ಶುಕ್ರವಾರ, ಡಿಸೆಂಬರ್ 6, 2019
24 °C

ಡೆಂಗ್‌ಶೀಕ್‌ ಲೀ ಸಿನಿಮಾ ಪ್ರೀತಿ

Published:
Updated:
ಡೆಂಗ್‌ಶೀಕ್‌ ಲೀ ಸಿನಿಮಾ ಪ್ರೀತಿ

ಭಾರತ ವೈವಿಧ್ಯಮಯ ದೇಶ. ಈ ಕುರಿತು ಸಾಕಷ್ಟು ಓದಿದ್ದೇನೆ. ಇಲ್ಲಿ ದೇಸಿ ಭಾಷೆಗಳು ಜೀವಂತವಾಗಿವೆ. ಆ ಭಾಷೆಗಳಲ್ಲೂ ಸಿನಿಮಾಗಳು ತಯಾರಾಗುತ್ತಿವೆ. ಅವುಗಳನ್ನು ನೋಡಿದರೆ ಭಾರತೀಯ ಸಂಸ್ಕೃತಿ, ಕಲೆ, ಪರಂಪರೆಯ ಅರಿವಾಗುತ್ತದೆ’

ಹೀಗೆಂದು ಭಾರತೀಯ ಪ್ರಾದೇಶಿಕ ಸಿನಿಮಾಗಳ ಬಗ್ಗೆ ತಮಗಿರುವ ಕುತೂಹಲ ತೋಡಿಕೊಂಡರು ದಕ್ಷಿಣ ಕೊರಿಯಾದ ಡೆಂಗ್‌ಶೀಕ್‌ ಲೀ. ಅವರು ನಿರ್ಮಾಪಕ ಹಾಗೂ ವಿತರಕ. ಕೋರಿಯನ್‌ ಭಾಷೆಯಲ್ಲಿ ಎಂಟು ಸಿನಿಮಾ ನಿರ್ಮಿಸಿದ್ದಾರೆ. ಬೆಂಗಳೂರಿನ ಅವರ ಪ್ರಥಮ ಭೇಟಿಗೆ ಅಂತರರಾಷ್ಟ್ರೀಯ ಸಿನಿಮೋತ್ಸವ ವೇದಿಕೆ ಕಲ್ಪಿಸಿತ್ತು. ಸ್ಥಳೀಯ ಭಾಷೆಯ ಸಿನಿಮಾಗಳ ನಿರ್ಮಾಣದ ಚೌಕಟ್ಟು ಅರಿಯುವ ಉತ್ಸಾಹ ಅವರಲ್ಲಿ ಎದ್ದುಕಾಣುತ್ತಿತ್ತು.

ಸಿನಿಮೋತ್ಸವದ ಕೈಪಿಡಿಯಲ್ಲಿ ಮುದ್ರಣಗೊಂಡಿರುವ ಪ್ರಾದೇಶಿಕ ಚಿತ್ರಗಳ ಪಟ್ಟಿಯ ಹುಡುಕಾಟದಲ್ಲಿ ಮಗ್ನರಾಗಿದ್ದರು. ಈ ವೇಳೆ ಅವರು ‘ಮೆಟ್ರೊ’ದೊಂದಿಗೆ ತಮ್ಮ ಸಿನಿಮಾ ಬಗೆಗಿನ ಅಭಿರುಚಿಯನ್ನು ಹಂಚಿಕೊಂಡರು.

‘ಕೊರಿಯನ್‌ ಭಾಷೆಯಲ್ಲಿ ಪುರಾಣ ಕಾವ್ಯ ಆಧಾರಿತ ಚಿತ್ರ ನಿರ್ಮಾಣ ಮಾಡಿದ್ದೇನೆ. ಇದು ಒಳ್ಳೆಯ ಹೆಸರು ತಂದುಕೊಟ್ಟಿತು. ನನಗೆ ಭಾರತೀಯ ಭಾಷೆಗಳ ಸಿನಿಮಾಗಳೆಂದರೆ ಇಷ್ಟ. ಪಣಜಿಯಲ್ಲಿ ನಡೆದ ಭಾರತೀಯ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲೂ ಭಾಗವಹಿಸಿದ್ದೆ. ಮುಂಬೈ, ದೆಹಲಿ, ಕೋಲ್ಕತ್ತದಲ್ಲಿ ನಡೆದ ಸಿನಿಮೋತ್ಸವಗಳಲ್ಲೂ ಪಾಲ್ಗೊಂಡಿದ್ದೇನೆ’ ಎಂದರು.

‘ಹಿಂದಿ ಭಾಷೆಯಲ್ಲಿಯೂ ಉತ್ತಮ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಇಲ್ಲಿನ ಸಿನಿಮಾ ನಿರ್ಮಾಣದ ಚೌಕಟ್ಟು ವಿಭಿನ್ನವಾಗಿದೆ. ಭಾರತೀಯ ಸಿನಿಮಾಗಳಲ್ಲಿ ನಡೆಯುತ್ತಿರುವ ಪ್ರಯೋಗಾತ್ಮಕ ಮಾದರಿಗಳು ಕೊರಿಯನ್‌ ಭಾಷೆಯಲ್ಲೂ ನಡೆಯುತ್ತಿವೆ’ ಎಂದು ಪ್ರತಿಕ್ರಿಯಿಸಿದರು.

ಸಂಸ್ಕೃತಿ ಅರಿಯಲು ಸಿನಿಮಾ ಬೇಕು

‘ಪ್ರತಿಯೊಂದು ದೇಶದ ರಾಜಕೀಯ, ಸಾಮಾಜಿಕ ಸ್ಥಿತಿಗತಿ ಮತ್ತು ಸಂಸ್ಕೃತಿ ಭಿನ್ನವಾಗಿರುತ್ತದೆ. ಈ ಚೌಕಟ್ಟಿನಲ್ಲಿಯೇ ಸಿನಿಮಾಗಳು ನಿರ್ಮಾಣವಾಗುತ್ತವೆ. ನಾವು ಕೂಡ ಸ್ಥಳೀಯ ಸಂಸ್ಕೃತಿ ಆಧರಿಸಿ ಸಿನಿಮಾ ಮಾಡುತ್ತೇವೆ. ವಿದೇಶಿ ನೆಲದ ಸೊಗಡು ಅರಿಯಲು ಇಂತಹ ಸಿನಿಮೋತ್ಸವಗಳು ಸಹಕಾರಿಯಾಗಿವೆ’ ಎಂದರು ಹಿರಿಯ ನಟ ದತ್ತಣ್ಣ.

‘ಬೆಂಗಳೂರಿನಲ್ಲಿ ನಡೆದಿರುವ ಎಲ್ಲ ಸಿನಿಮೋತ್ಸವಗಳಲ್ಲೂ ಭಾಗವಹಿಸಿದ್ದೇನೆ. ಈ ಹಿಂದೆ ಹಂಗೇರಿ, ಪೋಲೆಂಡ್‌, ಲ್ಯಾಟಿನ್‌ ಅಮೆರಿಕನ್‌ ಸಿನಿಮಾಗಳ ಪ್ರದರ್ಶನ ಹೆಚ್ಚಿತ್ತು. ಈಗ ಈ ಭಾಷೆಯ ಸಿನಿಮಾಗಳು ಕಾಣಿಸಿಕೊಳ್ಳುತ್ತಿಲ್ಲ’ ಎಂಬ ವಿಷಾದ ಅವರ ಮಾತುಗಳಲ್ಲಿತ್ತು.

‘ಪಣಜಿಯಲ್ಲಿ ನಡೆಯುವ ಸಿನಿಮೋತ್ಸವ ಪೂರ್ವಯೋಜಿತವಾಗಿ ನಡೆಯುತ್ತದೆ. ಅದಕ್ಕೆ ಹಣಕಾಸಿನ ತೊಂದರೆ ಇರುವುದಿಲ್ಲ. ಜೊತೆಗೆ ಅಂತರರಾಷ್ಟ್ರೀಯ ಮಾನ್ಯತೆ ಸಿಕ್ಕಿದೆ. ಸಹಜವಾಗಿ ವರ್ಷಾಂತ್ಯದಲ್ಲಿ ಬೆಂಗಳೂರಿನಲ್ಲಿ ಚಿತ್ಸೋತ್ಸವ ನಡೆಯುತ್ತಿತ್ತು. ಈ ಬಾರಿ ಫೆಬ್ರುವರಿಯಲ್ಲಿ ನಡೆಯುತ್ತಿದೆ. ಸಮಯ ಬದಲಾವಣೆ ಮಾಡಬಾರದು’ ಎಂದು ಅಭಿಪ್ರಾಯಪಟ್ಟರು.

‘ಈ ಹಿಂದೆ ಚೀನಾ, ಜಪಾನ್‌, ರಷ್ಯನ್‌ ಸಿನಿಮಾಗಳನ್ನು ಹೆಚ್ಚಾಗಿ ನೋಡುತ್ತಿದೆ. ಇತ್ತೀಚೆಗೆ ಕೊರಿಯನ್‌ ಭಾಷೆಯ ಸಿನಿಮಾಗಳು ಉತ್ತಮವಾಗಿ ನಿರ್ಮಾಣವಾಗುತ್ತಿವೆ. ಅವುಗಳನ್ನು ನೋಡುತ್ತೇನೆ’ ಎಂದರು ದತ್ತಣ್ಣ.

**

‘ಟೇಕ್‌ ಆಫ್‌’ ಮೋಡಿ

ಐಎಸ್‌ ಉಗ್ರರು ಕೇರಳದ ನರ್ಸ್‌ಗಳನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದ ನೈಜ ಘಟನೆ ಆಧಾರಿತ ಚಿತ್ರ ‘ಟೇಕ್‌ ಆಫ್’. ಇತ್ತೀಚೆಗೆ ಗೋವಾದಲ್ಲಿ ಮುಕ್ತಾಯಗೊಂಡ ಭಾರತೀಯ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ(ಇಫಿ) ಈ ಸಿನಿಮಾ ಸಿನಿಪ್ರಿಯರ ಮನ ಸೆಳೆದಿತ್ತು.

ಚಿತ್ರದ ನಾಯಕಿ ಟಿ.ಕೆ. ಪಾರ್ವತಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ತಂದು ಕೊಟ್ಟಿತ್ತು. ಇಫಿಯ ಇತಿಹಾಸದಲ್ಲಿಯೇ ಭಾರತೀಯ ನಟಿಯೊಬ್ಬರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಬಂದದ್ದು ಇದೇ ಪ್ರಥಮ. ಜೊತೆಗೆ, ನಿರ್ದೇಶಕ ಮಹೇಶ್‌ ನಾರಾಯಣನ್‌ ಜ್ಯೂರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಬೆಂಗಳೂರು ಸಿನಿಮೋತ್ಸವದಲ್ಲೂ ಈ ಚಿತ್ರ ಪ್ರದರ್ಶನ ಕಂಡಿತು. ಚಿತ್ರ ಪ್ರದರ್ಶನಗೊಂಡ ಚಿತ್ರಮಂದಿರ ಪ್ರೇಕ್ಷಕರಿಂದ ಭರ್ತಿಯಾಗಿತ್ತು. ಜನರ ಅಭೂತಪೂರ್ವ ಸ್ಪಂದನೆಗೆ ನಿರ್ದೇಶಕ ಮಹೇಶ್‌ ನಾರಾಯಣನ್‌ ಭಾವುಕರಾದರು.

‘ಇದು ನೈಜ ಘಟನೆ ಆಧರಿಸಿದ ಸಿನಿಮಾ. ಐಎಸ್‌ ಉಗ್ರರು ನಡೆಸುತ್ತಿರುವ ‍ಪೈಶಾಚಿಕ ಚಿತ್ರಣವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)