ಗುರುವಾರ , ಡಿಸೆಂಬರ್ 12, 2019
26 °C
ಸಮಾವೇಶಕ್ಕೆ ಜಾಗ ಕೊಡದಿದ್ದಕ್ಕೆ ಕಾರ್ಮಿಕರಿಗೆ ಥಳಿತ: ಎಸ್‌.ಟಿ.ಸೋಮಶೇಖರ್ ವಿರುದ್ಧ ಆಕ್ರೋಶ

ಎಂಎಲ್‌ಎ ಬೆಂಬಲಿಗರ ದಾಂದಲೆ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಂಎಲ್‌ಎ ಬೆಂಬಲಿಗರ ದಾಂದಲೆ: ಆರೋಪ

ಬೆಂಗಳೂರು: 'ಕಾಂಗ್ರೆಸ್ ಸಮಾವೇಶ ನಡೆಸಲು ಜಾಗ ಕೊಡಲಿಲ್ಲ ಎಂಬ ಕಾರಣಕ್ಕೆ ಯಶವಂತಪುರ ಶಾಸಕ ಎಸ್‌.ಟಿ.ಸೋಮಶೇಖರ್ ಅವರ 30ಕ್ಕೂ ಹೆಚ್ಚು ಬೆಂಬಲಿಗರು, ನಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ’ ಎಂದು ತಿಗಳರಪಾಳ್ಯ ನಿವಾಸಿ ಪುಟ್ಟರಾಜು ಆರೋಪಿಸಿದ್ದಾರೆ.

ಫೆ.17ರ ರಾತ್ರಿ ಕೆಲ ಪುರುಷರು ಹಾಗೂ ಮಹಿಳೆಯರು ದೊಣ್ಣೆಗಳನ್ನು ಹಿಡಿದುಕೊಂಡು ಕಾರ್ಮಿಕರನ್ನು ಓಡಿಸಿಕೊಂಡು ಹೋಗುತ್ತಿರುವ ದೃಶ್ಯ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಲ್ಲೆಯಿಂದ ಗಾಯಗೊಂಡಿರುವ ಕಾರ್ಮಿಕ ಸತೀಶ್, ಬಸವೇಶ್ವರನಗರದ ಅಶೋಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬ್ಯಾಡರಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

’ಸೋಮಶೇಖರ್ ಅವರು ಭಾನುವಾರ (ಫೆ.18) ‘ಮನೆ–ಮನೆಗೆ ಕಾಂಗ್ರೆಸ್’ ಸಮಾವೇಶ ಆಯೋಜಿಸಿ, ಸ್ಥಳೀಯ ನಿವಾಸಿಗಳಿಗೆ ಕುಕ್ಕರ್ ವಿತರಿಸಲು ನಿರ್ಧರಿಸಿದ್ದರು. ಸಮಾವೇಶ ನಡೆಸಲು ತಿಗಳರಪಾಳ್ಯದ ಸುತ್ತಮುತ್ತಲ ಪ್ರದೇಶಗಳಲ್ಲಿ ಜಾಗ ಹುಡುಕುತ್ತಿದ್ದ ಅವರಿಗೆ, ನನ್ನ ನಾಲ್ಕು ಎಕರೆ ಜಮೀನು ಕಣ್ಣಿಗೆ ಬಿದ್ದಿತ್ತು’ ಎಂದು ಪುಟ್ಟರಾಜು ದೂರಿದ್ದಾರೆ.

‘ಇದೇ ವಿಚಾರವಾಗಿ ಫೆ.15ರಂದು ಅವರು ನನ್ನನ್ನು ಸಂಪರ್ಕಿಸಿದಾಗ, ಯಾವುದೇ ಕಾರಣಕ್ಕೂ ಸಮಾವೇಶಕ್ಕಾಗಿ ಜಮೀನನ್ನು ನೀಡುವುದಿಲ್ಲ. ಕಾರ್ಯಕ್ರಮ ಮುಗಿದ ಬಳಿಕ ನೀವು ಕಸದ ರಾಶಿಯನ್ನು ಹಾಗೆಯೇ ಬಿಟ್ಟು ಹೋಗುತ್ತೀರಿ. ಈಗಾಗಲೇ ಜಮೀನಿನ ಸುತ್ತಲೂ ಕಾಂಪೌಂಡ್ ಹಾಕಿಸುತ್ತಿದ್ದೇವೆ. ಸಮಾವೇಶಕ್ಕೆ ಅವಕಾಶ ಕೊಟ್ಟರೆ, ಅದನ್ನು ಸಹ ಕೆಡವಿಬಿಡುತ್ತೀರಾ ಎಂದಿದ್ದೆ. ಇದರಿಂದ ಕುಪಿತಗೊಂಡು ಬೆಂಬಲಿಗರಿಂದ ಗಲಾಟೆ ಮಾಡಿಸಿದ್ದಾರೆ.’

’ಈ ಜಾಗದ ವಿಚಾರಕ್ಕೆ ನನಗೂ ಶಾಸಕರಿಗೂ ಹಲವು ವರ್ಷಗಳಿಂದ ಭಿನ್ನಾಬಿಪ್ರಾಯವಿದೆ. ಅವರು ಏನಾದರೂ ಮಾತನಾಡುವುದಿದ್ದರೆ ನನ್ನ ಬಳಿ ಬರಬೇಕಿತ್ತು. ಅದನ್ನು ಬಿಟ್ಟು ಕಾರ್ಮಿಕರಿಗೆ ಹೊಡೆಸುವ ಪ್ರಮೇಯ ಏನಿತ್ತು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪುಟ್ಟರಾಜು ಅವರು ಜಮೀನಿಗೆ ಕಾಂಪೌಂಡ್ ಹಾಕಿಸುವ ಜವಾಬ್ದಾರಿಯನ್ನು ನನಗೆ ವಹಿಸಿದ್ದರು. ಸ್ಥಳೀಯ ಕಾರ್ಮಿಕರಾದ ಮಹೇಶ್, ಚಿಕ್ಕಣ್ಣ, ಜೋಗಣ್ಣಗೌಡ ಎಂಬುವರ ಜತೆ ಸೇರಿ ಫೆ.12ರಿಂದ ಕೆಲಸ ಪ್ರಾರಂಭಿಸಿದ್ದೆ. ಶನಿವಾರ ಜಮೀನಿನ ಬಳಿ ಬಂದ ಸ್ಥಳೀಯರ ಗುಂಪು, ಮನಸೋಇಚ್ಛೆ ಹಲ್ಲೆ ನಡೆಸಿತು. ಕೆಲವರು ಕಲ್ಲಿನಿಂದ ನನ್ನ ಎದೆಗೆ ಗುದ್ದಿದರು’ ಎಂದು ಸತೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

***

ಎಫ್‌ಐಆರ್‌ನಲ್ಲಿ ಹೆಸರುಗಳಿಲ್ಲ

‘ಫಿರ್ಯಾದಿಯು ದೂರಿನ ಅರ್ಜಿಯಲ್ಲಿ ನಿರ್ದಿಷ್ಟವಾಗಿ ಯಾರ ಹೆಸರನ್ನೂ ಹೇಳಿಲ್ಲ. ‘ಗುಂಪೊಂದು ಹಲ್ಲೆ ಮಾಡಿತು’ ಎಂದಷ್ಟೇ ಹೇಳಿದ್ದರು. ಹೀಗಾಗಿ, ಅದೇ ರೀತಿ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಪ್ರಾರಂಭಿಸಿದ್ದೇವೆ’ ಎಂದು ಬ್ಯಾಡರಹಳ್ಳಿ ಪೊಲೀಸರು ಹೇಳಿದ್ದಾರೆ.

**

ಬೆಂಬಲಿಗರಾಗಿದ್ದರೆ ಬಟ್ಟೆ ಬಿಚ್ಚಿಸಿ ಮೆರವಣಿಗೆ: ಸೋಮಶೇಖರ್‌

ಈ ಆರೋಪವನ್ನು ನಿರಾಕರಿಸಿರುವ ಎಸ್‌.ಟಿ. ಸೋಮಶೇಖರ್, ‘ತಿಗಳರಪಾಳ್ಯದಲ್ಲಿ ಸಾವಿರಕ್ಕೂ ಹೆಚ್ಚು ಮನೆಗಳಿವೆ. ಅವರ ಓಡಾಟಕ್ಕೆ ಇರುವುದು ಒಂದೇ ರಸ್ತೆ. ಪುಟ್ಟರಾಜು ಆ ರಸ್ತೆಗೆ ಅಡ್ಡಲಾಗಿ ಕಾಂಪೌಂಡ್ ಕಟ್ಟುತ್ತಿದ್ದರು. ಇದರಿಂದ ಸ್ಥಳೀಯರು ಸಿಟ್ಟಾಗಿ ಗಲಾಟೆ ಮಾಡಿದ್ದಾರೆ. ಅವರ‍್ಯಾರೋ ಹೊಡೆದಾಡಿಕೊಂಡಿದ್ದು ಈಗ ನನ್ನ ಬುಡಕ್ಕೇ ಬಂದಿದೆ’ ಎಂದರು.

‘ಪುಟ್ಟರಾಜು ಕೂಡ ಕಾಂಗ್ರೆಸ್ ಕಾರ್ಯಕರ್ತ. ಆದರೂ, ಸಮಾವೇಶಕ್ಕೆ ಜಾಗ ಕೊಡುವಂತೆ ನಾನು ಆತನನ್ನು ಕೇಳಲಿಲ್ಲ. ನಾಲ್ಕು ದಿನಗಳ ಹಿಂದೆಯೇ ಬೇರೆಡೆ ಜಾಗ ನೋಡಿ, ಅಲ್ಲಿ ಶಾಮಿಯಾನವನ್ನೂ ಹಾಕಿಸಿದ್ದೆ. ವಿನಾ ಕಾರಣ ನನ್ನ ಮೇಲೆ ಆರೋಪ ಮಾಡಿದ್ದಾನೆ. ದಾಂದಲೆ ನಡೆಸಿದವರನ್ನು ಪತ್ತೆ ಮಾಡುವಂತೆ ಈಗಾಗಲೇ ಪೊಲೀಸರಿಗೆ ಸೂಚನೆ ಕೊಟ್ಟಿದ್ದೇನೆ. ಅವರು ನನ್ನ ಬೆಂಬಲಿಗರೇ ಆಗಿದ್ದರೂ, ಬಟ್ಟೆ ಬಿಚ್ಚಿಸಿ ನಡುರಸ್ತೆಯಲ್ಲಿ ಮೆರವಣಿಗೆ ಮಾಡುವಂತೆ ಹೇಳಿದ್ದೇನೆ’ ಎಂದು ಹೇಳಿದರು.

 

ಪ್ರತಿಕ್ರಿಯಿಸಿ (+)