4

ಸಿನಿರಸಿಕರಿಗೆ ಖುಷಿಯ ಪರ್ವ

Published:
Updated:
ಸಿನಿರಸಿಕರಿಗೆ ಖುಷಿಯ ಪರ್ವ

ಒರಾಯನ್ ಮಾಲ್‍ಗೆ ಶುಕ್ರವಾರ ಸಿನಿ ಕಳೆ ಬಂದಿತ್ತು. ಪ್ರವೇಶ ದ್ವಾರದಲ್ಲೇ ನಿಂತಿದ್ದ ಸೆಕ್ಯುರಿಟಿಗಳು ಸಿನಿಮೋತ್ಸವದ ಕಾರ್ಡ್ ತೋರಿಸಿದವರಿಗೆ ಮಾತ್ರ ಪ್ರವೇಶ ನೀಡುತ್ತಿದ್ದರು. ಒಳಗೆ ಅಡಿಯಿಡುತ್ತಿದ್ದಂತೆ ಪಿವಿಆರ್‌ನತ್ತ ಎಲ್ಲರದ್ದೂ ಲಗುಬಗೆಯ ನಡಿಗೆ. ಇಳಿದು ಬರುವ ಲಿಫ್ಟ್‌ಗೂ ಕಾಯುವಷ್ಟು ವ್ಯವಧಾನ ಅವರಿಗಿರಲಿಲ್ಲ. ಬೇಗ ಹೋಗಿ ಸಿನಿಮಾ ಶೆಡ್ಯುಲ್ ಪಡೆಯಬೇಕು, ಉತ್ತಮ ಸಿನಿಮಾಗಳನ್ನು ಕಣ್ತುಂಬಿಕೊಳ್ಳಬೇಕು ಎಂಬ ಕಾತರ ಅವರುಗಳ ಮೊಗದಲ್ಲಿ ಎದ್ದು ಕಾಣುತ್ತಿತ್ತು.

ಮಾರುದ್ದದ ಕ್ಯೂನಲ್ಲಿ ನಿಂತು ಸಿನಿಮಾಗಳ ವಿವರವಾದ ಪಟ್ಟಿ ಸಿಗುತ್ತಿದ್ದಂತೆ ಕಣ್ಣುಗಳು ಸಿನಿಮಾಗಳ ಮೇಲೆ ವೇಗವಾಗಿ ಹರಿದಾಡುವ ದೃಶ್ಯ ಸಾಮಾನ್ಯವಾಗಿತ್ತು. ಯಾವ ಸಿನಿಮಾ ಯಾವ ಪರದೆಯಲ್ಲಿ ಎಂದು ವೀಕ್ಷಿಸಿ ಕ್ಷಣಕಾಲವನ್ನೂ ಹಾಳು ಮಾಡದೆ ಸಿನಿಮಾ ನೋಡಲೆಂದು ಪಾಳಿ ಹಚ್ಚುತ್ತಿದ್ದರು.

ಇನ್ನು ಅನೇಕರಿಗೆ ವರ್ಷಗಳ ನಂತರ ಸಿಕ್ಕ ಸ್ನೇಹಿತರನ್ನು ಮಾತನಾಡಿಸುವ ಖುಷಿ. ಕೆಲವರಿಗೆ ಸಿನಿಮಂದಿಯನ್ನು ನೋಡುವ ಸೊಬಗು. ಕಿರುತೆರೆ, ಹಿರಿತೆರೆಯ ನಟನಟಿಗಳೂ ಸಾಕಷ್ಟು ಮಂದಿಯಲ್ಲಿ ಭಾಗವಹಿಸಿದ್ದರು. ಸ್ನೇಹ ಭಾವಗಳನ್ನು ಮತ್ತೆ ಮತ್ತೆ ಮರುಕಳಿಸುವ ಸೆಲ್ಫಿ ರಿಂಗಣವಂತೂ ಬಹುಜೋರಾಗಿಯೇ ನೆರೆದವರನ್ನು ಅಲ್ಲಿ ಸೆರೆಹಿಡಿಯಿತು.

ಸಿನಿಮಾ ನೋಡಲು ಬಂದಿದ್ದವರಲ್ಲಿ ವಯೋವೃದ್ಧರೂ ಸಾಕಷ್ಟು ಸಂಖ್ಯೆಯಲ್ಲಿದ್ದರು. ಹೆಜ್ಜೆ ನಿಧಾನವಾದರೂ ಅವರ ಉತ್ಸಾಹ ಕಡಿಮೆ ಇರಲಿಲ್ಲ. ತಮಗೆ ಬೇಕಾದ ಮಾಹಿತಿಯನ್ನು ವಿವರವಾಗಿ ಪಡೆದುಕೊಳ್ಳುತ್ತಾ ಸಿನಿಮಾ ನೋಡಲು ಹೆಜ್ಜೆ ಹಾಕುತ್ತಿದ್ದರು.

ಪಿವಿಆರ್ ಹೊರಭಾಗದಲ್ಲಿ ಹಿಂಡುಹಿಂಡಾಗಿ ಕಾಣುತ್ತಿದ್ದ ಜನಸಮೂಹ ಸಿನಿಮಾ ಪ್ರದರ್ಶನ ಕಾಣುತ್ತಿದ್ದಂತೆ ಖಾಲಿಖಾಲಿ. ಸಿನಿಮೋತ್ಸವಕ್ಕೆ ಜನವೇ ಇಲ್ಲ ಎನ್ನುವಷ್ಟು ನೀರವ ಮೌನ ಹೊರಗೆ. ಆದರೆ ಒಳಗಿದ್ದ ಅಷ್ಟೂ ಸ್ಕ್ರೀನ್‍ಗಳಲ್ಲಿ ಜನ ಜಾತ್ರೆ. ಸ್ಕ್ರೀನ್ 9, 11, 4 ಹಾಗೂ ಏಳನೇ ಸ್ಕ್ರೀನ್‍ಗಳಲ್ಲಿ ಮೊದಲ ಶೋ ಹೌಸ್‍ಫುಲ್. ತುಸು ತಡವಾಗಿ ಬಂದವರು ಏನೇ ಅದರೂ ಮುಂದಿನ ಸಿನಿಮಾ ತಪ್ಪಿಸಿಕೊಳ್ಳಲೇ ಬಾರದು ಎಂದು ಪಟ್ಟು ಹಿಡಿದವರಂತೆ ಹೊರಗಡೆ ಕಾಯುತ್ತಲೇ ಇದ್ದರು.

ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಸ್ವಯಂ ಸೇವಕರ ಬಳಿ ಮತ್ತೆ ಮತ್ತೆ ಕೇಳಿ ಸಿನಿಮಾ ವೇಳಾಪಟ್ಟಿ ಇಸಿದುಕೊಂಡರು.

‘ನಾಲ್ಕು ವರ್ಷಗಳಿಂದ ಸಿನಿಮಾ ಉತ್ಸವದಲ್ಲಿ ಭಾಗವಹಿಸುತ್ತಿದ್ದೇನೆ. ಕಳೆದ ವರ್ಷ ಒಂದು ದಿನಕ್ಕೆ ನಾಲ್ಕೈದು ಸಿನಿಮಾ ಕೂಡ ನೋಡಿದೆ. ಈ ವರ್ಷ ಒಂದು ಚಿತ್ರವನ್ನಷ್ಟೇ ಕಣ್ತುಂಬಿಕೊಳ್ಳಲು ಸಾಧ್ಯ. ಹೀಗಾಗಿ ಫ್ರೆಂಚ್ ಸಿನಿಮಾವನ್ನೇ ನೋಡುವೆ. ಸಿನಿಮಾ ಮಾಡುವುದರಲ್ಲಿ ಅವರು ತುಂಬಾ ಪರಿಣಿತಿ ಗಳಿಸಿಬಿಟ್ಟಿದ್ದಾರೆ. ಒಂದು ಸಿನಿಮಾ ನೋಡಿದರೆ ಸಾಕು ಸಂತೃಪ್ತಿ ಆಗಬೇಕು ಹಾಗಿರುತ್ತದೆ, ಬೇರೆ ದೇಶದ ಅತುತ್ತಮ ಸಿನಿಮಾಗಳನ್ನು ಕಡಿಮೆ ಖರ್ಚಿನಲ್ಲಿ ನೋಡಬಹುದಲ್ಲಾ, ಇದಕ್ಕಿಂತ ಭಾಗ್ಯ ಬೇರೆ ಏನು ಸಿಕ್ಕೀತು' ಎಂದು ಸಿನಿಮೋತ್ಸವದ ಬಗೆಗೆ ಮೆಚ್ಚುಗೆ ಸೂಚಿಸುತ್ತಾ ವೇಳಾಪಟ್ಟಿ ಓದುವುದರಲ್ಲಿ ಮುಳುಗಿದರು.

ಸಿನಿಮೋತ್ಸವದಲ್ಲಿ ಭಾಗವಹಿಸಲು ಈಗಾಗಲೇ ಸಾಕಷ್ಟು ತಯಾರು ಮಾಡಿಕೊಂಡು ಬಂದವರು ಒಂದು ಕಡೆ ಆಗಿದ್ದರೆ, ಇನ್ನೂ ಸಿನಿಮಾ ನೋಡಲು ಪಾಸ್ ಕೊಡಿ ಎಂದು ಕೇಳುವವರ ಸಂಖ್ಯೆ ಸಾಕಷ್ಟಿತ್ತು. ಅದಕ್ಕೆ ಸಂಘಟಕರೊಬ್ಬರು ‘ಇರುವುದೇ 2800 ಆಸನ. ಹತ್ತಿರ ಹತ್ತಿರ ನಾಲ್ಕು ಸಾವಿರ ಪಾಸ್ ವಿತರಿಸಿ ಮುಗಿದಿದೆ. ಇನ್ನೂ ಕೇಳಿದರೆ ಎಲ್ಲಿಂದ ಕೊಡುವುದು’ ಎಂದಿದ್ದು ಕೇಳಿ ಅಲ್ಲಿ ನೆರೆದಿದ್ದವರ ಕಿವಿ ನೆಟ್ಟಗಾಯಿತು.

‘ಇಂಡಿಯಾ ದ ಲ್ಯಾಂಡ್ ಆಫ್ ಸ್ಟೋರಿಸ್’ ವಿಷಯದ ಕುರಿತು ಭರತ್‍ಬಲಾ ನಡೆಸಿದ ಮಾಸ್ಟರ್ ಕ್ಲಾಸ್ ಹಾಗೂ ಧ್ವನಿ ವಿನ್ಯಾಸಕ್ಕೆ ಸಂಬಂಧಿಸಿದ ಶ್ರೀಜೇಶ್ ನಯ್ಯರ್ ನಡೆಸಿಕೊಟ್ಟ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲೂ ಯುವಮನಸ್ಸುಗಳ ಉತ್ಸಾಹ ಸಿನಿಮಾ ನೋಡುವ ತವಕದಷ್ಟೇ ದಟ್ಟವಾಗಿತ್ತು. ವಾರಾಂತ್ಯದಲ್ಲಿ ಸೇರುವ ಮತ್ತಷ್ಟು ಸಿನಿಪ್ರೇಮಿಗಳಿಗಾಗಿ ಒರಾಯನ್‌ ಮಾಲ್‌ ಕೂಡ ನಿಧಾನವಾಗಿ ಸಜ್ಜಾಗುತ್ತಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry