ಶುಕ್ರವಾರ, ಡಿಸೆಂಬರ್ 6, 2019
25 °C

‘ಗರ್ಭಕೋಶದ ಸಮಸ್ಯೆಯಿಂದ ಒಂಟಿತನ!’

Published:
Updated:
‘ಗರ್ಭಕೋಶದ ಸಮಸ್ಯೆಯಿಂದ ಒಂಟಿತನ!’

1. ನನಗೆ 32 ವರ್ಷ. ಖಾಸಗಿ ಕಂಪನಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದೇನೆ. ಹಣಕಾಸಿನ ಚಿಂತೆ ಇಲ್ಲ. ಆದರೆ, ಮದುವೆಯಾಗಿಲ್ಲ. ನಾನು ಪಿಯುಸಿ ಓದುತ್ತಿದ್ದಾಗ ‘ಇವಳಿಗೆ ಗರ್ಭಕೋಶವಿಲ್ಲ, ಮಕ್ಕಳಾಗುವುದಿಲ್ಲ’ ಎಂದು ವೈದ್ಯರು ಹೇಳಿದ್ದರು. ಆಗ ಅದರ ಬಗ್ಗೆ ಅಷ್ಟಾಗಿ ತಿಳಿಯಲಿಲ್ಲ ಮತ್ತು ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಈಗ ನನಗೆ ಭಯ ಶುರುವಾಗಿದೆ. ನಾನು ಒಂಟಿ ಎಂಬ ಕೊರಗು ಕಾಡುತ್ತಿದೆ. ಮುಂದೆ ವಯಸ್ಸಾಗುತ್ತಾ ಹೋದಂತೆ ನನಗೆ ಯಾರು ಜೊತೆ ಇರುವುದಿಲ್ಲ ಎಂಬ ಚಿಂತೆ ಕಾಡುತ್ತಿದೆ.

–ಸರ್ವಮಂಗಳ, ಸಂಡೂರು

ನಾನು ಈಗಲೂ ನಿಮಗೆ ಸಲಹೆ ನೀಡುವುದು ಏನೆಂದರೆ, ನೀವು ಪಟ್ಟಣದಲ್ಲಿ ಒಳ್ಳೆಯ ಸ್ತ್ರಿರೋಗತಜ್ಞೆಯನ್ನು ಭೇಟಿ ಮಾಡಿ, ನಿಮ್ಮ ಗರ್ಭಾಶಯದ ಕುರಿತು ವಾಸ್ತವವನ್ನು ತಿಳಿದುಕೊಳ್ಳುವುದು ಉತ್ತಮ. ನೀವು ಅದನ್ನು ಒಪ್ಪಿಕೊಳ್ಳಬೇಕು ಮತ್ತು ನಿಮಗೆ ತಿಳಿದಿದೆ, ಇದು ನಿಮ್ಮ ಅಥವಾ ಬೇರೆ ಯಾರಿಂದಲೋ ಆದ ಸಮಸ್ಯೆ ಅಲ್ಲ. ಕೆಲವರು ಅಂತಹ ಸಮಸ್ಯೆಯೊಂದಿಗೆ ಹುಟ್ಟಿರುತ್ತಾರೆ. ಆದರೆ, ಅದರ ಅರ್ಥ ನೀವು ಮದುವೆಯಾಗಲೂ ಸಾಧ್ಯವಿಲ್ಲ ಎಂಬುದಲ್ಲ. ಈಗ ನೀವು ತಕ್ಕ ಮಟ್ಟಿಗೆ ಪ್ರೌಢರಾಗಿದ್ದೀರಿ; ಇದು ನಿಮಗೆ ನೀವು ಸರಿಯಾದ ಬಾಳಸಂಗಾತಿಯನ್ನು ಆರಿಸಿಕೊಳ್ಳಲು ತಕ್ಕ ವಯಸ್ಸು. ನಿಮ್ಮ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ವ್ಯಕ್ತಿಯನ್ನು ನೀವು ಯಾವಾಗ ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು,.

ಅವರೊಂದಿಗೆ ನಿಮಗಿರುವ ದೈಹಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿ. ಯಾರಾದರೂ ನಿಮ್ಮ ಸಮಸ್ಯೆಯನ್ನು ಕೇಳಿಯೂ ಒಪ್ಪಿಕೊಳ್ಳುವವರು ಸಿಗಬಹುದು. ಏಕೆಂದರೆ ನೀವು ಆಗಲೂ ಉತ್ತಮ ಸಾಂಸಾರಿಕ ಜೀವನವನ್ನು ನಡೆಸಬಹುದು. ಆದರೆ ಮಗುವನ್ನು ಪಡೆಯಲು ಸಾಧ್ಯವಿಲ್ಲವಷ್ಟೇ. ಹಾಗಾಗಿ ನಿರಾಶೆ ಹಾಗೂ ಖಿನ್ನತೆಗೆ ಒಳಗಾಗಬೇಡಿ. ಜೀವನಕ್ಕೆ ನಿಮ್ಮ ಸ್ವಂತ ದುಡಿಮೆ ಇರಲಿ, ಮತ್ತು ನೀವು ಪ್ರೀತಿಸುವ ಚಟುವಟಿಕೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ನಿಮ್ಮ ಬಿಡುವಿನ ವೇಳೆಯಲ್ಲಿ ಕೆಲವು ಸಾಮಾಜಿಕ ಕೆಲಸಗಳನ್ನು ಮಾಡಿ. ಹೊರಗಿನ ಪ್ರಪಂಚದಲ್ಲಿ ಸಾವಿರಾರು ಜನರು ಅನೇಕ ಬಿಡಿಸಲಾರದ ಸಮಸ್ಯೆಗಳಿಂದ ಬಳಲುವವರನ್ನು ನೀವು ಕಾಣಬಹುದು. ಆಗ ನಿಮಗೆ ನೀವೇ ಉತ್ತಮ ಸ್ಥಾನದಲ್ಲಿದ್ದೀರಿ ಎಂಬುದರ ಅರಿವಾಗುತ್ತದೆ. ಚಿಂತಿಸಬೇಡಿ. ನಿಮಗೆ ನಿಮ್ಮನ್ನು ಅರ್ಥಮಾಡಿಕೊಳ್ಳುವ ಒಬ್ಬ ಒಳ್ಳೆಯ ಬಾಳಸಂಗಾತಿ ಸಿಗಬಹುದು.

**

2. ನನಗೆ ಬದುಕಲು ಮನಸ್ಸಿಲ್ಲ. ನಾನು ಕಂಡ ಕನಸುಗಳು ಯಾವುವು ನನಸಾಗುತ್ತಿಲ್ಲ. ನನ್ನವರೇ ನನಗೆ ಮೋಸ ಮಾಡಿದರು. ಯಾರಿಗೂ ನನ್ನ ನೋವನ್ನು ಹೇಳಿಕೊಳ್ಳಲು ಆಗುತ್ತಿಲ್ಲ. ಒಂದು ವೇಳೆ ನಾನು ಹೇಳಿದರೂ ಬೇರೆ ರೀತಿ ಅರ್ಥ ಮಾಡಿಕೊಳ್ಳುತ್ತಾರೆ. ಮಾನಸಿಕವಾಗಿ ತುಂಬಾ ನೊಂದಿದ್ದೇನೆ. ಪ್ರೀತಿ ಬಯಸುತ್ತೇನೆ, ಆದರೆ ಪ್ರೀತಿ ಸಿಗುವುದಿಲ್ಲ. ನನ್ನ ನೋವನ್ನು ಹೇಗೆ ಮರೆಯಲಿ?

–ಹೆಸರು, ಊರು ಬೇಡ

ಕನಸು, ವಾಸ್ತವ ಹಾಗೂ ನೈಜತೆಯಿಂದ ಕೂಡಿದ ಜೀವನವೇ ಸುಂದರವಾಗಿರುವುದು. ಕನಸು ನನಸಾಗಲಿಲ್ಲ ಎನ್ನುವ ಒಂದೇ ಕಾರಣದಿಂದಲೇ ದೇವರು ನಿಮಗೆ ನೀಡಿದ ಜೀವನದಲ್ಲಿ ನೀವು ಆಸಕ್ತಿ ಕಳೆದುಕೊಳ್ಳುವುದು ತಪ್ಪು. ನಿಮ್ಮ ಕನಸನ್ನು ನೆರವೇರಿಸಿಕೊಳ್ಳುವಲ್ಲಿ ಎಲ್ಲಿ ಸೋತಿದ್ದೀರಿ ಎಂಬುದನ್ನು ತಿಳಿದುಕೊಳ್ಳಿ. ಅದರ ಮೇಲೆ ಕೆಲಸ ಮಾಡಿ. ನೀವು ವಹಿಸಿದ ಶ್ರಮಕ್ಕಿಂತ ಹೆಚ್ಚಿನ ಶ್ರಮ ಬೇಕು ಎಂದು ನನಗನ್ನಿಸುತ್ತಿದೆ. ಮಾಡಿದ ಕೆಲಸಕ್ಕಿಂತಲೂ ಸ್ವಲ್ಪ ಜಾಣ್ಮೆಯಿಂದ ಕೆಲಸ ಮಾಡಿ. ಅದಲ್ಲದಿದ್ದರೆ ಆ ಕ್ಷೇತ್ರದಲ್ಲಿ ತಜ್ಞರು ಎನ್ನಿಸಿದ ಸ್ನೇಹಿತರು ಹಾಗೂ ಆಪ್ತವಲಯದ ಜೊತೆ ಮಾತನಾಡಿ. ನಿಮ್ಮ ಕನಸು ನನಸಾಗಲು ನೀವು ಆ ಕ್ಷೇತ್ರದಲ್ಲಿ ಹೇಗೆ ಯೋಜನೆಗಳನ್ನು ರೂಪಿಸಿಕೊಳ್ಳಬೇಕು ಎಂಬುದನ್ನು ಅವರು ತಿಳಿಸುತ್ತಾರೆ.

ನಿಮ್ಮ ಕನಸಿನ ಬಗ್ಗೆ ಮತ್ತೆ ಯೋಚಿಸಿ ಮತ್ತು ಮರು ಮೌಲ್ಯಮಾಪನ ಮಾಡಿಕೊಳ್ಳಿ. ಕನಸನ್ನು ನನಸು ಮಾಡಿಕೊಳ್ಳಲು ನೀವು ಹುಡುಕಿಕೊಂಡ ದಾರಿಗಿಂತಲೂ ಉತ್ತಮವಾದ ದಾರಿಯನ್ನು ಹುಡುಕಿಕೊಳ್ಳಬಹುದು. ಕೆಲವೊಮ್ಮೆ ನೀವು ಅಂದುಕೊಂಡ ಸಮಯಕ್ಕಿಂತ ಹೆಚ್ಚಿನ ಸಮಯ ಬೇಕಾಗಬಹುದು. ಹಾಗಾಗಿ ಕಾಲದೊಂದಿಗೆ ಹೊಂದಿಕೊಳ್ಳಿ. ಆಗಲೂ ನಿಮಗೆ ಈ ಎಲ್ಲಾ ವಿಷಯಗಳೂ ಸಹಾಯ ಮಾಡದಿದ್ದರೆ, ಕನಸುಗಳಲ್ಲಿ ನಾವು ಅಂದುಕೊಂಡಿದೆಲ್ಲವೂ ನಡೆಯಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳಿ. ಕೆಲವು ಜನರು ಕೆಲಸ ಮಾಡುತ್ತಾರೆ, ಇನ್ನೂ ಕೆಲವರು ಮಾಡುವುದಿಲ್ಲ. ಕೆಲವೊಮ್ಮೆ ಕನಸನ್ನು ಹಿಂಬಾಲಿಸುವುದು ಕೂಡ ಸಂತೋಷ ನೀಡುವುದಿಲ್ಲ, ಬದಲಾಗಿ ನಿಮ್ಮನ್ನು ಕುಗ್ಗಿಸುತ್ತದೆ. ಅದಕ್ಕಿರುವ ಕೊನೆಯ ಪರಿಹಾರವೆಂದರೆ ಕನಸನ್ನು ಹಿಂಬಾಲಿಸುವುದನ್ನು ನಿಲ್ಲಿಸಬೇಕು.

ನೀವು ಯಾವಾಗಲೂ ಅದ್ನನೇ ಹಿಂಬಾಲಿಸಿಕೊಂಡು ಎಲ್ಲೋ ಸಾಗುತ್ತಿದ್ದರೆ, ನಿಮ್ಮ ಎದುರಿಗೇ ನಡೆಯುತ್ತಿರುವ ಸಂತೋಷದ ಕ್ಷಣಗಳನ್ನು ಕಂಡುಕೊಂಡು ಅನುಭವಿಸಲು ನಿಮ್ಮಿಂದ ಸಾಧ್ಯವಾಗುವುದಿಲ್ಲ. ಪ್ರಸ್ತುತ ಕ್ಷಣವೇ ಯಾವಾಗಲೂ ನೈಜತೆಗೆ ಹತ್ತಿರವಾಗಿರುತ್ತದೆ. ಅದನ್ನು ಒಪ್ಪಿಕೊಳ್ಳಿ, ತಾಳ್ಮೆಯಿರಲಿ. ಅದು ಒಂದು ಒಳ್ಳೆಯ ಹಂತಕ್ಕೆ ಬದಲಾಗಲು ಇರುವ ಇನ್ನೊಂದು ದಾರಿ ಕೂಡ ಆಗಿರಬಹುದು.

*

3. ನಾನು ಬಿಎಸ್ಸಿ ದ್ವಿತೀಯ ವರ್ಷದಲ್ಲಿ ಓದುತ್ತಿದ್ದೇನೆ. ನನಗೆ ರಾತ್ರಿ ನಿದ್ದೆ ಬರುವುದಿಲ್ಲ. ಯಾವಾಗಲೂ ಮನಸ್ಸು ಮಾತನಾಡುತ್ತಾ ಇರುತ್ತದೆ. ಕಳೆದ ಒಂದು ತಿಂಗಳಿಗೆ ಹೀಗೆ ಆಗುತ್ತಿದೆ.

–ಹೆಸರು, ಊರು ಬೇಡ

ಯಾವಾಗಲೂ ನಿಮ್ಮನ್ನು ಯಾವ ಚಿಂತೆ ಕಾಡುತ್ತಿದೆ ಎಂಬುದನ್ನು ತಿಳಿದುಕೊಳ್ಳಿ. ಯಾವಾಗಲೂ ಯಾವ ರೀತಿ ಯೋಚಿಸುತ್ತೀರಿ ಹಾಗೂ ಏನನ್ನು ಮಾತನಾಡುತ್ತಿದ್ದೀರಿ ಎಂಬುದನ್ನು ತಿಳಿದುಕೊಳ್ಳಿ, ನಿಮಗೆ ತುಂಬಾ ಹತ್ತಿರ ಎನ್ನಿಸುವ ವ್ಯಕ್ತಿಗಳ ಜೊತೆ ನಿಮ್ಮ ಯೋಚನೆಗಳನ್ನು ಹಂಚಿಕೊಳ್ಳಲು ಪ್ರಯ್ನತಿಸಿ. ಆಗ ನಿಮ್ಮ ಮನಸ್ಸು ಶಾಂತವಾಗಬಹುದು. ಈ ವಯಸ್ಸಿನಲ್ಲಿ ಅತಿಯಾಗಿ ಆಲೋಚಿಸುವ ಮೂಲಕ ನಿಮ್ಮ ಮನಸ್ಸಿಗೆ ಒತ್ತಡ ಹೇರಬೇಡಿ. ಇದರಿಂದ ಸಂತೋಷ ಹಾಳಾಗುತ್ತದೆ, ಜೊತೆಗೆ ಎಲ್ಲಾ ಥರದ ದೈಹಿಕ ಸಮಸ್ಯೆಗಳೂ ಬರಬಹುದು.

ಓದನ್ನು ಹೊರತುಪಡಿಸಿ ನಿಮ್ಮನ್ನು ನೀವು ಕೆಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು. ಕೆಲವು ವ್ಯಾಯಾಮಗಳನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮ. ಅಧಿಕ ಅವಧಿಯ ಧ್ಯಾನದಿಂದ ನಿಮ್ಮ ಮನಸ್ಸು ಹಾಗೂ ದೇಹ ಎರಡೂ ಸದೃಢವಾಗಿರುತ್ತದೆ. ನೀವು ನಿದ್ದಗೆ ಜಾರುವ ಮೊದಲು ಕೆಲವು ಯೋಗನಿದ್ರೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ಖಂಡಿತ ನಿಮಗೆ ಉತ್ತಮ ನಿದ್ದೆ ಮಾಡುವಲ್ಲಿ ಸಹಾಯ ಮಾಡುತ್ತದೆ.

*

4. ನನ್ನ ವಯಸ್ಸು 30. ವೃತ್ತಿಯಲ್ಲಿ ಟೀಚರ್. ನಾನು ಮಲಗಿದಾಗ ಅತಿಯಾದ ಗೊರಕೆ ಬರುತ್ತದೆ. ಇದರಿಂದ ನನಗೆ ಹಿಂಸೆ ಎನ್ನಿಸುತ್ತಿದೆ.

–ಮೊಹಮದ್ , ಊರು ಬೇಡ

ಗೊರಕೆ ಅನೇಕ ಕಾರಣದಿಂದ ಬರುತ್ತದೆ. ನಿಮ್ಮ ಆರೋಗ್ಯದಲ್ಲಿ ಎಲ್ಲವೂ ಸರಿಯಾಗಿದೆಯೇ ಎಂಬುದನ್ನು ನೀವು ಮೊದಲು ತಿಳಿದುಕೊಳ್ಳಿ. ಅದರಲ್ಲೂ ನಿಮ್ಮ ಗಂಟಲು ಹಾಗೂ ಮೂಗು. ನಿಮ್ಮಲ್ಲಿ ಸಮಸ್ಯೆ ಇದೆಯೇ ಎಂಬುದನ್ನು ತಿಳಿದುಕೊಳ್ಳಲು ಡಾಕ್ಟರ್ ಬಳಿ ತೋರಿಸಿ. ಇಎನ್‌ಟಿ ಸ್ಪೆಷಲಿಸ್ಟ್‌ಗಳು ನಿಮಗೆ ಕೆಲವು ತಂತ್ರ ಹಾಗೂ ಥೆರಪಿಗಳನ್ನು ಕಲಿಸುತ್ತಾರೆ. ಅದು ತಕ್ಕ ಮಟ್ಟಿಗೆ ಪ್ರಯೋಜನವಾಗಬಹುದು. ಅದು ಬಿಟ್ಟರೆ ಇರುವ ಒಂದೇ ಒಂದು ದಾರಿ ಎಂದರೆ ಪ್ರಾಣಾಯಾಮ; ಉತ್ತಮ ಗುರುವಿನಿಂದ ಅದನ್ನು ಕಲಿಯಿರಿ ಮತ್ತು ನಿರಂತರ ಅಭ್ಯಾಸ ಮಾಡಿ. ತಾಳ್ಮೆಯಿರಲಿ. ಇದರ ಫಲಿತಾಂಶಕ್ಕೆ ತುಂಬಾ ಸಮಯ ಬೇಕಾಬಹುದು. ಆದರೆ ಫಲಿತಾಂಶ ಖಂಡಿತ ದೊರಕುತ್ತದೆ.

*

ಕೌಟುಂಬಿಕ ಸಮಸ್ಯೆ, ವೈಯಕ್ತಿಕ ಹಾಗೂ ಮಾನಸಿಕ ಸಮಸ್ಯೆಗಳ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಆಪ್ತ ಸಮಾಲೋಚಕಿ ಸುನೀತಾ ರಾವ್ ಉತ್ತರಿಸಲಿದ್ದಾರೆ. ಇಮೇಲ್ ವಿಳಾಸ; bhoomika@prajavani.co.in  ವಾಟ್ಸ್ಯಾಪ್: 9482006746

ಪ್ರತಿಕ್ರಿಯಿಸಿ (+)