ಬುಧವಾರ, ಡಿಸೆಂಬರ್ 11, 2019
24 °C

ಇದು ವೆಬ್‌ ಸರಣಿಯ ಲೋಕ

Published:
Updated:
ಇದು ವೆಬ್‌ ಸರಣಿಯ ಲೋಕ

ಸಿನಿಮಾವೊಂದನ್ನು ಆನ್‌ಲೈನ್‌ ಮೂಲಕವೂ ಬಿಡುಗಡೆ ಮಾಡಬಹುದು ಮತ್ತು ತನ್ನದೇ ಆದ ವೀಕ್ಷಕ ವರ್ಗವನ್ನು ಸೃಷ್ಟಿಸಿ ದುಡ್ಡು ಬಾಚಿಕೊಳ್ಳಬಹುದು ಎಂಬುದನ್ನು ಚಿತ್ರ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಅವರ ‘ಗಾಡ್‌, ಸೆಕ್ಸ್‌ ಅಂಡ್‌ ಟ್ರೂತ್‌’ (ಜಿಎಸ್‌ಟಿ) ಸಾಬೀತುಮಾಡಿದೆ. ಆರ್‌ಜಿವಿ ಅವರಿಗೇನಾಗಿದೆ ಎಂದು ಗೇಲಿ ಮಾಡಿದ್ದ ಮಂದಿ, ಈಗ ಅವರು ಜಿಎಸ್‌ಟಿ ಮೂಲಕ ಕೋಟ್ಯಂತರ ರೂಪಾಯಿ ಗಳಿಸಿರುವುದನ್ನು ಕಂಡು ಬೆರಗಾಗಿದ್ದಾರೆ.

ವೆಬ್‌ ಸರಣಿ ಹಾಗೂ ಆನ್‌ಲೈನ್‌ ಮೂಲಕ ಸಿನಿಮಾ ಬಿಡುಗಡೆ ಮಾಡುವುದು ಭಾರತದಲ್ಲಿ ಹೊಸ ವೀಕ್ಷಕ ವಲಯವನ್ನೇ ಸೃಷ್ಟಿಸಿದೆ. ಹೀಗೆ ಆನ್‌ಲೈನ್‌ನಲ್ಲಿ ಅಂದರೆ ಅಂತರ್ಜಾಲ ಮೂಲಕ ಮನರಂಜನೆ ನೀಡುವುದನ್ನು ಒಟಿಟಿ (ಓವರ್ ದಿ ಟಾಪ್‌) ಎನ್ನುತ್ತಾರೆ. ಮೊಬೈಲ್‌ ಫೋನ್‌ಗಳ ಮೂಲಕ ಅಂತರ್ಜಾಲ ಸೇವೆ ಮತ್ತು ವೈಫೈ ಜನಸಾಮಾನ್ಯರಿಗೂ ಕೈಗೆಟಕುತ್ತಿರುವುದು ಒಟಿಟಿ ಮೂಲಕ ಮನರಂಜನೆ ಮತ್ತು ಹೊಸ ಮಾರುಕಟ್ಟೆ ಸೃಷ್ಟಿಸಲು ಕಾರಣವಾಗಿದೆ. 2016ರಲ್ಲಿ ಆರಂಭವಾದ ಈ ಟ್ರೆಂಡ್‌ 2017ರಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿತು.

ಹಾಟ್‌ಸ್ಟಾರ್‌, ವೂಟ್‌ನಂತಹ ಒಟಿಟಿಗಳು ಮನೆ ಮಾತಾಗಿದ್ದರೆ, ಯುಟ್ಯೂಬ್‌ ಮತ್ತು ವೆಬ್‌ ಸರಣಿಗಳಿಗೆ ಹೆಸರಾಗಿರುವ ಇನ್ನೂ ಕೆಲವು ಒಟಿಟಿಗಳು ಜನಪ್ರಿಯವಾಗಿವೆ.

ವೆಬ್‌ ಸರಣಿಗಳು ಜನಮೆಚ್ಚುಗೆ ಗಳಿಸಲು ಮೊದಲ ಕಾರಣ ವಸ್ತು ಅಥವಾ ವಿಷಯ. ಕಳೆದ ವರ್ಷ ಬಿಡುಗಡೆಯಾವುದಕ್ಕೂ ಮೊದಲು ಭಾರಿ ಸುದ್ದಿ ಮಾಡಿದ್ದ ‘ಬೋಸ್‌ ಡೆಡ್‌ ಆರ್‌ ಅಲೈವ್‌’ಅನ್ನು ‘ಆಲ್ಟ್‌ ಬಾಲಾಜಿ’ ಆನ್‌ಲೈನ್‌ಗೆ ತಂದಿತ್ತು. ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ ಜೀವನ ಮತ್ತು ಕಣ್ಮರೆ ಬಗ್ಗೆ ಈ ಸರಣಿ ಬೆಳಕು ಚೆಲ್ಲಿತ್ತು. ರಾಜ್‌ಕುಮಾರ್‌ ರಾವ್‌ ಮತ್ತು ಹನ್ಸಲ್‌ ಮೆಹ್ತಾ ಅವರ ತಾರಾ ವರ್ಚಸ್ಸೂ ಈ ಸರಣಿಗಿತ್ತು.

‘ಲಾಖೋಂ ಮೇ ಏಕ್‌’ ಎಂಬ ವೆಬ್‌ಸರಣಿಯನ್ನು ‘ಅಮೆಜಾನ್‌ ಪ್ರೈಮ್‌’ ಬಿಡುಗಡೆ ಮಾಡಿತ್ತು. ಐಐಟಿಯಲ್ಲಿ ಕಲಿಯಬೇಕು ಎಂದು ತಮ್ಮ ಮಕ್ಕಳ ಮೇಲೆ ಸಣ್ಣ ವಯಸ್ಸಿನಿಂದಲೇ ಹೆತ್ತವರು ಒತ್ತಡ ಹಾಕುವುದು, ಮಕ್ಕಳು ಅದರಿಂದಾಗಿ ಅನುಭವಿಸುವ ಸಂಕಷ್ಟಗಳು ಈ ಸರಣಿಯಲ್ಲಿ ಬೆಳಕು ಕಂಡಿದ್ದವು. ‘ದಂಗಾಲ್‌’ನಲ್ಲಿ ಅಮೀರ್‌ಖಾನ್‌ ಸಂಬಂಧಿಯಾಗಿ ನಟಿಸಿ ಗುರುತಿಸಿಕೊಂಡಿದ್ದ ರಿತ್ವಿಕ್‌ ಸಾಹೋರ್‌ ‘ಲಾಖೋಂ ಮೇ ಏಕ್‌’ನಲ್ಲಿ ಆಕಾಶ್‌ ಎಂಬ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು.

ತಾಹಿರ್‌ ರಾಜ್‌ ಭಾಸಿನ್‌ ಮತ್ತು ಸಾರಾ ಜೇನ್ ಡಯಾಸ್‌ ಜೋಡಿ ನಟಿಸಿದ್ದ ‘ಟೈಮ್‌ ಔಟ್‌’ ಸರಣಿಯನ್ನು ‘ವೂಟ್‌’ ಮಾಡಿತ್ತು. ಪಟ್ಟಣದ ಯುವಕನೊಬ್ಬ ಕೆಲಸ ಮತ್ತು ವೈವಾಹಿಕ ಜೀವನದ ಒತ್ತಡವನ್ನು ಏಕಕಾಲಕ್ಕೆ ನಿಭಾಯಿಸುವುದು, ನಿರೀಕ್ಷೆಗಳ ಭಾರವನ್ನು ಸಂಭಾಳಿಸುವುದು ಈ ಸರಣಿಯ ವಸ್ತು. ಮದುವೆಯ ವಯಸ್ಸಿನ ಯುವಜನರನ್ನು ಹಿಡಿದಿಡುವಂತಹ ನಿರೂಪಣೆ, ತಾಹಿರ್‌ ಮತ್ತು ಸಾರಾ ಅವರು ಪಾತ್ರಗಳನ್ನು ಆವಾಹಿಸಿಕೊಂಡಂತೆ ನಟಿಸಿದ್ದ ರೀತಿ ‘ಟೈಮ್‌ ಔಟ್‌’ ಪ್ರತಿ ವಾರ ಹೆಚ್ಚು ಹೆಚ್ಚು ವೀಕ್ಷಕರನ್ನು ತಲುಪಲು ಕಾರಣವಾಗಿತ್ತು.‌

2016ರ ಜೂನ್‌ 8ರಿಂದ ಆಗಸ್ಟ್‌ 23ರವರೆಗೆ ಫೇಸ್‌ಬುಕ್‌ ಮತ್ತು ಯೂಟ್ಯೂಬ್‌ನಲ್ಲಿ ಪ್ರಸಾರವಾದ ‘ಲೈಫ್‌ ಸಹಿ ಹೈ’ ವೆಬ್‌ ಸರಣಿ, ಪರವೂರಿನಲ್ಲಿ ಹೊಸದಾಗಿ ನೌಕರಿ ಹಿಡಿದ ಯುವಕರು ಸ್ವಾತಂತ್ರ್ಯ, ಸ್ವೇಚ್ಛೆ ಮತ್ತು ಸ್ವಾತಂತ್ರ್ಯವನ್ನು ಅರ್ಥ ಮಾಡಿಕೊಳ್ಳುವ ಬಗೆಯನ್ನು ಅನಾವರಣ ಮಾಡಿತ್ತು. ಅದಕ್ಕೂ ಮೊದಲು ‘ಪ್ಯಾರ್‌ ಕಾ ಪಂಚ್‌ನಾಮ’ ಎಂಬ ವೆಬ್‌ ಸರಣಿ ನೀಡಿದ್ದ ಲವ್‌ ರಂಜನ್‌ ಮತ್ತು ಅಂಕುರ್‌ ಗುಪ್ತಾ ಅವರು ತಮ್ಮ ‘ಲವ್‌ ಫಿಲ್ಮ್ಸ್‌’ ಮೂಲಕ ನಿರ್ಮಿಸಿದ್ದ ಸರಣಿ ಇದಾಗಿತ್ತು.

‘ರಾಗಿಣಿ ಎಂಎಂಎಸ್‌ ರಿಟರ್ನ್ಸ್‌’ ಖ್ಯಾತಿಯ ಕರಿಷ್ಮಾ ಶರ್ಮಾ ಈ ಸರಣಿಯಲ್ಲಿ ಮುಖ್ಯ ಭೂಮಿಕೆಯಲ್ಲಿದ್ದರು. ‘ಲೈಫ್‌ ಸಹಿ ಹೈ’ ಅತ್ಯಂತ ಸೆಕ್ಸಿ ವೆಬ್ ಸರಣಿ ಎಂಬ ಆರೋಪಕ್ಕೂ ಗುರಿಯಾಗಿತ್ತು. ಯುವ ವೀಕ್ಷಕರಿಗೆ ಬೇಕಾದ ಎಲ್ಲಾ ಬಗೆಯ ಮಸಾಲೆಗಳನ್ನೂ ಖಡಕ್ಕಾಗಿ ಬೆರೆಸಿದ್ದರಿಂದ ನಿರ್ಮಾಪಕರ ನಿರೀಕ್ಷೆಯಂತೆಯೇ ಸರಣಿ ಗೆದ್ದಿತ್ತು.

ಹೀಗೆ, ವೆಬ್‌ ಸರಣಿಗಳು ಯುವ ವೀಕ್ಷಕರು ಎಂಬ ಹೊಸ ತಲೆಮಾರಿನ ವೀಕ್ಷಕ ಜಗತ್ತನ್ನೇ ಸೃಷ್ಟಿಸಿಕೊಳ್ಳುತ್ತಿರುವಲ್ಲಿ ಒಟಿಟಿಗಳ ಪಾತ್ರ ಬಹಳ ದೊಡ್ಡದು.

ಪ್ರತಿಕ್ರಿಯಿಸಿ (+)