ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

35 ವರ್ಷಗಳಿಂದ ಗೆಲುವು ಕಾಣದ ಕಾಂಗ್ರೆಸ್!

Last Updated 23 ಫೆಬ್ರುವರಿ 2018, 9:16 IST
ಅಕ್ಷರ ಗಾತ್ರ

ಬೀದರ್: ‘ಅನುಭವ ಮಂಟಪ’ ಹೆಸರಲ್ಲಿ ವಿಶ್ವದ ಮೊದಲ ಸಂಸತ್ತು ರಚನೆಯಾದ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ರಾಜಕೀಯ ಇತಿಹಾಸವೇ ಭಿನ್ನವಾಗಿದೆ. ಇಲ್ಲಿಯ ಮತದಾರರು ಪಕ್ಷಕ್ಕಿಂತ ವ್ಯಕ್ತಿ ವರ್ಚಸ್ಸಿಗೆ ಆದ್ಯತೆ ನೀಡಿರುವುದು ಮೇಲ್ನೋಟಕ್ಕೆ ಕಂಡು ಬಂದರೂ ಮುಖಂಡರ ಹೊಂದಾಣಿಕೆ ರಾಜಕೀಯ ನಾಯಕತ್ವವನ್ನು ದುರ್ಬಲಗೊಳಿಸಿದೆ.

ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರ ಹೊಂದಾಣಿಕೆ ರಾಜಕೀಯದಿಂದಾಗಿ ಬಸವಕಲ್ಯಾಣ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ 35 ವರ್ಷಗಳಿಂದ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. 2008ರಲ್ಲಿ ಖಾತೆ ತೆರೆದ ಬಿಜೆಪಿ ಮತ್ತೆ ಆಯ್ಕೆ ಆಗಿಲ್ಲ. ಲಾರಿ ಮಾಲೀಕರ ಲಾಬಿ ಹಾಗೂ ಕ್ಷೇತ್ರದ ಕಾಂಗ್ರೆಸ್‌ನಲ್ಲಿರುವ ದುರ್ಬಲ ನಾಯಕತ್ವದಿಂದಾಗಿ ಜನತಾ ಪರಿವಾರ ತನ್ನ ವರ್ಚಸ್ಸು ಬೆಳೆಸಿಕೊಂಡಿದೆ.

ವೈಯಕ್ತಿಕ ವರ್ಚಸ್ಸಿನ ಮೇಲೆ ನಾಲ್ಕು ಬಾರಿ ಆಯ್ಕೆಯಾದವರೂ ಇಲ್ಲಿದ್ದಾರೆ. ಕಾಂಗ್ರೆಸ್‌ ನಾಲ್ಕು ಬಾರಿ ಗೆದ್ದರೆ, ಜೆಡಿಎಸ್‌ ಮೂರು ಬಾರಿ ಗೆಲುವು ಸಾಧಿಸಿದೆ. ಜನತಾ ಪಕ್ಷ ಹಾಗೂ ಜನತಾ ದಳ ತಲಾ ಎರಡು ಬಾರಿ ಗೆದ್ದಿವೆ.

1957 ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅನ್ನಪೂರ್ಣಬಾಯಿ ರಗಟೆ ಚುನಾಯಿತರಾಗಿದ್ದರು. ಅವರು 1962ರಲ್ಲಿ ನಡೆದ ಚುನಾವಣೆಯಲ್ಲೂ ಮರು ಆಯ್ಕೆಯಾಗಿದ್ದರು.

ಅನ್ನಪೂರ್ಣಬಾಯಿ 1967ರಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾಗ ಶೇ 21.82 ರಷ್ಟು ಮತಗಳನ್ನು ಮಾತ್ರ ಪಡೆದು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿದ್ರಾಮಪ್ಪ ಸಂಗನಬಸಪ್ಪ ಆಯ್ಕೆಯಾಗಿದ್ದರು.

1972 ಹಾಗೂ 1978ರಲ್ಲಿ ಮರಾಠಾ ಸಮುದಾಯದ ಕಾಂಗ್ರೆಸ್‌ನ ಬಾಪುರಾವ್‌ ಹುಲಸೂರಕರ್‌ ಅವರನ್ನು ಎರಡು ಬಾರಿ ಆಯ್ಕೆ ಮಾಡಿ ಕಳಿಸಿದ ನಂತರ ಕ್ಷೇತ್ರದ ಮತದಾರರು ಕಾಂಗ್ರೆಸ್‌ಗೆ ಬೆಂಬಲ ನೀಡಿಲ್ಲ. ವೈಯಕ್ತಿಕ ವರ್ಚಸ್ಸು ಹೊಂದಿದ ಮುಖಂಡರೇ ಗೆಲ್ಲುತ್ತ ಬಂದಿದ್ದಾರೆ.

‘ಕಾಂಗ್ರೆಸ್‌ ದೊಡ್ಡ ಪಕ್ಷ. ಬಸವಕಲ್ಯಾಣದಲ್ಲಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆಯೂ ಅಧಿಕ ಇರುತ್ತದೆ. ಟಿಕೆಟ್‌ ಸಿಗದೇ ಇದ್ದಾಗ ಬಂಡಾಯ ಅಭ್ಯರ್ಥಿಯಾಗಿ ನಿಲ್ಲುತ್ತಾರೆ. ಬಹುತೇಕ ಅಭ್ಯರ್ಥಿಗಳಿಗೆ ನೆಚ್ಚಿಕೊಂಡವರೇ ಟಾಂಗ್ ಕೊಡುತ್ತಾರೆ. ಇದೇ ಕಾರಣಕ್ಕೆ ಕಾಂಗ್ರೆಸ್‌ 35 ವರ್ಷಗಳಿಂದ ಗೆಲುವು ಸಾಧಿಸಿಲ್ಲ’ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಕಾಜಿ ಅರ್ಷದ್ ಅಲಿ ಹೇಳುತ್ತಾರೆ.

‘ಬಸವಕಲ್ಯಾಣದಲ್ಲಿ 10 ಸಾವಿರ ಲಾರಿಗಳು ಇವೆ. ಸರಕು ಸಾಗಣೆ ಉದ್ಯಮ ಪ್ರಬಲವಾಗಿದೆ. ಈ ಉದ್ಯಮದಲ್ಲಿ ಮುಸ್ಲಿಮರು ಹಾಗೂ ಲಿಂಗಾಯತರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಪ್ರತಿ ಚುನಾವಣೆಯಲ್ಲಿ ಲಾರಿ ಮಾಲೀಕರ ಲಾಬಿ ತೆರೆಮರೆಯಲ್ಲಿ ಕೆಲಸ ಮಾಡುತ್ತದೆ’ ಎನ್ನುತ್ತಾರೆ ಅವರು.

‘ಜಾತಿ ರಾಜಕಾರಣ, ಪಕ್ಷದೊಳಗಿನ ಅತೃಪ್ತರ ಪಕ್ಷ ವಿರೋಧಿ ಚಟುವಟಿಕೆಯೂ ಕಾಂಗ್ರೆಸ್‌ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿರುವುದು ಕಂಡು ಬಂದಿದೆ’ ಎಂದು ವಿವರಿಸುತ್ತಾರೆ.

ಜನತಾ ಪರಿವಾರದ ಪ್ರಭಾವ: ರಾಮಕೃಷ್ಣ ಹೆಗಡೆ ಪ್ರಭಾವಕ್ಕೆ ಒಳಗಾಗಿದ್ದ ಬಸವರಾಜ ಪಾಟೀಲ ಅಟ್ಟೂರ್ ಅವರು ಮೊದಲ ಬಾರಿಗೆ 1983ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಚುನಾಯಿತರಾಗಿದ್ದರು. ನವಾಬ ಕಮಲೋದ್ದೀನ್‌ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರಿಂದ ಮತಗಳು ವಿಭಜನೆ ಆಗಿದ್ದವು. ಕಾಂಗ್ರೆಸ್‌ ಅಭ್ಯರ್ಥಿ ಬಾಪುರಾವ್ ಹುಲಸೂರಕರ್‌ ಸೋಲು ಅನುಭವಿಸಿದ್ದರು.

1985ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮರಾಠಾ ಸಮಾಜದ ಮಾರುತಿರಾವ್‌ ಮುಳೆ ಪ್ರಬಲ ಪೈಪೋಟಿ ನೀಡಿದ್ದರೂ ಲಿಂಗಾಯತ ಮತಗಳು ಒಂದೇ ಕಡೆ ಬಂದ ಕಾರಣ ಬಸವರಾಜ ಪಾಟೀಲ ಅಟ್ಟೂರ್ ಜನತಾ ಪಕ್ಷದಿಂದ ಆಯ್ಕೆಯಾಗಿದ್ದರು. ಇದೇ ಅವಧಿಯಲ್ಲಿ ತಮ್ಮ ವೋಟ್‌ ಬ್ಯಾಂಕ್‌ ಸೃಷ್ಟಿಸಿಕೊಂಡರು.

ಜನತಾ ಪಕ್ಷ ಆಂತರಿಕ ಭಿನ್ನಾಭಿಪ್ರಾಯದಿಂದಾಗಿ ಬಸವರಾಜ ಪಾಟೀಲ ಅಟ್ಟೂರ್ 1989 ಹಾಗೂ 1994ರಲ್ಲಿ ಜನತಾ ದಳದಿಂದ ಚುನಾಯಿತರಾಗಿದ್ದರು. 1999ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಾರುತಿರಾವ್‌ ಮುಳೆ ಶೇ 50.61ರಷ್ಟು ಮತಗಳನ್ನು ಪಡೆದು ವಿಜಯ ಪತಾಕೆ ಹಾರಿಸಿದ್ದರು. ಅಟ್ಟೂರ್ ಅವರನ್ನು ಸೋಲಿಸಿ ಮತದಾರರು ರಾಜಕಾರಣಿಗಳಿಗೆ ನಾವು ಯಾವುದೇ ಒಂದು ಸಮುದಾಯದ ಪರವಾಗಿಲ್ಲ ಎನ್ನುವ ಸಂದೇಶ ನೀಡಿದ್ದರು.

2004ರಲ್ಲಿ ಲಿಂಗಾಯತರಿಗೆ ಆದ್ಯತೆ ಕೊಡಲು ದೇವೇಗೌಡರು ಮಲ್ಲಿಕಾರ್ಜುನ ಖೂಬಾ ಅವರಿಗೆ ಜೆಡಿಎಸ್‌ ಟಿಕೆಟ್‌ ನೀಡಿದ್ದರು. ಪಕ್ಷಾಂತರ ಮಾಡಿ ಕಾಂಗ್ರೆಸ್‌ಗೆ ಬಂದ ಕಾರಣ ಮಾರುತಿರಾವ್‌ ಮುಳೆ ಅವರನ್ನು ಮತದಾರರು ತಿರಸ್ಕರಿಸಿದ್ದರು. ಜೆಡಿಎಸ್‌ ಅಭ್ಯರ್ಥಿಗೆ ಮಣೆ ಹಾಕಿದ್ದರು.

ಜನತಾ ಪಕ್ಷ, ಜನತಾ ದಳ, ಜನತಾ ದಳ(ಸಂಯುಕ್ತ)ದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಬಸವರಾಜ ಪಾಟೀಲ ಅಟ್ಟೂರ್ ಅವರು ರಾಜಕೀಯ ಮರು ಜೀವ ಪಡೆಯಲು 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದಾಗ ಮತದಾರರು ಅವರನ್ನು ಗೆಲ್ಲಿಸಿ ಬಿಜೆಪಿ ಖಾತೆ ತೆರೆಯಲು ಬೆಂಬಲಿಸಿದ್ದರು. 2013ರಲ್ಲಿ ಅಟ್ಟೂರ್ ಅವರ ಪತ್ನಿ ಮಲ್ಲಮ್ಮ ಕೆಜೆಪಿಯಿಂದ ಸ್ಪರ್ಧಿಸಿದ್ದರು. ಅವರು ಪ್ರಬಲ ಪೈಪೋಟಿ ನೀಡಿದರೂ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ ಖೂಬಾ ಚುನಾಯಿತರಾದರು.

‘ಒಳ್ಳೆಯ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸುವಲ್ಲಿ ವಿಫಲವಾಗಿರುವ ಕಾರಣ ರಾಷ್ಟ್ರೀಯ ಪಕ್ಷಗಳು ಮುಖಭಂಗ ಅನುಭವಿಸುತ್ತಿವೆ. ನನ್ನ 35 ವರ್ಷಗಳ ರಾಜಕೀಯ ಅನುಭವದಿಂದ ಹೇಳುವುದಾದರೆ ಬಸವಕಲ್ಯಾಣದ ಜನ ಜಾತಿ ಹೆಸರಲ್ಲಿ ಮತ ಚಲಾವಣೆ ಮಾಡಿದ್ದು ಬಹಳ ಕಡಿಮೆ’ ಎಂದು ಮಾಜಿ ಸಚಿವ ಬಸವರಾಜ ಪಾಟೀಲ ಅಟ್ಟೂರ್ ಹೇಳುತ್ತಾರೆ.

‘2003ರಲ್ಲಿ ನಾನು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದೆ. ಟಿಕೆಟ್‌ ದೊರೆಯದ ಕಾರಣ ಅಸಮಾಧಾನಗೊಂಡಿದ್ದ ಪಕ್ಷದೊಳಗಿನ ಮುಖಂಡರೇ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು. ಕಾಂಗ್ರೆಸ್‌ನವರೇ ತಮ್ಮ ಅಭ್ಯರ್ಥಿಯನ್ನು ಸೋಲಿಸಿದರು’ ಎಂದು ಮಾಜಿ ಶಾಸಕ ಮಾರುತಿರಾವ್‌ ಮುಳೆ ವಿವರಿಸುತ್ತಾರೆ.

‘ಬಿಜೆಪಿಯಲ್ಲಿ ಒಂದು ಶಿಸ್ತು ಇದೆ. ಪಕ್ಷದ ಟಿಕೆಟ್‌ ದೊರೆಯದಿದ್ದರೂ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಪ್ರಸಂಗಗಳು ಕಾಣಸಿಗುವುದು ಬಹಳ ಅಪರೂಪ’ ಎಂದು ಹೇಳುತ್ತಾರೆ.

ಬಸವಕಲ್ಯಾಣದ ಮೇಲೆ ಕಾಂಗ್ರೆಸ್‌ ಕಣ್ಣು

ಬೀದರ್‌: ಈ ಬಾರಿ ಬಸವಕಲ್ಯಾಣ ಕ್ಷೇತ್ರವನ್ನು ಗೆದ್ದುಕೊಳ್ಳಲು ಕಾಂಗ್ರೆಸ್‌ ಎಲ್ಲ ರೀತಿಯ ಪ್ರಯತ್ನ ನಡೆಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್‌ 13 ರಂದು ಬಸವಕಲ್ಯಾಣದಲ್ಲಿ ‘ಸಾಧನಾ ಸಂಭ್ರಮ’ ಕಾರ್ಯಕ್ರಮದ ಭಾಗವಾಗಿ ₹ 264 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರೂ ಬಹಿರಂಗ ಸಭೆ ನಡೆಸಿ ‘ನುಡಿದಂತೆ ನಡೆದಿದ್ದೇವೆ...’ ಎಂದು ಕನ್ನಡದಲ್ಲೇ ಹೇಳಿ ಮತದಾರರನ್ನು ಸೆಳೆಯಲು ಪ್ರಯತ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT