ಶುಕ್ರವಾರ, ಡಿಸೆಂಬರ್ 6, 2019
25 °C
ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಚಾಲನೆ ನೀಡಿದ ಕರೀನಾ ಕಪೂರ್‍

ಜಗತ್ತನ್ನು ಬೆಸೆಯುವ ಶಕ್ತಿ ಸಿನಿಮಾಕ್ಕಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಗತ್ತನ್ನು ಬೆಸೆಯುವ ಶಕ್ತಿ ಸಿನಿಮಾಕ್ಕಿದೆ

ಬೆಂಗಳೂರು: ಸಿನಿಮಾ ಮಾಧ್ಯಮ ಇಡೀ ಜಗತ್ತನ್ನು ಒಂದುಗೂಡಿಸುವ ಮಾಂತ್ರಿಕ ಶಕ್ತಿಯನ್ನು ಹೊಂದಿದೆ ಎಂದು ಬಾಲಿವುಡ್‍ನ ಖ್ಯಾತ ತಾರೆ ಕರೀನಾ ಕಪೂರ್‍ ಅಭಿಪ್ರಾಯಟ್ಟರು.

ವಿಧಾನಸೌಧದ ಮುಂಭಾಗದಲ್ಲಿ ಶನಿವಾರ ನಡೆದ 10ನೇ 'ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ’ ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರಿ

ನೊಂದಿಗಿನ ತಮ್ಮ ಕುಟುಂಬದ ನಂಟನ್ನು ನೆನಪಿಸಿಕೊಂಡರು.

'ನನ್ನ ತಾತ ನಕ್ಷತ್ರದ ರೂಪದಲ್ಲಿ ಬೆಂಗಳೂರನ್ನು ಈಗ ನೋಡುತ್ತಿದ್ದಾರೆ. ಅವರು ಬೆಂಗಳೂರನ್ನು ಪ್ರೀತಿಸುತ್ತಿದ್ದರು. ಇಲ್ಲಿ ಅವರ ಅನೇಕ ಸಿನಿಮಾಗಳ ಚಿತ್ರೀಕರಣ ನಡೆದಿದೆ. ಭಾರತೀಯ ಚಿತ್ರೋದ್ಯಮದಲ್ಲಿ ಬೆಂಗಳೂರು ಪ್ರಮುಖ ನಗರ’ ಎಂದು ಅವರು ಹೇಳಿದರು.

ಚಿತ್ರೋತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿರುವ ಇರಾನ್‍ ನಟಿ ಫಾತ್ ಮಾ ಮೋಟಮೆಡ್‍ ಆರ್ಯ ಅವರು ಕೂಡ ಸಿನಿಮಾದ ಮಾಂತ್ರಿಕ ಶಕ್ತಿಯ ಬಗ್ಗೆ ಬೆರಗು ವ್ಯಕ್ತಪಡಿಸಿದರು. 'ಸಿನಿಮಾ ಚಿತ್ರರಸಿಕರನ್ನು ಒಂದು ಕುಟುಂಬವನ್ನಾಗಿ ರೂಪಿಸುತ್ತದೆ. ಎಲ್ಲಿ ಸಿನಿಮಾ ಇರುವುದೋ ಅಲ್ಲಿ ಶಾಂತಿ ಹಾಗೂ ಮಾನವೀಯತೆ ಇರುತ್ತದೆ' ಎಂದು ಅವರು, ಭಾರತೀಯರ ಸಿನಿಮಾಪ್ರೇಮ ವಿಶ್ವಪ್ರಸಿದ್ಧವಾದುದು ಎಂದರು.

ಬೆಂಗಳೂರಿನ ಅಳಿಯ: ‘ಈ ಚಿತ್ರೋತ್ಸವಕ್ಕೆ ನನ್ನನ್ನು ಅತಿಥಿಯಾಗಿ ಆಹ್ವಾನಿಸಿದ್ದಾರೆ. ಆದರೆ, ಅತಿಥಿಯ ರೂಪದಲ್ಲಿ ನನ್ನನ್ನು ಕಲ್ಪಿಸಿಕೊಳ್ಳಲು ಬಯಸುವುದಿಲ್ಲ. ನನ್ನ ಪತ್ನಿ ಬೆಂಗಳೂರಿನವರು. ಆ ಕಾರಣದಿಂದಾಗಿ ನಾನು ಅಳಿಯನಾಗಿ ಇಲ್ಲಿಗೆ ಬಂದಿದ್ದೇನೆ’ ಎಂದು ಹಿಂದಿ ಚಿತ್ರರಂಗದ ಪ್ರಸಿದ್ಧ ನಿರ್ದೇಶಕ ರಾಕೇಶ್‍ ಓಂಪ್ರಕಾಶ್‍ ಮೆಹ್ರಾ ಹೇಳಿದರು.

ಅಕಾಡೆಮಿ ಪ್ರಶಸ್ತಿ (ಆಸ್ಕರ್‍) ಪುರಸ್ಕೃತ ನಿರ್ಮಾಪಕ ಮಾರ್ಕ್ ಭಾಷೆಟ್‍, ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತೊದಲುಗನ್ನಡದ ಸ್ವಾಗತ: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳನ್ನು ಸ್ವಾಗತಿಸಿದ ವಾರ್ತಾ ಇಲಾಖೆ ಕಾರ್ಯದರ್ಶಿ ಪಂಕಜ್‍ಕುಮಾರ್‍ ಪಾಂಡೆ ತಮ್ಮ ತೊದಲು

ಗನ್ನಡದ ಮೂಲಕ ನೋಡುಗರ ಗಮನಸೆಳೆದರು. ಇದಕ್ಕೆ ವ್ಯತಿರಿಕ್ತವಾಗಿ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್‍.ವಿ. ರಾಜೇಂದ್ರಸಿಂಗ್‍ ಬಾಬು ಅಸ್ಖಲಿತ ಇಂಗ್ಲಿಷ್‍ನಲ್ಲಿಯೇ ಹೆಚ್ಚಾಗಿ ಮಾತನಾಡಿದರು.

ಮುಖ್ಯಮಂತ್ರಿ ಗೈರು: ಸಿನಿಮೋತ್ಸವ ಉದ್ಘಾಟಿಸಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಾರಾ ಆಕರ್ಷಣೆ ಯಾಗಿದ್ದ ಶಿವರಾಜ್‍ ಕುಮಾರ್‍, ಸುದೀಪ್‍ ಹಾಗೂ ದರ್ಶನ್‍ ಸೇರಿದಂತೆ ಆಹ್ವಾನ ಪತ್ರಿಕೆಯಲ್ಲಿದ್ದ ಅನೇಕ ಮಂದಿ ಕಾರ್ಯಕ್ರಮದಲ್ಲಿ ಹಾಜರಾಗಿರಲಿಲ್ಲ. ವಿಧಾನ ಪರಿಷತ್‍ ಸಭಾಪತಿ ಡಿ.ಎಚ್‍. ಶಂಕರಮೂರ್ತಿ ಹಾಗೂ ಸಚಿವರಾದ ಆರ್. ರೋಷನ್‍ಬೇಗ್, ರೇವಣ್ಣ, ಬಸವರಾಜ ಹೊರಟ್ಟಿ, ಬಿಬಿಎಂಪಿ ಮೇಯರ್ ಸಂಪತ್‍ರಾಜ್‍ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಮುಖರು.

ಕಾರ್ಯಕ್ರಮಕ್ಕೆ ಮುನ್ನ ಮಾಧುರಿ ಹಾಗೂ ಮಯೂರಿ ಉಪಾಧ್ಯ ಅವರು ಸಂಯೋಜಿಸಿದ್ದ ಹಲವು ನೃತ್ಯಪ್ರಕಾರಗಳ ಕೊಲಾಜ್‍ ನೋಡುಗರ ಮನಸೂರೆಗೊಂಡಿತು.

ಮಾ. 6ರಂದು ಚಿತ್ರನಗರಿಗೆ ಶಿಲಾನ್ಯಾಸ

ಮೈಸೂರಿನ ಸಮೀಪದಲ್ಲಿ ನಿರ್ಮಿಸಲಾಗುತ್ತಿರುವ ಚಿತ್ರನಗರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 6ರಂದು ಶಿಲಾನ್ಯಾಸ ನೆರವೇರಿಸುವರು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‍.ವಿ. ರಾಜೇಂದ್ರಸಿಂಗ್‍ ಬಾಬು ಹೇಳಿದರು.

ಸರ್ಕಾರದ ಸಿನಿಮಾಪರ ನಿಲುವಿಗೆ ಕೃತಜ್ಞತೆ ಸಲ್ಲಿಸಿದ ಅವರು, ಕಾದಂಬರಿ ಆಧಾರಿತ ಚಿತ್ರಗಳಿಗೆ ₹25 ಲಕ್ಷ ನೀಡಲು ಸರ್ಕಾರ ಒಪ್ಪಿಕೊಂಡಿದ್ದು, ಇದರ ಅನುಕೂಲವನ್ನು ಚಿತ್ರರಂಗ ಬಳಸಿಕೊಳ್ಳಬೇಕು ಎಂದರು.

ಪ್ರತಿಕ್ರಿಯಿಸಿ (+)