ತಮಿಳು ಮತದಾರರು ಮತ್ತು ಕಮಲ್‌ ರಾಜಕಾರಣ

7

ತಮಿಳು ಮತದಾರರು ಮತ್ತು ಕಮಲ್‌ ರಾಜಕಾರಣ

Published:
Updated:

‘ಸಿನಿಮಾ ಮತ್ತು ರಾಜಕಾರಣದ ನಡುವೆ ಹೆಚ್ಚು ವ್ಯತ್ಯಾಸವಿಲ್ಲ...ಎರಡೂ  ಕೂಡ ಜನರ ಕುರಿತಾದವು’

–ತಮಿಳುನಾಡಿನ ಮದು ರೆಯಲ್ಲಿ ಬುಧವಾರ ಸಂಜೆ ಹೊಸ ರಾಜಕೀಯ ಪಕ್ಷವನ್ನು ಘೋಷಿಸುವುದಕ್ಕೆ ಕೆಲವು ಗಂಟೆಗಳ ಮೊದಲು ನಟ ಕಮಲ್‌ ಹಾಸನ್‌ ಅವರು ರಾಮೇಶ್ವರದಲ್ಲಿ ನೀಡಿದ ಹೇಳಿಕೆ ಇದು.

ಹೊಸ ಪಕ್ಷವನ್ನು ಅಧಿಕೃತವಾಗಿ ಘೋಷಿಸುವ ಕಾರ್ಯಕ್ರಮವನ್ನು ಜನರಿಗೆ ಮಾಹಿತಿ ಮತ್ತು ಮನರಂಜನೆ ನೀಡುವ ಸಮಾರಂಭವಾಗಿ ಮಾಡಲು ಅವರು ಯಾಕೆ ಯತ್ನಿಸಿದರು ಎಂಬುದನ್ನು ಇದು ವಿವರಿಸುತ್ತದೆ. ಜನರು ನೇರವಾಗಿ ಕಳುಹಿಸಿದ ಪ್ರಶ್ನೆಗಳಿಗೆ ಕಮಲ್‌ ಅವರು ನುರಿತ ನಟನ ರೀತಿಯಲ್ಲೇ ಜಾಣತನ, ವ್ಯಂಗ್ಯ ಮತ್ತು ಕಟುವಾಸ್ತವಗಳಿಂದ ಕೂಡಿದ ಉತ್ತರಗಳನ್ನು ನೀಡಿದರು.

ದೊಡ್ಡ ಪರದೆಗಳಲ್ಲಿ ಮೊನಚು, ಹಾಸ್ಯ ಮಿಶ್ರಿತ (ಪಂಚಿಂಗ್‌) ಸಂಭಾಷಣೆಗಳನ್ನು ಇಷ್ಟಪಡುವ ನೆಲದಲ್ಲಿ ನಡೆದ ಕಮಲ್ ಹಾಸನ್‌ ಇಳಿಸಂಜೆ ಕಾರ್ಯಕ್ರಮ ‘ಪೈಸಾ ವಸೂಲ್‌’ ಆಗಿತ್ತು. ಸಿನಿಮಾ ಭಾಷೆಯಲ್ಲಿ ಹೇಳುವುದಾದರೆ, ಮೊದಲ ದಿನದ ಮೊದಲ ಪ್ರದರ್ಶನ ಯಶಸ್ವಿಯಾಗಿ ನಡೆದಿದೆ.

ಕಮಲ್‌ ಅವರ ತಾರಾ ವರ್ಚಸ್ಸನ್ನು ಪರಿಗಣಿಸುವುದಾರೆ, ಅವರ ಹೊಸ ಪಕ್ಷ ಮಕ್ಕಳ್‌ ನೀದಿ ಮಯ್ಯಂ (ಜನರ ನ್ಯಾಯ ಕೇಂದ್ರ) ಭಾರಿ ಆಸಕ್ತಿ ಕೆರಳಿಸಿದೆ. ಆದರೆ, ಸಾರ್ವಜನಿಕ ಸಭೆಯಲ್ಲಿ ಅವರು ನೀಡಿರುವ ಹೇಳಿಕೆಗಳೆಲ್ಲ ರಾಜಕಾರಣಿ ಕಮಲ್‌ ಹಾಸನ್‌ ಹೇಗಿರಬಹುದು ಎಂಬುದರ ಮಿಂಚಿನನೋಟವನ್ನು ಮಾತ್ರ ನೀಡಿವೆ. ಅವರು ಬಿತ್ತಿರುವ ರಾಮರಾಜ್ಯದ ಕನಸು ಮತ್ತು ಪ್ರಸ್ತಾಪಿಸಿರುವ ವಿಚಾರಗಳಲ್ಲಿ ಮಿತಿಮೀರಿದ ಆದರ್ಶವಾದವಿದೆ. ‘ಹಾಸನ್ ಅವರದ್ದು ಅಸಾಧ್ಯವಾದ ಧ್ಯೇಯೋದ್ದೇಶ’ ಎಂದು ಅವರ ಟೀಕಾಕಾರರು ಬಣ್ಣಿಸಿದ್ದಾರೆ.

ತುಂಬಾ ಜನರು ಕಮಲ್‌ ನಿರ್ಧಾರದ ಬಗ್ಗೆ ‌ತೀರಾ ನಿಷ್ಠುರವಾಗಿ ಮತ್ತು ತರಾತುರಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂಬುದು ನನ್ನ ಭಾವನೆ. ಅವರು ಪಕ್ಷಕ್ಕೆ ಈಗಷ್ಟೇ ಚಾಲನೆ ನೀಡಿದ್ದಾರೆ. ಪಕ್ಷವನ್ನು ಕಟ್ಟಿ ಬೆಳೆಸುವುದೆಂದರೆ ಟ್ವೆಂಟಿ–ಟ್ವೆಂಟಿ ಪಂದ್ಯ ಅಲ್ಲ. ಅದು ಸುದೀರ್ಘವಾದ ಮತ್ತು ಅತ್ಯಂತ ಹೆಚ್ಚಿನ ಶ್ರಮ ಬೇಡುವ ಪ್ರಕ್ರಿಯೆ. ಚುನಾವಣಾ ರಾಜಕಾರಣದಲ್ಲಿ ಭಾಷಣಗಳಿಗಿರುವ ಮಹತ್ವ ಶೇ 10ರಷ್ಟು ಮಾತ್ರ. ಉಳಿದ ಶೇ 90ರಷ್ಟು ಪ್ರಾಮುಖ್ಯ ಇರುವುದು ಚುನಾವಣಾ ಖರ್ಚಿಗೆ ಬೇಕಾದ ಹಣ ಮತ್ತು ಮತಗಟ್ಟೆ ಮಟ್ಟದಲ್ಲಿನ ನಿರ್ವಹಣೆಗೆ.

ತಮ್ಮ ಯೋಜನೆಗಳಿಗೆ ನ್ಯಾಯಯುತವಾದ (ಕ್ಲೀನ್‌ ಮನಿ) ಹಣವನ್ನೇ ಸಂಗ್ರಹಿಸುವ ನಿರೀಕ್ಷೆಯಲ್ಲಿ ಕಮಲ್‌ ಇದ್ದಾರೆ. ಆದರೆ, ಭಾರತದ ರಾಜಕಾರಣವನ್ನು ನೋಡಿದರೆ, ಈ ವಿಷಯದಲ್ಲಿ ಅವರ ಮುಂದೆ ಕೆಲವು  ಸವಾಲುಗಳಿವೆ. ರಾಜಕೀಯ ಎಂಬುದು, ಕಮಲ್‌ ಹಾಸನ್‌ ಇದುವರೆಗೆ ಬರೆಯದಿರುವ ಚಿತ್ರಕಥೆ. ಅವರೀಗ, ರಾಜಕಾರಣದ ಉದ್ದಿಮೆಯಲ್ಲಿ ಪಳಗಿದ ವೃತ್ತಿಪರರ ಮುಂದೆ  ತರಬೇತಿ ನಿರತ ವಿದ್ಯಾರ್ಥಿಯಂತೆ (ಇಂಟರ್ನಿ) ಕಾಣುತ್ತಾರೆ. ಸದ್ಯ, ತಮಿಳುನಾಡಿನ ಜನ ಹೆಚ್ಚೆಂದರೆ ಅವರ ಮಾತುಗಳನ್ನು ಆಲಿಸಬಹುದು ಮತ್ತು ಒಂದಷ್ಟು ಕಾಲಾವಕಾಶ ನೀಡಬಹುದಷ್ಟೆ.

ರಾಜಕೀಯದಲ್ಲಿ ಬೇರೂರಲು ಕಮಲ್‌ ಅವರಿಗೆ ಅನುಕೂಲಕರ ಅಂಶಗಳಿವೆ. ರಾಜಕೀಯ ಅಖಾಡಕ್ಕೆ ಅತ್ಯಂತ ಸೂಕ್ತ ಸಮಯದಲ್ಲೇ ಅವರು ಧುಮುಕಿದ್ದಾರೆ. ಪ್ರಸ್ತುತ ರಾಜಕಾರಣದಲ್ಲಿರುವವರು ಬಳಲಿದಂತೆ ಕಂಡು ಬರುತ್ತಿರುವ ಮತ್ತು ಸಮಾಜವು ಬದಲಾವಣೆಗಾಗಿ ಹಂಬಲಿಸುತ್ತಿರುವ ಸಂದರ್ಭದಲ್ಲಿ ಅವರ ರಾಜಕೀಯ ಪ್ರವೇಶವಾಗಿದೆ. ರಾಜ್ಯವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ತಾವು ಸೂಕ್ತ ವ್ಯಕ್ತಿ ಮತ್ತು ಸಮರ್ಥ ನಾಯಕನಾಗುವ ಎಲ್ಲ ಅರ್ಹತೆಗಳೂ ತಮಗಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡುವುದು ಅವರ ಮುಂದಿರುವ ಕೆಲಸ. ಇದ್ದುದನ್ನು ಇದ್ದ ಹಾಗೆ ಹೇಳುವ ಛಾತಿ ಮತ್ತು ಯಾವುದೇ ವಿಚಾರದಲ್ಲಿ ಸ್ಪಷ್ಟವಾದ ನಿಲುವು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿರುವುದು ಅವರಿಗೆ ವರವಾಗಿ ಪರಿಣಮಿಸಬಹುದು.

ಚುನಾವಣೆಯ ಸಂದರ್ಭದಲ್ಲಿ ಮತದಾರರಿಗೆ ಹಣ ಹಂಚಿಕೆ ಮತ್ತು ಉಡುಗೊರೆಗಳ ಆಮಿಷ ಒಡ್ಡುವ ಸಂಪ್ರದಾಯ ಇರುವ ತಮಿಳುನಾಡಿನಲ್ಲಿ ನಿರ್ದಾಕ್ಷಿಣ್ಯ ನಿಲುವು ಹೊಂದಿದ್ದರೆ ಅ‍ಪಾಯ ಕಟ್ಟಿಟ್ಟ ಬುತ್ತಿ.

ಒಂದು ಮತಕ್ಕೆ ₹6,000 ಕೊಡಲು ತಮ್ಮಿಂದ ಸಾಧ್ಯವಿಲ್ಲ ಎ‌ಂದು ಕಮಲ್‌ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ‘ನಾನು ಕ್ವಾರ್ಟರ್‌ (ಮದ್ಯ), ಸ್ಕೂಟರ್‌ (ಉಡುಗೊರೆ) ಯಾವುದನ್ನೂ ಕೊಡುವುದಿಲ್ಲ’ ಎಂದು ಅವರು ಘೋಷಿಸಿದ್ದಾರೆ. ಬೇರೆ ಪಕ್ಷಗಳು ಹಣದ ಕಂತೆಗಳನ್ನು ತೋರಿಸಿ ಆಮಿಷ ಒಡ್ಡುವಾಗ ಮತದಾರರು ಕಮಲ್‌ ಅವರ ಮಾದರಿ ರಾಜಕಾರಣವನ್ನು ಅಪ್ಪಿಕೊಳ್ಳುತ್ತಾರೆಯೇ ಎಂಬುದು ಪ್ರಶ್ನೆ. ಇಲ್ಲಿ ಅಸ್ಮಿತೆಯ ರಾಜಕಾರಣವೂ ಇದೆ. ಕಮಲ್‌ ಅವರನ್ನು ‘ನಮ್ಮವರ್’ (ನಮ್ಮವ) ಎಂದು ಕರೆಯುವ ಮೂಲಕ ತಮಿಳಿನ  ಪ್ರತಿಷ್ಠೆ, ಆತ್ಮಗೌರವದ ಬಲವಾದ ಪ್ರತಿಪಾದನೆ ಮಾಡಿದಂತಾಗಿದೆ. ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಪಕ್ಷವು ಏಕರೂ‍ಪದ ಭಾರತ ಸೃಷ್ಟಿಗೆ ಯತ್ನಿಸುತ್ತಿರುವಂತೆ ಕಾಣುತ್ತಿರುವ ಸಮಯದಲ್ಲಿ ಕಮಲ್‌ ಭಾರತದ ಭಿನ್ನರೂಪತೆಗೆ ಪ್ರಾಶಸ್ತ್ಯ ನೀಡುತ್ತಿದ್ದಾರೆ. ತಮಿಳುನಾಡಿನ ಭಾಷೆ, ಹಾಡು ಮತ್ತು ಅಭಿವೃದ್ಧಿ ಪಥದಲ್ಲಿ ಸಾಗುವ ಅದರ ಮಹತ್ವಾಕಾಂಕ್ಷೆಯಲ್ಲಿ ತಮಿಳು ಪ್ರತಿಷ್ಠೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.

ಕುತೂಹಲಕರ ಸಂಗತಿಯೆಂದರೆ, ತಮ್ಮ ಪಕ್ಷದ ಲಾಂಛನದಲ್ಲಿ ಕಮಲ್‌ ಅವರು ದಕ್ಷಿಣ ಭಾರತದ ಪರಿಕಲ್ಪನೆಯನ್ನೂ ಪ್ರಸ್ತಾಪಿಸಿದ್ದಾರೆ. ಜೊತೆಗೆ, ತಮ್ಮ ಅಸ್ಮಿತೆ ರಾಜಕಾರಣವನ್ನು ತಮಿಳುನಾಡಿನಿಂದ ಆಚೆಗೂ ವಿಸ್ತರಿಸಿದ್ದಾರೆ. ವಿಂಧ್ಯ ಪರ್ವತದಿಂದ ಕೆಳಗಿರುವ ಭಾರತ ಎಲ್ಲ ಒಂದೇ ಎಂಬ ದ್ರಾವಿಡ ಯೋಚನೆಯನ್ನು ಇದು ಪ್ರತಿಪಾದಿಸುತ್ತದೆ. ಈಗಿನ ಕಾಲಘಟ್ಟಕ್ಕೆ ಇದನ್ನು ಸಮೀಕರಿಸುವುದಾದರೆ, ನೀತಿ ನಿರೂಪಣೆ, ಅನುದಾನ ಹಂಚಿಕೆ, ಹಿಂದಿ ಹೇರಿಕೆ ಮತ್ತು ಪ್ರಮುಖ ರಾಜಕೀಯ ನಿರ್ಧಾರಗಳಲ್ಲಿ ದಕ್ಷಿಣ ಭಾರತವನ್ನು ಕಡೆಗಣಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವ್ಯಕ್ತಪಡಿಸಲಾಗುತ್ತಿರುವ ಅಸಮಾಧಾನವನ್ನೂ ಇದು ತೋರಿಸುತ್ತದೆ.

ಕಮಲ್‌ ಹಾಸನ್‌ ಅವರು ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು, ತೆಲಂಗಾಣದಲ್ಲಿ ಕೆ.ಟಿ. ರಾಮರಾವ್‌, ಕೇರಳದಲ್ಲಿ ಪಿಣರಾಯಿ ವಿಜಯನ್‌ ಅವರನ್ನು ಸಂಪರ್ಕಿಸಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟ, ಕರ್ನಾಟಕದ ಪ್ರಕಾಶ್‌ ರೈ ಕೂಡ ಕಮಲ್‌ ಅವರ ರಾಜಕಾರಣದ ಸಾಹಸವನ್ನು ಅಭಿನಂದಿಸಿದ್ದಾರೆ. ಇದು, ತನಗೆ ಬರಬೇಕಾಗಿದ್ದನ್ನು ಪಡೆಯುವುದಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹೇರಲು ದಕ್ಷಿಣ ಭಾರತದಲ್ಲಿ ರೂಪುಗೊಳ್ಳುತ್ತಿರುವ ಹೊಸ ಒತ್ತಡಗುಂಪಿನ ಆರಂಭವೂ ಆಗಿರಬಹುದು.

ಸೃಜನಾತ್ಮಕ ವ್ಯಕ್ತಿಯಾಗಿರುವ ಕಮಲ್‌ ಅವರಿಗೆ ಸಂಕೇತಗಳ ಶಕ್ತಿ ಏನೆಂಬುದು ಚೆನ್ನಾಗಿ ಗೊತ್ತಿದೆ. ಪಕ್ಷ ಘೋಷಣೆಗೆ ತಮಿಳುನಾಡಿನ ಸಾಂಸ್ಕೃತಿಕ ಮತ್ತು ರಾಜಕೀಯ ರಾಜಧಾನಿ ಮದುರೆಯನ್ನು ಆಯ್ಕೆ ಮಾಡಿರುವುದು ಇದಕ್ಕೆ ನಿದರ್ಶನ.

1921ರ ಸೆಪ್ಟೆಂಬರ್‌ನಲ್ಲಿ ಮಹಾತ್ಮ ಗಾಂಧೀಜಿ ಅವರು ಮದುರೆಯಲ್ಲಿ ತಮ್ಮ ಗುಜರಾತಿ ಪೋಷಾಕನ್ನು ತ್ಯಜಿಸಿ, ಲುಂಗಿ, ಧೋತಿ ಮತ್ತು ಶಾಲನ್ನು ಧರಿಸಿದ್ದರು. ಕಮಲ್‌ ಅವರು ಗಾಂಧೀಜಿ ಅವರನ್ನು ಆರಾಧಿಸುತ್ತಾರೆ. ತಮ್ಮ ಭಾಷಣಗಳಲ್ಲಿ ರಾಷ್ಟ್ರಪಿತನ ಹೇಳಿಕೆಗಳನ್ನು ಉಲ್ಲೇಖಿಸುತ್ತಾರೆ. ಅಬ್ದುಲ್‌ ಕಲಾಂ ಅವರನ್ನೂ ಕಮಲ್‌ ಮೆಚ್ಚುತ್ತಾರೆ. ಮಾಧ್ಯಮಗಳ ಅಬ್ಬರದ ಪ್ರಚಾರದ ನಡುವೆಯೇ ಅವರು ಕಲಾಂ ಹುಟ್ಟೂರು ರಾಮೇಶ್ವರಕ್ಕೆ ಭೇಟಿ ನೀಡಿದ್ದರು. ತಮ್ಮದು ಕೂಡ ಆ ಇಬ್ಬರು ಶ್ರೇಷ್ಠ ಪುರುಷರಂತಹುದೇ ವ್ಯಕ್ತಿತ್ವ ಎಂದು ಬಿಂಬಿಸಿಕೊಳ್ಳುವುದು ಅವರ ಉದ್ದೇಶ ಎಂಬುದು ಸ್ಟಷ್ಟ.

ಎರಡು ಪ್ರಮುಖ ದ್ರಾವಿಡ ಪಕ್ಷಗಳು ಕಾದು ನೋಡುವ ತಂತ್ರಕ್ಕೆ ಶರಣಾಗಿವೆ. ಕಮಲ್‌ ಮತ್ತು ಮುಂದೆ ರಾಜಕೀಯ ಪಕ್ಷ ಸ್ಥಾಪಿಸಲಿರುವ ರಜನಿಕಾಂತ್‌, ಈ ಇಬ್ಬರಲ್ಲಿ ಯಾರು ಹೆಚ್ಚು ಹಾನಿ ಮಾಡುತ್ತಾರೆ ಎಂಬುದು ಅವುಗಳಿಗೆ ಖಚಿತವಾಗಿ ಗೊತ್ತಿಲ್ಲ. ರಜನಿ ಅವರು ಬಿಜೆಪಿ ಅಥವಾ ಎಐಎಡಿಎಂಕೆಯ ಒಂದು ಬಣದೊಂದಿಗೆ ಕೈಜೋಡಿಸಬಹುದು ಎಂಬ ಭಾವನೆ ಇದೆ. ಆದರೆ, ಕಮಲ್‌ ಇದುವರೆಗೆ ತಾವು ಏಕಾಂಗಿ ಹೋರಾಟಗಾರ ಎಂದೇ ಬಿಂಬಿಸಿಕೊಂಡಿದ್ದಾರೆ. ದ್ರಾವಿಡ ಸಿದ್ಧಾಂತವನ್ನು ಹೊಂದಿರುವ ಅವರು ಅಂತಿಮವಾಗಿ ಡಿಎಂಕೆಯ ಮತಬುಟ್ಟಿಗೆ ಕೈಹಾಕಬಹುದು. ಇದು ಎಂ.ಕೆ.ಸ್ಟಾಲಿನ್‌ ಅವರ ಚಿಂತೆಗೆ ಕಾರಣವಾಗಬಹುದು.

ಒಂದಂತೂ ನಿಜ; ತಮಿಳುನಾಡಿನ ರಾಜಕೀಯ ಅಖಾಡವು ಈಗ ಎಲ್ಲ ರೀತಿಯ ಪ್ರಯೋಗಕ್ಕೂ ತೆರೆದುಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry