ಬುಧವಾರ, ಡಿಸೆಂಬರ್ 11, 2019
26 °C
–ಎನ್ವಿ

ಹುಮಾಗೆ ಹುಮ್ಮಸ್ಸು ತುಂಬಿದ ಸವಾಲು

Published:
Updated:
ಹುಮಾಗೆ ಹುಮ್ಮಸ್ಸು ತುಂಬಿದ ಸವಾಲು

ದೆಹಲಿಯ ಗ್ರೇಟರ್ ಕೈಲಾಷ್ 2 ಎಂಬ ಪ್ರದೇಶದಲ್ಲಿ ‘ಸಲೀಮ್ಸ್‌’ ಎಂಬ ಕಬಾಬ್ ಅಂಗಡಿ. ಅದರ ರುಚಿ ಸುತ್ತಮುತ್ತ ಹೆಸರುವಾಸಿ. ಅಂಗಡಿಯ ಮಾಲೀಕರಿಗೆ ಮುದ್ದಾದ, ದುಂಡಗಿನ ಮಗಳು. ಆಗೀಗ ಗಲ್ಲಾದ ಮೇಲೆ ಕೂತರೆ, ಗುರಾಯಿಸುವವರಿದ್ದರು. ಅದೇ ಕಾರಣಕ್ಕೆ ಮಗಳು ಅಲ್ಲಿ ಕೂರುವುದು ಅಪ್ಪನಿಗೆ ಇಷ್ಟವಿರಲಿಲ್ಲ. ಆದರೆ, ಹುಡುಗಿಗೆ ಆತ್ಮಸಂರಕ್ಷಣೆ ಚೆನ್ನಾಗಿ ಗೊತ್ತಿತ್ತು. ತುಂಟು ನೋಟ ಹರಿಸುವವರ ಮುಖದಲ್ಲಿ ನೀರಿಳಿಸುವಂತೆ ಮಾತನಾಡಿ, ಕಬಾಬ್ ಬಿಲ್ಲನ್ನು ವಸೂಲು ಮಾಡಿ ಕಳುಹಿಸುವುದರಲ್ಲಿ ನಿಸ್ಸೀಮಳು.

ಇತಿಹಾಸದಲ್ಲಿ ಪದವಿ ಪಡೆದಿದ್ದ ಹುಡುಗಿಗೆ ನಟಿಯಾಗುವ ಕನಸು. ಅಪ್ಪನಿಗೆ ಮಗಳು ವಿದೇಶಕ್ಕೆ ಹೋಗಿ ಇನ್ನಷ್ಟು ಓದಲಿ ಎಂಬ ಆಸೆ. ನಾಟಕದ ನಂಟಿನಿಂದ ಸಿನಿಮಾ ಮೊಗಸಾಲೆಗೆ ಜಿಗಿಯಲೆಂದು ಮುಂಬೈಗೆ ಹೊರಟ ಹುಡುಗಿಯ ಎದುರು ನಿಂತಿದ್ದ ಅಪ್ಪ ಸವಾಲೆಸೆದರು- ‘ಸಾಧಿಸಿ ತೋರಿಸು; ಇಲ್ಲ ದುಃಖಿಸು’. ಹುಮಾ ಖುರೇಷಿ ನಟಿಯಾಗುವ ಕನಸನ್ನು ಕಣ್ಣಲ್ಲಿ ಇಟ್ಟುಕೊಂಡೂ ಅದರಲ್ಲಿ ತುಂಬಿದ್ದ ನೀರನ್ನು ಒರೆಸಿಕೊಂಡ ಮೇಲೆ ಅಪ್ಪ ಅಪ್ಪಿಕೊಂಡರು. ಮಗಳಿಗೆ ಒಂದು ಮನೆ ಮಾಡಿಕೊಟ್ಟು, ಕಾರು ಕೊಡಿಸಿಬರುವುದಾಗಿ ಹೆಂಡತಿಗೆ ಹೇಳಿದರು. ಆದರೆ, ಹುಮಾ ಅದಕ್ಕೆ ಒಪ್ಪಲಿಲ್ಲ. ಅಪ್ಪನ ಸವಾಲನ್ನು ಅದಾಗಲೇ ಅವರು ಗಂಭೀರವಾಗಿ ತೆಗೆದುಕೊಂಡು ಆಗಿತ್ತು.

ಮುಂಬೈನಲ್ಲಿ ಮೊದಲು ಪೇಯಿಂಗ್ ಗೆಸ್ಟ್ ಆದರು. ಅಭಿಷೇಕ್ ಬಚ್ಚನ್ ಜೊತೆ ಮೊದಲ ಜಾಹೀರಾತಿನಲ್ಲಿ ಅಭಿನಯಿಸಿದಾಗ ಸಿಕ್ಕ ಸಂಭಾವನೆ 5 ಸಾವಿರ ರೂಪಾಯಿ. ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಸೋದರ ಸಕೀಬ್ ಸಲೀಂ ಬಾಂದ್ರಾದಲ್ಲಿ ಬಾಡಿಗೆಗೆ ಒಂದು ಮನೆ ಮಾಡಿದರು. ಅಲ್ಲಿ ಇಬ್ಬರೂ ತಮ್ಮ ಕನಸುಗಳನ್ನು ನೇವರಿಸತೊಡಗಿದರು. ಹಿಂದೂಸ್ತಾನ್ ಯೂನಿಲಿವರ್ ಕಂಪನಿಯ ಜಾಹೀರಾತುಗಳಿಗೆ ರೂಪದರ್ಶಿಯಾಗುವ ದೀರ್ಘಾವಧಿ ಅವಕಾಶ ಒಲಿದುಬಂದಾಗ ಅದನ್ನು ಹುಮಾ ಒಪ್ಪಿಕೊಂಡಿದ್ದು ತಿಂಗಳ ಖರ್ಚನ್ನು ತೂಗಿಸಲೆಂದೇ. ಮಧ್ಯೆ ಒಂದು ಸಿನಿಮಾ ಆಡಿಷನ್‌ಗೆ ಹೋಗಿ ಆಯ್ಕೆಯಾಗಿ ಬಂದರಾದರೂ, ಅದರ ಚಿತ್ರೀಕರಣ ಶುರುವಾಗಲೇ ಇಲ್ಲ.

ಆಗಾಗ ಅಪ್ಪ-ಅಮ್ಮ ಹೋಗಿ, ಮಕ್ಕಳ ಯೋಗಕ್ಷೇಮ ವಿಚಾರಿಸಿಕೊಂಡು ಬರುತ್ತಿದ್ದರು. ಜಾಹೀರಾತಿನಲ್ಲಿ ಮಗಳ ಮುಖ ಕಂಡಾಗ ಅಪ್ಪನಿಗೆ ಕೊಂಚ ಸಮಾಧಾನ. ಆಡಿಷನ್ ಫಲಕಾರಿ ಆಗಲಿಲ್ಲ ಎಂದು ಗೊತ್ತಾಗಿ ಅಮ್ಮ ನೊಂದುಕೊಂಡಿದ್ದೂ ಇದೆ.

ಹೀಗೆಲ್ಲ ಏರುಪೇರುಗಳಾಗುವಾಗ ಸ್ಯಾಮ್‌ಸಂಗ್ ಮೊಬೈಲ್ ಜಾಹೀರಾತು ಚಿತ್ರೀಕರಣದ ಸಂದರ್ಭದಲ್ಲಿ ನಿರ್ದೇಶಕ ಅನುರಾಗ್ ಕಶ್ಯಪ್ ಕಣ್ಣಿಗೆ ಹುಮಾ ಬಿದ್ದರು. ಅವರ ಹಾವ-ಭಾವ ನೋಡಿಯೇ ಅಭಿನಯ ಸಾಮರ್ಥ್ಯವನ್ನು ಅಳೆದ ನಿರ್ದೇಶಕ, ‘ಗ್ಯಾಂಗ್ಸ್ ಆಫ್ ವಸೇಪುರ್’ ಕ್ರೈಮ್ ಥ್ರಿಲ್ಲರ್‌ನ ಎರಡೂ ಸರಣಿಗಳಲ್ಲಿ ನಟಿಸುವ ಅವಕಾಶ ಕೊಟ್ಟರು.

200 ನಟ-ನಟಿಯರ ತುರುಸಿನ ಸ್ಪರ್ಧೆಯಲ್ಲಿ ತೇಲಿಬಂದು, ಛಾಪು ಮೂಡಿಸಿದ್ದು ಹುಮಾ ಹಾಗೂ ನವಾಜುದ್ದೀನ್ ಸಿದ್ದಿಕಿ. ತಮಿಳಿನ ‘ಬಿಲ್ಲಾ 2’ ಸಿನಿಮಾಗೆ ನಾಯಕಿಯಾಗುವ ಅವಕಾಶ ಸಿಕ್ಕಿತ್ತು, ಚಿತ್ರೀಕರಣ ಪ್ರಾರಂಭವಾಗುವುದು ತುಂಬಾ ತಡವಾಯಿತೆಂದು ಹುಮಾ ಬೇರೆ ಕೆಲಸವನ್ನು ಒಪ್ಪಿಕೊಂಡರು. ‘ಸಣ್ಣ ಬೆಟ್ಟವನ್ನೂ ಹತ್ತಲಾಗದ ಡುಮ್ಮಿ’ ಎಂದು ಸ್ನೇಹಿತೆ ಕಿಚಾಯಿಸಿದ್ದನ್ನೇ ಸವಾಲಾಗಿ ಸ್ವೀಕರಿಸಿ, ಒಂದೊಮ್ಮೆ ಮಲೇಷ್ಯಾದ ಬೋರ್ನಿಯೊ ದ್ವೀಪದಲ್ಲಿ 4000 ಮೀಟರ್‌ನಷ್ಟು ಚಾರಣ ಮಾಡಿ ಬಂದವರೂ ಅವರೇ.

ಹುಮಾ ಬೆಳೆದರು. ಮುಂಬೈನ ಅಂಧೇರಿಯಲ್ಲಿ ಸ್ವಂತ ಮನೆ ಕೊಂಡು, ಅದರ ಮುಂದೆ ರೇಂಜ್ ರೋವರ್ ಕಾರನ್ನು ತಂದು ನಿಲ್ಲಿಸಿದರು. ಫೋನಾಯಿಸಿ ಅಪ್ಪನನ್ನು ಕರೆದರು. ‘ನೋಡಪ್ಪಾ, ನಿನ್ನ ಮಗಳ ಮನೆ, ಕಾರು’ ಎಂದಾಗ ಅಪ್ಪನ ಹೃದಯ ತುಂಬಿಬಂತು. ‘ನೀನು ಸಾಧಿಸಿದೆ ಮಗಳೇ’ ಎಂದು ಅವರು ಅಪ್ಪಿಕೊಂಡರು. ಆಗಲೂ ಅಡುಗೆಮನೆಯ ಶೆಲ್ಫ್‌ನಲ್ಲಿ ‘ಸಲೀಮ್ಸ್‌’ ರೆಸ್ಟೋರೆಂಟ್‌ನಿಂದ ತಂದ ಕಬಾಬ್ ತುಂಡುಗಳು ಇದ್ದವು. ಅಪ್ಪ ಹಾಗೂ ಅವರದ್ದೇ ಬ್ರಾಂಡ್‌ನ ಕಬಾಬ್-ಎರಡೂ ಹುಮಾಗೆ ತುಂಬಾ ಇಷ್ಟ.

ಪ್ರತಿಕ್ರಿಯಿಸಿ (+)