ಬುಧವಾರ, ಡಿಸೆಂಬರ್ 11, 2019
15 °C

ಪ್ರಾಣಿ ಲೋಕಕ್ಕೆ ಬರಲಿ ನಿಮ್ಮ ಪುಟಾಣಿ

Published:
Updated:
ಪ್ರಾಣಿ ಲೋಕಕ್ಕೆ ಬರಲಿ ನಿಮ್ಮ ಪುಟಾಣಿ

ಒಮ್ಮೆ ಕೆ.ಆರ್‌. ಮಾರುಕಟ್ಟೆ ಕಡೆಯಿಂದ ಬರುವಾಗ ಈ ಕುದುರೆಯನ್ನು ನೋಡಿದೆ. ‘ಪಿಗ್ಮಿ ಮಿನಿಯೇಚರ್’ ತಳಿಯ ಈ ಕುದುರೆಯ ಬೆಲೆ ₹15 ಲಕ್ಷದಿಂದ 50 ಲಕ್ಷ. ಇದು ಹೆಚ್ಚೆಂದರೆ ವ್ಯಕ್ತಿಯೊಬ್ಬನ ಸೊಂಟದ ಎತ್ತರಕ್ಕೆ ಬೆಳೆಯಬಹುದು. ಅದರ ಒಡೆಯನನ್ನು ಹುಡುಕಿ, ಕುದುರೆ ಬಗ್ಗೆ ಮಾತನಾಡಿದೆ. ‘ಅದು ಯಾವ ಜಾತಿಯ ಕುದುರೆ, ಅದರ ವೈಶಿಷ್ಟ್ಯವೇನು’ ಎಂಬುದು ಅವರಿಗೆ ಗೊತ್ತಿರಲಿಲ್ಲ. ಟಾಂಗಾಕ್ಕೆ ಬಳಸಲು ಮರಿಯನ್ನು ತಂದು ಬೆಳೆಸಿದ್ದಾರೆ. ಎತ್ತರಕ್ಕೆ ಬೆಳೆಯುತ್ತಿಲ್ಲ ಎಂದು ಮಾತ್ರೆ, ಸ್ಟಿರಾಯ್ಡ್ಸ್‌ ಕೊಟ್ಟಿದ್ದಾರೆ. ಆಗ ಯಾರೋ ಒಬ್ಬರು ಅವರಿಗೆ ಅದರ ಜನನಾಂಗ ಕತ್ತರಿಸಿ, ಆಗ ಕುದುರೆ ಬೆಳೆಯುತ್ತದೆ ಎಂದು ಸಲಹೆ ನೀಡಿದ್ದಾರೆ. ಆ ಬಳಿಕವೂ ಕುದುರೆ ಬೆಳೆಯದೇ ಇದ್ದಾಗ ಬೀದಿಪಾಲು ಮಾಡಿದ್ದರು. ಆ ಮನುಷ್ಯ ಆ ಕುದುರೆಯನ್ನು ಬರೀ ಸಂತಾನೋತ್ಪತ್ತಿಗೆಂದು ಬಳಸಿಕೊಂಡಿದ್ದರೂ ಲಕ್ಷಾಧೀಶನಾಗಬಹುದಿತ್ತು. ನಾನು 15 ಸಾವಿರಕ್ಕೆ ಖರೀದಿಸಿ ತಂದೆ ನೋಡಿ’.

ತಮ್ಮ ಬಳಿ ನಿಂತಿದ್ದ ಚೋಟು ಕುದುರೆಯ ಕತ್ತು ನೇವರಿಸುತ್ತಾ ಈ ಕತೆ ಹೇಳಿದರು ಸಂಜೀವ್‌ ಪಡ್ನೇಕರ್‌.

‘ನಮ್ಮ ಕೈಗೆ ಸಿಕ್ಕಾಗ ಈ ಕುದುರೆಯ ಸ್ಥಿತಿ ನೋಡಲು ಆಗುತ್ತಿರಲಿಲ್ಲ. ವರ್ಷಗಳ ಕಾಲ ಚಿಕಿತ್ಸೆ ನೀಡಿದ ಬಳಿಕ ಚೇತರಿಸಿಕೊಂಡಿತು’ ಎಂದು ಕುದುರೆ ಕತೆ ಮುಂದುವರಿಸಿದರು.

ನಗರದಿಂದ 37 ಕಿ.ಮೀ. ದೂರದಲ್ಲಿರುವ ಸೋಮನಹಳ್ಳಿಯಲ್ಲಿ ‘ಪ್ರಾಣಿ– ದ ಪೆಟ್‌ ಸ್ಯಾಂಕ್ಚುರಿ’ ಎಂಬ ಸಾಕುಪ್ರಾಣಿಗಳ ರಕ್ಷಣಾಲಯವನ್ನು ಸಂಜೀವ್‌ ಪಡ್ನೇಕರ್‌ ಆರಂಭಿಸಿದ್ದಾರೆ. ಸುಮಾರು 2 ಎಕರೆ ಪ್ರದೇಶದಲ್ಲಿ ಮರ ಗಿಡಗಳಿಂದ ಕೂಡಿದ ಪ್ರಶಾಂತ ಜಾಗದಲ್ಲಿ ಈ ರಕ್ಷಣಾಲಯ ಇದೆ. ಇಲ್ಲಿರುವ ಪ್ರಾಣಿ–ಪಕ್ಷಿಗಳ ಸಂಖ್ಯೆ 120 ದಾಟುತ್ತದೆ.

ಇಲ್ಲಿ ಪ್ರಾಣಿ, ಪಕ್ಷಿಗಳನ್ನು ಹತ್ತಿರದಿಂದ ನೋಡುವುದಷ್ಟೇ ಅಲ್ಲ ಮುಟ್ಟಿ ಒಡನಾಡಬಹುದು. ವನ್ಯಜೀವಿ, ಪರಿಸರ, ತೋಟಗಾರಿಕೆಯ ಅನುಭವವನ್ನು ಪಡೆದುಕೊಳ್ಳಬಹುದು.ಇಲ್ಲಿನ ಪ್ರತಿ ಪ್ರಾಣಿ, ಪಕ್ಷಿ ಹಿಂದೆ ಮನಮಿಡಿಯುವ ಕತೆಗಳಿವೆ. ನಾಲ್ಕನೇ ಪುಟ ನೋಡಿ...

(ಮಕ್ಕಳಿಗೆ ಪ್ರಾಣಿ, ಪಕ್ಷಿಗಳ ಬಗ್ಗೆ ವಿವರಣೆ ನೀಡುತ್ತಿರುವ ಸಂಜೀವ್‌ ಪಡ್ನೇಕರ್‌)

*

ಪ್ರಾಣಿಗಳು ಸಿಕ್ಕ ಬಗೆ

ಲ್ಯಾಬ್‌ ಟೆಸ್ಟ್‌ಗೆ ಒಳಗಾದ ಪ್ರಾಣಿಗಳು, ಇವನ್ನು ನಮ್ಮಿಂದ ಸಾಕಲು ಆಗದು ಎಂದು ಕೊಟ್ಟ ಪ್ರಾಣಿಗಳೇ ಇಲ್ಲಿವೆ. ಕೆಲವರು ಪ್ರಾಣಿಗಳನ್ನು ಮನೆಯಲ್ಲಿ ತಂದಿಟ್ಟುಕೊಳ್ಳುತ್ತಾರೆ. ಅಗತ್ಯ ಆರೈಕೆ ಮಾಡದಿದ್ದರೆ ಕಚ್ಚುವುದು, ಮಾಲೀಕನ ಮೇಲೆಯೇ ಎರಗುವುದು ಮಾಡುತ್ತವೆ. ಅಂಥವನ್ನೂ ಇಲ್ಲಿಗೆ ತಂದುಬಿಡುತ್ತಾರೆ. ಇಲ್ಲಿಗೆ ತಂದ ಹೊಸದರಲ್ಲಿ ಈ ಪ್ರಾಣಿ, ಪಕ್ಷಿಗಳು ಮನುಷ್ಯನನ್ನು ನಂಬುವುದೇ ಇಲ್ಲ.

ನಂಬಿಕೆ ಹುಟ್ಟಿಸಲು ಅವುಗಳನ್ನು ಇಟ್ಟ ಕೋಣೆಯಲ್ಲಿಯೇ ಒಂದು ಕುರ್ಚಿ ಹಾಕಿಕೊಂಡು ನಮ್ಮ ಕೆಲಸ ಮಾಡುತ್ತೇವೆ. ಅದಕ್ಕೆ ಒಂದೆರಡು ದಿನದಲ್ಲಿ ಈ ವ್ಯಕ್ತಿ ಏನೂ ಮಾಡಲ್ಲ ಅಂತಾ ಧೈರ್ಯ ಬರುತ್ತದೆ. ಬಳಿಕ ಆಹಾರ ಪೊಟ್ಟಣವನ್ನು ನಮ್ಮ ಹತ್ತಿರ ಇಟ್ಟುಕೊಂಡಿರುತ್ತೇವೆ. ಹಸಿವೆ ಹೆಚ್ಚಾದಾಗ ಹತ್ತಿರ ಬರುವ ಧೈರ್ಯ ಮಾಡುತ್ತವೆ. ಹೀಗೆ ನಂಬಿಕೆ ಬೆಳೆಸುತ್ತಾ ಹೋಗುತ್ತೇವೆ. ಬಳಿಕ ಅವು ಮನುಷ್ಯರಿಗೆ ಹತ್ತಿರವಾಗುತ್ತವೆ ಎನ್ನುತ್ತಾರೆ ಸಂಜೀವ್‌ ಫಡ್ನೇಕರ್‌.

**

ಈ ಕಾಲದ ಮಕ್ಕಳು ಕುದುರೆಯನ್ನು ಕೇವಲ ಚಿತ್ರಗಳಲ್ಲಿ ನೋಡಿರುತ್ತಾರ. ಕೆಲ ಮಕ್ಕಳಿಗೆ ಕುರಿ ಮತ್ತು ಕುದುರೆಗೆ ವ್ಯತ್ಯಾಸವೂ ಗೊತ್ತಿರುವುದಿಲ್ಲ. ಇದನ್ನು ಮನಗಂಡು ನಾನು ಪ್ರಾಣಿಗಳ ಅನಾಥಾಲಯ ಸ್ಥಾಪಿಸಿದೆ. ಮಕ್ಕಳಿಗೆ ಪ್ರಾಣಿಗಳ ಜೊತೆ ಬೆರೆಯುವ ಹವ್ಯಾಸವನ್ನು ಅಭ್ಯಾಸ ಮಾಡಿಸಬೇಕು ಎನ್ನುವುದು ನನ್ನ ಉದ್ದೇಶ.

–ಸಂಜೀವ್‌ ಪಡ್ನೇಕರ್‌

ಪ್ರತಿಕ್ರಿಯಿಸಿ (+)