ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಅರಳುವುದೇ ಮುದುಡಿದ ತಾವರೆ?

ಕೈ‘ವಶ’ವಾಗಿರುವ ಕ್ಷೇತ್ರದ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಪಾರಮ್ಯ
Last Updated 22 ಫೆಬ್ರುವರಿ 2018, 19:29 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ದಶಕಗಳಿಂದ ಬಿಜೆಪಿ ಪ್ರಾಬಲ್ಯ ಹೊಂದಿದ್ದ ಆನೇಕಲ್‌ ವಿಧಾನಸಭಾ ಕ್ಷೇತ್ರ 2013ರ ಚುನಾವಣೆಯಲ್ಲಿ ‘ಕೈ’ ವಶವಾಗಿತ್ತು. ಈ ಕ್ಷೇತ್ರವನ್ನು ಮತ್ತೆ ತೆಕ್ಕೆಗೆ ಪಡೆಯಲು ಬಿಜೆಪಿ ಶತಾಯಗತಾಯ ಪ್ರಯತ್ನ ಮಾಡುತ್ತಿದೆ.

‘ಅಭಿವೃದ್ಧಿ ಮಂತ್ರವನ್ನೇ ಮುಂದಿಟ್ಟುಕೊಂಡು ಈ ಬಾರಿ ಮತ್ತೆ ಗೆಲ್ಲುತ್ತೇವೆ’ ಎಂಬ ಆತ್ಮವಿಶ್ವಾಸದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಬೀಗುತ್ತಿದ್ದಾರೆ.

ಕಾಂಗ್ರೆಸ್‌ನ ಬಿ.ಶಿವಣ್ಣ ಇಲ್ಲಿನ ಶಾಸಕ. ಅವರು ಬಿಜೆಪಿಯ ಎ.ನಾರಾಯಣಸ್ವಾಮಿ ಅವರನ್ನು 40,182 ಮತಗಳ ಅಂತರದಿಂದ ಸೋಲಿಸಿದ್ದರು.

ಬಿಜೆಪಿಯಿಂದ ನಾಲ್ಕು ಬಾರಿ ಗೆದ್ದಿದ್ದ ನಾರಾಯಣಸ್ವಾಮಿಗೆ ಈ ಸೋಲು ಅನಿರೀಕ್ಷಿತವಾಗಿತ್ತು. ಸೊತ ಬಳಿಕವೂ ಅವರು, ನಿರಂತರ ಜನಸಂಪರ್ಕ ಇಟ್ಟುಕೊಂಡು ಕ್ಷೇತ್ರದಲ್ಲಿ ಮತ್ತೆ ತಾವರೆಯನ್ನು ಅರಳಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.

ಬಿಜೆಪಿ ಟಿಕೆಟ್‌ಗಾಗಿ ನಿವೃತ್ತ ಐಎಎಸ್‌ ಅಧಿಕಾರಿ ಕೆ.ಶಿವರಾಂ ಕೂಡಾ ಪ್ರಯತ್ನ ನಡೆಸಿದ್ದಾರೆ. ಒಂದು ವರ್ಷದಿಂದ ಈ ಕ್ಷೇತ್ರದಾದ್ಯಂತ ಓಡಾಟ ಮಾಡಿಕೊಂಡು ಪಕ್ಷದ ಕಾರ್ಯಕರ್ತರ ವಿಶ್ವಾಸ ಗಳಿಸಲು ಬೆವರು ಸುರಿಸಿದ್ದಾರೆ. ಶ್ರೀಶ್ರೀ ರವಿಶಂಕರ ಗುರೂಜಿಗೆ ಆಪ್ತರಾಗಿರುವ ‘ಫಟಾಫಟ್‌’ ಶ್ರೀನಿವಾಸ್‌ ಕೂಡ ಟಿಕೆಟ್‌ ಆಕಾಂಕ್ಷಿ.

ಪಕ್ಷವು ಇತ್ತೀಚೆಗೆ ಹಮ್ಮಿಕೊಂಡಿದ್ದ ಚೈತನ್ಯ ಸಮಾವೇಶದಲ್ಲಿ ಬಿ.ಎಸ್‌.ಯಡಿಯೂರಪ್ಪ, ‘ನಾರಾಯಣಸ್ವಾಮಿ ಅವರಿಗೇ ಮತ್ತೆ ಟಿಕೆಟ್‌ ನೀಡಲಾಗುವುದು’ ಎಂದು ಪ್ರಕಟಿಸಿದ್ದರು. ಕೊನೆಯ ಕ್ಷಣದಲ್ಲಿ ವ್ಯತ್ಯಾಸಗಳು ಆಗದಿದ್ದರೆ, ಅವರೇ ಇಲ್ಲಿ ಮತ್ತೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. 1998ರಲ್ಲಿ ಶಾಸಕ ವೈ.ರಾಮಕೃಷ್ಣ ಅಕಾಲಿಕ ಮರಣದಿಂದಾಗಿ ನಡೆದ ಉಪಚುನಾವಣೆಯಲ್ಲಿ ನಾರಾಯಣಸ್ವಾಮಿ ಮೊದಲಬಾರಿ ಗೆದ್ದು ಬಂದಿದ್ದರು. ನಂತರ ನಡೆದ ಮೂರು ಚುನಾವಣೆಗಳಲ್ಲೂ ಗೆಲುವಿನ ನಗೆ ಬೀರಿದ್ದರು.

‘ಕಳೆದ ಬಾರಿ ರಾಜ್ಯದಾದ್ಯಂತ ಆಡಳಿತ ವಿರೋಧಿ ಅಲೆ ಇತ್ತು. ಬಿ.ಎಸ್‌.ಯಡಿಯೂರಪ್ಪ ಅವರು ಕೆಜೆಪಿ ಸ್ಥಾಪಿಸಿದ್ದರಿಂದ ಪಕ್ಷದ ಕಾರ್ಯಕರ್ತರು ಗೊಂದಲಕ್ಕೆ ಸಿಲುಕಿದ್ದರು. ಈ ಎಲ್ಲ ಕಾರಣಗಳಿಂದಾಗಿ ಪಕ್ಷಕ್ಕೆ ಹಿನ್ನಡೆ ಆಯಿತು’ ಎಂದು ಬಿಜೆಪಿಯ ಕ್ಷೇತ್ರ ಘಟಕದ ಅಧ್ಯಕ್ಷ ಕೆ.ವಿ.ಶಿವಪ್ಪ ತಿಳಿಸಿದರು.

‘ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬಂದಿದ್ದಾರೆ. ಇಲ್ಲಿ ಮತ್ತೆ ಬಿಜೆಪಿಗೆ ಪೂರಕವಾದ ವಾತಾವರಣ ಸೃಷ್ಟಿಯಾಗಿದೆ. ಈ ಬಾರಿ ಕ್ಷೇತ್ರದ ಮುಖಂಡರೆಲ್ಲ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲಿದ್ದೇವೆ. ಗೆಲುವು ನಮ್ಮದೇ’ ಎಂದು ಅವರು ಆತ್ಮವಿಶ್ವಾಸದಿಂದ ಹೇಳಿದರು.

‘ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ನಾಲ್ಕು ರಾಜಕೀಯ ಹತ್ಯೆಗಳು ನಡೆದಿವೆ. ಬೊಮ್ಮಸಂದ್ರ ಪುರಸಭಾ ಸದಸ್ಯ ವಾಸು, ಹೀಲಳಿಗೆ ಗ್ರಾಮ ಪಂಚಾಯಿತಿಯ ಸದಸ್ಯ ಹರೀಶ್‌, ದಾಸರಹಳ್ಳಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಅಶ್ವತ್ಥ್‌ ಕೊಲೆ ಪ್ರಕರಣದ ಆರೋಪಿಗಳು ಕಾಂಗ್ರೆಸ್‌ ಪಕ್ಷದ ಜೊತೆ ಗುರುತಿಸಿಕೊಂಡವರು. ಇಂಡಲವಾಡಿಯ ಶ್ರೀನಿವಾಸ್‌ ಹತ್ಯೆ ಪ್ರಕರಣದಲ್ಲೂ ಅವರದೇ ಕೈವಾಡ. ಇವೆಲ್ಲವೂ ಈ ಬಾರಿಯ ಚುನಾವಣೆಯ ಪ್ರಮುಖ ವಿಷಯಗಳಾಗಲಿವೆ’ ಎಂದು ಅವರು ತಿಳಿಸಿದರು.

ಐದು ವರ್ಷಗಳಲ್ಲಿ ಆಗಿರುವ ಕಾಮಗಾರಿಗಳ ಹೆಸರು ಹೇಳಿಕೊಂಡು ಚುನಾವಣೆ ಗೆಲ್ಲಲು ಕಾಂಗ್ರೆಸ್‌ನವರು ತಯಾರಿ ನಡೆಸಿದ್ದಾರೆ. ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂಬ ಟೀಕೆಗಳ ಬಗ್ಗೆ ಅವರು ತಲೆ ಕೆಡಿಸಿಕೊಂಡಿಲ್ಲ.

‘ಶಿವಣ್ಣ ಅವರು ಶಾಸಕರಾದ ಬಳಿಕ ಆನೇಕಲ್‌ಗೆ ಕಾವೇರಿ ನೀರು ಪೂರೈಕೆ ಸಾಧ್ಯವಾಗಿದೆ. ಕ್ಷೇತ್ರದ ಬರಿದಾದ ಕೆರೆಗಳಿಗೆ ಬೆಳ್ಳಂದೂರು ಹಾಗೂ ವರ್ತೂರು ಕೆರೆಯ ನೀರನ್ನು ತುಂಬು ಏತ ನೀರಾವರಿ ಯೋಜನೆಗೆ ಚಾಲನೆ ನೀಡಲಾಗಿದ್ದು, ಕೊಳವೆಮಾರ್ಗ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ರಸ್ತೆಗಳು ಅಭಿವೃದ್ಧಿಯಾಗಿವೆ. ಇವುಗಳನ್ನು ನೋಡಿ ಜನ ನಮ್ಮ ಅಭ್ಯರ್ಥಿಗೆ ಮತ ಹಾಕಲಿದ್ದಾರೆ. ಕಳೆದ ಚುನಾವಣೆಗಿಂತಲೂ ಈ ಬಾರಿ ಗೆಲುವಿನ ಅಂತರ ಹೆಚ್ಚಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಚಂದ್ರಪ್ಪ.

‘ರಾಜಕೀಯ ಹತ್ಯೆಗಳು ನಡೆದಿವೆ ಎಂದು ಬಿಜೆಪಿಯವರು ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ. ಈ ಹತ್ಯೆಗಳು ವೈಯಕ್ತಿಕ ದ್ವೇಷದಿಂದಾಗಿ ನಡೆದಿವೆ. ಕಾಮಗಾರಿಗಳಲ್ಲೂ ಅವ್ಯವಹಾರ ನಡೆದಿಲ್ಲ’ ಎಂದರು.

2008ರವರೆಗಿನ ಚುನಾವಣೆವರೆಗೂ ಈ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಪ್ರಬಲ ಪೈಪೋಟಿ ನೀಡುತ್ತಿದ್ದರು. ಕ್ರಮೇಣ ಈ ಪಕ್ಷ ನೆಲೆ ಕಳೆದುಕೊಳ್ಳುತ್ತಾ ಬಂದಿದೆ.

ಹೆಬ್ಬಗೋಡಿ ನಗರಸಭೆಗೆ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಕೆ.ಪಿ.ರಾಜು ಪಕ್ಷವನ್ನು ತೊರೆದು ಜೆಡಿಎಸ್‌ ಸೇರಿದ್ದಾರೆ. ಅವರು ಈ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದರು. ಆದರೆ, ಈ ಕ್ಷೇತ್ರದಲ್ಲಿ ಬಿಎಸ್‌ಪಿ ಅಭ್ಯರ್ಥಿಯನ್ನು ಬೆಂಬಲಿಸಲು ಪಕ್ಷವು ನಿರ್ಧರಿಸಿರುವುದು ಅವರ ಆಕಾಂಕ್ಷೆಗೆ ತಣ್ಣೀರೆರಚಿದೆ.

ಈ ಕ್ಷೇತ್ರದಲ್ಲಿ ಹಿಂದಿನಿಂದಲೂ ಬಿಎಸ್‌ಪಿ ನೆಲೆ ಹೊಂದಿದೆ. ಪಕ್ಷದಿಂದ ಸ್ಪರ್ಧಿಸುತ್ತಿದ್ದ ಬಿ.ಗೋಪಾಲ್‌ ಪ್ರತಿ ಚುನಾವಣೆಯಲ್ಲೂ ಸುಮಾರು 20 ಸಾವಿರ ಮತಗಳನ್ನು ಪಡೆಯುತ್ತಿದ್ದರು. 2008ರಲ್ಲಿ ಅವರು ಕಾಂಗ್ರೆಸ್‌ ಸೇರಿದ ಬಳಿಕ ಇಲ್ಲಿ ಪಕ್ಷದ ಪ್ರಾಬಲ್ಯ ಕುಸಿದಿತ್ತು.

ಈ ಬಾರಿ ಜೆಡಿಎಸ್‌– ಬಿಎಸ್‌ಪಿ ಮೈತ್ರಿ ಮಾಡಿಕೊಂಡಿವೆ. ಚಂದಾಪುರ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಹಾಗೂ ಪುರಸಭೆಯ ಮಾಜಿ ಸದಸ್ಯ ವೈ.ಕೃಷ್ಣಮೂರ್ತಿ ಅವರನ್ನು ಬಿಎಸ್‌ಪಿ ಕಣಕ್ಕಿಳಿಸುವ ಸಾಧ್ಯತೆ ಇದೆ.

‘ಈ ಕ್ಷೇತ್ರದಲ್ಲಿ ಬಿಎಸ್‌ಪಿ ವಿದ್ಯಾರ್ಥಿ ಸಂಘಟನೆ ಪ್ರಬಲವಾಗಿದೆ. ಜೆಡಿಎಸ್‌ ಮತವೂ ನಮಗೆ ಸಿಗಲಿದೆ. ನಮಗೆ ಈ ಬಾರಿ ಹೆಚ್ಚು ಅವಕಾಶ ಇದೆ’ ಎನ್ನುತ್ತಾರೆ ಕೃಷ್ಣಮೂರ್ತಿ.

ಕಾಂಗ್ರೆಸ್‌ ಈ ಕ್ಷೇತ್ರವನ್ನು ಉಳಿಸಿಕೊಳ್ಳುವುದೇ, ಇಲ್ಲಿ ಮತ್ತೆ ಕಮಲ ಅರಳುವುದೇ, ಬಿಎಸ್‌ಪಿ– ಜೆಡಿಎಸ್‌ ಹೊಂದಾಣಿಕೆ ಅನಿರೀಕ್ಷಿತ ಫಲಿತಾಂಶಕ್ಕೆ ಕಾರಣವಾಗುವುದೇ ಎಂಬುದು ಇಲ್ಲಿ ಕುತೂಹಲ ಕೆರಳಿಸಿದೆ.
***
* ಅತ್ತಿಬೆಲೆ, ಚಂದಾಪುರ, ಬೊಮ್ಮಸಂದ್ರ ಪುರಸಭೆಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ
* ಆನೇಕಲ್‌ ಪುರಸಭೆಯಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ
* ಹೆಬ್ಬಗೋಡಿ ನಗರಸಭೆಯಲ್ಲಿ ಬಿಜೆಪಿ ಅಧಿಕಾರದಲ್ಲಿದೆ
* ಆನೇಕಲ್‌ ತಾಲ್ಲೂಕು ಪಂಚಾಯಿತಿಯಲ್ಲಿ ಬಿಜೆಪಿ ಆಡಳಿತವಿದೆ
* ನಾಲ್ಕು ಬಾರಿ ಗೆದ್ದು, ಒಂದು ಬಾರಿ ಸೋತಿರುವ ಎ.ನಾರಾಯಣಸ್ವಾಮಿ
* ಎರಡು ಬಾರಿ ಸೋತು ಒಂದು ಬಾರಿ ಗೆದ್ದಿರುವ ಬಿ.ಶಿವಣ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT