ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ್ದು 90 ಪರ್ಸೆಂಟ್ ಕಮಿಷನ್‌ ಸರ್ಕಾರ : ಸಿದ್ದರಾಮಯ್ಯ ಗುಡುಗು

10 ಪರ್ಸೆಂಟ್‌ ಎಂಬ ಮೋದಿ ಟೀಕೆಗೆ ವಿಧಾನಸಭೆಯಲ್ಲಿ ತಿರುಗೇಟು
Last Updated 22 ಫೆಬ್ರುವರಿ 2018, 19:39 IST
ಅಕ್ಷರ ಗಾತ್ರ

ಬೆಂಗಳೂರು: ‘ಕೇಂದ್ರದಲ್ಲಿರುವುದು 90 ಪರ್ಸೆಂಟ್‌ ಕಮಿಷನ್ ಹೊಡೆಯುವ ಸರ್ಕಾರ. ಬೇರೆಯವರನ್ನು ಟೀಕೆ ಮಾಡುವುದಕ್ಕೆ ನಿಮಗೆ ನಾಚಿಕೆಯಾಗುವುದಿಲ್ಲವೇ? ಶೇಮ್ ಶೇಮ್‌...’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಅಬ್ಬರಿಸಿದರು.

ರಾಜ್ಯಪಾಲರ ಭಾಷಣ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ‘ರಾಜ್ಯದಲ್ಲಿರುವುದು 10 ಪರ್ಸೆಂಟ್ ಕಮಿಷನ್ ಪಡೆಯುವ ಸರ್ಕಾರ ಎಂದು ಕೆಲವರು ಟೀಕಿಸುತ್ತಿದ್ದಾರೆ. ಅವರಿಗೆಲ್ಲ ರಾಜಕೀಯ ವೇದಿಕೆಯಲ್ಲೇ ಉತ್ತರ ಕೊಡಬೇಕು ಎಂದಿದ್ದೆ. ಪದೇ ಪದೇ ಟೀಕಿಸುತ್ತಿರುವುದ
ರಿಂದ ಇಲ್ಲಿಯೇ ಉತ್ತರ ನೀಡುತ್ತಿದ್ದೇನೆ’ ಎಂದು ಪ್ರಧಾನಿ ಮೋದಿ ಹೆಸರನ್ನು ಪ್ರಸ್ತಾಪಿಸದೇ ಹರಿಹಾಯ್ದರು.

ಮುಖ್ಯಮಂತ್ರಿ ಹೇಳಿಕೆ ವಿರೋಧಿಸಿ ಬಿಜೆಪಿ ಸದಸ್ಯರು ಗುರುವಾರ ಸಭಾತ್ಯಾಗ ಮಾಡಿದರು.

ನ್ಯಾ. ಕೆಂಪಣ್ಣ ಆಯೋಗದಿಂದ ಕ್ಲೀನ್ ಚಿಟ್‌’

ಅರ್ಕಾವತಿ ಬಡಾವಣೆ ಡಿನೋಟಿಫೈ ಬಗ್ಗೆ ವಿಚಾರಣೆ ನಡೆಸಲು ರಚಿಸಿದ್ದ ನ್ಯಾಯಮೂರ್ತಿ ಕೆಂಪಣ್ಣ ನೇತೃತ್ವದ ಆಯೋಗ ರಾಜ್ಯ ಸರ್ಕಾರಕ್ಕೆ ‘ಕ್ಲೀನ್‌ ಚಿಟ್’ ಕೊಟ್ಟಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕೇಂದ್ರ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಆಪಾದನೆ ಮಾಡಿದಾಗ, ‘ಅರ್ಕಾವತಿ ಹಗರಣದಲ್ಲಿ ನೀವು ಸಿಕ್ಕಿಬಿದ್ದಿದ್ದೀರಿ. ಕೆಂಪಣ್ಣ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸಿ’ ಶೆಟ್ಟರ್ ಆಗ್ರಹಿಸಿದರು.

‘ನಮ್ಮ ಸರ್ಕಾರದ ಅವಧಿಯಲ್ಲಿ ಯಾವುದೇ ಡಿನೋಟಿಫೈ ಆಗಿಲ್ಲ. ಕೆಲವು ಅಂಶಗಳ ಬಗ್ಗೆ ಮರು ಪರಿಶೀಲನೆ ನಡೆಸಬೇಕು ಎಂದು ವರದಿ ಹೇಳಿದೆ. ಹೀಗಾಗಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ವಹಿಸಲಾಗಿದೆ. ನಾವೇನು ಕದ್ದು ಓಡಿ ಹೋಗುವುದಿಲ್ಲ. ವರದಿಯನ್ನು ಇಲ್ಲಿಯೇ ಮಂಡಿಸಿ, ಜನರಿಗೂ ತಲುಪಿಸುತ್ತೇವೆ’ ಎಂದೂ ಸಿದ್ದರಾಮಯ್ಯ ಪ್ರತಿಪಾದಿಸಿದರು.

ಮುಖ್ಯಮಂತ್ರಿ ಹೇಳಿದ್ದೇನು?

l ₹526 ಕೋಟಿ ಮೊತ್ತದಲ್ಲಿ ಸಿಗುವ ಒಂದು ರಫೇಲ್‌ ಯುದ್ಧ ವಿಮಾನಕ್ಕೆ ₹1,570 ಕೋಟಿ ಕೊಟ್ಟು ಖರೀದಿಸಲು ಮುಂದಾಗಿದ್ದಾರಲ್ಲ. 90 ಪರ್ಸೆಂಟ್‌ ಕಮಿಷನ್‌ ಪಡೆಯುತ್ತಿರುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ?

l ನೀರವ್ ಮೋದಿ ₹11,000 ಕೋಟಿ ನುಂಗಿ ಓಡಿದ್ದಾನೆ. ರಾಜಸ್ಥಾನದ ಮುಖ್ಯಮಂತ್ರಿ (ಬಿಜೆಪಿಯ ವಸುಂಧರರಾಜೇ) ಸಂಬಂಧಿ
ಲಲಿತ್ ಮೋದಿ ದೇಶಬಿಟ್ಟು ಪರಾರಿ
ಯಾದ. ₹9,000 ಕೋಟಿ ನಾಮ ಹಾಕಿದ ವಿಜಯ ಮಲ್ಯ ದೇಶ ತೊರೆದ. ಇವರಿಗೆ ರಕ್ಷಣೆ ಕೊಟ್ಟವರಾರು?

l ಮಾತು ಮಾತಿಗೂ ಇವರು(ಬಿಜೆಪಿ) ಡೈರಿ ಡೈರಿ, ಗೋವಿಂದರಾಜ್‌ ಡೈರಿಯಲ್ಲಿ ಹೆಸರಿದೆ ಎಂದು ಹೇಳುತ್ತಾರೆ. ಜೈನ್‌ ಹವಾಲಾ, ಸಹರಾ ಡೈರಿಗಳಲ್ಲಿ ಯಾರ ಸಂಕೇತಾಕ್ಷರಗಳಿದ್ದವು? ಅವರ ಹೆಸರುಗಳೇನು ಬಹಿರಂಗಪಡಿಸಿ

l ಇನ್ನೂ ಇಂತಹ ಹಗರಣ ಬೇಕಾದಷ್ಟು ಇವೆ. ಇಂತಹವರ ಕೈಲಿ ನಾವು ಪಾಠ ಕಲಿಯಬೇಕಾ?

l ಕರ್ನಾಟಕದ್ದು 10 ಪರ್ಸೆಂಟ್‌ ಸರ್ಕಾರ ಎಂದು ಕೆಲವರು ಟೀಕಿಸುತ್ತಿದ್ದಾರೆ. ಅದಕ್ಕೆ ದಾಖಲೆ ಕೊಡುತ್ತಾರೆಯೇ?

l ಆಪಾದನೆ ಮಾಡುವವನು ಅದನ್ನು ಸಾಬೀತು ಪಡಿಸಬೇಕು. ಇಲ್ಲದೇ ಇದ್ದರೆ ಅವರ ಹೇಳಿಕೆ ಹಿಟ್ ಅಂಡ್ ರನ್ ಆಗುತ್ತದಷ್ಟೇ. ಇಂತಹ ಆರೋಪವನ್ನು ನಾನು ಬೇಕಾದಷ್ಟು ಮಾಡುತ್ತೇನೆ

l ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದವರು, ಏಳೆಂಟು ಸಚಿವರು ಜೈಲಿಗೆ ಹೋಗಿ ಬಂದಿದ್ದಾರೆ. ಎಲ್ಲರೂ ಜಾಮೀನಿನ ಮೇಲೆ ಹೊರಗೆ ಓಡಾಡುತ್ತಿದ್ದಾರೆ

l ಶೆಟ್ಟರ್‌ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಎಂದು ಈಗ ಬಿಜೆಪಿ ಅಧ್ಯಕ್ಷರಾಗಿರುವ ಯಡಿಯೂರಪ್ಪ ಕೆಜೆಪಿ ಅಧ್ಯಕ್ಷರಾಗಿದ್ದಾಗ ಆಪಾದಿಸಿದ್ದರು. ನೀವೇನು ಸತ್ಯ ಹರಿಶ್ಚಂದ್ರರಾ?

l ಸಂವಿಧಾನ ಗೊತ್ತಿಲ್ಲದವರು ಮಾತ್ರ ಲೆಕ್ಕ ಕೊಡಿ ಎಂದು (ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ) ಕೇಳುತ್ತಿದ್ದಾರೆ. ನನ್ನನ್ನು ಗುರಿ ಮಾಡಿದರೆ ಉತ್ತರ ನೀಡಲು ಸಮರ್ಥನಿದ್ದೇನೆ. ನನ್ನದು ತೆರೆದ ಪುಸ್ತಕ

l ನನ್ನ ಸರ್ಕಾರವ ವಿರುದ್ಧ ಯಾವುದೇ ಕಳಂಕ ಇಲ್ಲ. ಯಾರೊಬ್ಬ ಸಚಿವನೂ ಜೈಲಿಗೆ ಹೋಗಿಲ್ಲ. ನಿಮ್ಮ ಆರೋಪಗಳೆಲ್ಲ ಸುಳ್ಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT