ಬುಧವಾರ, ಡಿಸೆಂಬರ್ 11, 2019
26 °C
2017ರ ಮಾರ್ಚ್‌ ಅಂತ್ಯದ ಲೆಕ್ಕ ಪರಿಶೋಧನಾ ವರದಿ

₹ 1,265.37 ಕೋಟಿ ನಷ್ಟ: ಸಿಎಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

₹ 1,265.37 ಕೋಟಿ ನಷ್ಟ: ಸಿಎಜಿ

ಬೆಂಗಳೂರು: ರಾಜ್ಯ ಸರ್ಕಾರ ಸ್ವಾಮ್ಯದ ಸಾರ್ವಜನಿಕ ವಲಯದ ಉದ್ದಿಮೆಗಳು 2017ರ ಮಾರ್ಚ್‌ ಅಂತ್ಯಕ್ಕೆ ₹ 1,265.37 ಕೋಟಿ ಮೊತ್ತದ ನಷ್ಟ ಅನುಭವಿಸಿವೆ ಎಂದು ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ.

ಒಟ್ಟು 90 ಉದ್ದಿಮೆಗಳ ಪೈಕಿ 22 ನಷ್ಟ ಅನುಭವಿಸಿವೆ. 52 ಉದ್ದಿಮೆಗಳು ₹ 1,420.49 ಕೋಟಿ ಲಾಭ ಗಳಿಸಿವೆ ಎಂದು ವಿಧಾನಸಭೆಯಲ್ಲಿ ಗುರುವಾರ ಮಂಡಿಸಿದ ವರದಿಯಲ್ಲಿ ತಿಳಿಸಲಾಗಿದೆ.

ಕರ್ನಾಟಕ ನೀರಾವರಿ ನಿಗಮ ₹ 477 ಕೋಟಿ, ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ (ಹೆಸ್ಕಾಂ) ₹ 373 ಕೋಟಿ, ಗುಲ್ಬರ್ಗ ವಿದ್ಯುತ್‌ ಸರಬರಾಜು ಕಂಪೆನಿ ₹ 131 ಕೋಟಿ ನಷ್ಟ ಅನುಭವಿಸಿದೆ.

2016 ಮಾರ್ಚ್‌ ಅಂತ್ಯಕ್ಕೆ ನಷ್ಟದ ಪ್ರಮಾಣ ₹ 1,570.21 ಕೋಟಿ ಇತ್ತು. ಅದಕ್ಕೆ ಕೋಟಿ ಹೋಲಿಸಿದರೆ ನಷ್ಟದ ಪ್ರಮಾಣದ ಶೇ 19.4ರಷ್ಟು ಕಡಿಮೆಯಾಗಿದೆ. ಆದರೆ, ಲಾಭದ ಪ್ರಮಾಣ ಬಹುತೇಕ ಅಷ್ಟೆ ಇದೆ. ಕರ್ನಾಟಕ ಗ್ರಾಮೀಣ ಮೂಲಸೌಲಭ್ಯ ಅಭಿವೃದ್ಧಿ ನಿಗಮ ಅತೀ ಹೆಚ್ಚು ₹ 110 ಕೋಟಿ ಲಾಭ ಗಳಿಸಿದೆ ಎಂದು ಈ ವರದಿಯಲ್ಲಿ ವಿವರಿಸಲಾಗಿದೆ.

2016–17ನೇ ಸಾಲಿನಲ್ಲಿ ಎಂಟು ಹೊಸ ಕಂಪನಿಗಳನ್ನು ಸ್ಥಾಪಿಸಲಾಗಿದೆ. ಆದರೆ ಈ ಕಂಪೆನಿಗಳು ಮೊದಲ ಲೆಕ್ಕವನ್ನು ಇನ್ನೂ ಅಂತಿಮಗೊಳಿಸಿಲ್ಲ. 2014ರ ಮಾರ್ಚ್‌ನಲ್ಲಿ ರಚನೆಯಾದ ಬೆಂಗಳೂರು ಸಬ್‌ ಅರ್ಬನ್‌ ರೈಲು ಕಂಪನಿ ಕೂಡಾ ಇನ್ನೂ ಮೊದಲ ಲೆಕ್ಕ ಸಲ್ಲಿಸಿಲ್ಲ ಎಂದು ವರದಿ ತಿಳಿಸಿದೆ.

ಎಲ್ಲ ಕಂಪನಿಗಳು ಸೇರಿ ಒಟ್ಟು 1.76 ಲಕ್ಷ ಉದ್ಯೋಗಿಗಳಿದ್ದಾರೆ. ಕಾರ್ಯಸ್ಥಗಿತಗೊಳಿಸಿರುವ 12 ಕಂಪನಿಗಳು ಮತ್ತು ಕಾರ್ಯನಿರ್ವಹಿಸುತ್ತಿರುವ ಮೂರು ಕಂಪನಿಗಳನ್ನು ಮುಚ್ಚುವ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿದೆ. ಅಲ್ಲದೆ, ಎಂಟು ಕಾರ್ಯನಿರತ ಕಂಪನಿಗಳನ್ನು ಖಾಸಗೀಕರಣಗೊಳಿಸಲು ಮತ್ತು ಒಂದು ಕಂಪನಿಯನ್ನು ಪುನಶ್ಚೇತನಗೊಳಿಸಲು ತೀರ್ಮಾನಿಸಲಾಗಿದೆ ಎಂದೂ ಉಲ್ಲೇಖಿಸಿದೆ.

ರಾಯಚೂರಿನ ಶಾಖೋತ್ಪನ್ನ ವಿದ್ಯುತ್‌ ಘಟಕ ನಿರೀಕ್ಷೆಯಂತೆ ಕಾರ್ಯನಿರ್ವಹಿಸದೇ ಇದ್ದುದರಿಂದ ವಿದ್ಯುತ್‌ ಉತ್ಪಾದನೆ ಕೊರತೆಯಾಗಿದೆ. ಕಲ್ಲಿದ್ದಲು ಬಳಕೆಯಲ್ಲಿ ಸಮಸ್ಯೆ, ಹಾರುಬೂದಿಯ ವಿಲೇವಾರಿಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದಿರುವುದು, ಅಸಮರ್ಪಕ ಕ್ರಿಯಾ ಯೋಜನೆಯಿಂದ ನಷ್ಟ ಉಂಟಾಗಿದೆ ಎಂದು ವರದಿ ಹೇಳಿದೆ.

ಭಾರಿ ಮತ್ತು ಮಧ್ಯಮ ನೀರಾವರಿಗೆ ಸಂಬಂಧಪಟ್ಟ 19 ಯೋಜನೆಗಳ ಪೈಕಿ 3 ಯೋಜನೆಗಳು ಮಾತ್ರ ನಿರ್ದಿಷ್ಟ ಸಮಯದಲ್ಲಿ ಪೂರ್ಣಗೊಂಡಿವೆ. 14 ಯೋಜನೆಗಳ ಕಾಮಗಾರಿ ಕಾಲಮಿತಿಯೊಳಗೆ ಪೂರ್ಣಗೊಂಡಿಲ್ಲ. 2005 ಮತ್ತು 2006ರಲ್ಲಿ 5968 ಹೆಕ್ಟೇರ್‌ ಪ್ರದೇಶದಲ್ಲಿ ಹೊಸ ಕಾಮಗಾರಿ ಮತ್ತು 42,400 ಹೆಕ್ಟೇರ್‌ ಪ್ರದೇಶದಲ್ಲಿ ನೀರಾವರಿ ನಾಲೆಗಳ ನಿರ್ಮಾಣ 12 ವರ್ಷ ಕಳೆದರೂ ಪೂರ್ಣಗೊಂಡಿಲ್ಲ ಎಂದು ವರದಿ ತಿಳಿಸಿದೆ.

***

₹3,172 ಕೋಟಿ ಮೌಲ್ಯದ ಪಾಳು ಭೂಮಿ

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ₹ 3,172 ಕೋಟಿ ಮೌಲ್ಯದ 30,505 ಎಕರೆ ಅಭಿವೃದ್ಧಿಯಾಗದ ಭೂಮಿ ಹೊಂದಿದೆ. 38 ಕೈಗಾರಿಕಾ ಪ್ರದೇಶಗಳಲ್ಲಿ ಕ್ರಿಯಾಶೀಲವಾಗಿದ್ದ 4,070 ಘಟಕಗಳಿಗೆ ಪ್ರಾಥಮಿಕ ಮೂಲಸೌಲಭ್ಯಗಳನ್ನೇ ಒದಗಿಸಿಲ್ಲ. ಕೈಗಾರಿಕಾ ಪ್ರದೇಶ ಹಂಚಿಕೆ ಪಾರದರ್ಶಕವಾಗಿ ನಡೆದಿಲ್ಲ. ವಾಣಿಜ್ಯ ಉತ್ಪಾದನೆಗೆ ನೀಡಿದ್ದ ರಿಯಾಯಿತಿ ಅವಧಿ ಮುಗಿದಿದ್ದರೂ 467 ಘಟಕಗಳ 1,113 ಎಕರೆ ಭೂಮಿ ಮರು ವಶಪಡಿಸಿಕೊಂಡಿಲ್ಲ ಎಂದು ಸಿಎಜಿ ವರದಿ ಹೇಳಿದೆ.

***

ವರದಿಯಲ್ಲಿರುವ ಪ್ರಮುಖ ಅಂಶಗಳು

* ಟೆಂಡರ್‌ ಷರತ್ತು ಉಲ್ಲಂಘಿಸಿದ ಕಾರಣಕ್ಕೆ ಕರ್ನಾಟಕ ನೀರಾವರಿ ನಿಗಮದಿಂದ ಗುತ್ತಿಗೆದಾರನಿಗೆ ₹ 11.11 ಕೋಟಿ ಲಾಭ

* ರಸ್ತೆ ನಿರ್ಮಾಣಕ್ಕೆ ಭೂಮಿ ಹಸ್ತಾಂತರಿಸದ ಕಾರಣಕ್ಕೆ ಗುತ್ತಿಗೆದಾರನಿಗೆ ಕೆಆರ್‌ಡಿಎಲ್‌ನಿಂದ ₹ 32.20 ಕೋಟಿ ಪರಿಹಾರ

* ಡೀಸೆಲ್‌ ಜನರೇಟರ್‌ ಸ್ಥಾವರಕ್ಕೆ ಬಿಡಿಭಾಗ ಖರೀದಿಸಿದ್ದರಿಂದ ಕೆಪಿಸಿಎಲ್‌ಗೆ ₹ 5.04 ಕೋಟಿ ನಷ್ಟ

* ಮೇಲ್ವಿಚಾರಣೆ ಕೊರತೆಯಿಂದ ಗುಲ್ಬರ್ಗ ವಿದ್ಯುತ್‌ ಸರಬರಾಜು ಕಂಪನಿಗೆ ₹ 1.17 ಕೋಟಿ ನಷ್ಟ

* ಬ್ಯಾಂಕ್‌ ಚಾಲ್ತಿ ಖಾತೆಗೆ ಆಟೋ– ಸ್ವೀಪ್‌ ಅಳವಡಿಸಿದ ಕಾರಣ ಕಾವೇರಿ ನೀರಾವರಿ ನಿಗಮಕ್ಕೆ ₹ 1.16 ಕೋಟಿ ನಷ್ಟ

* 10 ವರ್ಷ ಕಳೆದರೂ ಉದ್ಯಮ ಪೂರ್ಣಗೊಳಿಸದ ಕರಕುಶಲ ಅಭಿವೃದ್ಧಿ ನಿಗಮಕ್ಕೆ ₹ 75.97 ಲಕ್ಷ ನಷ್ಟ

 

 

ಪ್ರತಿಕ್ರಿಯಿಸಿ (+)