ಸೋಮವಾರ, ಡಿಸೆಂಬರ್ 9, 2019
22 °C

ಬಗರ್‌ ಹುಕುಂ ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಗರ್‌ ಹುಕುಂ ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಅವಕಾಶ

ಬೆಂಗಳೂರು: ಬಗರ್‌ ಹುಕುಂ ಸಾಗುವಳಿ ಮಾಡಿರುವ ರೈತರು ಸಕ್ರಮ ಕೋರಿ ಅರ್ಜಿ ಸಲ್ಲಿಸುವ ಅವಧಿ ವಿಸ್ತರಿಸಲು ಅನುವಾಗುವಂತೆ ರಾಜ್ಯ ಸರ್ಕಾರ ಮಂಡಿಸಿದ್ದ ಮಸೂದೆಗೆ ವಿಧಾನಸಭೆ ಅನುಮೋದನೆ ನೀಡಿದೆ.

‘ಕರ್ನಾಟಕ ಭೂ ಕಂದಾಯ(ತಿದ್ದುಪಡಿ) ಮಸೂದೆ 2018’ ಅನ್ನು ಮಂಡಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ‘1990ರವರೆಗೆ ಸಾಗುವಳಿ ಮಾಡುತ್ತಿದ್ದವರಿಗೆ ಅರ್ಜಿ ಸಲ್ಲಿಸಲು ಅವಕಾಶ ಇತ್ತು. ಮಸೂದೆಯಿಂದಾಗಿ 2005 ನೇ ಇಸವಿವರೆಗೆ ಸರ್ಕಾರಿ ಭೂಮಿ ಸಾಗುವಳಿ ಮಾಡಿದವರು ಗರಿಷ್ಠ 4 ಎಕರೆ 38 ಗುಂಟೆ ಸಾಗುವಳಿ ಚೀಟಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ’ ಎಂದರು.

‘ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು ನನ್ನ ಜೀವನದ ಮಹೋನ್ನತ ಗುರಿಯಾಗಿತ್ತು. ಅರಣ್ಯ ಭೂಮಿ ಸಾಗುವಳಿ ಮಾಡಿದವರಿಗೆ ಹಕ್ಕುಪತ್ರ ನೀಡಲು ಅವಕಾಶ ಇದ್ದರೂ ಅಧಿಕಾರಿಗಳು ಆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಈಗ ಅವರಿಗೆಲ್ಲಾ ಅ, ಆ, ಇ, ಈ ಹೇಳಿಕೊಟ್ಟಂತಾಗಿದೆ’ ಎಂದರು.

‘ತಹಸೀಲ್ದಾರ್‌ಗಳಿಗೆ ಆರ್‌ಟಿಸಿ ಜವಾಬ್ದಾರಿ ಇದೆ. ಅದನ್ನು ಸರಿಯಾಗಿ ನಿರ್ವಹಿಸಬೇಕಾಗಿದೆ. ಯಾರ ಕೈಯಲ್ಲಿ ಅಸ್ತ್ರ ಇದೆಯೋ ಅವರೇ ಅದನ್ನು ಬಳಸುತ್ತಿಲ್ಲ’ ಎಂದು ವಿಷಾದಿಸಿದರು.

ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌: ಬೆಂಗಳೂರು ಡಾ.ಬಿ.ಆರ್. ಅಂಬೇಡ್ಕರ್ ಅರ್ಥಶಾಸ್ತ್ರ ವಿದ್ಯಾಲಯಕ್ಕೆ ವಿಶ್ವವಿದ್ಯಾಲಯ ಮಾನ್ಯತೆ ನೀಡುವ ಮಸೂದೆಗೆ ವಿಧಾನಸಭೆ ಅಂಗೀಕಾರ ನೀಡಿತು. ದೇಶದ ಉನ್ನತ ಮಟ್ಟದ ಅರ್ಥಶಾಸ್ತ್ರ ಸಂಸ್ಥೆಯಾಗಿ ಅಭಿವೃದ್ಧಿಪಡಿಸಲು ಮಸೂದೆ ಅವಕಾಶ ಕಲ್ಪಿಸಲಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.

ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿ.ವಿ: ಕಲಬುರ್ಗಿಯಲ್ಲಿ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಸ್ಥಾಪನೆಗೆ ಸಹಾಯಕವಾಗುವ ಮಸೂದೆಗೆ ವಿಧಾನಸಭೆ ಅಂಗೀಕಾರ ನೀಡಿತು.

ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ: ಮಂಗಳೂರಿನ ಪಿಲಿಕುಳ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ಉದ್ದೇಶಕ್ಕಾಗಿ ಪ್ರಾಧಿಕಾರ ರಚಿಸುವ ’ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ’ ಮಸೂದೆಗೆ ವಿಧಾನಸಭೆ ಅಂಗೀಕಾರ ನೀಡಿತು.

ಪ್ರತಿಕ್ರಿಯಿಸಿ (+)