ಬೆಂಗರೆ: ಪರಿಸ್ಥಿತಿ ಶಾಂತ

7

ಬೆಂಗರೆ: ಪರಿಸ್ಥಿತಿ ಶಾಂತ

Published:
Updated:

ಮಂಗಳೂರು: ಬಿಜೆಪಿ ಕಾರ್ಯಕರ್ತರು ಮತ್ತು ಮುಸ್ಲಿಮರ ನಡುವಿನ ಘರ್ಷಣೆಯಿಂದ ಉದ್ವಿಗ್ನಗೊಂಡಿದ್ದ ನಗರದ ತಣ್ಣೀರುಬಾವಿಯ ಕಸಬಾ ಬೆಂಗರೆ ಹಾಗೂ ತೋಟ ಬೆಂಗರೆ ಪ್ರದೇಶದಲ್ಲಿ ಗುರುವಾರದಿಂದ ಪರಿಸ್ಥಿತಿ ಶಾಂತವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್‌ ಬಂದೋಬಸ್ತ್‌ ಮುಂದುವರಿದಿದೆ.

ಮಂಗಳವಾರ ರಾತ್ರಿ ಉಡುಪಿಯಲ್ಲಿ ನಡೆದ ಮೀನುಗಾರರ ಸಮಾವೇಶ ಮುಗಿಸಿ ವಾಪಸಾಗುತ್ತಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ಕಸಬಾ ಬೆಂಗರೆ ಮುಸ್ಲಿಮರ ನಡುವೆ ಘರ್ಷಣೆ ನಡೆದಿತ್ತು. ತಡರಾತ್ರಿವರೆಗೂ ಎರಡು ಬಾರಿ ಗಲಾಟೆ ನಡೆದಿತ್ತು. ಕಲ್ಲು ತೂರಾಟದಲ್ಲಿ ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದರು. ಪರಿಸ್ಥಿತಿ ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಿ, ಗಾಳಿಯಲ್ಲಿ ಗುಂಡು ಹಾರಿಸಲಾಗಿತ್ತು.

‘ಬೆಂಗರೆಯಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ಪರಿಸ್ಥಿತಿ ಶಾಂತವಾಗಿದೆ. ಗುರುವಾರವೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಎರಡೂ ಕಡೆಯ ಪ್ರಮುಖರು ಸಭೆಸೇರಿ ಶಾಂತಿ ಕಾಪಾಡಲು ನಿರ್ಧರಿಸಿದ್ದಾರೆ. ಪೊಲೀಸರು ಸ್ವಯಂಪ್ರೇರಿತವಾಗಿ ದಾಖಲಿಸಿರುವ ಪ್ರಕರಣ ಸೇರಿದಂತೆ ಮೂರು ಎಫ್‌ಐಆರ್‌ ದಾಖಲಿಸಲಾಗಿದೆ. ಘಟನೆಗೆ ಕಾರಣರಾದ ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ. ಶಂಕಿತ ಆರೋಪಿಗಳನ್ನು ಗುರುತಿಸಿ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಚೋದನೆ–ಆರೋಪ: ಮೀನುಗಾರ ಸಮುದಾಯದವರ ಬಸ್‌ಗೆ ಬೆಂಗರೆ ಪ್ರದೇಶದಲ್ಲಿ ಕಲ್ಲು ತೂರಾಟ ನಡೆಸಿದ ಘಟನೆ ಅಕಸ್ಮಿಕವಲ್ಲ. ಅದು ಕಾಂಗ್ರೆಸ್‌ ಪ್ರೇರಿತ ಗಲಭೆ ಎಂದು ಸಂಸದ ನಳಿನ್‌ ಕುಮಾರ್ ಕಟೀಲ್‌ ಆರೋಪಿಸಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಮಿತ್‌ ಶಾ ಅವರು ಕರಾವಳಿಗೆ ಭೇಟಿ ನೀಡಿದರೆ ಕೋಮು ಗಲಭೆ ಆಗುತ್ತದೆ ಎಂದು ಕಾಂಗ್ರೆಸ್‌ ನಾಯಕರು ಒಂದು ತಿಂಗಳಿನಿಂದ ಹೇಳುತ್ತಲೇ ಬಂದಿದ್ದರು. ಹಲ್ಲೆ ಮಾಡಿದವರನ್ನೇ ಬೆಂಬಲಿಸಿ ಸ್ಥಳೀಯ ಶಾಸಕರು ಮಾತನಾಡಿದ್ದಾರೆ. ಅವರ ಮಾತುಗಳನ್ನು ಗಮನಿಸಿದ ಬಳಿಕ ಇದು ಕಾಂಗ್ರೆಸ್‌ ಪ್ರೇರಿತ, ಪೂರ್ವಯೋಜಿತ ಹಲ್ಲೆ ಎಂಬುದು ಅರಿವಿಗೆ ಬಂದಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry