ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಮಕಥೆಯಲ್ಲಿ ತಲ್ಲೀನನಾದ ರಾಮ!

Last Updated 12 ಏಪ್ರಿಲ್ 2019, 3:50 IST
ಅಕ್ಷರ ಗಾತ್ರ

ಕುಶಲವರ ರಾಮಕಥಾಗಾಯನದ ಕೀರ್ತಿಯು ಆಶ್ರಮದಿಂದ ಆಶ್ರಮಕ್ಕೆ, ಜನರಿಂದ ಜನರಿಗೆ ಹರಡುತ್ತ ಅಯೋಧ್ಯಾನಗರವನ್ನೂ ಮುಟ್ಟಿತು.

ಒಂದು ದಿನ ರಾಮನು ಅಯೋಧ್ಯೆಯ ರಾಜಬೀದಿಯಲ್ಲಿ ರಥದಲ್ಲಿ ಅರಮನೆಗೆ ಬರುತ್ತಿದ್ದಾನೆ. ಅವನ ರಥವನ್ನು ಜನರು ಕಾಣುವುದೇ ತಡ, ರಸ್ತೆಯ ಇಕ್ಕೆಲಗಳಲ್ಲಿ ಗುಂಪಾಗಿ ಸೇರಿ ಅವನಿಗೆ ಜಯಕಾರವನ್ನು ಹಾಕುವುದು ಸಾಮಾನ್ಯ ಘಟನೆ. ಆದರೆ ಅಂದು ಮಾತ್ರ ರಾಮನ ಕಡೆಗೆ ಲಕ್ಷ್ಯ ಕೊಟ್ಟವರೇ ಇಲ್ಲ. ಅವನಿಗೆ ಆಶ್ಚರ್ಯ! ಜನರಿಲ್ಲದೆ ರಸ್ತೆಯೇ ಖಾಲಿಯಾಗಿದೆ. ಸ್ವಲ್ಪ ದೂರ ಹೋದಮೇಲೆ ಕಂಡದ್ದು, ಒಂದೆಡೆ ಸೇರಿದ್ದ ನೂರಾರು ಜನರ ಗುಂಪು. ಇಬ್ಬರು ಬಾಲಕರು ನರ್ತಿಸುತ್ತ, ಏನನ್ನೋ ಹಾಡುತ್ತಿದ್ದಾರೆ. ಅಲ್ಲಿ ಸೇರಿರುವ ಜನರೆಲ್ಲರೂ ಈ ಲೋಕದ ಪರಿವೆಯೇ ಇಲ್ಲದೆ ಮೈಮರೆತಿರುವುದು ಎದ್ದುಕಾಣುತ್ತಿದೆ. ರಾಮ ಕುತೂಹಲದಿಂದ ಅಲ್ಲಿಯ ವಿದ್ಯಮಾನವನ್ನು ಕುರಿತು ವಿಚಾರಿಸಿದ. ಕುಶಲವರ ರಾಮಾಯಣಗಾಯನದ ಬಗ್ಗೆ ಅವನಿಗೆ ಗೊತ್ತಾಯಿತು. ಅವನು ಸ್ವಲ್ಪ ಹೊತ್ತು ಅಲ್ಲಿಯೇ ನಿಂತು ಅವರ ಗಾಯನವನ್ನು ಕೇಳಿಸಿಕೊಂಡನೆನ್ನಿ!

ರಾಮನೂ ಅರಮನೆಗೆ ಕುಶಲವರನ್ನು ಕರೆಯಿಸಿ, ಸತ್ಕರಿಸಿದ. ರಾಮನ ಸಿಂಹಾಸನದ ಸಮೀಪದಲ್ಲಿಯೇ ಅವನ ತಮ್ಮಂದಿರೂ ಮಂತ್ರಿಗಳೂ ಕುಳಿತಿದ್ದಾರೆ. ಅವನೇ ತನ್ನ ತಮ್ಮಂದಿರಿಗೆ ಕುಶಲವರ ಪರಿಚಯವನ್ನು ಮಾಡಿಕೊಟ್ಟ: ‘ದೇವತೆಗಳಂತೆಯೇ ಕಂಗೊಳಿಸುತ್ತಿರುವ ಈ ಬಾಲಕರನ್ನು ನೋಡಿ. ವಯಸ್ಸಿನಲ್ಲಿ ಚಿಕ್ಕವರಾದರೂ ಇವರ ತಪಸ್ಸಿನ ಸಿದ್ಧಿ ದೊಡ್ಡದು. ಇವರಷ್ಟೇ ಆಹ್ಲಾದಕಾರಿಯಾದುದು ಇವರ ಗಾಯನ. ಈ ಇಬ್ಬರು ಮುನಿಕುಮಾರರಂತೆ ಕಂಡರೂ ಇವರ ಮೈಕಟ್ಟು ರಾಜಲಕ್ಷಣಗಳನ್ನು ಸೂಚಿಸುತ್ತಿದೆ. ಅಂತೆಯೇ ಇವರು ಹಾಡುವುದು ಕಾವ್ಯವನ್ನೇ ಆದರೂ ಅದು ಸಂಗೀತಕ್ಕೆ ಒಗ್ಗುವಂತಿದೆ. ವೀಣೆಯ ತಂತಿಯ ನಾದದಂತೆ ಮಧುರವಾಗಿರುವ ಇವರ ಕಂಠವು ಕಥೆಯ ವಿವರಗಳನ್ನು ಸುಲಭವಾಗಿಯೂ ಭಾವಪೂರ್ಣವಾಗಿಯೂ ಅರ್ಥಭರಿತವಾಗಿಯೂ ಕಿವಿಗೆ ಮಾತ್ರವಲ್ಲ, ಹೃದಯಕ್ಕೂ ಮುಟ್ಟಿಸುತ್ತದೆ. ಅವರ ಗಾಯನವನ್ನು ನನ್ನ ಕಥೆ ಎಂದು ನೀವಾರೂ ಕೇಳಬೇಕಿಲ್ಲ; ಈ ಕಥೆ ಮಹಿಮಾನ್ವಿತವಾದದ್ದು; ಸಂಸ್ಕಾರಕಾರಕವೂ ಆನಂದಕಾರಕವೂ ಹೌದು’ ಎಂದು ಹೇಳುತ್ತ, ಕುಶಲವರಿಗೆ ಹಾಡುವಂತೆ ಸೂಚಿಸಿದ.

ಕುಶಲವರಿಗೆ ಹಿಗ್ಗೋ ಹಿಗ್ಗು! ಅವರ ಕಾವ್ಯದ ಕಥಾನಾಯಕನ ಎದುರಿನಲ್ಲಿಯೇ ಗಾಯನಕ್ಕೆ ಅವಕಾಶ ಒದಗಿದ್ದು ಅವರಲ್ಲಿ ಇನ್ನಷ್ಟು ರಸಾವೇಶವನ್ನು ತುಂಬಿಸಿತ್ತು. ವಾಲ್ಮೀಕಿಯನ್ನು ಮನದಲ್ಲಿಯೇ ವಂದಿಸಿ ರಾಮಕಥಾಗಾಯನವನ್ನು ಮಾರ್ಗಕ್ರಮದಲ್ಲಿ ಆರಂಭಿಸಿದರು.

ಕುಶಲವರ ಗಾಯನವನ್ನು ಕೇಳುತ್ತ ಕೇಳುತ್ತ ರಾಮನ ಆಸ್ಥಾನದಲ್ಲಿದ್ದವರೆಲ್ಲರೂ ತಮ್ಮನ್ನು ತಾವು ಮರೆತರು. ‘ಆಹಾ! ರಾಮಾಯಣದ ನಾಯಕನಾದ ಶ್ರೀರಾಮನ ರಾಜ್ಯದಲ್ಲಿರುವವರು, ಅವನನ್ನು ದರ್ಶಿಸಿದವರು ಎಂಥ ಭಾಗ್ಯಶಾಲಿಗಳು’ ಎಂದು ತಮ್ಮೊಳಗೆ ತಾವೇ ಅಂದುಕೊಂಡರು. ‘ಶ್ರೀರಾಮನು ಮಹಾತ್ಮ ಎಂದು ತಿಳಿದಿತ್ತು; ಆದರೆ ಅವನ ಮಾಹಾತ್ಮ್ಯದ ಎಲ್ಲ ವಿವರಗಳು ತಿಳಿದಿರಲಿಲ್ಲ. ವಾಲ್ಮೀಕಿಮುನಿಯ ಅನುಗ್ರಹದಿಂದಲೂ ಕುಶಲವರ ಪ್ರತಿಭೆಯಿಂದಲೂ ಈಗ ನಮಗೆ ಅವೆಲ್ಲವೂ ನಮ್ಮ ಕಣ್ಣಮುಂದೆ ನಡೆದಂತೆಯೇ ಗೋಚರವಾಗುತ್ತಿವೆಯೆಲ್ಲ’ ಎಂದು ಸಂತಸಪಟ್ಟರು.

ರಾಮನೂ ಶ್ರೀರಾಮನ ಕಥೆಯಲ್ಲಿ ಮೆಲ್ಲಮೆಲ್ಲನೆ ತನ್ಮಯನಾದ!

* * *

ಬಾಲಕಾಂಡದ ನಾಲ್ಕನೆಯ ಸರ್ಗದ ಈ ವಿವರಗಳು ಭಾರತೀಯ ಕಲಾಮೀಮಾಂಸೆಯ ದೃಷ್ಟಿಯಿಂದ ತುಂಬ ಮಹತ್ತ್ವಪೂರ್ಣವಾದವು. ಇದುವರೆಗೆ ವಾಲ್ಮೀಕಿಯು ಕವಿಯ ಧರ್ಮವನ್ನೂ ಮರ್ಮವನ್ನೂ ಕುರಿತು ಹಲವು ಸಂಗತಿಗಳನ್ನು ನಿರೂಪಿಸಿದ್ದನಷ್ಟೆ. ಈಗ ಅವನು ಸಹೃದಯತತ್ತ್ವದ ಸೂಕ್ಷ್ಮಗಳನ್ನು ಇಲ್ಲಿ ಕಂಡರಿಸಿದ್ದಾನೆ. ಭಾರತೀಯ ಕಾವ್ಯಮೀಮಾಂಸೆಯಲ್ಲಿ ಕ್ರಾಂತಿಯನ್ನೇ ಉಂಟುಮಾಡಿದ ಕೃತಿ ಆನಂದವರ್ಧನನ ‘ಧ್ವನ್ಯಾಲೋಕ’. ಈ ಗ್ರಂಥಕ್ಕೆ ಅದ್ಭುತ ವ್ಯಾಖ್ಯಾನವನ್ನು ರಚಿಸಿ ಭಾರತೀಯ ಕಲಾಮೀಮಾಂಸೆಯ ದಿಗಂತವನ್ನೇ ವಿಸ್ತರಿಸಿದವನು ಅಭಿನವಗುಪ್ತ; ಅವನ ‘ಧ್ವನ್ಯಾಲೋಕಲೋಚನ’ದ ಆರಂಭದಲ್ಲಿಯೇ ಸರಸ್ವತೀತತ್ತ್ವದ ಸ್ವರೂಪವನ್ನು ಅಪೂರ್ವವಾದ ಒಳನೋಟಗಳಿಂದ ಅಕ್ಷರೀಕರಿಸಿದ್ದಾನೆ. ‘ಕವಿ ಮತ್ತು ಸಹೃದಯ – ಎಂಬ ಎರಡು ಪ್ರತಿಭಾಮಾರ್ಗಗಳು ಒಂದಾಗಿ ಬೆಳಗುವ ರಸತತ್ತ್ವವೇ ಸರಸ್ವತಿಯ ಸ್ವರೂಪ’ ಎನ್ನುವುದು ಅವನ ಧ್ವನಿ. (ಸರಸ್ವತ್ಯಾಸ್ತತ್ತ್ವಂ ಕವಿಸಹೃದಯಾಖ್ಯಂ ವಿಜಯತೇ|) ಸಹೃದಯತತ್ತ್ವದ ಮೀಮಾಂಸೆಯ ಎಳೆಗಳನ್ನು ರಾಮಾಯಣದ ಈ ಭಾಗದಲ್ಲಿ ನೋಡಬಹುದು.

ಯಾವುದೇ ಕಾವ್ಯಕ್ಕೂ ‘ಕಾವ್ಯತ್ವ’ ಒದಗುವುದು ಅದನ್ನು ಸಹೃದಯರು, ಎಂದರೆ ರಸಿಕರು, ಓದಿ, ಕೇಳಿ, ಆನಂದಿಸಿದಾಗಲೇ ಹೌದು. ಹೂವಿನ ಮಾಲೆಗೆ ಸಾರ್ಥಕತೆ ಸಿಗುವುದು ಅದನ್ನು ಮುಡಿಯುವ ಭೋಗಿಗಳು ದೊರಕಿದಾಗಲೆಯೇ ಹೊರತು ಅದು ಹಾಗೆಯೇ ಬಾಡಿಹೋಗುವುದರಿಂದಲ್ಲ – ಎಂದ ಜನ್ನನ ಮಾತು ಇಲ್ಲಿ ಉಲ್ಲೇಖನೀಯ. (ಕಟ್ಟಿಯುಮೇನೊ? ಮಾಲೆಗಾೞನ ಪೊಸಬಾಸಿಗಂ ಭೋಗಿಗಳಿಲ್ಲದೆ ಬಾಡಿಪೋಗದೇ!) ಸಹೃದಯರು ಎಂದರೆ ನಮ್ಮ ಹೃದಯಕ್ಕೆ ಹತ್ತಿರವಾಗಿರುವವರು, ನಮ್ಮ ಅಂತರಂಗದ ಜೊತೆಗಾರರು ಎಂದು ತಾನೆ? ‘ಕಾಲವೂ ಅನಂತವಾಗಿದೆ; ಭೂಮಿಯೂ ವಿಶಾಲವಾಗಿದೆ; ಎಂದಾದರೂ ಸಹೃದಯನೊಬ್ಬನು ನನಗೆ ಸಿಕ್ಕದೆ ಹೋದಾನೆಯೆ?’ (ಉತ್ಪತ್ಸ್ಯತೇಸ್ತಿ ಮಮ ಕೋಪಿ ಸಮಾನಧರ್ಮಾ | ಕಾಲೋ ಹ್ಯಯಂ ನಿರವಧಿರ್ವಿಪುಲಾ ಚ ಪೃಥ್ವೀ||) – ಎಂದು ಭವಭೂತಿಯಂತೆ ನಿರಾಶೆಯಿಂದ ನುಡಿಯಬೇಕಾದ ಸ್ಥಿತಿ ವಾಲ್ಮೀಕಿಗೆ ಒದಗಲಿಲ್ಲ. ಇದು ಅವನ ಭಾಗ್ಯವೂ ಹೌದು, ಅವನ ಕಾವ್ಯದ ಭಾಗ್ಯವೂ ಹೌದು. ಅವನ ಸಮಾನಧರ್ಮೀಯರು – ಸಹೃದಯರು – ಅವನ ಸಮೀಪದಲ್ಲಿಯೇ ಇದ್ದರು.

ವಾಲ್ಮೀಕಿಯ ರಾಮಾಯಣ ಎಂಬ ಕಾವ್ಯನವರಸಮಾಲೆಯನ್ನು ತಲೆಯಲ್ಲಿ ಧರಿಸಿ ಆನಂದಿಸಿದ ಆದಿರಸಿಕರು ಋಷಿಮುನಿಗಳು! ಇಲ್ಲೊಂದು ಸ್ವಾರಸ್ಯವೂ ಉಂಟು. ಲೌಕಿಕ ಸೆಳೆತಗಳಿಂದ ದೂರ ಉಳಿದವರೇ ಋಷಿಮುನಿಗಳು ಎಂಬ ಒಕ್ಕಣೆಯುಂಟಷ್ಟೆ! ಅಂಥ ತಟಸ್ಥರನ್ನೂ ಭಾವತೀವ್ರತೆಯಲ್ಲಿ ಕರಗಿಸುವಷ್ಟು ರಸಾತ್ಮಕವಾಗಿದೆ ಆದಿಕಾವ್ಯ ಎನ್ನುವ ಸೂಚನೆಯನ್ನು ಆ ಕಾವ್ಯವೇ ಇಲ್ಲಿ ನೀಡಿದೆ. ಅವರು ಕಾವ್ಯಕ್ಕೆ ಸ್ಪಂದಿಸಿದ ರೀತಿಯೂ ಅನನ್ಯವಾಗಿದೆ. ನಮ್ಮ ಸಂತೋಷವನ್ನು ಕಾಣಿಸುವ ಪರಿಗಳಲ್ಲಿ ಒಂದು ಅದಕ್ಕೆ ಕಾರಣರಾದವರಿಗೆ ಪಾರಿತೋಷಕವನ್ನು ನೀಡುವುದಲ್ಲವೆ? ಋಷಿಮುನಿಗಳು ಹೀಗೆಯೇ ಅವರ ಬಳಿಯಲ್ಲಿ ಏನಿದೆಯೋ ಅದನ್ನೇ ಪ್ರೀತಿಯಿಂದ, ಕುಶಲವರನ್ನು ಹರಸಿ, ಕೊಟ್ಟರು. ಇದು ವಾಲ್ಮೀಕಿಗೆ ಸಂದ ಪ್ರಶಸ್ತಿಯೂ ಹೌದು. ಇಂಥದೇ ಪ್ರಸಂಗ ಭರತಮುನಿಯ ‘ನಾಟ್ಯಶಾಸ್ತ್ರ’ದಲ್ಲೂ ಬಂದಿದೆ.

ಭರತಮುನಿಯ ನಿರ್ದೇಶನದಂತೆ ಅವನ ಮಕ್ಕಳು ನಾಟ್ಯಕಲೆಯ ಮೊದಲ ಪ್ರಯೋಗವನ್ನು ಆಯೋಜಿಸಿದ್ದರು. ಅದು ನಡೆದದ್ದು ದೇವಲೋಕದಲ್ಲಿ. ಆ ಪ್ರಯೋಗದಿಂದ ಸಂತೋಷಗೊಂಡ ದೇವತೆಗಳು ಭರತನ ಮಕ್ಕಳಿಗೆ ವಿವಿಧ ಪಾರಿತೋಷಕಗಳನ್ನು ಕೊಟ್ಟರಂತೆ – ಇಂದ್ರನು ಧ್ವಜವನ್ನೂ, ವರುಣನು ಕಮಂಡಲವನ್ನೂ, ಸೂರ್ಯನು ಕೊಡೆಯನ್ನೂ, ವಾಯುವು ಬೀಸಣಿಗೆಯನ್ನೂ, ಹೀಗೆ; ಮಾತ್ರವಲ್ಲ, ಯಕ್ಷ–ಗಂಧರ್ವ–ರಾಕ್ಷಸರೂ ಕೂಡ ಉಡುಗೊರೆಗಳನ್ನು ಕೊಟ್ಟರಂತೆ.

‘ಕುಶಲವ’ ಯಾರು ಎಂಬ ಚರ್ಚೆಯನ್ನು ಈ ಮೊದಲು ನೋಡಿದ್ದೇವೆಯಷ್ಟೆ. ‘ಕುಶೀಲವ’ ಎನ್ನುವುದೇ ‘ಕುಶಲವ’ ಎಂದಾಗಿದೆ ಎಂಬ ಅಭಿಪ್ರಾಯವೂ ಇದೆ. ‘ಕುಶೀಲವ’ ಎಂದರೆ ‘ಗಾಯಕ’ ಎಂದು ಅರ್ಥ ಎಂದು ಕೋಶಗಳು ಹೇಳುತ್ತವೆ. ಇದರ ವ್ಯುತ್ಪತ್ತಿಯನ್ನು ವಿಮರ್ಶಿಸುತ್ತ ಕೆಲವರು ‘ಕುತ್ಸಿತವಾದ, ಎಂದರೆ ಕೆಟ್ಟ ನಡತೆಯುಳ್ಳವರಾಗಿದ್ದ ಕಾರಣ ಗಾಯಕ ಮುಂತಾದ ಕಲಾವಿದರಿಗೆ ಆ ಹೆಸರು ಬಂದಿತು’ ಎಂದಿದ್ದಾರೆ. ಆದರೆ ಕವಿ–ಸಹೃದಯತತ್ತ್ವದ ಹಿರಿಮೆಯನ್ನು ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಕೊಂಡಾಡಿರುವುದನ್ನು ಗಮನಿಸಿದರೆ ಈ ‘ವ್ಯುತ್ಪತ್ತಿವಾದ’ಕ್ಕೆ ಪುಷ್ಟಿ ದೊರೆಯದು. ಆದಿಕಾವ್ಯವನ್ನು ರಚಿಸಿದವನು ಮಹರ್ಷಿ; ನಾಟ್ಯಶಾಸ್ತ್ರವನ್ನು ರಚಿಸಿದವನು ಮುನಿ – ಎಂಬ ಅಭಿಧಾನಗಳಿರುವುದನ್ನು ಕೂಡ ಇಲ್ಲಿ ನೋಡಬೇಕಾಗುತ್ತದೆ. ಮಾತ್ರವಲ್ಲ, ಸಾಕ್ಷಾತ್‌ ಶಿವನನ್ನೇ ‘ಮಹಾನಟ’ನನ್ನಾಗಿ ಕಂಡಿರುವ ಸಂಸ್ಕೃತಿಯಲ್ಲಿ ‘ಕೆಟ್ಟ ನಡತೆಯವನೇ ಕಲಾವಿದ’ ಎಂಬ ಸರಳಸೂತ್ರ ಬಳಕೆಯಲ್ಲಿತ್ತು ಎನ್ನುವುದನ್ನು ಒಪ್ಪುವುದು ಕಷ್ಟವಾಗುತ್ತದೆಯಲ್ಲವೆ?

ಸ್ವತಃ ರಾಮನೇ ತನ್ನ ಕಥೆಯಲ್ಲಿ ತಲ್ಲೀನನಾಗಿ ಆನಂದಿಸಿದ – ಎಂದಿರುವುದರಲ್ಲಿ ಸ್ವಾರಸ್ಯವಾದರೂ ಏನು? ರಾಮಾಯಣಮಹಾಕಾವ್ಯವು ವ್ಯಕ್ತಿನಿಷ್ಠವಾಗಿರದೆ ವಸ್ತುನಿಷ್ಠವಾಗಿದೆ; ಅದರ ವಸ್ತುವೇ ಧರ್ಮ. ಇದರ ಜೊತೆಗೆ ಮತ್ತೂ ಹಲವು ಸ್ವಾರಸ್ಯಗಳನ್ನು ನೋಡಬಹುದು. ‘ವಿಷ್ಣುಸಹಸ್ರನಾಮಸ್ತೋತ್ರ’ದಲ್ಲಿರುವ ವಿಷ್ಣುವಿನ ಸಾವಿರ ಹೆಸರುಗಳಲ್ಲಿ ‘ರಾಮ’ ಕೂಡ ಒಂದು. ಈ ಶಬ್ದಕ್ಕಿರುವ ಅರ್ಥ ‘ನಿತ್ಯಾನಂದಸ್ವರೂಪನಾದ ಯಾರಲ್ಲಿ ಯೋಗಿಗಳು ರಮಿಸುತ್ತಾರೋ ಅವನೇ ರಾಮ’; ಎಂದರೆ ‘ರಾಮ ಎಂದರೆ ಪರಬ್ರಹ್ಮ’. ಅಲ್ಲಿಯೇ ರಾಮಶಬ್ದದ ಜೊತೆಯಲ್ಲಿ ಅವನನ್ನು ‘ವಿರಾಮ’, ‘ವಿರತ’ ಎಂದೂ ಒಕ್ಕಣಿಸಲಾಗಿದೆ. ‘ಎಲ್ಲ ಜೀವಿಗಳ ವಿಶ್ರಾಂತಸ್ಥಾನವೇ ಅವನಾದುದರಿಂದ ಅವನನ್ನು ‘ವಿರಾಮ’ ಎಂದಿರುವುದು. ‘ವಿಷಯಗಳ ಭೋಗಗಳಿಂದ ಮನಸ್ಸನ್ನು ದೂರಮಾಡಿಕೊಂಡವನು ಯಾರೋ ಅವನು ವಿರತ’. ಆದುದರಿಂದ ರಾಮನು ಕೇಳುತ್ತಿದ್ದುದು ‘ಅವನ’ ಕಥೆಯನ್ನಲ್ಲ; ‘ಅದರ’ ಕಥೆ. ‘ಅದು’ ಎಂದರೆ ‘ಧರ್ಮ’. ಹೀಗಾಗಿ ಅವನಿಗೆ ಕುಶಲವರ ಗಾಯನದಿಂದ ಒದಗಿದ ರಸಾನುಭೂತಿ ಅದು ಬ್ರಹ್ಮಾನುಭವಕ್ಕೆ ಸಮ. ರಾಮನೇ ವಿರಾಮನೂ ಹೌದು, ವಿರತನೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT