ಶುಕ್ರವಾರ, ಡಿಸೆಂಬರ್ 13, 2019
27 °C
₹94.5 ಕೋಟಿ ಮೌಲ್ಯದ ಷೇರು, ಮ್ಯೂಚುವಲ್‌ ಫಂಡ್‌ ವಶಕ್ಕೆ ಪಡೆದ ಇ.ಡಿ.

ನೀರವ್‌ ಐಷಾರಾಮಿ ಕಾರುಗಳ ಜಪ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

ನೀರವ್‌ ಐಷಾರಾಮಿ ಕಾರುಗಳ ಜಪ್ತಿ

ನವದೆಹಲಿ/ಮುಂಬೈ (ಪಿಟಿಐ): ಪಂಜಾಬ್ ನ್ಯಾಷನಲ್ ಬ್ಯಾಂಕ್‌ (ಪಿಎನ್‌ಬಿ) ವಂಚನೆ ಹಗರಣದ ಆರೋಪಿಗಳಾದ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಗೆ ಸೇರಿದ ₹ 94.52 ಕೋಟಿ ಮೌಲ್ಯದ ಷೇರುಗಳು ಮತ್ತು ಮ್ಯೂಚುವಲ್ ಫಂಡ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳ

ಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಮಾಹಿತಿ ನೀಡಿದೆ.

ನೀರವ್ ಮೋದಿಗೆ ಸೇರಿದ ರೋಲ್ಸ್ ರಾಯ್ಸ್‌ ಘೋಸ್ಟ್, ಪೋಶಾ ಪನಮೆರಾ, ಟೊಯೊಟಾ ಫಾರ್ಚೂನರ್, ಇನೋವಾ, ಹೋಂಡಾ ಕಂಪೆನಿಯ ಮೂರು ಸೆಡಾನ್‌ಗಳು ಹಾಗೂ ಮರ್ಸಿಡಿಸ್ ಬೆಂಜ್‌ನ ಎರಡು ಜಿಎಲ್ ಎಸ್‌ಯುವಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಇ.ಡಿ. ಹೇಳಿದೆ.

ನಷ್ಟ ಭರ್ತಿಯ ಯೋಜನೆ ತೋರಿಸಿ:  ಆಗಿರುವ ನಷ್ಟವನ್ನು ತುಂಬಿ ಕೊಡುವ ನಿಖರ ಮತ್ತು ಅನುಷ್ಠಾನಸಾಧ್ಯವಾದ ಯೋಜನೆಯನ್ನು ಮುಂದಿಡುವಂತೆ ನೀರವ್‌ ಮೋದಿಗೆ ಪಿಎನ್‌ಬಿ ಹೇಳಿದೆ.

ಹಗರಣವನ್ನು ಪಿಎನ್‌ಬಿ ಅತ್ಯುತ್ಸಾಹದಿಂದ ಬಹಿರಂಗ ಮಾಡಿತು. ಅದು ತಮ್ಮ ಆಭರಣ ಬ್ರ್ಯಾಂಡನ್ನೇ ನಾಶ ಮಾಡಿತಲ್ಲದೆ ಸಾಲ ಮರುಪಾವತಿಯ ಸಾಮರ್ಥ್ಯವನ್ನು ಕುಗ್ಗಿಸಿತು ಎಂದು ಇತ್ತೀಚೆಗೆ ಬರೆದ ಪತ್ರದಲ್ಲಿ ನೀರವ್‌ ಹೇಳಿದ್ದರು. ಅದಕ್ಕೆ ಪ್ರತಿಯಾಗಿ ಪಿಎನ್‌ಬಿ ಈ ಪತ್ರವನ್ನು ಬರೆದಿದೆ.

‘ಬ್ಯಾಂಕ್‌ನಿಂದ ನೀವು ಕಾನೂನುಬಾಹಿರವಾಗಿ ಮತ್ತು ಅನಧಿಕೃತವಾಗಿ ಸಾಲ ಖಾತರಿ ಪತ್ರಗಳನ್ನು ಪಡೆದಿದ್ದೀರಿ. ಇದಕ್ಕಾಗಿ ಕೆಲವು ಅಧಿಕಾರಿಗಳನ್ನು ನೀವು ಬಳಸಿಕೊಂಡಿದ್ದೀರಿ. ನೀವು ಪಾಲುದಾರರಾಗಿರುವ ಮೂರು ಕಂಪನಿಗಳಿಗೆ ಬ್ಯಾಂಕ್‌ ಯಾವತ್ತೂ ಈ ಸೌಲಭ್ಯವನ್ನು ಮಂಜೂರು ಮಾಡಿರಲಿಲ್ಲ’ ಎಂದು ನೀರವ್‌ಗೆ ಕಳುಹಿಸಿದ ಇ–ಮೇಲ್‌ ಸಂದೇಶದಲ್ಲಿ ಪಿಎನ್‌ಬಿಯ ಪ್ರಧಾನ ವ್ಯವಸ್ಥಾಪಕ ಅಶ್ವಿನಿ ವತ್ಸ ಹೇಳಿದ್ದಾರೆ.

‘ಎಲ್ಲ ಸಾಲವನ್ನೂ ಚುಕ್ತಾ ಮಾಡಲಾಗುವುದು ಎಂಬ ನಿಮ್ಮ ಹೇಳಿಕೆಯಲ್ಲಿ ಕಾಲಮಿತಿ ಅಥವಾ ಮೊತ್ತದ ಪ್ರಸ್ತಾವ ಇಲ್ಲ. ಆದರೆ ನಿಖರವಾದ ಯೋಜನೆ ಇದ್ದರೆ ಅದರೊಂದಿಗೆ ನಮ್ಮನ್ನು ಸಂಪರ್ಕಿಸಿ’ ಎಂದು ನೀರವ್‌ಗೆ ಸೂಚಿಸಲಾಗಿದೆ.

ನಿರ್ಲಕ್ಷ್ಯವೇ ಕಾರಣ:  (ಮುಂಬೈ ವರದಿ): ಲೆಕ್ಕ ಪರಿಶೋಧನೆ ಮತ್ತು ನಿಯಂತ್ರಣದ ವಿವಿಧ ಹಂತಗಳಲ್ಲಿ ತೋರಿದ ನಿರ್ಲಕ್ಷ್ಯವೇ ಪಂಜಾಬ್ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ)–ನೀರವ್‌ ಮೋದಿ ಹಗರಣ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಕಾರಣ ಎಂದು ಮಹಾರಾಷ್ಟ್ರ ಸ್ಟೇಟ್‌ ಬ್ಯಾಂಕ್‌ ಉದ್ಯೋಗಿಗಳ ಒಕ್ಕೂಟ (ಎಂಎಸ್‌ಬಿಇಎಫ್‌) ಹೇಳಿದೆ.

ಈ ಹಗರಣದ ಬಗ್ಗೆ ಸಂಸದೀಯ ಸಮಿತಿಯಿಂದ ತನಿಖೆ ನಡೆಯಬೇಕು ಎಂದೂ ಎಂಎಸ್‌ಬಿಇಎಫ್‌ ಒತ್ತಾಯಿಸಿದೆ.

‘ಉದ್ಯಮ ಸಂಸ್ಥೆಗಳು ಬ್ಯಾಂಕುಗಳಿಗೆ ವಂಚಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಇದು ಜನರ ದುಡ್ಡು. ಈಗ ಬಯಲಾಗಿರುವ ದೊಡ್ಡ ಹಗರಣ ಆಘಾತ ತಂದಿದೆ’ ಎಂದು ಒಕ್ಕೂಟ ಹೇಳಿದೆ.

ಪ್ರತಿಕ್ರಿಯಿಸಿ (+)