್ಗೆ ಚರ್ಚಿಸುವ ಸಮಯ ಬಂದಿದೆ. ಮುಂದೇನು ಎನ್ನುವ ನಿರ್ಧಾರ ಮಾಡಿ ಮುನ್ನಡೆಯುವ ಕಾಲ ಬಂದಿದೆ. ಬರಿಯ ಭಾಷಣ, ಚರ್ಚೆ, ಸಮಾರಂಭ ಮಾತ್ರ ಮಾಡದೆ ವಿಚಾರ ವಿಮರ್ಶೆ ಮಾಡಿ ಕಾರ್ಯತಂತ್ರ ರೂಪಿಸಿ ಮುನ್ನಡೆಯುವ ಅಗತ್ಯವಿದೆ.
ಲೇಖಕ: ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಸಹಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT