ಬುಧವಾರ, ಡಿಸೆಂಬರ್ 11, 2019
26 °C

ಶೂರ್ಪನಖಿ ಗಹಗಹಿಸಿ ನಕ್ಕಾಗ...

Published:
Updated:
ಶೂರ್ಪನಖಿ ಗಹಗಹಿಸಿ ನಕ್ಕಾಗ...

ಪ್ರಭ್ಯಾನ ಮನಿ ಮುಂದ್‌ ಹಾದ್‌ ಹೋಗು ಮುಂದ್, ಟಿ ಫಾರ್‌ ಟೊಮೆಟೊ, ಓ ಫಾರ್‌ ಆನಿಯನ್‌, ಪಿ ಫಾರ್‌ ಪೊಟೆಟೊ ಶಬ್ದ ಜೋರಾಗಿ ಕೇಳಿ ಬರುತ್ತಿದ್ದನ್ನು ಕೇಳಿ ಗಕ್ಕನೆ ನಿಂತೆ. ಇದೇನ್‌ ಇಂವಾ ಹೊಸ ಬಾಲವಾಡಿ ತೆರದಾನೇನ್‌ ಅನ್ನೊ ಕುತೂಹಲದಿಂದ ಮನೆ ಒಳಗೆ ಕಾಲಿರಿಸಿದೆ.

ಮಾಮೂಲಿನಂತೆ ನಗುಮುಖದ ಸ್ವಾಗತ ನೀಡದ ಪ್ರಭ್ಯಾ, ನಾನೊಬ್ಬ ಐನ್‌ಟೈಮ್‌ನ್ಯಾಗ್‌ ಮನಿ ಬಾಗ್ಲಾ ಬಡ್ದಾಂವ ಎಂಬಂತೆ ಮುಖ ಸಿಂಡರಿಸಿಕೊಂಡೇ ಬಾಗಿಲು ತೆಗೆದು ಮೇಲ್ನೋಟಕ್ಕೆ ನಗು ಬರಿಸಿಕೊಂಡು ‘ಬಾರಪಾ, ಬಾ’ ಎಂದು ಒಳ ಕರೆದ.

ಇದs ಬಿಡುವು ಸಿಕ್‌ ನೆಪದಾಗ ಪ್ರಭ್ಯಾನ ಮಗ ನಂದ್ಯಾ, ಟಿ ಫಾರ್‌ ಟೈಗರ್‌, ಓ ಫಾರ್‌ ಆಕ್ಸ್‌, ಪಿ ಫಾರ್‌ ಪ್ಯಾರಟ್‌ ಎಂದು ಸುರು ಹಚ್ಚಿಕೊಂಡ... ‘ಏಯ್‌ ಯಾಕೊ. ನಾ ಹೇಳ್ದಂಗ್‌ ಬಾಯಿಪಾಠ್ ಮಾಡೋ’ ಅಂದ.

‘ನೋಡ್‌ ಮಾಮಾ, ಸಾಲ್ಯಾಗ್‌ ರಮ್ಯಾ ಟೀಚರ್‌ ಕಲಿಸೋದ್‌ (ಪಾಟ್‌) ಒಂದ್‌, ಇಂವಾ ನಮ್ಮಪ್ಪ ಹೇಳೋದ್‌ (ಟಾಪ್‌) ಒಂದ್‌. ನಾ ಯಾರ್‌ ಮಾತ್‌ ಕೇಳ್ಳಿ’ ಅಂದ ಮುಗ್ಧತೆಯಿಂದ.

‘ಏಯ್‌ ನಿಮ್ಮಪ್ಪನ ಮಾತ್‌ ಏನ್‌ ಕೇಳ್ತಿ, ಅಂವಾ ದಡ್‌ ಅದಾನ್‌. ಅಕ್ಕೋರ್ ಹೇಳ್ದಂಗ್‌ ಕೇಳ್‌. ಇಲ್ಲಂದ್ರ ನಪಾಸ್‌ ಮಾಡಿಗಿಡ್ಯಾರ್‌’ ಎಂದು ಹೇಳಿದೆ.

‘ಏಯ್‌, ನೀ ಇದರಾಗ್ ನಡು ಬರಬ್ಯಾಡ್‌ ನೋಡಪ’ ಎಂದು ಪ್ರಭ್ಯಾ ಧಮ್ಕಿ ಹಾಕಿದ.

‘ಯಾಕಪ್ಪ... ರಾತ್ರಿ ಪಾಟ್‌ (ನಷೆ) ಇನ್ನೂ ಇಳದಿಲ್ಲೇನ್‌’ ಎಂದೆ.

‘ಏಯ್‌, ಹಂಗೆಲ್ಲ ಕೇಳಬ್ಯಾಡೊ ಮಾರಾಯಾ. ಆಕಿಗೆ ಕಿವಿಗೆ ಬಿದ್ರ ಜನ್ಮ ಜಾಲಾಡ್ತಾಳ’ ಎಂದು ಪಿಸುದನಿಯಲ್ಲಿ ಹೇಳುತ್ತಲೇ ಇದ್ದರೂ, ಒಳಗಿನ ಪರಮಾತ್ಮ ಹೇಳಿಕಿ ಕೊಡುವಂಗ್‌ ‘ಹೆ ಹೆ ಹೇ ಯಾಕಪ್‌ ನಿಂಗ್ ಹೊಟ್ಟೆಕಿಚ್ಚೇನ್‌’ ಎಂದು ಹಲ್ಕಿರಿದ.

‘ಏಯ್‌ ನಷೆದಾಗಿನ ಮಾತು ಕಿಸೆದಾಗ ಅಂತಾರಲ್ಲ ಹಂಗ್‌...’ ಎಂದು ನಾನು ಏನೋ ಹೇಳಲು ಹೊರಟೆ. ಅಷ್ಟರಲ್ಲಿ ಅಡಿಗಿ ಮನ್ಯಾಗಿಂದ ಕೂರ್ಬಾಣವೊಂದು ತೂರಿ ಬಂತು. 

‘ಮೂರು ಬಿಟ್ಟಾವ್ರಂಗ್‌ ಹೆಂಗ್‌ ಹಲ್‌ಕಿರಿತಾರ್‌ ನೋಡ್ರಿ. ಇವ್ರಿಗೆ ಬೂತ್‌ ಮಟ್ಟದ ಜವಾಬ್ದಾರಿ ಹೊರಸ್ಯಾರ್‌. ಅದಕ್ಕ ಭೂತ್‌ ಹೊಕ್ಕವ್ರಂಗ್‌ ಹೆಂಡ್ತಿ – ಮಕ್ಳು ಮರ್ತ್   ನಾಯಿಹಂಗ್‌ ಬರೀ ತಿರುಗೋದ ಮಾಡಾಕತ್ತಾರ್‌. ಬೆಂಗ್ಳೂರಿಗೆ ಹೋಗಿ ಬಂದಿಂದ ಬರೀ ಟಾಪ್‌, ಟಾಪ್‌ ಅಂತ ಬಡಬಡ್ಸಾಕತ್ತಾರ. ಮಗಂಗೂ ಅದ್ನ ಹೇಳಿಕೊಡಾಕತ್ತಾರ ನೋಡ್ರಿ. ಟಾಪ್ ಅಂತ ಟಾಪ್‌. ರಮ್ಯಾ ಮೇಡಮ್ಮು ಸಖತ್ತಾಗಿ ‘ಪಾಟ್‌’ ಅಂತ ಟಾಂಗ್‌ ಕೊಟ್ಟಾಳ ನೋಡ್ರಿ’ ಎಂದು ಹೇಳುತ್ತ ಹೊರ ಬಂದ ಪಾರುತಿ, ಗಂಡನನ್ನ ಲೇವಡಿ ಮಾಡುತ್ತಲೇ ಗಹಗಹಿಸಿ ನಕ್ಕಳು. ಈ ನಗು ಕೇಳಿ ಬೆಪ್ಪಾದ ನಂದ್ಯಾ, ಕೈಯ್ಯಾಗಿನ ಬುಕ್‌ ಮೂಲೆಗೆ ಬೀಸಾಕಿ ಅವ್ವನ ಸೀರಿ ಹಿಂದ್‌ ಸೇರ್ಕೊಂಡ.

‘ಏಯ್‌ ಶೂರ್ಪನಖಿ ಹಂಗ ನಗಬ್ಯಾಡ. ನಂಗ್ ಸಿಟ್‌ ಬರ್ತದ ನೋಡ್‌ ’ ಅಂದ ಪ್ರಭ್ಯಾ.

‘ಹೌದೇನ್‌. ನಗಾಕ ನಿಮ್ಮ ಸರ್ಕಾರ ಗಬ್ಬರ್‌ಸಿಂಗ್‌ ಟ್ಯಾಕ್ಸ್‌ ಏನ್‌ ಹಾಕಿಲ್ಲೇಲ್‌. ನಿಮ್ಗ ಕೇಳಿ ನಗಬೇಕೇನ್‌. ನಿಮ್ಗ ಎಷ್ಟ್‌ ಪರ್ಸೆಂಟ್‌ ಸಿಟ್‌ ಬಂದದs ಅಂತ ಸಂಜೀಕ್‌ ಮನಿಗ್‌ ಬರ‍್ರೀ ನಾನೂ ನೋಡ್ತಿನಿ. ಈಗ ಸಿಟ್‌ ಬಂದಿದ್ರ ಹಿಟ್‌ ಮುಕ್ರಿ’ ಎಂದು ಗಂಡನನ್ನ ಛೇಡಿಸಿ ಮುಸಿ ಮುಸಿ ನಗುತ್ತಲೇ ಪಾರು ಅಡಿಗೆ ಮನಿಗೆ ಓಡಿದಳು.

‘ಅಗಸನ ಮಾತು ಕೇಳಿ ಹೆಂಡ್ತಿ ಬಿಟ್ಟ ರಾಮನಂಗ, ಹೆಂಡ್ತಿನ ಕೈಬಿಟ್ಟವಂಗ ಶೂರ್ಪನಖಿ ಅಲ್ಲದ ಸೀತೆ ಹೆಂಗ್‌ ನೆನಪಾಗ್ತಾಳ್‌ ಹೇಳ್ರಿ. ದೀಪಿಕಾಳ (ಪದ್ಮಾವತಿ) ಮೂಗ್‌ ಕತ್ತರ್‌ಸ್ತೇವ್‌ ಅಂತ ಕರ್ಣಿ ಸೇನಾದ ದಂಡ(‍ಪಿಂಡ) ನಾಯಕರು ಬೆದರಿಕೆ ಹಾಕ್ದಾಗ ಮರ್ಯಾದಾ ಪುರುಷೋತ್ತಮ ರಾಮನ ಪಕ್ಷದವರಿಗೆ ರಾಮಾಯಣ ನೆನಪs ಆಗಲಿಲ್ಲ. ದೀಪಿಕಾಳ ಸುಂದರ ಮೂಗು ಮೊಂಡು ಮೂಗು ಆದಾಗ ಹೆಂಗ್‌ ಕಾಣಸ್ತಾಳ ಅಂತ ಊಹಿಸಿ ಅಪಹಾಸ್ಯದಿಂದ ನಕ್ಕಾವ್ರ ಹೆಚ್ಚು. ಕೈಲಾಗದವ ಮೈ ಪರಚಿಕೊಂಡಂಗ್‌ ಹಳೆಯ ತಿಪ್ಪೆ ಕೆದುಕುತ್ತ  ಭೀಷಣ ಭಾಷ್ಣಾ ಬಿಗ್ಯಾವರ್ನ ಕಂಡ್ರ ನಗಲಾರ್ದ ಅಳಬೇಕೇನ್‌. ‘ನಮೋ’ ವೈಖರಿ ಕಂಡು ಸಂಸದೆ ರೇಣುಕಾ ಚೌಧರಿ ಗಹಗಹಿಸಿ ನಕ್ಕಾಗ ಇವ್ರಿಗೆ ಶೂರ್ಪನಖಿ ನೆನಪ್‌ ಆಗ್ತಾಳ್‌. ಥೂ ಇವ್ರ ಮುಖಕ್ಕಿಷ್ಟು ಮಂಗಳಾರತಿ ಎತ್ತ’ ಎಂದೂ ಪಾರುತಿ ಅಡುಗೆಗೆ ಒಗ್ಗರಣೆ ಹಾಕುತ್ತಲೇ ಹಿಡಿಶಾಪ ಹಾಕಿದಳು.

ಒಗ್ಗರಣೆ ಘಾಟು ಮತ್ತು ಪಾರುತಿಯ ತೀಕ್ಷ್ಣ ಮಾತು ಕೇಳಿ ನಂಗ ದಂಗ್‌ ಬಡ್ಹದಂಗಾತು. ಸಂಸತ್ತಿನ ಹಿರ‍್ಯಾರ್‌ ಮನ್ಯಾಗ್‌ ನಡ್ದ ರಾಮಾಯಣ, ಪ್ರಭ್ಯಾನ ಮನ್ಯಾಗ್‌ ಮಹಾಭಾರತಕ್ಕ ಪೀಠಿಕೆ ಹಾಕಿದ್ದು ನೋಡಿ ದಿಗಿಲಾಗಿ ರಣರಂಗ ತಿಳಿಗೊಳಿಸಲು ‘ಚಾ ಮಾಡಾಕ್‌ ಹೇಳ್ತಿ ಏನಪ ಹೆಂಡ್ತಿಗೆ’ ಎಂದೆ ಸಣ್ಣಗೆ.

‘ನಿಂದ್‌ ತಲಿಗಿಲಿ ಕೆಟ್ಟದ ಏನ್‌. ಚಾ ಅಂತ್‌ ಚಾ. ಸಾಕಾಗಿಲ್ಲೇನ್‌ ಮಂಗಳಾರತಿ. ನಮ್ಗ ಇವತ್‌ ಗುಟುಕು ನೀರೂ ಸಿಗುದಿಲ್ಲ. ಬಾರ್‌ನ್ಯಾಗಿನ ಬೀರೇ ಗತಿ’ ಎಂದ.

‘ಹುಡ್ಗೀರೂ ಬೀರ್‌ ಕುಡ್ಯಾಕತ್ತಾರ. ಕಾಲ್ ಕೆಟ್ಹೋಯ್ತು ಅಂತ ಗೋವಾ ಸಿಎಂ ಪರ್‍ರೀಕರ್‌ ಗೋಳಾಡ್ಯಾನ ನೋಡಿ ಇಲ್ಲ. ಬೀರ್‌ ಬ್ಯಾಡಪಾ. ರಮ್‌ ಕುಡಿಸ್ತಿ ಏನ್ ನೋಡ್‌’ ಎಂದೆ.

‘ಹೆಸರಲ್ಲೇ ರಮ್‌ ಇರೋರು ಹಗಲ್‌ ಹೊತ್ತಿನ್ಯಾಗ್‌s ನಕಲಿ ಫೇಸ್ಬುಕ್‌ ಖಾತೆ ತೆರ‍್ಯಾಕ್‌ ಹೇಳಿ ರಂಪಾಟ ಮಾಡ್ಕೊಂಡಿರೋದು ನೋಡಿ, ಕೇಳಿ ಸಾಕಾಗೇತಿ. ಎಲ್ಲಾರ ನೀರಾ–ಗೀರಾ ಸಿಗ್ತದ ಏನ್‌ ನೋಡೋಣ ನಡಿ’ ಎಂದ. ‘ಈಗ ಬ್ಯಾಡ ಮಾರಾಯಾ. ಸಂಜೀಕಿ ನೋಡೋಣ ಬಿಡು’ ಎಂದೆ. ಏನೇನೋ ಲೆಕ್ಕಾಚಾರದಲ್ಲಿ ಇಬ್ಬರೂ ಮನೆಯಿಂದ ಹೊರಬಿದ್ದೆವು. ಹಿಂದೆಯೇ ಬಾಗಿಲು ಧಡ್‌ ಎಂದು ಮುಚ್ಚಿಕೊಂಡ ಸದ್ದು ಕೇಳಿ ಇಬ್ಬರೂ ಮುಖಾ ಮುಖ ನೋಡಿಕೊಂಡು ಹೆಜ್ಜೆ ಹಾಕಿದೆವು.

‘ನಿಂದ್‌ ಸವಾರಿ ಯಾವ ಕಡಿ’ ಎಂದೆ. ‘ಮತ್ತೆಲ್ಲಿಗೆ, ಸ್ಲಂ ಕಡೆ ಹೋಗಬೇಕಾಗೇತಿ. ಕೊಳೆಗೇರಿ ಜನರ ಮನ ಗೆಲ್ಲಾಕ್‌ ನಮ್ಮ ಮುಖಂಡರ ರಾತ್ರಿ ವಸ್ತಿಗೆ ವ್ಯವಸ್ಥಾ ಮಾಡ್‌ಬೇಕಾಗೇತಿ. ನೀ ಯಾವ್‌ ಕಡಿಗಿ’ ಅಂತ ಪ್ರಶ್ನಿಸಿದ.

ಆ ಪ್ರಶ್ನೆ ಕಿವಿಗೆ ಬಿದ್ದಿಲ್ಲ ಅನ್ನೊಹಂಗ ನಟಿಸಿ, ‘ಕೊಳೆಗೇರಿ ಒಳ್ಗ ಒಂದ್‌ ರಾತ್ರಿ ನಿದ್ದೆ ಮಾಡಿದ್ರ, ಬೆಳಗೆದ್ದು ನಾಷ್ಟಾ ಮಾಡಿದ್ರ ಆ ನರಕ ಸ್ವರ್ಗ ಆಗ್ತೈತೇನ್‌? ಅಲ್ಲಿನ ಗಟಾರ ವಾಸ್ನೆ ಕುಡಿಬೇಕ್‌, ಸೊಳ್ಳಿ ಕಡಿಸ್ಕೊಳ್ಳಬೇಕ್‌, ಗುಡಿಸಲ್ದಾಗ್‌ ಮಲ್ಕೊಬೇಕ್‌’ ಎಂದು ಪಟ್ಟಿ ಓದತೊಡಗಿದೆ.

‘ಏಯ್‌ ಸಾಕ್‌ ನಿಲ್ಸು ನಿನ್ ಪುರಾಣ. ಗುಡಿ ಗುಂಡಾರ್‌ ಸುತ್ತಿದ್ರ ಜನ್ರು ಆಶೀರ್ವಾದ ಮಾಡ್ತಾರೇನ್‌’ ಎಂದು ದಬಾಯಿಸಿದ.

‘ಆಯ್ತು ಬಿಡಪ. ನಿನ್‌ ಮಾತೂ ಖರೆ ಐತಿ. ಈ ಬಾರಿ ಕೊಳೆಗೇರಿ ನಿವಾಸಿಗಳ ಅಥ್ವಾ ದೇವ್ರು ದಿಂಡರ ಆಶೀರ್ವಾದ ಯಾವ ಪಕ್ಷಕ್ಕ ಎಷ್ಟ್‌ ಪರ್ಸೆಂಟ್‌ ಸಿಗ್ತೈತಿ ನೋಡೋಣ ಬಿಡು. ರಾಹುಲ್‌ ಗಾಂಧಿ ಅವ್ರು ಒಂದ್ ಸುತ್‌ ಗುಡಿ ಗುಂಡಾರ ತಿರುಗಿ ಬಂದಾರಲ್ಲ. ಅವ್ರಿಗೆ ದೇವ್ರ ಆಶೀರ್ವಾದ ಎಷ್ಟ್‌ ಪರ್ಸೆಂಟ್ ಸಿಕ್ಕೈತಿ ಅಂತ ನಾನೂ ನೋಡ್ಕೊಂಡ್‌ ಬರೂದೈತಿ’ ಎಂದು ಹೇಳಿ ಜನಾಶೀರ್ವಾದ ಯಾತ್ರೆಯ ಬಸ್‌ ಸಾಗಿದ ದಾರೀಲಿ ಹೆಜ್ಜೆ ಹಾಕಿದೆ.

ಪ್ರತಿಕ್ರಿಯಿಸಿ (+)