ಸೋಮವಾರ, ಡಿಸೆಂಬರ್ 9, 2019
22 °C
ಆರ್ಥಿಕ ಸುಧಾರಣಾ ಕ್ರಮಗಳಿಂದ ಸಂಪತ್ತಿನ ಅಸಮಾನತೆ ಹೆಚ್ಚಳ

ಕುಬೇರರ ಸಂಪತ್ತು ಜಿಡಿಪಿಯ ಶೇ 15ರಷ್ಟು

Published:
Updated:
ಕುಬೇರರ ಸಂಪತ್ತು ಜಿಡಿಪಿಯ ಶೇ 15ರಷ್ಟು

ನವದೆಹಲಿ : ಮೂರು ದಶಕಗಳಿಂದ ದೇಶದಲ್ಲಿ ಸಂಪತ್ತಿನ ಅಸಮಾನತೆ ಹೆಚ್ಚುತ್ತಿದ್ದು, ಕೋಟ್ಯಧಿಪತಿಗಳ ಸಂಪತ್ತು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 15ರಷ್ಟು ಇದೆ ಎಂದು ಆಕ್ಸ್‌ಫಾಮ್‌ ಇಂಡಿಯಾ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಅಧಿಕಾರಕ್ಕೆ ಬಂದ ಪ್ರತಿಯೊಂದು ಸರ್ಕಾರವು ಜಾರಿಗೆ ತಂದ ಅಸಮತೋನದ ನೀತಿಗಳಿಂದಾಗಿ ಬಡವ – ಬಲ್ಲಿದರ ನಡುವಣ ಅಂತರ ಹೆಚ್ಚುತ್ತಲೇ ಹೋಗಿದೆ.  ದೇಶದಲ್ಲಿ ಸೃಷ್ಟಿಯಾಗಿರುವ ಸಂಪತ್ತಿನ ಬಹುಪಾಲು ಸಿರಿವಂತರ ಪಾಲಾಗುತ್ತಿದೆ. ನಿಯಮಗಳನ್ನೆಲ್ಲ ಗಾಳಿಗೆ ತೂರಿ ಭ್ರಷ್ಟ ವಹಿವಾಟಿನ ಮೂಲಕ ಲಾಭ ಬಾಚಿಕೊಳ್ಳುವ ‘ಬಂಡವಾಳಶಾಹಿ ಸ್ನೇಹಿ’ ವ್ಯವಸ್ಥೆ ಮತ್ತು ಪರಂಪರಾಗತವಾಗಿ ಬಂದಿರುವ ಸಂಪತ್ತಿನ ಕೊಡುಗೆಯೇ ಈ ಪರಿಸ್ಥಿತಿ ನಿರ್ಮಾಣವಾಗಲು ಕಾರಣವಾಗಿದೆ.

ದೇಶದಲ್ಲಿನ ಕೋಟ್ಯಧಿಪತಿಗಳ ಸಂಪತ್ತು ಐದು ವರ್ಷಗಳ ಹಿಂದೆ ಜಿಡಿಪಿಯ ಶೇ 10ರಷ್ಟಿತ್ತು. ಅದು ಈಗ ಶೇ 15ಕ್ಕೆ ಏರಿಕೆಯಾಗಿದೆ. 2017ರಲ್ಲಿ ದೇಶದಲ್ಲಿನ ಕುಬೇರರ ಸಂಖ್ಯೆ 101 ಇತ್ತು.

ಆದಾಯ, ಉಪಭೋಗ, ಸಂಪತ್ತು ಒಳಗೊಂಡಂತೆ ಎಲ್ಲ ಮಾನದಂಡಗಳಲ್ಲಿಯೂ ಭಾರತವು ವಿಶ್ವದ ಅತ್ಯಂತ ಅಸಮಾನ ಸಂಪತ್ತಿನ ದೇಶಗಳ ಸಾಲಿನಲ್ಲಿ ನಿಲ್ಲುತ್ತದೆ. ಇದಕ್ಕೆಲ್ಲ ಸರ್ಕಾರದ ಧೋರಣೆಗಳೇ ಕಾರಣ. 1980ರವರೆಗೆ ಸಂಪತ್ತಿನ ಅಸಮಾನತೆ ಪ್ರಮಾಣ ಸ್ಥಿರಗೊಂಡಿತ್ತು. 1991ರಿಂದೀಚೆಗೆ ಇದು ಹೆಚ್ಚುತ್ತಲೇ ಹೋಯಿತು. ಜಾತಿ, ಧರ್ಮ ಮತ್ತು ಪ್ರಾದೇಶಿಕತೆ ಆಧಾರದ ಮೇಲೆ ಈಗಾಗಲೇ ವಿಭಜನೆಗೊಂಡಿರುವ ಸಮಾಜದಲ್ಲಿ ಈ ಸಂಪತ್ತಿನ ಅಸಮಾನತೆಯು  ಇನ್ನಷ್ಟು ಒಡಕಿಗೆ ಕಾರಣವಾಗುತ್ತಿರುವುದು ಚಿಂತೆಗೆ ಕಾರಣವಾಗಿದೆ ಎಂದು ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

‘ಸಂಪತ್ತಿನ ಅಸಮಾನತೆ ತಗ್ಗಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ನೈತಿಕ ಕಾಳಜಿ ಆಗಿರಬೇಕಾಗಿದೆ’ ಎಂದು ವರದಿ ಸಿದ್ಧಪಡಿಸಿರುವ ಪ್ರೊ. ಹಿಮಾಂಶು ಅಭಿಪ್ರಾಯಪಟ್ಟಿದ್ದಾರೆ.

‘ತೆರಿಗೆ ಸಂಗ್ರಹ ಹೆಚ್ಚಿಸಿ ಅದರಿಂದ ಬರುವ ವರಮಾನವನ್ನು ಬಡವರ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಿಕೊಂಡರೆ ಮಾತ್ರ ಹೆಚ್ಚು ಸಮಾನತೆಯ ದೇಶ ನಿರ್ಮಾಣದತ್ತ ನಾವು ಸಾಗಬಹುದು. ಇದರಿಂದ ಅಭಿವೃದ್ಧಿಯ ಫಲವನ್ನು ಎಲ್ಲರಿಗೂ ಸಮಾನವಾಗಿ ಹಂಚಲು ಸಾಧ್ಯವಾಗಬಹುದು’ ಎಂದು ಹೇಳಿದ್ದಾರೆ.

**

1991ರಲ್ಲಿ ಜಾರಿಗೆ ತಂದ ಆರ್ಥಿಕ ಸುಧಾರಣಾ ಕ್ರಮಗಳು ಮತ್ತು ಅನಂತರ ಅಳವಡಿಸಿಕೊಂಡ ದೋಷಪೂರಿತ ನೀತಿಗಳೇ ಈ ಅಸಮಾನತೆ ಹೆಚ್ಚಲು ಕಾರಣ.

ನಿಶಾ ಅಗರ್‌ವಾಲ್, ಆಕ್ಸ್‌ಫಾಮ್‌ ಇಂಡಿಯಾ ಸಿಇಒ

***

ಪರಿಹಾರ ಕ್ರಮಗಳು

* ನೇರ ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಳಗೊಳ್ಳಬೇಕು

* ಪರಂಪರಾಗತವಾಗಿ ಬಂದ ಸಂಪತ್ತಿನ ಮೇಲೆ ತೆರಿಗೆ ವಿಧಿಸಬೇಕು

* ಬಡವರ ಆರೋಗ್ಯ, ಶಿಕ್ಷಣ ಮತ್ತು ಪೌಷ್ಟಿಕತೆ ಹೆಚ್ಚಿಸುವ ಕಾರ್ಯಕ್ರಮಗಳಿಗೆ ವೆಚ್ಚ ಮಾಡಬೇಕು

* ಬಡವರ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ತೋರಬೇಕು

 

ಪ್ರತಿಕ್ರಿಯಿಸಿ (+)